ಸಂಚಾರಿಯ ಡೈರಿ : ಸಂಚಿಕೆ - 9
Thursday, September 8, 2022
Edit
ಸಂಚಾರಿಯ ಡೈರಿ : ಸಂಚಿಕೆ - 9
ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
ಅಸ್ಸಾಂ ಈಶಾನ್ಯ ರಾಜ್ಯಗಳಲ್ಲೇ ಅತ್ಯಂತ ವಿಶಿಷ್ಟ ಸಂಸ್ಕೃತಿಗೆ ಹೆಸರಾದ ರಾಜ್ಯ. ಸಪ್ತ ಕನ್ಯೆಯರ ಭೂಮಿಗೆ ಪ್ರವೇಶ ದ್ವಾರವಾದ ಈ ರಾಜ್ಯಕ್ಕೆ ಒಂದು ಬಾರಿಯಾದರೂ ಭೇಟಿ ನೀಡಬೇಕೆನ್ನುವ ಅಭಿಲಾಷೆ ಎಲ್ಲರಿಗೂ ಇದ್ದದ್ದೇ.. ಹೀಗೆ ಅಸ್ಸಾಂನ ಉಡಾಲ್‌ಗುರಿ ಜಿಲ್ಲೆಯ ಸೈಕಿಯಾ ಸುಬುರಿ ಎಂಬ ಗ್ರಾಮಕ್ಕೆ ತೆರಳಿದ್ದ ನನಗೆ ಆಶ್ಚರ್ಯ ಕಾದಿತ್ತು. ಕಾರಣ ಅಲ್ಲಿ 29 ಜೋಡಿಗಳಿಗೆ ವಿವಾಹ ಏರ್ಪಾಟಾಗಿತ್ತು. ನಮ್ಮಲ್ಲಿ ನಡೆಯೋ ಸಾಮೂಹಿಕ ಮದುವೆಯಂತೆಯೇ ತರಹೇವಾರಿ ಅಲಂಕಾರಗಳೊಂದಿಗೆ ಸಜ್ಜುಗೊಂಡ ಮಂಟಪದಲ್ಲಿ ಜೋಡಿಗಳೆಲ್ಲಾ ಕಿಲಕಿಲ ನಗುತ್ತಾ ಕುಳಿತಿದ್ದರು. ಕೆಲವರ ಕೇಕೆ, ಉತ್ಸಾಹಕ್ಕೆ ಮಿತಿಯೇ ಇರಲಿಲ್ಲ.
ಅತ್ತಿಂದಿತ್ತಾ ಓಡಾಡುತ್ತಿದ್ದ ಚಿಕ್ಕಮಕ್ಕಳ ನಡುವೆ ಚಕ್ಕಳ ಮಕ್ಕಳ ಹಾಕಿ ಮಣೆಯ ಮೇಲೆ ಕುಳಿತಿದ್ದು 50-60 ವರ್ಷದ ಮುದುಕ - ಮುದುಕಿಯರು!. ಅಯ್ಯೋ! ಇದೇನ್ ಕಣ್ರೀ ಈ ಕಾಲದಲ್ಲಿ ಇವೆಲ್ಲಾ ಬೇಕಿತ್ತಾ ಅಂತೀರಾ ! ತಡೀರಿ! ಇಲ್ಲಿ ಕುಳಿತ ಎಲ್ಲಾ ಜೋಡಿಗಳು ತಮ್ಮ ಮದುವೆಯ ಸಂದರ್ಭದಲ್ಲಿ ಕೆಲವು ರೀತಿ ರಿವಾಜುಗಳನ್ನ , ಕಟ್ಟುಪಾಡುಗಳನ್ನ ಅನುಸರಿಸದ ಕಾರಣ , ಇವರ ಮಕ್ಕಳ ಮದುವೆ ಸಂದರ್ಭದಲ್ಲೂ ತೊಂದರೆ ಬರಬಹುದೆನ್ನುವ ಕಾರಣಕ್ಕೆ ಪುನರ್‌ಲಘ್ನಕ್ಕೆ ಅಣಿಯಾಗಿದ್ದರು.
ಮೊದಲು ಪುರೋಹಿತರು ಎಲ್ಲರನ್ನೂ ನಾಮ್ಘರ್ (ಅಸ್ಸಾಮಿನ ಪ್ರಾರ್ಥನಾಗೃಹಗಳು) ಒಳಗೆ ದೇವರ ಆಶೀರ್ವಾದ ಬೇಡಿ, ಹೊರಗಿನ ಮಂಟಪದಲ್ಲಿ ಎಲ್ಲರಿಗೂ ಯಜ್ಞ ಕುಂಡಕ್ಕೆ ಅರ್ಘ್ಯಾರ್ಪಣೆಯ ಸೂಚನೆ ನೀಡಿದರು. ನಮ್ಮ ದಕ್ಷಿಣ ಭಾರತದ ರೀತಿಯಲ್ಲಿ ಯಜ್ಞ ಯಾಗ ಎಂದರೆ ರೀತಿ ರಿವಾಜುಗಳಿಂದಾಗಿ ಸಮಯ ತೆಗೆದುಕೊಂಡರೆ ಅಲ್ಲಿಯ ಪುರೋಹಿತರು ಮಾತ್ರ ಫಟಾಫಟ್ ನಾಲ್ಕೈದು ಮಂತ್ರೋಚ್ಛರಿಸಿ ಮೊದಲ 15 ಜೋಡಿಗಳ ಯಾಗ ಸಂಪನ್ನಗೊಳಿಸಿ ಹೊರ ಕಳುಹಿಸಿ,ಉಳಿದ ಜೋಡಿಗಳನ್ನ ಕರೆಸಿದ್ದರು..
ನಡು ನಡುವೆ 'ಏಕ್ ದುಯಿ ಖೋಯಿ ಲಿಖಿಲು, ಎಕ್ಕೆ ಲೋಗೆ ಉನ್ತ್ರಿಸ್ ಜೋಡಿ ಬಿಯಾ ಏ ಪ್ರಥಮ್ ದೇಖಿಲು (ಒಂದು ಎರಡು ನೂರು ಬರೆದೆ, ಒಂದೇ ಬಾರಿ 29 ಜೋಡಿ ಮದುವೆ ಪ್ರಥಮ ಬಾರಿ ನೋಡಿದೆ) ಎಂಬ ಹಾಡನ್ನ ಓರಗೆಯ ಮಹಿಳೆಯರು ಹಾಡುತ್ತಿದ್ದರು. ಈ ಮದುವೆಯಲ್ಲಂತೂ ಯಾವೊಬ್ಬ ಜೋಡಿಯ ಮಕ್ಕಳಿಗೂ ತಮ್ಮ ತಂದೆತಾಯಿಯ ಮದುವೆ ನೋಡಬಾರದು ಎಂಬ ಕಟ್ಟಪ್ಪಣೆ ಹೊರಡಿಸಿದ್ದರು. ಅದಾಗ್ಯೂ ಕೆಲವರು ಕದ್ದುಮುಚ್ಚಿ ಬಂದು ಇಣಿಕಿ ಹೋಗುತ್ತಿದ್ದರು.
ಈ ವಿಚಿತ್ರ ಮದುವೆಯ ಚಿತ್ರೀಕರಣಕ್ಕಾಗಿ ಅಸ್ಸಾಮಿ ಮಾಧ್ಯಮದವರೂ ಬಂದಿದ್ದರು. ಅವರ ಜತೆ ನನ್ನನ್ನೂ ಕಂಡು ಅಸ್ಸಾಮಿ ಘಮೂಸಾ (ಶಾಲು) ಹೊದಿಸಿದರು. ಮದುವೆಗೆ ಬಂದವರಿಗೆಲ್ಲ ಭೋಜನದ ವ್ಯವಸ್ಥೆಯನ್ನೂ ಮಾಡಿದ್ದರು.
ಒಟ್ಟಾರೆ ಅಸ್ಸಾಂನ ಪ್ರವಾಸದ ಮಧ್ಯೆ ಮುದುಕರ ಮದುವೆಯನ್ನ ನೋಡಿ ಕಣ್ತುಂಬಿಕೊಳ್ಳುವ ಸೌಭಾಗ್ಯ ಒದಗಿಬಂತು!
ಕಾಡಂಗಾಡಿ , ಮಂಚಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob : 9663135413
******************************************