-->
ಪ್ರಿಯ ಬರೆದಿರುವ ಕವನಗಳು

ಪ್ರಿಯ ಬರೆದಿರುವ ಕವನಗಳು

ಮಕ್ಕಳ ಜಗಲಿಯಲ್ಲಿ
ಪ್ರಥಮ ಪಿ.ಯು.ಸಿ ವಿದ್ಯಾರ್ಥಿನಿ
ಪ್ರಿಯ 
ಬರೆದಿರುವ ಕವನಗಳು                 ಸೌಹಾರ್ದತೆ - ಕವನ
           
ಭೂಮಂಡಲವ ಸಾಕಿ ಸಲಹಿಪ ಭಾರತ ಮಾತೆ, 
ನೀ ನಮ್ಮೆಲ್ಲರ ಜನ್ಮ ದಾತೆ. 
ಅಂಧಕಾರದ ಬಾನಂಗಳದಲ್ಲಿ ಜ್ಯೋತಿಯಾಗಿ ಚಿಮ್ಮುತಿದೆ.....
ಚುಕ್ಕಿ ತಾರೆಗಳ ಹೊಳಪಿನ ವೈವಿಧ್ಯತೆ.

ಪೃಥ್ವಿಯಲಿ ವಸಂತನಾಗಮನದ ಚಿತ್ತಾರದ ಸೊಬಗಿಗೆ  
ವಿ-ಜಾತಿ ಖಗಗಳ ಸುಮಧುರ ಸ್ವರ ಗೀತೆ.
ಕುರು ಸಮರದ ಸೇನೆಯಂತೆ ಪೂರ್ಣಚಂದ್ರರ ಲೇಖನಿಯಲಿ ಸಿಹಿಯೋಧರ ಸೇನೆಯ ಸಂಹಿತೆ.

ನೇಗಿಲಯೋಗಿಯೇ ದೇಶದ ಭಾಗ್ಯದ ಹಣತೆ.
ಅವನಿಲ್ಲದಿರಲು ಜಗದ ಪಾಡು ಅಗ್ನಿಯಲಿ ಉರಿಯುವ ಚಿತೆ.
ಶಾಂತಿ, ಸ್ನೇಹ, ಸೌಹಾರ್ಧ ತುಂಬಿದ ಭವ್ಯ ಭಾರತ.
ಸೌಹಾರ್ದತೆಯನರಿಯದ ಜನತೆಗೆ ಏತಕ್ಕಾಗಿ ಇಲ್ಲಿದೆ ಮತ.

ಜಾತಿ, ಕುಲ, ಮತ, ಪಂಥಗಳ ತಾನೇ ನಿರ್ಮಿಸಿದ ಮಾನವ.
ಮಾನವ ಸೌಹಾರ್ದದಲಿ ಯಾಕಾಗುವನು ದಾನವ.
ಹರಿವ ಜಲ ಏಕೆ ಕೇಳದು ನಮ್ಮ ಕುಲ.
ಇದರಿಂದಲೇ ತಿಳಿಯುವುದು ಮಾನವ ನಿರ್ಮಿತ ಸ್ವಾರ್ಥದ ಸಂಕುಲ.

ಕಲ್ಮಶವಿಲ್ಲದೆ ನಿಸ್ವಾರ್ಥತೆಯಿಂದ ಹಾಲೆರೆವಳು ಗೋಮಾತೆ.
ಕೆಡುಕು ಮನದ ಮನುಜ ಮಾಡುವನು 
ಸ್ವಾರ್ಥದ ಗಾಥೆ.
ಅಸಮಾನತೆ ಮೆಟ್ಟಿ ಸಮಾನತೆ ಬೆಳಗಲಿ ವಿವಿದೆಡೆ.
ಜನತೆಯ ಮನ ತಿರುಗಲಿ ಸೌಹಾರ್ಧದ ಕಡೆ.

ಕಪ್ಪು- ಬಿಳುಪು ಕಪ್ಪು ಚುಕ್ಕೆ ಯಾಗಿವೆ ಈ ಜಗದಲಿ.
ಅಡೆತಡೆಗಳ ಮೆಟ್ಟಿ ಮುನ್ನಡೆಯಬೇಕು ನಾವು ಭರದಲಿ.
ಅಸಮಾನತೆಯ ಕೆಡುವಲ್ಲಿ ನಮ್ಮೆಲ್ಲರ ಆದ್ಯತೆ.
ಸರ್ವ ಮತ ಒಮ್ಮತದಿಂದ ಎಲ್ಲರ ಮನದಲಿ ಮೂಡಲಿ ಶಾಂತಿಯ ಸೌಹಾರ್ದತೆ.
.................................................. ಪ್ರಿಯ
ಪ್ರಥಮ ಪಿ.ಯು.ಸಿ
ಸರಕಾರಿ ಪದವಿ ಪೂರ್ವ ಕಾಲೇಜು , ಅಳದಂಗಡಿ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
               ವರ್ಷ ಧಾರೆ - ಕವನ      

ಹನಿ - ಹನಿಗೂಡಿ ಭೂಮಿಯೊಡಲ ತಲುಪಿತು ಮಳೆ...
ಗುಡುಗು - ಮಿಂಚೆಂಬ ಪಟಾಕಿ ಹಬ್ಬದ ಭಾವದ ಸೆಳೆ...

ಮೊದ - ಮೊದಲ ಹನಿ - ಹನಿ ಮಳೆ...
ಇಳೆಯಾಯ್ತು ಹಚ್ಚ ಹಸುರಿನ ರಂಗಿನ ಮಾಲೆ...
ಇಳೆಯ ತುಂಬೆಲ್ಲಾ ಹಸುರಿನ ಚಿಗುರು...
ಹಕ್ಕಿಗಳ ಚಿಲಿಪಿಲಿ ನಾದಕೆ ಬರುತಿದೆ ಮುಂಗಾರು...

ಪಚ್ಚೆ - ಪಚ್ಚೆಯ ಗದ್ದೆಯ ಬಯಲು...
ನೋಡುತಿಹೆ ನನ್ನ ಕಣ್ಣಾಯ್ತು ಮರುಳು...
ಆಗಸದಲ್ಲಿ ನೀಲಿ ಮೋಡಗಳ ಸರದಿ...
ಹರಿಯುತಿದೆ ಸ್ವಚ್ಛಂದ ನದಿ, ಜುಳು - ಜುಳು ನಾದದಿ...

ಇದು ಗದ್ದೆಯ ಬೆಳೆ ಬಿತ್ತನೆಯ ಸೌಖ್ಯ ಕಾಲ...
ಇಂದು ರೈತನಿಗೆ ಬೇಕಿದೆ ದುಡ್ಡಿನ ಸಾಲ...
ಗದ್ದೆಯ ಬಯಲ ನಡುವೆ ನಿಂತಿದೆ ಬೆದರು ಗೊಂಬೆ...
ಇದ ಕಂಡು ನಾ, ಬೆದರಿ ಹತ್ತಿದೆ ಮರದ ಕೊಂಬೆ...

ಬೆಳೆಯು ಚಿಗುರಿ ತೆನೆ ಬಂತು...
ಇದು ರೈತನ ಸಂತೋಷದ ಕಂತು...
ರೈತರು ಮಾಡಿದರು ಭತ್ತದ ಕೊಯ್ಲಿನ ಕಟಾವು...
ಮುದ ನೀಡಿತು ಎನಗೆ ಅನ್ನ - ಸಾಂಬಾರಿನ ರುಚಿಯಾದ ಔತಣ ಕೂಟವು...
.................................................. ಪ್ರಿಯ
ಪ್ರಥಮ ಪಿ.ಯು.ಸಿ
ಸರಕಾರಿ ಪದವಿ ಪೂರ್ವ ಕಾಲೇಜು , ಅಳದಂಗಡಿ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************

Ads on article

Advertise in articles 1

advertising articles 2

Advertise under the article