ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು
Monday, September 26, 2022
Edit
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಋಣವ ತೀರಿಸುತ ಜಗದಾದಿ ಸತ್ವವನು||
ಜನದಿ ಕಾಣುತ್ತದರೊಳ್ ಒಂದುಗೂಡಲು ಬೇಕು| ಮನೆಯೊಳಗೆ ಮಠ ನಿನಗೆ-
ಮಂಕುತಿಮ್ಮ||
ಬಹಳ ವಿಶಾಲವಾದ ಅರ್ಥವ್ಯಾಪ್ತಿಯಿರುವ ಸಾಲುಗಳಿವು. ಡಿ.ವಿ.ಜಿ ಯವರ ಕಗ್ಗಕ್ಕೆ ಅರ್ಥವ್ಯಾಖ್ಯಾನ ಮಾಡುವಾಗ ಮೊಗೆದಷ್ಟು ಮುಗಿಯದ ಸಾಗರವಾಗಿ ಕಗ್ಗದ ಸ್ವರೂಪ ಗೋಚರಿಸುತ್ತದೆ. ಅಗೆದಂತೆ ಆಳಗೊಳ್ಳುವ ಮೃದುತ್ವ ಕಗ್ಗಕ್ಕಿದೆ. ಮಾನವನ ಬದುಕಿಗೆ ದಿಗಂತದಗಲದ ಹರವಿರುವ ಹಲವಾರು ನೈಜ ಸಂಗತಿಗಳ ಆಕರ ಮಂಕುತಿಮ್ಮನ ಕಗ್ಗ.
ಮೇಲಿನ ಸಾಲುಗಳು ಡಿ.ವಿ. ಗುಂಡಪ್ಪನವರು ಋಣದ ಬಗ್ಗೆ ಯಾವ ಭಾವನೆಗಳನ್ನು ಹೊಂದಿದ್ದರೆಂಬುದರ ಪ್ರತಿಬಿಂಬ. ಋಣ ಎಂದರೆ ಸಾಲ, ಪಡೆದಿರುವುದನ್ನು ಮರಳಿಸಲು ಬಾಕಿಯಿರುವಂತಹುದೆಂದರ್ಥ. ಸಾಲ ಬಾಕಿ ಉಳಿಸಿಕೊಂಡವನು ಋಣಿ. ಚಿರ ಋಣಿ ಎಂಬ ಪದವನ್ನೂ ಬಳಸುತ್ತೇವೆ. ತೀರಿಸಲಾಗದ, ಜೀವನದುದ್ದಕ್ಕೂ ಬಾಕಿಯಾಗಿಯೇ ಉಳಿಯುವ ಋಣ ಉಳ್ಳವನು ಋಣಿ. “ಯಾರಿಗೆ ಋಣಿ?” ಎಂದಾಗ ನಾವು ಮನುಷ್ಯರು ಮಾತ್ರವಲ್ಲದೆ, ಸರ್ವ ಚರಾಚರಗಳು, ಪ್ರಕೃತಿಯ ಎಲ್ಲದಕ್ಕೂ ಋಣಿ ಎಂದೂ ಭಾವವಿದೆ. ಋಣವ ತೀರಿಸ ಬೇಕು ಎಂಬಲ್ಲಿ ಋಣಿಯ ಜವಾಬ್ದಾರಿಯು ಎದ್ದು ನಿಲ್ಲುತ್ತದೆ. ತಾನು ಋಣಿಯಾಗಿಯೇ ಉಳಿದರೂ, ಋಣವನ್ನು ತೀರಿಸಲು ಪ್ರಯತ್ನಿಸುತ್ತಿರುವುದೇ ಧರ್ಮ. ಹಾಗೆಂದ ಮಾತ್ರಕ್ಕೆ ಋಣ ಮುಕ್ತಿಯೆಂಬುದು ಅಸಾಧ್ಯದ ಮಾತು. ಜೀವನದುದ್ದಕ್ಕೂ ಋಣವು ಬೆಳೆಯುತ್ತಿರುತ್ತದೆಯೇ ಹೊರತು ಇಳಿಮುಖವಾಗದು. ಋಣವನ್ನು ತೀರಿಸುತ್ತಾ ಜಗದಾದಿ ಸತ್ವವನು ಅರಿಯಬೇಕು. ಇಲ್ಲಿ ಸತ್ವ ಎಂದರೆ ಶಕ್ತಿಯೆಂದೂ ತಿಳಿಯಬಹುದು. ಜಗತ್ತಿನ ಆದಿ ಶಕ್ತಿಯೆಂದರೆ ಭಗವಂತನೆಂದೂ ಭಾವಿಸಬಹುದು. ಜಗದ ಪ್ರಥಮ ಸತ್ವವೆಂದರೆ ಅದು ಸತ್ಯ. ಸತ್ಯವೇ ದೇವರು ತಾನೇ? ಜಗದ ಎಲ್ಲ ಸಕ್ರಮ ಅಕ್ರಮಗಳು ಸತ್ಯ ಪ್ರಣೀತ. ಭಗವಂತನ ಸಂಕಲ್ಪದಿಂದ ಹೊರತಾದುದು ಏನೂ ಇರದು. ಭಗವಂತನ ಲೀಲಾ ನಾಟಕಗಳ ಪಾತ್ರ ಧರಿಸುವ ವೇಷಧಾರಿಗಳೇ ನಾವು. ನಮ್ಮ ರೂಪ ಮತ್ತು ಸ್ವರೂಪಗಳು ಭಗವನ್ನಿಯಮಗಳು. ಇಲ್ಲಿ ಸ್ವರೂಪ ಎಂದರೆ ನಾವು ಯೋಜಿಸುವ, ಯೋಚಿಸುವ, ಅನುಪಾಲಿಸುವ ಕರ್ಮಗಳು. ಜಗದಾದಿ ಸತ್ವವನು ನಾವು ಪ್ರತಿಯೊಬ್ಬರಲ್ಲೂ ಕಾಣಬೇಕು ಎಂದೆನ್ನುವಾಗ ನಮ್ಮಂತೆ ಇತರರೊಳಗಿರುವ ಆತ್ಮವನ್ನು ನಾವು ಗೌರವಿಸಬೇಕು ಎಂದೇ ತಿಳಿಯಬೇಕು.
ಮನೆಯೊಳಗೆ ಮಠ ನಿನಗೆ ಎಂಬ ಸಾಲಿನಲ್ಲಿ ಮಂದಿರ, ಮಠ, ಮಸೀದಿ, ಚರ್ಚು ಅಥವಾ ಇನ್ನಾವುದೇ ಪೂಜಾಲಯಗಳನ್ನೋ ಪ್ರಾರ್ಥನಾಲಯಗಳನ್ನೋ ಉದ್ದೇಶಿಸಿದಂತೆ ಇದ್ದರೂ ಒಳಾರ್ಥಗಳು ಹೀಗೂ ಇರಬಹುದೇ ಎಂಬ ಜಿಜ್ಞಾಸೆ ಮನದೊಳಗೆ ಉದಯಿಸುತ್ತದೆ. ಇಂದಿನ ಪಾಠ ಶಾಲೆಗಳು ಇರದ ಕಾಲವೊಂದಿತ್ತು. ಆಗ ಇದ್ದುದೇ ಗುರುಮಠಗಳು. ಉಪನಯನ ಸಂಸ್ಕಾರದ ನಂತರ ಗುರುಮಠದಲ್ಲೇ ಇರುವ ಮಗು ಅಲ್ಲೆ ಕಲಿಯುತ್ತಾ ಬೆಳೆಯುತ್ತಾನೆ. ಗುರುಮಠ ವಿದ್ಯಾರ್ಥಿಗೆ ಮನೆಯೂ ಪಾಠ ಕಲಿಯುವ ಮಠವೂ ಹೌದು. ಅಕ್ಕರದಿಂದ ತೊಡಗಿ ಅಕ್ಕರೆ, ಅಸೂಯೆ, ಆನಂದ, ಆಲಸ್ಯ, ಆತ್ಮೀಯತೆ, ಆದರ, ಆತಿಥ್ಯ, ಅಸಭ್ಯತನ ಹೀಗೆ ಪ್ರತಿಯೊಂದನ್ನೂ ಮಗು ಗಳಿಸುತ್ತಿದ್ದುದು ಮಠಗಳಲ್ಲಿ ತಾನೇ? ಜೀವನದ ಎಲ್ಲ ಹಾಸು ಹೊಕ್ಕುಗಳನ್ನು, ಏಳು ಬೀಳುಗಳನ್ನು, ಎಡರು ತೊಡರುಗಳನ್ನು ಅನುಭವಿಸಲು ಅಂದು ಇದ್ದ ತಾಣವೆಂದರೆ ಗುರು ಮಠ ಮಾತ್ರ. ಗುರು ಮಠದಿಂದ ಹೊರಗೆ ಬಂದ ಮೇಲೆ, ಸಂಸಾರ, ಸಂಪಾದನೆ ಹೀಗೆ ಬದುಕಿನ ದಿಕ್ಕಿನಲ್ಲಿ ಸಹಜವಾದ ಬದಲಾವಣೆಗಳನ್ನು ಅನುಭವಿಸಬೇಕಿತ್ತು.
ಆದರೆ ಇಂದು ಗುರು ಮಠಗಳಿಲ್ಲ. ಮನೆಯೇ ಮಠ ಎಂದರೆ ಮನೆಯೇ ಪಾಠ ಶಾಲೆ ಎಂದಂತಾಗುತ್ತದೆ. ನಾವು ಮನೆಯೇ ಮೊದಲ ಪಾಠ ಶಾಲೆ ಎಂದೂ ರೂಪಾಂತರ ಕಾಣುತ್ತೇವೆ. ಮನೆಯೇ ಜೀವನದ ಪಾಠ ಶಾಲೆಯಾದುದರಿಂದ ಬದುಕಿನ ಎಲ್ಲ ಸವಾಲುಗಳ ಕಲಿಕಾಂಗಳವೂ ಮನೆಯೇ. ಅಕ್ಷರ ಕಲಿಕೆ ವಿದ್ಯಾಲಯದಲ್ಲಿ ನಡೆದರೆ ಉಳಿದೆಲ್ಲವೂ ಮನೆಯಲ್ಲೇ ಸಿಗಬೇಕು. ಜಗಳದ ಜಂಜಾಟ, ಕೋಪದ ತಾಪ, ನಿಂದನೆ ವಂದನೆ, ಸ್ವೀಕಾರ - ಬಹಿಷ್ಕಾರ ಹೀಗೆ ಒಳಿತು- ಕೆಡುಕುಗಳೆಲ್ಲದರ ಅನುಭವಗಳಿಕೆ ಮನೆಯೊಳಗೆ ನಡೆಯುತ್ತದೆ. ಹೃದಯ ಶೂನ್ಯತೆಯಿದ್ದಲ್ಲಿ ಗೌರವ ಮೂಡದೆ, ಪ್ರೀತಿ ಉಕ್ಕದೆ, ಸ್ವಾರ್ಥವೇ ಬಲಿತು ತಂದೆ ತಾಯಿಗಳನ್ನು ಹೊರಗೆ ಹಾಕುವ, ಸೋದರ ಸೋದರಿಯರನ್ನು ಹೊರ ನೂಕುವ ಹೀಗೆ ಅನೇಕ ಕಾಲೆಳೆಯುವ ತಂತ್ರಗಳೂ ನಡೆಯುತ್ತವೆ. ಅದಕ್ಕಾಗಿಯೇ ಮನೆಯೇ ಮಠ, ಮನೆಯೇ ಜೀವನದ ಅನುಭವ ಶಾಲೆ ಎಂಬ ಮಾತೇ ಈ ಸಾಲಿನಲ್ಲಿ ಗೋಚರವಾಗುತ್ತದೆ. ಮನೆ ಮಂದಿರವೇ ಎಂದು ಪರಿಗಣಿಸುವುದಾದರೆ, ಮನೆಗಳು ಮಸಣವಾಗುವುದೂ ಇವೆಯಲ್ಲ? ಎಲ್ಲರೊಳಗೊಂದಾಗು, ಎಲ್ಲರೊಳುಂದುಗೂಡು ಎಂಬ ಮಾತುಗಳು ಬದುಕಿನಲ್ಲಿ ತೂಕಗಳಿಸಬೇಕು; ತೂಕಡಿಕೆಯ ಅಥವಾ ನಾಟಕೀಯವಾಗಬಾರದು, ಶೋಕಿಯ ಬದುಕು ನಶ್ವರ, ಹೃದಯವಂತನ ಬದುಕು ಶೃಂಗಾರ ಮತ್ತು ಬಂಗಾರ ಅಲ್ವೇ...?
ಕಗ್ಗ ಬದುಕಿನ ಕಷ್ಟ ಕಾರ್ಪಣ್ಯಗಳನ್ನು, ಸಂದಿಗ್ಧತೆಯಿಂದ ಹೊರ ಬರಲು ಅನೇಕ ಪರಿಹಾರಗಳನ್ನು ಸೂಚಿಸುತ್ತವೆ. ಮನುಷ್ಯರು ಕಾಲೆಳೆಯಲು ಮನಸ್ಸು ಮಾಡುವುದಕ್ಕಿತ ಇತರರಿಗೆ ಭುಜವಾಗಲು ಅಥವಾ ಹೆಗಲಾಗಲು ಶ್ರಮಿಸಬೇಕು. ಹೆಗಲಾದವರನ್ನು ಬಗ್ಗುಬಡಿಯುವ ನೀಚತನ ಎಂದಿಗೂ ಸಲ್ಲದು. ನಾವು ಬಿಳಿಯ ಹಾಳೆಯ ಮೇಲೆ ಒಂದು ಕಪ್ಪು ಚುಕ್ಕಿಯನ್ನು ಗುರುತಿಸುವ ಮೂಢರಾಗುವುದಕ್ಕಿಂತ, ಬಿಳಿಹಾಳೆಯ ಮೇಲಿರುವ ಅಸಂಖ್ಯ ಬಿಳಿ ಚುಕ್ಕಿಗಳನ್ನು ಮಾತ್ರವೇ ಗುರುತಿಸುವ ಸತ್ಭಾವನೆಯುಳ್ಳವರಾಗೋಣ. ಮಕ್ಕಳೇ ನಮಸ್ಕಾರ
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
********************************************