ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು
Tuesday, September 20, 2022
Edit
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ನಮ್ಮ ರಾಷ್ಟ್ರೀಯ ಸೇನೆಯು ಒಂದು ಘೋಷಾ ವಾಕ್ಯವನ್ನು ಹೊಂದಿದೆ. ಅದರ ಮೂರು ಮೊದಲ ಅಕ್ಷರಗಳು, “N” ಆಗಿದ್ದು ವಿಸ್ತೃತ ರೂಪ ನಾಮ್, ನಮಕ್ ಮತ್ತು ನಿಷಾನ್ ಎಂದಾಗಿವೆ. ನಾಮ್ ಎಂದರೆ ಪ್ರಸಿದ್ಧಿ ಎಂದಾದರೆ ನಮಕ್ ಎಂದರೆ “ನಿಷ್ಠೆ”. ನಮಕ್ ಎಂದರೆ ಕನ್ನಡದಲ್ಲಿ ಉಪ್ಪು ಎಂದೇ ಅರ್ಥ. “ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ” ಎಂಬ ಮಾತೊಂದು ಪರಂಪರೆಯಿಂದ ನಮ್ಮ ಬಳಿಗೆ ಹರಿದಾಡಿ ಬಂದಿದೆ. ಈ ಮಾತು ಉಣ ಬಡಿಸಿದವನಿಗೆ ನಿಷ್ಠನಾಗಿರು ಎಂಬುದನ್ನು ಬಿಂಬಿಸುತ್ತದೆ. ಉಪ್ಪಿನ ಋಣವನ್ನು ತೀರಿಸಲಾಗದು ಎಂಬ ಮಾತೂ ಇದೆ. ನೆರವು ನೀಡಿದವರ ಋಣವನ್ನು ಎಂದೂ ತೀರಿಸಲು ಸಾಧ್ಯವಿಲ್ಲ ಎಂಬ ಸ್ಪಷ್ಠ ಭಾವ ಈ ಮಾತಿನಲ್ಲಿದೆ. ಸಹಕರಿಸಿದವರಿಗೆ ನಿಷ್ಠರಾಗಿರುವುದೇ ಋಣ ಸಂದಾಯ ಎಂದು ತಿಳಿದುಕೊಂಡರೆ ನಮ್ಮ ಬಾಳು ಸಮಂಜಸವಾಗುತ್ತದೆ. ನಿಷ್ಠೆ ಎಂದೊಡನೆ ನಮ್ಮ ಕಣ್ಣೆದುರಿಗೆ ಬಂದು ನಿಲ್ಲುವ ಪ್ರಾಣಿ ನಾಯಿ. ನಿಷ್ಠಗೆ ನಾಯಿಗಿಂತ ಮಿಗಿಲಾದ ಜೀವಿಯೇ ಇಲ್ಲ. ನಾವು ಯಾರನ್ನಾದರೂ ನಾಯಿ ಎಂದರೆ ಅದು ನಾಯಿಗೇ ಅವಮಾನ. ಯಾಕೆಂದರೆ ಶ್ವಾನ ನಿಷ್ಠೆ ಮಾನವ ನಿಷ್ಠೆಗಿಂತ ಮೇರು. ಆಸ್ಪತ್ರೆ ಸೇರಿದ ರೋಗಿಗೆ ಎರಡು ಲೀಟರ್ ರಕ್ತ ಬೇಕಾಯಿತು. ರಕ್ತವು ಒದಗಿ ಬರದೇ ಇದ್ದರೆ ಆ ರೋಗಿಯ ಸಾವು ಖಚಿತ. ಅಂತಹ ಸಂದರ್ಭದಲ್ಲಿ ವಿಶಾಲ ಹೃದಯವಂತರು ನಾಲ್ವರು ರಕ್ತ ನೀಡಿದರು. ಆತ ಬದುಕಿದ. ಮುಂದಿನ ದಿನಗಳಲ್ಲಿ ಅವನು ತನಗೆ ರಕ್ತದಾನ ಮಾಡಿದ ವ್ಯಕ್ತಿಗಳಿಗೆ ರಕ್ತ ನೀಡಲೇ ಬೇಕಾಗಿ ಬಂತು. ಆತನು ರಕ್ತ ದಾನವನ್ನೂ ಮಾಡಿದನು. ಈಗ ತನಗೆ ರಕ್ತದಾನ ಮಾಡಿದವರ ಋಣ ಸಂದಾಯವಾಯಿತೆಂದು ಹೇಳುವಂತಿಲ್ಲ. ಯಾಕೆಂದರೆ ಇಂದು ಆತ ಬದುಕುಳಿದ ಕಾರಣ ರಕ್ತ ನೀಡಲು ಸಾಧ್ಯವಾಯಿತು. ಜೀವ ಉಳಿಸಿದ ಆ ನಾಲ್ವರಿಗೆ ಮರು ರಕ್ತದಾನ ಮಾಡಿದರೂ ತನ್ನನ್ನು ಬದುಕಿಸಿದ ಅವರ ಋಣದಿಂದ ಮುಕ್ತಿಯಾದಂತಾಗುವುದಿಲ್ಲ. ಅದಕ್ಕಾಗಿಯೇ ಋಣಮುಕ್ತಿ ಯೆಂಬ ಪದವಿರುವುದಾದರೂ ಋಣ ಮುಕ್ತರಾಗಲು ನಮಗೆ ನಮ್ಮ ಜನ್ಮವೇ ಸಾಲದು. ನೆರವಾದವರ ಬಗ್ಗೆ ತನ್ನ ನಿಷ್ಠೆ ಅವಿಚ್ಛನ್ನವಾಗಿ ಮುಂದುವರಿಸುವುದೇ ಮಾನವನ ಶ್ರೇಷ್ಠತೆಗೆ ಕೈಗನ್ನಡಿ.
ನಮ್ಮ ನಿಷ್ಠೆ ಭಗವಂತನೊಡನೆ ಇರಬೇಕು ಎಂದು ಹೇಳುತ್ತೇವೆ. ಭಗವಂತ ಎಂದರೆ ಎಲ್ಲಾ ವಿಧದಿಂದಲೂ ಮೌಲ್ಯಗಳ ಶಿಖರ. ಮೌಲ್ಯಗಳಿಗೆ ನಿಷ್ಠನಾದರೆ ಭಗವಂತನಿಗೆ ನಿಷ್ಠನಾದಂತೆಯೇ ಎಂದು ನಾವರಿತರೆ ನಮ್ಮ ಜೀವನಪಥಕ್ಕೆ ಹೊಸ ಬೆಳಕು ದೊರೆಯುತ್ತದೆ. ಲಂಚ ನೀಡಿದವನಿಗೆ ನಿಷ್ಠನಾಗು, ಕಳ್ಳನಿಗೆ ನಿಷ್ಠನಾಗು, ದರೋಡೆ ಕೋರನಿಗೆ ನಿಷ್ಠನಾಗು,ಮೋಸಗಾರರಿಗೆ ನಿಷ್ಠನಾಗು, ನಮ್ಮನ್ನು ಬಾಗಿಸುವುದರಲ್ಲೇ ತಲ್ಲೀನನಾದವನಿಗೆ ನಿಷ್ಠನಾಗು ಎಂದು ಯಾರೂ ಹೇಳುವುದಿಲ್ಲ. ಅದರರ್ಥ ನಮ್ಮ ನಿಷ್ಠೆ ನಮ್ಮ ಜವಾಬ್ದಾರಿಯೊಂದಿಗೆ ಇರಬೇಕು. ಜವಾಬ್ದಾರಿಯನ್ನು ಕರ್ತವ್ಯವೆಂದು ವ್ಯಾಖ್ಯಾನಿಸುವುದೇ ಒಳಿತು. ನಮ್ಮನ್ನು ಹೆತ್ತ ತಾಯಿ, ನಮ್ಮನ್ನು ಒಂಭತ್ತು ತಿಂಗಳು ಹೊಟ್ಟೆಯಲ್ಲಿ ಧರಿಸಿ ಯಾತನೆ ಅನುಭವಿಸಿದ್ದಾಳೆ. ನಮ್ಮ ಹುಟ್ಟಿಗೆ ತಾಯಿ ಯಮನ ಬಳಿಗೆ, ಎಂದರೆ ಸಾವಿನ ಬಳಿಗೆನೇ ಹೋಗಿದ್ದಾಳೆ. ಹೆರಿಗೆಯ ನಂತರ ಎರಡಕ್ಕೂ ಅಧಿಕ ವರ್ಷ ಎದೆಹಾಲನ್ನು ಪ್ರೀತಿಯಿಂದ ಉಣಿಸಿದ್ಧಾಳೆ. ನಮ್ಮ ಬೆಳವಣಿಗೆಯ ಕಾಲ ಘಟ್ಟದಲ್ಲಿ ಬರುವ ಕಾಯಿಲೆಗಳು, ಆಕಸ್ಮಿಕ ನೋವುಗಳು, ಬಡತನದ ಬೇಗೆ, ಕೆಲಸದ ಒತ್ತಡ, ಬೇರೆ ಬೇರೆ ಮೂಲಗಳಿಂದ ಒದಗುವ ಕಿರಿಕಿರಿಗಳಿಗೆ ಹೆಗಲಾಗಿ ನಿಂತು ನಮ್ಮನ್ನು ರಕ್ಷಿಸಿದ್ದಾಳೆ. ನನ್ನ ಮಗು ಲೋಕದಲ್ಲಿ ಮೆರೆಯುವಂತಾಗಲಿ ಎಂಬ ಮಹದಾಸೆಯಿಂದ ನಮಗೆ ಬಾಲ ಪಾಠ, ಮೌಲ್ಯ ಪಾಠ ಮತ್ತು ಸಂಸ್ಕಾರಗಳನ್ನು ನೀಡಿ ಪೊರೆದಿದ್ದಾಳೆ. ಅಂತಹ ತಾಯಿಗೆ ಜೀವನದುದ್ದಕ್ಕೂ ನಿಷ್ಠೆ ತೋರಬೇಕಾದುದು ಮಕ್ಕಳ ಕರ್ತವ್ಯ. 'ಕೆಟ್ಟ ಮಕ್ಕಳು ಹುಟ್ಟಬಹುದು, ಕೆಟ್ಟ ತಾಯಿಯು ಹುಟ್ಟುವುದೇ ಇಲ್ಲ' ಎಂಬ ಹೇಳುವಿಕೆಯಿದೆ. ತಾಯಿಯ ಸ್ಥಾನ ನಮ್ಮ ಬದುಕಿನಲ್ಲಿ ಪರಮೋನ್ನತವಾದುದು. ತಾಯಿಯ ಬಗೆಗಿನ ನಿಷ್ಠೆಗೆ ಕೊನೆಯಿರಬಾರದಲ್ಲವೇ? ಅಪ್ಪನೂ ನಮ್ಮ ಬದುಕಿನ ಧ್ರುವ ತಾರೆ ಅಥವಾ ಮೇರು ಪರ್ವತದಂತೆ ಶಾಶ್ವತವಾದ ನೆಲೆಯನ್ನು ಹೊಂದಿದ್ದಾರೆ. ಅಪ್ಪ ಮತ್ತು ಅಮ್ಮನ ಯೌವನವು ಮಕ್ಕಳ ಬೆಳವಣಿಗೆಯಲ್ಲಿ ಸವೆದು ಹೋಗುತ್ತದೆ. ಹೆತ್ತವರನ್ನು ಗಂಧದಂತೆ ತೇಯಿಸಿಕೊಂಡ ಮಕ್ಕಳು ಹೆತ್ತವರನ್ನು ಮೂಲೆಗೆ ಸರಿಸಿ ಎಷ್ಟೇ ಮೆರೆದರೂ ಅವರು ಕೇವಲ ಪಾಪಿಗಳು, ಕರ್ಮ ಅಥವಾ ಕರ್ತವ್ಯ ನಿಷ್ಠರೆನಿಸುವುದಿಲ್ಲ. ಮಕ್ಕಳನ್ನು ಆಸ್ತಿಯನ್ನಾಗಿ ಬೆಳೆಸಿದ ಹೆತ್ತವರ ಕಡೆಗಾಲದಲ್ಲಿ ನಾಸ್ತಿ ಎನ್ನುವ ಮಕ್ಕಳು ಇಹ ಪರಗಳಲ್ಲಿ ವೇದನೆಗೊಳಗಾಗುವರೆಂಬುದು ಭಾರತೀಯ ಸಾಂಸ್ಕೃತಿಕ ನಂಬುಗೆ. ತಂದೆ-ತಾಯಿಗಳ ನೆಲೆ ತಪ್ಪಿಸಿದವರಿಗೆ ಬೆಲೆಯಿರುವುದೇ ಇಲ್ಲ. ದೇಶ ನಿಷ್ಠೆ, ಧರ್ಮ ನಿಷ್ಠೆ, ವಾಕ್ ನಿಷ್ಠೆ, ಶ್ರಮ ನಿಷ್ಠೆ, ಕರ್ತವ್ಯ ನಿಷ್ಠೆ, ಗುರು ನಿಷ್ಠೆ, ಸಮಾಜ ನಿಷ್ಠೆ, ಪ್ರಕೃತಿ ನಿಷ್ಠೆ, ಹೀಗೆ ನಮಗೆ ಹಲವಾರು ನಿಷ್ಠಾ ಕ್ಷೇತ್ರಗಳಿವೆ. ಈ ಕ್ಷೇತ್ರಗಳ ಒಳಗೆ ಸಾಗಿದಂತೆ ನಾವು ನಿಷ್ಠರಾಗಿರಬೇಕಾದ ಇನ್ನೂ ಅನೇಕ ಬಯಲುಗಳು ಸಿಗುತ್ತವೆ. ಶ್ರಮನಿಷ್ಠೆಯ ಬಗ್ಗೆ ಒಂದೆರಡು ಮಾತಿನೊಂದಿಗೆ ಈ ಲೇಖನಕ್ಕೆ ಕೊನೆಯ ಚುಕ್ಕಿ ಇಡಲೇ? ಶ್ರಮ ಅಥವಾ ಪರಿಶ್ರಮ ಜೀವನದ ಮರಮೋನ್ನತ ಮೌಲ್ಯ. ನಮ್ಮ ಬದುಕಿನ ಸಂತಸ ಶ್ರಮದೊಂದಿಗಿದೆಯೇ ಹೊರತು ಆಲಸ್ಯದ ಜೊತೆಗಲ್ಲ. ನಾವು ಮಾಡಲಿರುವ ಎಲ್ಲಾ ಕೆಲಸಗಳನ್ನೂ ಶ್ರಮ ನಿಷ್ಠೆಯಿಂದ, ಪ್ರಾಮಾಣಿಕವಾಗಿ ಹೃದಯ ವೈಶಾಲ್ಯದೊಂದಿಗೆ ಮಾಡಬೇಕು. ಶ್ರಮವನ್ನು ಹೇಗೆ ಲಘುಗೊಳಿಸಬಹುದೆಂದು ಯೋಚಿಸುವುದು ಕೆಲಸಗಳ್ಳತನ ಅಥವಾ ಹೊಣೆಗೇಡಿತನವಾಗುತ್ತದೆ. ಯಾವುದಾದರೂ ಕಛೇರಿಯಲ್ಲಿ ಕೆಲಸ ಮಾಡುವ ವ್ಯಕ್ತಿ ತನಗೆ ಬೃಹತ್ ಪ್ರಮಾಣದಲ್ಲಿ ಲಂಚ ನೀಡಿದವರ ಕೆಲಸ ಮಾತ್ರ ಮಾಡಿಕೊಡುವವನೆಂದಾದರೆ ಆತ ಪರಿಶ್ರಮಿಯಲ್ಲ, ಬದಲಿಗೆ ಉಂಬುಳ ಜಾತಿಗೆ ಸೇರಿದ ಸೋಮಾರಿ ಜೀವಿ. ಆತನಿಗೆ ಸಮಾಜದಲ್ಲಿ ಮನ್ನಣೆಯಿರದು. ನಮ್ಮ ಕೆಲಸವೇ ನಮಗೆ ದೇವರು ಎಂದು ತಿಳಿದವರು, ಕೆಲಸದಲ್ಲಿ ಮೇಲು ಕೀಳು ಎಂಬ ಭೇದ-ಭಾವವಿರದವರು ನಿಜವಾದ ಶ್ರಮ ನಿಷ್ಠರು. ಮಕ್ಕಳೇ ನಾವೂ.. ನಿಷ್ಠರಾಗುವತ್ತ ನಮ್ಮ ಚಿಂತನೆಯನ್ನು ಹರಿಸೋಣವೇ....?
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
********************************************