-->
ಸಂಚಾರಿಯ ಡೈರಿ : ಸಂಚಿಕೆ - 8

ಸಂಚಾರಿಯ ಡೈರಿ : ಸಂಚಿಕೆ - 8

ಸಂಚಾರಿಯ ಡೈರಿ : ಸಂಚಿಕೆ - 8

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ  ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ

  
               ಸೊಲ್ಲಾಪುರ ಮಹಾರಾಷ್ಟ್ರದ ಸಣ್ಣ ನಗರಗಳಲ್ಲಿ ಒಂದು. ಮರಾಠಿ ಭಾಷಿಗರ ಸರಿಸಮನಾಗಿ ಕನ್ನಡ ಭಾಷಿಗರೂ ನೆಲೆಸಿರುವ ಈ ಸುಂದರ ನಗರದ ಸುತ್ತಲೂ ವಿಶ್ವವಿಖ್ಯಾತ ದೇವಾಲಯಗಳಿವೆ..

          ಸೊಲ್ಲಾಪುರ ನಗರದಲ್ಲೇ ಇರುವ ಈ ದೇವಾಲಯ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಸುಂದರ ಸರೋವರದ ತಟದಲ್ಲಿ ಶಿವ ಹಾಗೂ ವಿಷ್ಣು ಅವತಾರವೆನಿಸಿದ ಸಿದ್ಧೇಶ್ವರನ‌ ಪೂಜೆ ಇಲ್ಲಿ ನಿತ್ಯ ನಡೆಯುತ್ತದೆ. ಶ್ರೀಶೈಲ ಕ್ಷೇತ್ರದ ಮಲ್ಲಿಕಾರ್ಜುನನ ಭಕ್ತ ಸಿದ್ಧರಾಮೇಶ್ವರ ಎಂಬವರಿಂದ ಸ್ಥಾಪಿಸಲ್ಪಟ್ಟ ಈ ಆಲಯದಲ್ಲಿ ಭಕ್ತಾದಿಗಳಿಗೆ ನಿತ್ಯ ಅನ್ನಸಂತರ್ಪಣೆ ನಡೆಯುತ್ತದೆ. ಅನ್ನಛತ್ರದ ಕಂಬಗಳ ಮೇಲೆ ಕನ್ನಡ ವಚನಗಳನ್ನು ಬರೆಯಲಾಗಿ, ಶರಣ ಪರಂಪರೆಯ ಕೈಗನ್ನಡಿಯಂತಿವೆ. ವೀರಶೈವ ಲಿಂಗಾಯತರು ಹೆಚ್ಚಾಗಿ ನಡೆದುಕೊಳ್ಳುವ ಈ ಆಲಯದಲ್ಲಿ ಗದ್ದಿಗೆ ಯಾತ್ರೆ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.
           ಚಂದ್ರಭಾಗ ನದಿಯ ದಡದಲ್ಲಿರುವ ಈ ದೇವಾಲಯ ಸೊಲ್ಲಾಪುರದಿಂದ ೫೦ ಕಿ.ಮೀ‌ ದೂರದಲ್ಲಿದೆ. ಹೊಯ್ಸಳ ದೊರೆ ವಿಷ್ಣುವರ್ಧನನಿಂದ ನಿರ್ಮಿತವಾದ ಈ ದೇವಾಲಯದಲ್ಲಿ ವಿಷ್ಣು ವಿಠ್ಠಲನ‌ ರೂಪದಲ್ಲಿ ಆರಾಧಿಸಲ್ಪಡುತ್ತಾನೆ. 
ಆಷಾಢ ಏಕಾದಶಿಯ ದಿನ ದಿಂಡಿ ಯಾತ್ರೆ ಕೈಗೊಳ್ಳಲು ಭಾರತದ ಮೂಲೆ ಮೂಲೆಯಿಂದ ಭಕ್ತಾದಿಗಳು ಬರುತ್ತಾರೆ. ಮರಾಠಿ ನೆಲದ ಸಂತರಾದ ಜ್ಞಾನೇಶ್ವರ, ನಾಮದೇವ ಮೊದಲಾದವರೂ ಸಹ ಈ ಫಂಡರಾಪುರದ ವಿಠ್ಠಲನ ಆರಾಧಕರೇ. ಈ ಕ್ಷೇತ್ರಕ್ಕಾಗಿ ವರ್ಕರಿ ವ್ರತ ಮಾಡಿ , ಸದಾ ಭಜನೆ, ನಾಮ‌ಸ್ಮರಣೆ ಮಾಡುವ ಲಕ್ಷಾಂತರ ಭಕ್ತರಿರುವುದು ವಿಶೇಷ..

    ಮಹಾರಾಷ್ಟ್ರದ ತನ್ನದೇ ದೊಡ್ಡ ಮಟ್ಟಿನ ಭಕ್ತಗಣ ಇರುವ ಸಂತ ಅದು ಸ್ವಾಮಿ ಸಮರ್ಥ.. 'ಮಹಾರಾಜ್ ಶ್ರೀ ಸ್ವಾಮಿ ಸಮರ್ಥ ಜೈ ಜೈ ಸ್ವಾಮಿ ಸಮರ್ಥ ' ಎಂಬ ಒಂದು ಸಾಲಿನ ಹಾಡು ಬಹುತೇಕರಿಗೆ ಕಂಠಪಾಠವಾಗಿರುತ್ತದೆ. ಸೊಲ್ಲಾಪುರದಿಂದ ೪೦ ಕಿ.ಮೀ ದೂರದಲ್ಲಿದೆ ಈ ಆಲಯ. ದೊಡ್ಡದಾದ ಅರಳೀ ಮರದ ಕೆಳಗೆ, ದತ್ತಾತ್ರೇಯ ದೇವರ ಅವತಾರದ ರೂಪದಲ್ಲಿ ಸ್ವಾಮಿ ಸಮರ್ಥರ ಆರಾಧನೆ ನಡೆಯುತ್ತದೆ (ಇವರು ಶಿವಾಜಿಯ ಗುರು ಅಲ್ಲ). ಸ್ವಾಮಿಯ ಜನ್ಮ ದಾಖಲೆಗಳು ಅಸ್ಪಷ್ಟವಾಗಿದ್ದರೂ , ಶಿಷ್ಯ ವೃಂದದ ಪ್ರಕಾರ ಅವರ ಜನ್ಮಸ್ಥಳ ಆಂಧ್ರದ ಶ್ರೀಶೈಲ. ಅಲ್ಲಿಂದ ಲೋಕಸಂಚಾರ ಮಾಡಿ ಅಪಾರ ಶಿಷ್ಯ ವೃಂದ ಪಡೆದುಕೊಂಡರು. ಅಲ್ಲಿಂದ ಅಕ್ಕಲಕೋಟೆಯಲ್ಲಿ ಇಪ್ಪತ್ತು ವರ್ಷ ನೆಲೆಸಿ, ಲಿಂಗೈಕ್ಯರಾದರು ಎನ್ನುವ ಪ್ರತೀತಿ ಇದೆ. ಅಕ್ಕಲಕೋಟೆಯು ಮಹಾರಾಷ್ಟ್ರದ ಅತ್ಯಂತ ವ್ಯವಸ್ಥಿತ ಹಾಗೂ ಭವ್ಯ ದೇವಾಲಯಗಳಲ್ಲಿ ಒಂದಾಗಿದೆ. ನಿತ್ಯ ಅನ್ನದಾನ , ವಿದ್ಯಾದಾನಕ್ಕೆ ಹೆಸರಾದ ತಾಣ ಇದು.

       ಅಕ್ಕಲಕೋಟೆಯಿಂದ ೪೦ ಕಿಮೀ ದೂರದ ಈ ಆಲಯ ಅತಿದೊಡ್ಡ ಶಕ್ತಿ ಕೇಂದ್ರ. ಸಾಗುತ್ತಲೇ ಸ್ವಾಗತಿಸುವ ಬೃಹತ್ ದ್ವಾರಗಳು ಭಕ್ತಿಪರವಶತೆಗೆ ಹೇತುವಾಗಿವೆ. ೫೧ ಶಕ್ತಿ ಪೀಠಗಳಲ್ಲಿ ಒಂದಾದ ಈ ಕದಂಬರ ಕಾಲದ ಆಲಯ ರಮಣೀಯ ಬೆಟ್ಟದ ಮೇಲಿದೆ.
      ಛತ್ರಪತಿ ಶಿವಾಜಿಗೆ ದೇವಿಯ ಕೈಯಿಂದ ದೊರೆತ  'ಭವಾನಿ ಖಡ್ಗ' ಯುದ್ಧಗಳಲ್ಲಿ ಗೆಲವು ತಂದಿತೆಂಬ ಪ್ರತೀತಿ ಇದೆ. ಸ್ವಯಂಭೂ ರೂಪಿಣಿ ಎಂದು ಕರೆಯಲ್ಪಡುವ ತಾಯಿ ಮಹಾರಾಷ್ಟ್ರದ ಹಲವಾರು ಜಾತಿಗಳಿಗೆ ಕುಲದೇವರಾಗಿದ್ದಾರೆ.
ಸೊಲ್ಲಾಪುರದಿಂದ ವ್ಯವಸ್ಥಿತ ಬಸ್ಸುಗಳಿದ್ದು , ಉಳಿದುಕೊಳ್ಳಲು ಲಾಡ್ಜುಗಳಿವೆ.
     ಈ ಎಲ್ಲಾ ಆಲಯಗಳಿಗೆ ಮಧ್ಯ ಭಾಗದಲ್ಲಿ ಸೊಲ್ಲಾಪುರ ಇರುವ ಕಾರಣ ಅಲ್ಲಿಂದಲೇ ಪ್ಲಾನ್ ಹಾಕಿಕೊಂಡಾಗ ಹೋಗಿ ಬರುವ ಪ್ರಯಾಸ ತಪ್ಪುತ್ತದೆ. ಅಂದಹಾಗೆ ಸೊಲ್ಲಾಪುರಕ್ಕೆ ಬೆಂಗಳೂರಿನಿಂದ ನೇರ ರೈಲು ಸಂಪರ್ಕವಿದೆ. ವಿಮಾನ ನಿಲ್ದಾಣಕ್ಕಾಗಿ ದೂರದ ಔರಂಗಾಬಾದ್ ಅಥವಾ ಪುಣೆಗೆ ಹೋಗಬೇಕಾಗಬಹುದು. ಒಟ್ಟಾರೆ , ಸಾಲು ಸಾಲು ವೀಕೆಂಡ್ ರಜೆ ಸಿಕ್ಕಾಗ ಪ್ಲಾನ್ ಹಾಕಿ , ಸೊಲ್ಲಾಪುರದಲ್ಲೊಂದು ಸುತ್ತು ಹಾಕಿ , ಮರಾಠಿ ನೆಲದಲ್ಲಿ ಕನ್ನಡ ಸೊಲ್ಲು ಕೇಳಿ !
ಮುಂದಿನ ವಾರ ಇನ್ನಷ್ಟು ಹೊಸ ಊರುಗಳ ಹೊಸ ಸುದ್ದಿಗಳೊಂದಿಗೆ ಮತ್ತೆ ಸಿಗುತ್ತೇನೆ... ಬಾಯ್....
......................................... ಸುಭಾಸ್ ಮಂಚಿ 
ಕಾಡಂಗಾಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
******************************************

Ads on article

Advertise in articles 1

advertising articles 2

Advertise under the article