-->
ಬಹೂಪಯೋಗಿ ಗೆರಟೆ

ಬಹೂಪಯೋಗಿ ಗೆರಟೆ

ಸೆಪ್ಟೆಂಬರ್ - 2
ವಿಶ್ವ ತೆಂಗು ದಿನ
ಸಂದರ್ಭದಲ್ಲಿ ಮಕ್ಕಳ ಜಗಲಿಗಾಗಿ
ಕೃಷಿ ಸಂಶೋಧಕ ವಸಂತ ಕಜೆ  
ಬರೆದಿರುವ ಲೇಖನ     
     

               ತೆಂಗು ನಮ್ಮ ಜೀವನದಲ್ಲಿ ಎಷ್ಟು ಹಾಸಿಹೊಕ್ಕಿದೆ ಎಂಬುದಕ್ಕೆ ಅದು ನಮ್ಮ ‘ಆಡುಭಾಷೆ’ ಯಲ್ಲಿ ಗಳಿಸಿರುವ ವೈವಿಧ್ಯವೇ ಪ್ರಮಾಣ. ಡಾ| ಅಜಕ್ಕಳ ಗಿರೀಶ್ ಭಟ್ ಎಂಬ ವಿದ್ವಾಂಸರೊಮ್ಮೆ ಆಯಾ ಹಂತದಲ್ಲಿರುವ ತೆಂಗಿನ ತುಳು ಹೆಸರುಗಳನ್ನು, ಅದರ ಮೂಲಕ ನಮ್ಮ ಭಾಷಾ ಶ್ರೀಮಂತಿಕೆಯನ್ನು ವಿವರಿಸಿದ್ದರು. ತೆಂಗಿನ ಹೂವು (ಪೂ/ಪಿಂಗಾರ), ಚೆಂಡುಪುಳೆ (ಮರದಿಂದ ಕಳಚಿ ಉದುರುವ ಪುಟ್ಟ ನಿಂಬೆಗಾತ್ರದ ತೆಂಗಿನಕಾಯಿ), ಕರ್ಕ್ (ಎಳನೀರು ಇನ್ನೂ ಹುಳ್ಳಗೆ ಇರುವ ಗಂಜಿಕಟ್ಟುವ ಮೊದಲಿನ ಎಳತೆಂಗು), ಬೊಂಡ (ಕುಡಿಯಲು ರುಚಿಕರವಾದ, ಗಂಜಿಕಟ್ಟಿದ ಎಳನೀರು), ಬನ್ನಂಗಾಯಿ (ತುರಿಮಣೆಯಲ್ಲಿ ತುರಿಯುವಷ್ಟು ಇನ್ನೂ ಬಲಿಯದ, ದೋಸೆಮಾಡಲು ಯೋಗ್ಯವಾದ ಎಳೆತೆಂಗು), ಕಾಯಿ (ಕೊಯ್ಲಿಗೆ ಯೋಗ್ಯ ಬಲಿತ ತೆಂಗು), ಕೊಪ್ಪರ (ಪೂರ್ತಿ ಒಣಗಿ ಚಿಪ್ಪಿನಿಂದ ಬೇರ್ಪಟ್ಟ ಕೊಬ್ಬರಿ), ಕೆಟ್ಟ್-ಕಾಯಿ (ಒಳಗೆ ಕೊಳೆತುಹೋದ ತೆಂಗು) - ಕನಿಷ್ಠ ಇವಿಷ್ಟು ಪದವೈವಿಧ್ಯಗಳು ಬರಿಯ ತೆಂಗಿನ ಬೇರೆ ಬೇರೆ ಹಂತಗಳಿಗೆ ಇವೆ. ಅಂದರೆ ಅದು ಈ ಬೇರೆ ಬೇರೆ ರೀತಿಗಳಲ್ಲಿ ನಮ್ಮ ಜೀವನವನ್ನು ಆವರಿಸಿದೆ ಎಂದಾಯಿತು.
        ತೆಂಗಿಗೆ ಮೂರು ಕಣ್ಣುಗಳು ಏಕಿವೆ? ಸುಲಿದ ತೆಂಗಿನ ಕಾಯಿಯ ಮೇಲೆ ಮೂರು ಗೆರೆಗಳು ಏಕಿವೆ? ಎಂಬ ಪ್ರಶ್ನೆಗಳು ಕುತೂಹಲಜನಕ.
ತೆಂಗಿನ ಹೆಣ್ಣು ಹೂವಿನ ಗರ್ಭಾಶಯವು ಮೂರುಕೋಣೆಗಳನ್ನು ಹೊಂದಿದ್ದು ಒಂದೊಂದರಲ್ಲೂ ಒಂದೊಂದು ಅಂಡಾಣು ಇರುತ್ತದೆ. ಅವುಗಳಲ್ಲಿ ಒಂದು ಮಾತ್ರ ಫಲವಂತಿಕೆ ಹೊಂದಿದ್ದು ಉಳಿದೆರಡು ಬಂಜೆಯಾಗಿರುತ್ತವೆ. ಆದ್ದರಿಂದ ಉಳಿದೆರಡು ಕಣ್ಣುಗಳು ‘ಹುಸಿ’ಯಾಗುತ್ತವೆ. ಆದರೆ ಬಹುವಿರಳವಾಗಿ ಒಮ್ಮೊಮ್ಮೆ ಮೂರೂ ಫಲವತ್ತಾಗಿರುವುದೂ ಉಂಟು. ಆಗ ತೆಂಗಿನೊಳಗೆ ಎರಡು ಅಥವಾ ಮೂರು ಮನೆಗಳಿದ್ದು ಒಂದೊಂದರಲ್ಲೂ ಬೇರೆಬೇರೆ ಮೊಳಕೆಗಳಿರುತ್ತವೆ. ಆದರೆ ಇದು ಎಷ್ಟೋ ಲಕ್ಷಕ್ಕೊಂದು ಬಾರಿ ಮಾತ್ರ. ಅದನ್ನು ನೆಟ್ಟರೆ ಒಂದೇ ತೆಂಗಿನಿಂದ ಎರಡು ಮೂರು ಗಿಡಗಳು ಮೊಳೆಯುವುದೂ ಇದೆ. ಆದರೆ ಹೆಚ್ಚಾಗಿ ಒಂದೇ ಅಂಡಾಣು ಬಲಿಯುವುದರಿಂದ ತೆಂಗಿನ ಒಳಭಾಗ ಗೋಳಾಕಾರವಾಗಿದ್ದು ನಮಗೆ ಕಾಯಿ ತುರಿಯಲು ಅನುಕೂಲಕರವಾಗಿದೆ. ಆ ಕಾರಣಕ್ಕೆ ಪ್ರತಿಯೊಬ್ಬ ಬಾಣಸಿಗ ನಿಸರ್ಗಕ್ಕೆ ವಂದನೆ ಹೇಳಲೇ ಬೇಕು! ತೆಂಗಿನ ಸಂಬಂಧಿಯೆನ್ನಬಹುದಾದ ತಾಳೆ (ತಾಟಿನುಂಗು) ಯಲ್ಲಿ ಮೂರೂ ಮೊಳಕೆಗಳು ಬೆಳೆದು ಹಣ್ಣಿನೊಳಗೆ ಬೇರೆಬೇರೆ ಚಪ್ಪಟೆಯಾದ ಗೆರಟೆಗಳು ಮೂಡಿ ಹಣ್ಣಾದ ಮೇಲೆ ಪ್ರತ್ಯೇಕಗೊಂಡು ಸ್ವತಂತ್ರವಾಗಿ ಮೊಳೆಯುತ್ತವೆ.
         ತೆಂಗಿನ ಗೆರಟೆ ಒಂದು ಅತ್ಯದ್ಭುತ ವಸ್ತು. ಕಠಿಣವಾಗಿದ್ದು ಸುಲಭದಲ್ಲಿ ಒಡೆಯದಂತಿರುವ ಅದು ಮೊಳಕೆ ಹೊರಬರುವ ಕಣ್ಣಿನಲ್ಲಷ್ಟೇ ಮೃದುವಾಗಿರುತ್ತದಷ್ಟೆ. ಗೆರಟೆಯನ್ನು ಉರಿಸಿದರೆ ಬಹಳ ಉಜ್ವಲವಾಗಿ ಉರಿದು ಒಮ್ಮೆಲೆ ಬಹಳ ಹೆಚ್ಚಿನ ಶಾಖವನ್ನು ಕೊಡುತ್ತದೆ. ಹಾಲಿನಿಂದ ಸ್ವೀಟು ಇತ್ಯಾದಿಗಳನ್ನು ಕಾಯಿಸುವಾಗ ಗೆರಟೆಯ ಉರಿಯು ಹಾಲನ್ನು ಉಕ್ಕಿಸಿ ಕೆಲವೊಮ್ಮೆ ತಳಹಿಡಿಸಿ ಬಿಡುವುದರಿಂದ ಸೂಕ್ಷ್ಮವಸ್ತುಗಳ ಅಡುಗೆಗೆ ಉರುವಲಾಗಿ ಬಳಸುವುದು ಕಡಿಮೆ. ಗೆರಟೆಯ ರಾಶಿಗೆ ಬೆಂಕಿಯಿಟ್ಟ ಬಳಿಕ ನೀರೆರೆದು ಆರಿಸಿದಾಗ ಸಿಗುವ ಇದ್ದಿಲು ಒಂದು ಅತ್ಯುತ್ತಮ ಉರುವಲು. ಇದಕ್ಕೆ ಹಿಂದೆಲ್ಲ ಕುಲುಮೆಯವರಿಂದ ಬಹಳ ಬೇಡಿಕೆಯಿತ್ತು. ಆದರೆ ಕಬ್ಬಿಣದ ಕೆಲಸಗಾರರು ವಿರಳವಾಗಿರುವ, ಗ್ಯಾಸ್ ಸಿಲಿಂಡರುಗಳು ಹಳ್ಳಿಹಳ್ಳಿಗೂ ಬಂದಿರುವ ಈ ಕಾಲದಲ್ಲಿ ಇದ್ದಿಲಿಗೆ ಬೇಡಿಕೆಯಿಲ್ಲ. ಗೆರಟೆಯ ಇದ್ದಿಲಿನ ಪುಡಿ ಒಂದು ಆರೋಗ್ಯಕರ ದಂತಮಾರ್ಜಕ. ಸ್ಯಾಕರಿನ್ ಹಾಕಿದ ಸಿಹಿ ಟೂತ್ಪೇಸ್ಟುಗಳು ನಮ್ಮ ಆರೋಗ್ಯ ಕೆಡಿಸುತ್ತಿರುವ ಈ ಕಾಲದಲ್ಲಿ ಪಾರಂಪರಿಕ ಹಲ್ಲುಪುಡಿಗೆ ನಾನಂತೂ ವಾಪಾಸು ಹೋಗಿದ್ದೇನೆ. ನಿಮ್ಮ ಆಯ್ಕೆ ನಿಮ್ಮದು. 
      ಗೆರಟೆಯ ಇದ್ದಿಲು ಅಸಿಡಿಟಿಗೆ ಔಷಧ, ಶಕ್ತಿವರ್ಧಿತ ರೂಪದಲ್ಲಿ ಕಾರ್ಬೊ-ವೆಜ್ ಎಂಬ ಹೋಮಿಯೋಪತಿ ಮಾತ್ರೆಯಾಗಿ ಜಗತ್ಪ್ರಸಿದ್ಧ. ಗೆರಟೆಯಲ್ಲಿ ಬಹಳ ಸಣ್ಣಪ್ರಮಾಣದಲ್ಲಿರುವ ತೈಲಾಂಶವನ್ನು pyrolysis ಮೂಲಕ ಪ್ರತ್ಯೇಕಿಸಿ ಔಷಧಿಯಾಗಿ ಬಳಸುವ ಕ್ರಮ ಶತಶತಮಾನಗಳಷ್ಟು ಹಳೆಯದು. ಕರ್ರಗೆ ಟಾರಿನಂತಿರುವ ಈ ಗೆರಟೆಯ ಎಣ್ಣೆಯು ಉಗುರುಸುತ್ತು, ಫಂಗಸ್ ಇನ್ಫೆಕ್ಶನ್ ನಂಥ ಸಮಸ್ಯೆಗಳಿಗೆ ಪರಿಣಾಮಕಾರಿ ಔಷಧ. ಗೆರಟೆಯಿಂದ ತಯಾರಿಸುವ ಕರಕುಶಲ ವಸ್ತುಗಳು ಕಲಾಸಕ್ತರ ಮನಗೆದ್ದಿವೆ. ಈಗೀಗ ಪ್ಲಾಸ್ಟಿಕ್ ಬಟನ್ನುಗಳ ಬದಲಿಗೆ ಗೆರಟೆಯ ಬಟನ್ನುಗಳು ಬಟ್ಟೆಯನ್ನು ಅಲಂಕರಿಸಿವೆ. ಗೆರಟೆಯ ಸೌಟಿನ ಬಳಕೆ ಆರೋಗ್ಯಕರ, ಪ್ರಕೃತಿಸ್ನೇಹಿ. ಪ್ರತಿದಿನದ ಆಹಾರದಲ್ಲಿ ಸಣ್ಣ ಪ್ರಮಾಣದ ಗೆರಟೆ ಹೊಟ್ಟೆಗೆ ಸೇರಬೇಕೆಂಬ ಉದ್ದೇಶದಿಂದ ನಮ್ಮ ಮನೆಯಲ್ಲಿ ಸಾಂಬಾರು ಕುದಿಸುವಾಗ ಒಂದು ಗೆರಟೆಯನ್ನು ಅದ್ದಿಡುವ ಕ್ರಮ ಇತ್ತು. ಹೀಗೆ ಗೆರಟೆಯ ಮಹಿಮೆ ಮುಗಿಯುವಂಥದ್ದಲ್ಲ. ಆಧುನಿಕ ವಿಜ್ಞಾನವು ಗೆರಟೆಯ ಔಷಧೀಯ ಸಾಧ್ಯತೆಗಳನ್ನು ಇನ್ನೂ ಪೂರ್ತಿಯಾಗಿ ಅನ್ವೇಷಿಸಿಲ್ಲ.
         ತೆಂಗಿನಕಾಯಿಯು ಮರದಿಂದ ಕಳಚಿ ಸುರಕ್ಷಿತವಾಗಿ ಧರೆಸೇರಲು, ಮೊಳಕೆಯೊಡೆಯಲು ತೆಂಗಿನ ಹೊರಸಿಪ್ಪೆಯು ಅತ್ಯಗತ್ಯ ವಸ್ತು. ತೆಂಗಿನ ಸಿಪ್ಪೆಯಲ್ಲಿ ನೀರನ್ನು ಹೀರುವಂಥ ಸ್ಪಂಜಿನಂಥ ಪುಟ್ಟ ಉಂಡೆಗಳು, ಅವುಗಳನ್ನು ಜೊತೆಸೇರಿಸುವ ನಾರು - ಹೀಗೆ ಎರಡು ರಚನಾವಿಶೇಷಗಳಿರುತ್ತವೆ. ಈ ನಾರನ್ನು ಜುಂಗಿನಿಂದ ಬೇರ್ಪಡಿಸಿ ಹುರಿಹಗ್ಗ ಹೊಸೆದು ಬಹುಬಗೆಯ ಬಳಕೆ ಮಾಡುತ್ತಿದ್ದುದು ಸರ್ವವಿದಿತ. ಈ ಸಹಜ ಹಗ್ಗಗಳನ್ನು ಬಿಟ್ಟು ಪ್ಲಾಸ್ಟಿಕ್ಕಿಗೆ ಬದಲಾಯಿಸಿದುದರಿಂದ ನಾವು ಸೃಷ್ಟಿಸಿದ ಸಮಸ್ಯೆಯೇನೆಂಬುದನ್ನು ಮತ್ತೆ ವಿವರಿಸಬೇಕಿಲ್ಲ. ತೆಂಗಿನ ಜುಂಗು ಅತ್ಯುತ್ತಮ ತೇವಾಂಶಸಂಗ್ರಾಹಕ; ತರಕಾರಿ, ಹೂಗಿಡಗಳಿಗೆ ಹಿತಕಾರಿ; ಆಂಥೂರಿಯಂ, ಆರ್ಕಿಡ್ ಗಳನ್ನು ಬೆಳೆಸಲು ಸೂಕ್ತ ಮಾಧ್ಯಮವೂ ಹೌದು. ತೆಂಗಿನ ಸಿಪ್ಪೆ ಅತ್ಯುಪಯುಕ್ತ ಉರುವಲು. ಎಳನೀರು ಕುಡಿಯಲೆಂದು ಕತ್ತಿಯಿಂದ ಕೊಚ್ಚುವಾಗ ಹೊರಬೀಳುವ ಸಿಪ್ಪೆಯ ತೆಳುವಾದ ತುಂಡುಗಳು ಹಸುಗಳು ಇಷ್ಟಪಟ್ಟು ತಿನ್ನುವ ಮೇವು.
       ಹೀಗೆ ತೆಂಗಿನ ಗೆರಟೆ ಮತ್ತು ಸಿಪ್ಪೆಗಳು ನಿಸರ್ಗವು ಇತ್ತ ವರ. ಇಂಥ ಸಹಜವಸ್ತುಗಳನ್ನು ಬಳಸದೆ ಇರುವುದೇ ಆಧುನೀಕತೆ ಎಂಬ ಅಪಾಯಕಾರಿ ಪ್ರಪಾತದತ್ತ ಓಡುತ್ತಿರುವ ನಮ್ಮನ್ನು ಕಂಡರೆ ಮರುಕವುಂಟಾಗುತ್ತಿದೆ. ಮನುಷ್ಯನ ಕೃತಕ ಶಕ್ತಿಮೂಲಗಳು ಮುಗಿಯುತ್ತಿದ್ದಂತೆ ಇವೇ ಸಹಜವಸ್ತುಗಳು ಮತ್ತೆ ಪ್ರವರ್ಧಮಾನಕ್ಕೆ ಬರುವುದು ಶತ:ಸಿದ್ಧ. 
..................................................ವಸಂತ ಕಜೆ
ಕಜೆ ವೃಕ್ಷಾಲಯ
ಅಂಚೆ ಮಂಚಿ
ಪಿನ್ 574323
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************

Ads on article

Advertise in articles 1

advertising articles 2

Advertise under the article