-->
ಹಕ್ಕಿ ಕಥೆ : ಸಂಚಿಕೆ - 65

ಹಕ್ಕಿ ಕಥೆ : ಸಂಚಿಕೆ - 65

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ

              
           ಮಕ್ಕಳೇ ನಮಸ್ತೇ.... ಈ ವಾರದ ಹಕ್ಕಿ ಕಥೆಗೆ ಸ್ವಾಗತ. ನಾನೊಮ್ಮೆ ಗೆಳೆಯ ರಂಗನಾಥರ ಜೊತೆ ತುಂಗಭದ್ರಾ ಹಿನ್ನೀರಿನ ಪ್ರದೇಶಕ್ಕೆ ಪಕ್ಷಿವೀಕ್ಷಣೆಗೆಂದು ಹೋಗಿದ್ದೆ. ಜನವರಿ ತಿಂಗಳು ಆದ್ದರಿಂದ ನೀರು ಸ್ವಲ್ಪ ಕಡಿಮೆಯಾಗಿದೆ ಅಂತ ಹೇಳಿದರು. ಹಾಗಾಗಿ ನಾವು ಬಹಳ ದೂರದವರೆಗೆ ಬೈಕಿನಲ್ಲಿ ಹೋಗಬೇಕಾಯಿತು. ಮಳೆಗಾಲದಲ್ಲಿ ನೀರು ನಿಲ್ಲುವ ಗದ್ದೆಗಳಲ್ಲಿ ನೀರು ಇಳಿದುದ್ದರಿಂದ ಭತ್ತ, ಕಬ್ಬುಗಳನ್ನು ರೈತರು ನಾಟಿಮಾಡಿದ್ದರು. ಗದ್ದೆಗಳನ್ನು ದಾಟಿ ಹಿನ್ನೀರಿನ ಸಮೀಪ ತಲುಪಿದಾಗ ಅಲ್ಲೊಂದು ಹಕ್ಕಿಗಳ ಹಿಂಡು ತಮ್ಮ ಪಿಕಾಸಿಯಂತಹ ಕೊಕ್ಕಿನಿಂದ ನೀರನ್ನು ಅಗೆಯುತ್ತಾ, ನೀರು, ಕೆಸರು ಮಿಶ್ರಿತ ಜೌಗು ಪ್ರದೇಶದಲ್ಲಿ ತಮ್ಮ ಉದ್ದನೆಯ ಕಾಲುಗಳ ಸಹಾಯದಿಂದ ಓಡಾಡುತ್ತಾ ಏನನ್ನೋ ಹೆಕ್ಕಿ ತಿನ್ನುತ್ತಿದ್ದವು.
      ಊರಿನ ಕೋಳಿಗಿಂತ ಗಾತ್ರದಲ್ಲಿ ದೊಡ್ಡದಾದ ಹಕ್ಕಿ. ಪಕ್ಕನೆ ನೋಡಲು ಕೊಕ್ಕರೆಯಂತೆ ಕಾಣುತ್ತದೆ ಆದರೆ ಕೊಕ್ಕರೆ ಅಲ್ಲ. ನೀಳವಾದ ಉದ್ದನೆಯ ಕಾಲುಗಳು ನೀರು ಮತ್ತು ಕೆಸರಿನಲ್ಲಿ ಓಡಾಡಲು ಅನುಕೂಲವಾಗಿವೆ. ಕೊಕ್ಕಿನಿಂದ ಕುತ್ತಿಗೆಯವರೆಗೂ ಪೂರ್ತಿ ಕಪ್ಪು ಬಣ್ಣ. ತಕ್ಷಣ ನೋಡಿದಾಗ ಬೋಳುತಲೆಯಂತೆ ಭಾಸವಾಗುತ್ತದೆ. ಕಪ್ಪು ಬಣ್ಣದ ಉದ್ದನೆಯ ಕೊಕ್ಕುಗಳು ಮಣ್ಣನ್ನು ಅಗೆಯುವ ಪಿಕಾಸಿನಂತೆ ಮುಂದಕ್ಕೆ ಬಾಗಿವೆ. ಕಾಲು, ಕತ್ತು, ಮುಖ, ಕೊಕ್ಕು ಎಲ್ಲವೂ ಕಪ್ಪು ಬಣ್ಣವಾದರೆ ದೇಹ, ರೆಕ್ಕೆ, ಹೊಟ್ಟೆಯ ಭಾಗಗಳೆಲ್ಲ ಅಚ್ಚ ಬಿಳೀ ಬಣ್ಣ. 
ವಿಶಾಲವಾದ ಕೆರೆಗಳು, ನದಿಯ ಬದಿಯ ನೀರಿನ ಪ್ರದೇಶ, ಬೇಸಾಯ ಮಾಡದೇ ನೀರುನಿಂತ ಗದ್ದೆಗಳಲ್ಲಿ ಈ ಹಕ್ಕಿಯನ್ನು ನೋಡಬಹುದು. ಹಾರುವಾಗ ಹಲವು ಹಕ್ಕಿಗಳು ಜೊತೆಯಾಗಿ ಹಾರುತ್ತವೆ. ಬಾಣದ ತುದಿಯಂತೆ ಅಥವಾ ಸಾಲಾಗಿ ಶಿಸ್ತಿನ ಸಿಪಾಯಿಗಳಂತೆ ಇವುಗಳು ಹಾರುವುದನ್ನು ನೋಡುವುದೇ ಚಂದ. ಇವುಗಳು ಹಾರುವುದನ್ನು ನೋಡಿಯೇ ಕವಿ ಕುವೆಂಪು ʼದೇವರು ರುಜು ಮಾಡಿದನು, ಪರವಶನಾಗುತ ಕವಿ ಅದ ನೋಡಿದನುʼ ಎಂಬ ಸಾಲುಗಳನ್ನು ಬರೆದಿರಬೇಕು. 
      ನವೆಂಬರ್ ನಿಂದ ಫೆಬ್ರವರಿ ನಡುವೆ ಸಂತಾನೋತ್ಪತ್ತಿ ಮಾಡುವ ಈ ಹಕ್ಕಿಗಳು ನೀರಿನ ಆಶ್ರಯದ ಆಸುಪಾಸಿನ ಮರಗಳಲ್ಲಿ ಕಡ್ಡಿಗಳನ್ನು ಜೋಡಿಸಿ ಅಟ್ಟಳಿಗೆಯಂತಹ ಗೂಡನ್ನು ಮಾಡಿ, ಮೊಟ್ಟೆ ಇಟ್ಟು, ಮರಿಮಾಡುತ್ತವೆ. ಗಂಡು ಮತ್ತು ಹೆಣ್ಣು ಎರಡೂ ಹಕ್ಕಿಗಳು ಸಮಾನವಾಗಿ ಮರಿಗಳ ಲಾಲನೆ ಪಾಲನೆ ಮಾಡುತ್ತವೆ. ಬಾರತ, ಪಾಕಿಸ್ತಾನ, ಶ್ರೀಲಂಕಾ ದೇಶಗಳಲ್ಲಿಯೂ ಈ ಹಕ್ಕಿ ಕಾಣಸಿಗುತ್ತದೆಯಂತೆ. ಈ ಹಕ್ಕಿ ಹಾರುವಾಗ ಇವುಗಳ ರೆಕ್ಕೆಯ ಅಡಿಭಾಗದಲ್ಲಿ ಕೆಂಪುಬಣ್ಣ ಕಾಣುತ್ತದೆ. ಅದೇ ಕಾರಣಕ್ಕಾಗಿ ಇವುಗಳಿಗೆ ಕೆಂಬರಲು ಎಂಬ ಕನ್ನಡದ ಹೆಸರು ಬಂದಿರಬೇಕು. ಇವುಗಳ ಇನ್ನೂ ಎರಡು ಸೋದರ ಸಂಬಂಧಿಗಳು ನಮ್ಮದೇಶದಲ್ಲೂ ಕಾಣಸಿಗುತ್ತವೆ. ನೀರಿನ ಪ್ರದೇಶದಲ್ಲಿ ಕಪ್ಪೆ, ಗೊದಮೊಟ್ಟೆ, ಮೀನು, ಏಡಿ, ಏಡಿಯ ಮೊಟ್ಟೆಗಳನ್ನು ತಿಂದು ಬದುಕುವ ಈ ಹಕ್ಕಿ ನಿಮ್ಮ ಆಸುಪಾಸಿನ ಕೆರೆ, ನದಿಗಳ ಸಮೀಪವೂ ಕಾಣಸಿಗಬಹುದು. ನೋಡ್ತೀರಲ್ಲ.
ಕನ್ನಡದ ಹೆಸರು: ಬಿಳಿ ಕೆಂಬರಲು
ಇಂಗ್ಲೀಷ್ ಹೆಸರು: Oriental White Ibis
ವೈಜ್ಞಾನಿಕ ಹೆಸರು: Threskiornis melanocephalus
ಚಿತ್ರ ಕೃಪೆ : ಇಂದ್ರಾಣಿ ಘೋಷ್ ಮತ್ತು ಯೋಗೇಶ್ ದಿವಾಕರ್
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************

Ads on article

Advertise in articles 1

advertising articles 2

Advertise under the article