-->
ಹಕ್ಕಿ ಕಥೆ : ಸಂಚಿಕೆ - 66

ಹಕ್ಕಿ ಕಥೆ : ಸಂಚಿಕೆ - 66

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ

               
          ಮಕ್ಕಳೇ ನಮಸ್ತೇ. ಈ ವಾರದ ಹಕ್ಕಿ ಕಥೆಗೆ ಸ್ವಾಗತ. ನನ್ನ ಹತ್ತಿರ ಸ್ವಂತ ವಾಹನ ಇಲ್ಲದ ಕಾಲ. ಎಲ್ಲಾದರೂ ಹೋಗಬೇಕಾದರೆ ಬಸ್ ನಿಲ್ದಾಣದ ವರೆಗೆ ನಡೆಯುವುದು ಮಾಮೂಲಿನ ಸಂಗತಿಯಾಗಿತ್ತು. ಮಧ್ಯಾಹ್ನ ಮುಖ್ಯ ಶಿಕ್ಷಕರ ಸಭೆಯಲ್ಲಿ ಬಾಗವಹಿಸಬೇಕಾಗಿತ್ತು. ಬೆಳಗ್ಗೆ ಶಾಲೆಗೆ ಹೋಗಿ ಬೆಳಗ್ಗಿನ ಅವಧಿಯ ಪಾಠಗಳನ್ನು ಮುಗಿಸಿ, ಊಟ ಮಾಡಿ ಹೊರಟೆ. ಶಾಲೆಯಿಂದ ಯಾವುದಾದರೂ ಸರ್ವೀಸ್ ಆಟೋ ಸಿಗುವ ಜಾಗಕ್ಕೆ ಬರಬೇಕಾದರೆ ಸುಮಾರು ಒಂದು ಕಿಲೋಮೀಟರ್ ದೂರ ನಡೆಯಬೇಕಾಗಿತ್ತು. ಮಧ್ಯಾಹ್ನ ಆದ್ದರಿಂದ ಯಾರೂ ಓಡಾಡುತ್ತಿರಲಿಲ್ಲ, ಬೀದಿ ನಿರ್ಜನವಾಗಿತ್ತು. ನಡೆದುಕೊಂಡು ಕೂಡುರಸ್ತೆ ಹತ್ತಿರ ಬಂದು ನಿಂತೆ. ಯಾವುದೇ ವಾಹನಗಳ ಓಡಾಟವೂ ಇರಲಿಲ್ಲ. 
ನಾನು ನಿಂತ ಜಾಗದ ಹಿಂದೆ ಮರಗಳಿಂದ ಹ್ಞೂಂ... ಹ್ಞೂಂ.. ಹ್ಞೂಂ.. ಎಂದು ಯಾರೋ ದೊಡ್ಡದಾಗಿ ಹ್ಞೂಂ ಗುಟ್ಟುವ ಧ್ವನಿ ಕೇಳಿದಂತಾಯಿತು. ಮೊದಲೇ ನಿರ್ಜನ ಬೀದಿ, ಸಣ್ಣಗೆ ಭಯ ಆಗತೊಡಗಿತು. ಗೂಬೆಗಳೂ ಹೀಗೆ ಶಬ್ದಮಾಡುವುದರಿಂದ ಗೂಬೆ ಇರಬೇಕು ಎಂದುಕೊಂಡೆ. ಆದರೆ ಸುತ್ತಮುತ್ತಲಿನ ಮರಗಳಲ್ಲಿ ಎಲ್ಲೂ ಗೂಬೆ ಕುಳಿತ ಸುಳಿವೇ ಇರಲಿಲ್ಲ. ಹಾಗಾದರೆ ಒಂದು ಕೆಲಸ ಮಾಡೋಣ ಅಂದುಕೊಂಡು ಬ್ಯಾಗಿನಿಂದ ಮೊಬೈಲ್ ತೆಗೆದೆ. ಧ್ವನಿಮುದ್ರಕ ಅಂದರೆ ವಾಯ್ಸ್ ರೆಕಾರ್ಡರ್ ಓಪನ್ ಮಾಡಿ ಹ್ಞೂಂ... ಹ್ಞೂಂ.. ಎಂಬ ಧ್ವನಿಯನ್ನು ರೆಕಾರ್ಡ್ ಮಾಡಿಕೊಂಡೆ. ಆ ಜಾಗದಲ್ಲಿ ಮೊಬೈಲ್ ನೆಟ್ ವರ್ಕ್ ಸಿಗುತ್ತಿರಲಿಲ್ಲ. ಯಾವುದೇ ವಾಹನವೂ ಬಾರದ ಕಾರಣ ಅಲ್ಲಿಂದ ಮುಂದೆ ಇನ್ನೆರಡು ಕಿಲೋಮೀಟರ್ ನಡೆದು ಹೋಗಲು ತೀರ್ಮಾನಿಸಿದೆ. ನಿರ್ಜನವಾದ ದಾರಿ. ಸೊಂಪಾಗಿ ಬೆಳೆದ ಮರಗಳು ರಸ್ತೆಯ ಎರಡೂ ಕಡೆ ಇದ್ದುದರಿಂದ ಯಾವುದೇ ಬಿಸಿಲಿನ ಝಳ ಇರಲಿಲ್ಲ. ಸ್ವಲ್ಪದೂರ ಹೋಗುತ್ತಿದ್ದಂತೆ ಗಾಢ ಹಸಿರು ಬಣ್ಣದ ರೆಕ್ಕೆ, ಕಂದು ಬಣ್ಣದ ಕತ್ತು ಮತ್ತು ತಲೆ, ಕಪ್ಪು ಬಣ್ಣದ ಪಟ್ಟೆಗಳಿರುವ ಬಾಲ, ತಿಳಿಕೆಂಪು ಬಣ್ಣದ ಪಾದಗಳಿರುವ ಹಕ್ಕಿಯೊಂದು ಪುರ್ರನೆ ನೆಲದಿಂದ ಹಾರಿ ಮರದ ನಡುವೆ ಅವಿತು ಕುಳಿತಿತು. ಮರದಲ್ಲಿ ಹಕ್ಕಿ ಕಾಣಲು ಸಿಗುತ್ತದೆಯೋ ಎಂದು ನೋಡಿದೆ. ಮರದ ನಡುವಿನ ಹಸಿರು ಮತ್ತು ಕಂದುಗಳ ನಡುವೆ ಹಕ್ಕಿ ಎಲ್ಲಿದೆ ಎಂದು ಕಾಣಲೇ ಇಲ್ಲ. ಆದರೆ ಕೆಲವೇ ಕ್ಷಣದಲ್ಲಿ ಹಕ್ಕಿ ಅವಿತುಕೊಂಡ ದಿಕ್ಕಿನಿಂದ ಅದೇ ಹ್ಞೂಂ.. ಹ್ಞೂಂ.. ಕೂಗು ಕೇಳಿಸಿತು. ಸ್ವಲ್ಪ ಹಿಂದೆ ಕೂಗಿದ ಹಕ್ಕಿ ಇದೇ ಇರಬೇಕು ಎಂದು ಖಾತ್ರಿಯಾಯಿತು. ಆದರೂ ಖಚಿತ ಪಡಿಸೋಣ ಅಂತ ಹಕ್ಕಿವಿಜ್ಞಾನಿ ಮಿತ್ರರೊಬ್ಬರಿಗೆ ಇದರ ಕೂಗನ್ನು ಕಳಿಸಿದೆ. ಅವರು ಅದರ ಹೆಸರನ್ನು ಖಾತ್ರಿ ಮಾಡಿದರು.
         ಭಾರತದ ಪಶ್ಚಿಮ ಘಟ್ಟಗಳು, ಹಿಮಾಲಯದ ತಪ್ಪಲು ಪ್ರದೇಶ ಮತ್ತು ಪೂರ್ವ ಭಾರತದಲ್ಲಿ ಕಾಣಸಿಗುವ ಈ ಹಕ್ಕಿ ಕಪೋತಗಳ ಜಾತಿಗೆ ಸೇರಿದ್ದು. ನೆಲದಲ್ಲಿ ಬಿದ್ದಿರುವ ಕಾಳು, ಹಣ್ಣುಗಳನ್ನು ಹೆಕ್ಕಿ ತಿನ್ನುವ ಈ ಹಕ್ಕಿಯ ಸಂತಾನೋತ್ಪತ್ತಿ ಕಾಲ ಜನವರಿಯಿಂದ ಮೇ ತಿಂಗಳ ನಡುವೆ. ಮರದಮೇಲೆ ಕಡ್ಡಿಗಳ ಸಹಾಯದಿಂದ ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿಮಾಡುತ್ತದೆ. ಒಂದಿಷ್ಟು ದಟ್ಟವಾದ ಕಾಡು ಇದ್ದರೆ ಈ ಹಕ್ಕಿ ನೋಡಲು ಸಿಗುತ್ತದೆ.
 ಕನ್ನಡದ ಹೆಸರು: ಹರಳು ಚೋರೆ, ಕಾಡು ಕಪೋತ
ಇಂಗ್ಲೀಷ್ ಹೆಸರು: Emarald Dove
ವೈಜ್ಞಾನಿಕ ಹೆಸರು: Chalcophaps indica
ಚಿತ್ರ ಕೃಪೆ: ಅವಿನಾಶ್ ಅಡಪ ಮತ್ತು ಸತೀಶ್ ಸಾರಕ್ಕಿ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************




Ads on article

Advertise in articles 1

advertising articles 2

Advertise under the article