-->
ಆದರ್ಶ ಶಿಕ್ಷಕರು : ಸಂಚಿಕೆ - 3

ಆದರ್ಶ ಶಿಕ್ಷಕರು : ಸಂಚಿಕೆ - 3

ಆದರ್ಶ ಶಿಕ್ಷಕರು : ಸಂಚಿಕೆ - 3

ಸೆಪ್ಟೆಂಬರ್ - 5 - 2022
ಶಿಕ್ಷಕರ ದಿನಾಚರಣೆ
ತಮಗೆ ಆದರ್ಶವಾದ ಶಿಕ್ಷಕರ ಬಗೆಗೆ ಜಗಲಿಯ ಮಕ್ಕಳು ಬರೆದಿರುವ ಅನಿಸಿಕೆ ಇಲ್ಲಿದೆ       ಶಿಕ್ಷಕರ ದಿನಾಚರಣೆಯ ಈ ಸುಸಂದರ್ಭದಲ್ಲಿ ನನ್ನ ಎಲ್ಲಾ ಪೂಜ್ಯ ಗುರುಗಳಿಗೆ ವೈಷ್ಣವಿ ಕಾಮತ್ ಮಾಡುವ ನಮನಗಳು. ಶಿಶುಮಂದಿರದಲ್ಲಿ ಗಂಗಾ ಮಾತಾಜಿಯವರು ನನ್ನ ಇಷ್ಟದ ಮಾತಾಜಿಯಾಗಿದ್ದರು. ಹಾಗೆಯೇ ಪ್ರಾಥಮಿಕದಲ್ಲಿ ರೂಪಕಲಾ ಮಾತಾಜಿ ನನ್ನ ಇಷ್ಟದ ಮಾತಾಜಿಯಾಗಿದ್ದರು. "ಅಜ್ಞಾನಂ ತಿಮಿರಾಂದಸ್ಯ ಜ್ಞಾನ ಅಜ್ಞಾನಂ ಶಲಾಕಯ ಚಕ್ಷುರುಂ ಮೀಲಿತಂ ಯೇನ  ತಸ್ಮೈಶ್ರೀ ಗುರವೇ ನಮಃ" ಇದರ ಅರ್ಥ :- ಅಜ್ಞಾನವೆಂಬ ಕತ್ತಲೆಯಿಂದ ಅಂಧನಾದವನ ಕಣ್ಣನ್ನು ಜ್ಞಾನವೆಂಬ ಅಂಜನ ಶಲಾಕೆಯಿಂದ ಬಿಡಿಸಿದ ಶ್ರೀ ಗುರುವಿಗೆ ನಮಸ್ಕಾರ. ಗುರುಗಳು ನಮಗೆ ಮಾರ್ಗದರ್ಶನವನ್ನು ನೀಡುವುದರ ಜೊತೆಗೆ ನಾವು ಮುನ್ನಡೆಯಲು ಬೇಕಾದ ದಾರಿಯನ್ನೂ ಸಹ ತೋರುತ್ತಾರೆ. "ಮುಂದೆ ಗುರಿ ಹಿಂದೆ ಗುರು" ಇದ್ದರೆ ಯಾವುದು ಅಸಾಧ್ಯವಲ್ಲ ಎಂಬ ಮಾತಿದೆ. ನಮ್ಮ ಜೀವನದಲ್ಲಿ ಯಾವುದೇ ರಂಗದಲ್ಲಾಗಲಿ ಸಾಧನೆ ಮಾಡಲು ಗುರುವಿನ ಮಾರ್ಗದರ್ಶನ ಬಹಳ ಮುಖ್ಯ. ಹಾಗೆಯೇ ನನಗೆ ಶಿಶು ಮಂದಿರ, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕದಲ್ಲಿ ನಮ್ಮ ಅಪ್ಪ ಅಮ್ಮನಂತೆ ನನಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿದ ನನ್ನ ಎಲ್ಲಾ ಮಾತಾಜಿ ಮತ್ತು ಶ್ರೀಮಾನ್ ರವರಿಗೆ ಅನಂತಾನಂತ ಹೃದಯಸ್ಪರ್ಶಿ ವಂದನೆಗಳು.
                 ಧನ್ಯವಾದಗಳೊಂದಿಗೆ
............................................ ವೈಷ್ಣವಿ ಕಾಮತ್
6ನೇ ತರಗತಿ 
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
*******************************************     ಶಿಕ್ಷಕರ ದಿನಾಚರಣೆಯ ಶುಭಾಶಯಗಳು, ನಾನು ಶ್ರಾವ್ಯ.....
     ಗುರು ಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಯಿ ಶ್ರೀ ಗುರುವೇ ನಮಃ ...... ಗುರು ದೇವರ ಸ್ವರೂಪ , ಪೋಷಕರು ಪ್ರೀತಿ ಕಾಳಜಿ ಆಸರೆ ನೀಡಿದರೆ ಗುರು ಜಗತನ್ನೇ ಪಸರಿಸುತ್ತಾರೆ. ಶಾಲೆಯಲ್ಲಿ ವಿದ್ಯೆ ಕಲಿಸುವವರು ಮಾತ್ರ ಗುರುಗಳಲ್ಲ, ನಮ್ಮ ಬದುಕಿನ ಹಾದಿಯಲ್ಲಿ ಮಾರ್ಗದರ್ಶನ ನೀಡುವ ಪ್ರತಿಯೊಬ್ಬ ವ್ಯಕ್ತಿಯು ಗುರುವೇ...
         ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಮಾತಿದೆ. ಹಿಂದೆ ಗುರು ಮುಂದೆ ಗುರಿ ಯಶಸ್ಸು ಖಂಡಿತ. ಪ್ರತಿಯೊಬ್ಬ ಶಿಕ್ಷಕರು ತಮ್ಮದೇ ಆದ ವಿಷೇಶತೆ ಹೊಂದಿರುತ್ತಾರೆ. ಪ್ರತಿಯೊಬ್ಬರಿಂದಲೂ ಕಲಿಯಲು ತುಂಬಾ ವಿಚಾರಗಳಿರುತ್ತದೆ. ತಮಗೆ ತಿಳಿದಿರುವ ವಿಚಾರವನ್ನೆಲ್ಲಾ ನಮಗೆ ಧಾರೆ ಎರೆಯುವ ನಿಷ್ಕಲ್ಮಶ ವ್ಯಕ್ತಿತ್ವ..
        ಶಿಕ್ಷಕರ ದಿನಾಚರಣೆಯ ಈ ಸಂಧರ್ಭದಲ್ಲಿ ನನಗೆ ಸೂರ್ತಿಯಾಗಿರುವ ಒಬ್ಬ ಶಿಕ್ಷಕರ ಬಗ್ಗೆ ಹೇಳುವುದಾದರೆ: ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು ಇಲ್ಲಿ ನನಗೆ 8 ನೇ ತರಗತಿಯಿಂದ 10ನೇ ತರಗತಿವರೆಗೂ ತರಗತಿ ಶಿಕ್ಷಕರಾಗಿದ್ದವರು ವಿಶಾಂತ್ ಸರ್. ಇವರು ಸಮಾಜವಿಜ್ಞಾನ ಶಿಕ್ಷಕರು. ಇವರ ಪಾಠದ ಶೈಲಿ ಹಾಗೂ ನಮ್ಮ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದುದು ನನಗೆ ತುಂಬಾ ಖುಷಿ ನೀಡುತ್ತಿತ್ತು.. ಇವರು ಶಿಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು. ಎಲ್ಲಾ ವಿದ್ಯಾರ್ಥಿಗಳನ್ನು ಸಮಾನವಾಗಿ ಪರಿಗಣಿಸುತ್ತಿದ್ದರು. ತೀರಾ ಸಲುಗೆ ಇಲ್ಲ.... ಹಾಗಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಕಾಳಜಿಯೇ ತೋರುತ್ತಿದ್ದರು.. ಇವರು ಇರುವ ಪಾಠದ ಅವಧಿಯಲ್ಲಿ ಪಾಠದ ಸಂಬಂಧಿ ವಿಚಾರವಲ್ಲದೆ ಜಗತ್ತಿನ ಆಗು ಹೋಗು ಮುಂದಿನ ವಿದ್ಯಾಭ್ಯಾಸದ ಬಗೆಗೆಗಿನ ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷೆ ಹೀಗೆ ಹಲವಾರು ವಿಚಾರ ನಮ್ಮೊಂದಿಗೆ ಚರ್ಚಿಸುತ್ತಿದ್ದರು. ಇವರ ಶಿಸ್ತು ಹಾಗು ಸರಳ ವ್ಯಕ್ತಿತ್ವ ನಮಗೆ ಸ್ಪೂರ್ತಿ..... ತಪ್ಪುಗಳನ್ನು ತಿದ್ದಿ ನಮ್ಮ ಮುಂದಿನ ಹೆಜ್ಜೆಗೆ ಮಾರ್ಗದರ್ಶಕರಾಗಿ ಸದಾ ನಮ್ಮ ಏಳಿಗೆ ಬಯಸುವ ನಿಶ್ಕಲ್ಮಶ ವ್ಯಕ್ತಿತ್ವ ಯಾವತ್ತೂ ಗುರುಗಳದ್ದು ಅಂತಃ ಗುರುಗಳಿಗೆ ವಿಧೇಯ ಶಿಷ್ಯರಾಗುವ...... ಸದಾ ಅವರ ಆಶೀರ್ವಾದ ಬಯಸೋಣ.......
........................................................... ಶ್ರಾವ್ಯ
ದ್ವಿತೀಯ ಪಿಯುಸಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
   


     ನನ್ನ ಹೆಸರು ಮೇಘ. ಮುಗ್ಧ ಮನಸಿನಲ್ಲಿ ಅಕ್ಷರ ಬಿತ್ತಿ ಮಕ್ಕಳ ಭವಿಷ್ಯಕ್ಕೆ ಬೆಳಕನ್ನು ಚೆಲ್ಲಿ
ಸುಂದರ ನಾಡನ್ನು ಕಟ್ಟುವ ಅದ್ಭುತ ಶಿಲ್ಪಿಗಳಾದ ಸಮಸ್ತ ಗುರುವೃಂದಕ್ಕೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು...
     ನನ್ನ ಜೀವನದಲ್ಲಿ ತಂದೆ ತಾಯಿಯೇ ಮೊದಲ ಗುರು ಹಾಗೂ ದೇವರು. ತಂದೆ ತಾಯಿ ನನಗೆ ಶಿಕ್ಷಣದ ಕಡೆಗೆ ಅತೀ ಹೆಚ್ಚು ಪ್ರೋತ್ಸಾಹ ನೀಡುತ್ತಾರೆ. ಅದೇ ರೀತಿ ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ಅದರ ಹತ್ತುಪಟ್ಟು ಜಾಸ್ತಿ ಪ್ರೋತ್ಸಾಹ ನೀಡುತ್ತಾರೆ. ಅದರಲ್ಲಿ ಕನ್ನಡ ಶಿಕ್ಷಕಿಯಾದ ಜಯಲಕ್ಷ್ಮಿ ಟೀಚರ್ 
ಇವರು ನನ್ನಲಿರುವ ಪ್ರತಿಭೆ ಹಾಗೂ ಎಲ್ಲಾ ಶೈಕ್ಷಣಿಕ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವ ಟೀಚರ್. ಕೋವಿಡ್ -19 ಸಮಯದಲ್ಲಿ ನನಗೆ ಮೊಬೈಲ್ನಲ್ಲಿ ಮಾಡಿದ ಪಾಠಗಳು ಅರ್ಥವಾಗದಿದ್ದರೆ ಕನ್ನಡ ಪಾಠದಲ್ಲಿ ಯಾವುದೇ ಸಂಶಯವಿದ್ದರೆ ಜಯಲಕ್ಷ್ಮಿ ಟೀಚರ್ ಬಳಿ ಕೇಳುತ್ತಿದ್ದೆ. ಅವರು ಬಹಳ ಚಂದವಾಗಿ ಅರ್ಥವಾಗುವಂತೆ ಹೇಳಿಕೊಡುತಿದ್ದರು. 10ನೇ ತರಗತಿಯಲ್ಲಿ ಕನ್ನಡದಲ್ಲಿ ಕಷ್ಟಕರವಾದ ಹಳೆಗನ್ನಡ ಪದಗಳನ್ನು ಬಿಡಿಸಿ ಬಿಡಿಸಿ ಅರ್ಥವಾಗುವ ರೀತಿ ಹೇಳಿಕೊಡುತ್ತಾರೆ. ಯಾವುದೇ ಒಂದು ಆನ್ಲೈನ್ ಅಥವಾ ಇತರೆ ಸ್ಪರ್ಧೆಗಳಿಗೆ ಸೇರಲು ನಮ್ಮ ಶಾಲೆಯ ಶಿಕ್ಷಕರು ತುಂಬಾ ಪ್ರೋತ್ಸಾಹ ನೀಡುತ್ತಾರೆ. ನನಗೆ ಭಾಷಣ ಹಾಗೂ ಇತರೆ ಶಾಲಾ ಕಾರ್ಯಕ್ರಮಗಳಲ್ಲಿ MC( ನಿರೂಪಣೆ ) ಮಾಡಲು ತುಂಬಾ ಆಸಕ್ತಿ ಇತ್ತು. ಆಗ ಎಲ್ಲಾ ಶಿಕ್ಷಕರು ತುಂಬಾ ಸಹಾಯ ಮಾಡಿದ್ದಾರೆ. ಯಾವುದೇ ಕಾರ್ಯಕ್ರಮವಿದ್ದರೂ ಅದರಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಿದ್ದಾರೆ. ಇಂದು ನಾನು ಯಾವುದೇ ಸ್ಪರ್ಧೆಯಲ್ಲಿ ಸಣ್ಣಪುಟ್ಟ ಸಾಧನೆ ಮಾಡಿದರೆ ಅದಕ್ಕೆ ಮುಖ್ಯ ಕಾರಣಕರ್ತರು ನನ್ನ ಎಲ್ಲಾ ಶಿಕ್ಷಕ ವೃಂದದವರು.
 ನನ್ನ ಯಾವುದೇ ತಪ್ಪುಗಳನ್ನು ತಿದ್ದಿ ಹೇಳಿ ನಾನು ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಮಾಡಿದ್ದಾರೆ. ನಾನು ಭಾಷಣ ಮಾಡಿದಾಗ ಚಂದವಾಗಿ ಹೇಳುತ್ತೀಯಾ ನಿನ್ನಿಂದ ಇನ್ನೂ ಚೆಂದವಾಗಿ ಸ್ಪಷ್ಟವಾಗಿ ಹೇಳಲು ಸಾಧ್ಯ ಎಂದು ಹುರಿದುಂಬಿಸುತ್ತಿದ್ದರು. ಆಗ ನನಗೆ ತುಂಬಾ ಸಂತೋಷವಾಗುತ್ತದೆ. ನನಗೆ ನಮ್ಮ ಶಾಲೆಯ ಎಲ್ಲಾಶಿಕ್ಷಕರು ತುಂಬಾ ಇಷ್ಟ. ವಿನಿತಾ ಟೀಚರ್, ಸೀಮಾ ಟೀಚರ್, ಮಾಲಿನಿ ಟೀಚರ್, ಪುಷ್ಪ ಟೀಚರ್, ಸಂತೋಷ್ ಸರ್, ಪ್ರಭಾಕರ್ ಸರ್, ಜಯಲಕ್ಷ್ಮಿ ಟೀಚರ್ ಇವರೆಲ್ಲರೂ ನನ್ನ ಪ್ರತಿಭೆಗೆ ಪ್ರೋತ್ಸಾಹಿಸುವ ನನ್ನ ನೆಚ್ಚಿನ ಶಿಕ್ಷಕರು...  ಶಿಕ್ಷಕರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.... ಒಂದು ಗಿಡಕ್ಕೆ ಪರಿಪೂರ್ಣವಾದ ಪೋಷಕಾಂಶಗಳನ್ನು ನೀಡಿದರೆ ಮಾತ್ರ ಸಮೃದ್ಧವಾಗಿ ಬೆಳೆಯಲು ಸಾಧ್ಯ. ಮನಸ್ಸಿನಿಂದ ಎಲ್ಲರನ್ನು ತಮ್ಮ ಮಕ್ಕಳಂತೆ ಪಾಲನೆ ಮಾಡಿ ನೀತಿ ತತ್ವಗಳನ್ನು ಧಾರೆಯೆರೆಯುವ ಶಿಕ್ಷಕರು ನಮ್ಮ ಜೀವನದ ಅಮೂಲ್ಯ ರತ್ನಗಳು.... ವಿದ್ಯಾರ್ಥಿಗಳ ಪ್ರಗತಿಯನ್ನೇ ಮುಖ್ಯ ಗುರಿಮಾಡಿಕೊಂಡು ಅದಕ್ಕಾಗಿ ಕಾಯಾ-ವಾಚಾ-ಮನಸಾ ಸಾಧನೆ ಮಾಡುವ ಶಿಕ್ಷಕರು ನಿಜಕ್ಕೂ ಧನ್ಯಾತ್ಮ, ನಿಜಕ್ಕೂ ಪುಣ್ಯಾತ್ಮ, ನಿಜಕ್ಕೂ ಪರಮಾತ್ಮ... ಇದೇ ರೀತಿ ಇನ್ನು ಮುಂದೆ ಕೂಡ ನಿಮ್ಮ ಪ್ರೋತ್ಸಾಹ, ಬೆಂಬಲ, ಆಶೀರ್ವಾದ ನನ್ನ ಮೇಲೆ ಸದಾ ಕಾಲ ಇರಲಿ.......
....................................................... ಮೇಘ
10ನೇ ತರಗತಿ 
ಸರಕಾರಿ ಪ್ರೌಢಶಾಲೆ ಕಲ್ಲರಕೋಡಿ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
*******************************************      ನನ್ನ ಪ್ರೀತಿಯ ಗುರು ವೃಂದದವರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು "ಗುರು ದೇವೊ ಭವಃ" ನಾನು ದೀಕ್ಷಾ ಕುಲಾಲ್. ನನ್ನ ಮೆಚ್ಚಿನ ಶಿಕ್ಷಕಿ ಶ್ರುತಿ ಟೀಚರ್. ನಾನು ಐದನೇ ತರಗತಿಯಲ್ಲಿ ಓದುತ್ತಿರುವಾಗ ಕ್ಲಾಸ್ ಟೀಚರ್ ಆಗಿ ಬಂದರು. ನನಗೆ ಅವರೆಂದರೆ ತುಂಬಾ ಇಷ್ಟ. ಅವರು ಮಾಡುವ ಪಾಠ ಇಷ್ಟವಾಗುತ್ತಿತ್ತು. ಅವರ ಮಾತು, ಅವರ ಮುಖದಲ್ಲಿ ನಗು, ವಿದ್ಯಾರ್ಥಿಗಳಲ್ಲಿ ತೋರುವ ಪ್ರೀತಿ, ನನಗೆ ತುಂಬಾ ಇಷ್ಟ ಆಗುತ್ತಿತ್ತು. ನಾನು ಅವರಿಗೆ ದಿನಾಲು ಹೂ ಕೊಡುತ್ತಿದ್ದೆ. ನನಗೆ ಓದಿನಲ್ಲಿ ಬೆಂಬಲ ನೀಡಿ ಪ್ರೋತ್ಸಾಹಿಸಿದ ಟೀಚರ್. ನಾನು ನನ್ನ ಟೀಚರನ್ನು ಪ್ರೀತಿಸುತ್ತೇನೆ ಹಾಗೂ ಗೌರವಿಸುತ್ತೇನೆ. ನಾನು ಮರೆಯಲಾರದ ಶ್ರುತಿ ಟೀಚರ್ ಅವರಿಗೆ ನನ್ನ ಹೃತ್ಪೂರ್ವಕ ನಮನಗಳು. ಧನ್ಯವಾದಗಳು
.......................................... ದೀಕ್ಷಾ ಕುಲಾಲ್ 
6ನೇ ತರಗತಿ 
ದ. ಕ. ಜಿ. ಪಂ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
 ಎಲ್ಲರಿಗೂ ನಮಸ್ಕಾರ.... ನನ್ನ ಹೆಸರು ಹೃತಿಕ್. ನಾನು ಶ್ರೀದೇವಿ ವಿದ್ಯಾಕೇಂದ್ರ ದೇವಿನಗರ ಇಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ....
      ನಾನು ಮೊದಲಿಗೆ ಈ ಶಾಲೆಗೆ ಸೇರಿದಾಗ ಎಲ್ಲರೂ ಅಪರಿಚಿತ ವ್ಯಕ್ತಿಗಳಾಗಿದ್ದರು. ನಾನು ಯಾರ ಬಳಿಯೂ ಮಾತನಾಡುತ್ತಿರಲಿಲ್ಲ. ಆಗ ಅಲ್ಲಿನ ಶಿಕ್ಷಕಿಯೊಬ್ಬರು ನನ್ನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅವರ ಹೆಸರು ಮಲ್ಲಿಕಾ ಎಂದು. 
ನಾವು ಅವರನ್ನು ಶಾಲೆಯಲ್ಲಿ ಮಲ್ಲಿಕಾ ಮಾತಾಜಿ ಎಂದು ಕರೆಯುತ್ತಿದ್ದೆವು. ಅವರು ನನಗೆ ಪ್ರತಿಯೊಂದು ವಿಷಯದಲ್ಲೂ ಪ್ರೋತ್ಸಾಹ ನೀಡುತ್ತಿದ್ದರು. ನನಗೆ ಕವನ ರಚನೆಯಲ್ಲಿ ತುಂಬಾ ಆಸಕ್ತಿ ಇತ್ತು. ಅವರು ನನ್ನ ಬಳಿ ಬಂದು "ನೀನು ಒಂದು ತಿಂಗಳಿನಲ್ಲಿ ಪ್ರತಿದಿನ ಒಂದೊಂದು ಕವನ ರಚನೆ ಮಾಡು 30 ಕವನಗಳನ್ನು ಒಂದು ಪುಸ್ತಕದಲ್ಲಿ ಬರೆದುಕೊಡು" ಎಂದರು. ಆ ಸಂದರ್ಭದಲ್ಲಿ ನನಗಾದ ಖುಷಿ ಅಷ್ಟಿಷ್ಟಲ್ಲ. ಅವರು ಹೇಳಿದಂತೆ ಪ್ರತಿದಿನ ಕವನ ರಚನೆ ಮಾಡಿ ಅವರಿಗೆ ನೀಡಿದೆ. ಆಗ ಅವರಿಗೂ ಸಹ ತುಂಬಾ ಖುಷಿಯಾಯಿತು. ಅದನ್ನು ಅವರು ತುಂಬಾ ಖುಷಿಯಿಂದ ಓದಿದರು. ಆ ಪುಸ್ತಕ ಬರೆದು 5 ವರ್ಷಗಳಾದರೂ ಈಗಲೂ ಅದು ಅವರ ಬಳಿ ಇದೆ. ಇದು ಅವರಿಗೆ ನನ್ನ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ. ಮುಂದೆ ಅವರು ನನಗೆ ನನ್ನ ಪ್ರಾಥಮಿಕ ಹಂತದ ಕಲಿಕೆಗಳಲ್ಲಿ ಪ್ರೋತ್ಸಾಹ ನೀಡುತ್ತಾ ಬಂದರು.
ಅವರು ನನ್ನ ನೆಚ್ಚಿನ ಶಿಕ್ಷಕರಾದರೂ ನಾನು ಎಂದಾದರೂ ತಿಳಿಯದೆ ತಪ್ಪು ಮಾಡಿದಾಗ ನನ್ನ ತಪ್ಪನ್ನು ತಿದ್ದಿ-ತಿಳಿ ಹೇಳಿ, ನಾನು ಸರಿದಾರಿಯಲ್ಲಿ ನಡೆಯುವಂತೆ ಮಾಡಿದ್ದಾರೆ. ಇದು ಒಬ್ಬ ಆದರ್ಶ ಶಿಕ್ಷಕರ ಲಕ್ಷಣ ಎಂದು ನನಗೆ ಆಗಲೇ ತಿಳಿಯಿತು.. ಅವರು ಮಾಡಿದ ಪಾಠಗಳು, ಅವರು ಕಲಿಸಿದ ಮೌಲ್ಯಗಳು, ಅವರು ನನ್ನ ಮೇಲಿರಿಸಿದ್ದ ಪ್ರೀತಿ, ಇಂದಿಗೂ ನನ್ನ ಮನಸ್ಸಲ್ಲಿ ಅಳಿಸಲಾಗದ ಛಾಪೊತ್ತಿದೆ...... 
      ನನ್ನ ಪ್ರಾಥಮಿಕ ಜೀವನದಲ್ಲಿ ಒಬ್ಬ ಉತ್ತಮ ಶಿಕ್ಷಕಿಯಾಗಿ ಅತ್ಯುತ್ತಮ ಮಾರ್ಗದರ್ಶಕರಾಗಿ ನನಗೆ ಮಲ್ಲಿಕಾ ಮಾತಾಜಿಯವರು ಸಿಕ್ಕಿದರಿಂದ ನಾನು ನಿಜವಾಗಿ ಅದೃಷ್ಟವಂತ ಎಂದು ಭಾವಿಸುತ್ತೇನೆ..........
.......................................... ಪಿ.ಜೆ ಹೃತಿಕ್
10ನೇ ತರಗತಿ
ಶ್ರೀದೇವಿ ಪ್ರೌಢಶಾಲೆ ದೇವಿನಗರ , ಪುಣಚ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
*******************************************ನನ್ನ ಹೆಸರು ಸಾನ್ವಿ ಸಿ ಎಸ್.......
       ಪ್ರತಿ ವರ್ಷ ಸೆಪ್ಟೆಂಬರ್ 5ರಂದು ನಾವು ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತೇವೆ. ಈ ದಿನ ನಮ್ಮ ಎರಡನೇ ರಾಷ್ಟ್ರಪತಿಯಾದ ಡಾ|ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ.
        ಭಾರತೀಯ ಪರಂಪರೆಯಲ್ಲಿ ಶಿಕ್ಷಕರಿಗೆ ಮಹತ್ತರವಾದ ಸ್ಥಾನವಿದೆ. ಒಬ್ಬ ವ್ಯಕ್ತಿಯನ್ನು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಈ ಸಂದರ್ಭದಲ್ಲಿ ನಾನು ನನಗೆ ಕಲಿಸಿದ ಎಲ್ಲಾ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತೇನೆ. ಏನೂ ತಿಳಿಯದ ನನ್ನನ್ನು ಇಷ್ಟು ಮುಂದುವರಿಯುವಂತೆ ಮಾಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದದ್ದು. ಅವರಲ್ಲಿ ನನಗೆ ಭಗವದ್ಗೀತೆ ಕಲಿಸಿದ ಕೃಷ್ಣಪ್ರಿಯಾರವರ ಬಗ್ಗೆ ನನ್ನ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದೇನೆ.
       ಅಂದು ಕೊರೊನಾ ಲಾಕ್ ಡೌನ್ ಸಮಯ. ಹಾಗೆ ಅಪ್ಪ ನನನ್ನು ಆನ್ಲೈನ್‌ ಸಂಸ್ಕೃತ ತರಗತಿಗೆ ಸೇರಿಸಿದರು. ಅದರಲ್ಲಿ ಅವರು ಭಗವದ್ಗೀತೆ ತರಗತಿಯ ಬಗ್ಗೆ ಮಾಹಿತಿ ನೀಡಿದರು. ಹಾಗೆ ನಾನು ಭಗವದ್ಗೀತೆ ತರಗತಿಗೆ ಸೇರಿದೆ. ಆ ಶಿಕ್ಷಕಿ, "ನೀನು ತುಂಬಾ ಚೆನ್ನಾಗಿ ಹೇಳುತ್ತೀಯಾ. ಆದ್ದರಿಂದ ನಿನಗೆ ನಾನು 18 ಅಧ್ಯಾಯಗಳನ್ನು ಕಲಿಸುತ್ತೇನೆ. ನೀನು ಕಲಿಯಲೇಬೇಕು" ಎಂದು ಒತ್ತಾಯಿಸಿದರು. ಅಂತೂ ನಾನು ಕಲಿಯಲು ಶುರು ಮಾಡಿದೆ.
        ಆ ಶಿಕ್ಷಕಿ ತೆಲುಗಿನವರು. ಅಲ್ಲಿ ನಮಗೆ ಭಾಷೆಯ ತೊಡಕು ಉಂಟಾಯಿತು. ನನಗೆ ತೆಲುಗು ಬರುವುದಿಲ್ಲ, ಅವರಿಗೆ ಕನ್ನಡ ಬರುವುದಿಲ್ಲ. ಅವರಿಗೆ ಇಂಗ್ಲಿಷ್ ಸ್ವಲ್ಪವಾದರೂ ಬರುತ್ತಿತ್ತು, ನನಗೆ ಹೆಚ್ಚೇನು ಬರುತ್ತಿರಲಿಲ್ಲ. ಹೇಗೆ ಅವರು ನನ್ನ ಇಂಗ್ಲೀಷನ್ನು ಅರ್ಥ ಮಾಡಿಕೊಂಡರೊ? ನನಗೆ ಗೊತ್ತಿಲ್ಲ. ಅವರಿಗೆ ತುಂಬಾ ಸಂಯಮ ತಾಳ್ಮೆ. ತಪ್ಪಾದನ್ನು ತಿದ್ದುತ್ತಿದ್ದರೇ ವಿನಃ ಬೈಯ್ಯುತ್ತಿರಲಿಲ್ಲ. ದಿನಕ್ಕೆ ಎಂಟು ಗುಂಪುಗಳನ್ನು ಮಾಡಿ ಬೇರೆ ಬೇರೆ ಸಮಯಕ್ಕೆ ತರಗತಿ ನಡೆಸುತ್ತಿದ್ದರು. ಒಂದು ಅಧ್ಯಾಯ ಮುಗಿದ ಮೇಲೆ ಪರೀಕ್ಷೆ ಮಾಡುತ್ತಿದ್ದರು. ಹೀಗೆ ನನ್ನನ್ನು ತುಂಬಾ ಪ್ರೋತ್ಸಾಹಿಸುತ್ತಿದ್ದರು. ಕೊನೆಗೆ ಮೈಸೂರಿನಲ್ಲಿ ನಡೆದ 18 ಅಧ್ಯಾಯಗಳ ದೊಡ್ಡ ಪರೀಕ್ಷೆಯಲ್ಲಿ ನನಗೆ ಚಿನ್ನದ ಪದಕ ಲಭಿಸಿತು. ಅವರು ಈಗಲೂ ನನ್ನ ಸಂಪರ್ಕದಲ್ಲಿದ್ದಾರೆ. ಬೇರೆ ಬೇರೆ ಕಲಿಯಲು ನನ್ನನ್ನು ಪ್ರೋತ್ಸಾಹಿಸುತ್ತಿದ್ದಾರೆ. ಆದರೆ ಈಗ ನನಗೆ ಶಾಲೆ ಇರುವುದರಿಂದ ಕಷ್ಟವಾಗುತ್ತಿದೆ. ಆದರೆ ನಾನು ಅವರನ್ನು ಒಮ್ಮೆಯೂ ಮುಖತಃ ಭೇಟಿಯಾಗಲಿಲ್ಲ. ಆದ್ದರಿಂದ ಶಿಕ್ಷಕರ ದಿನಾಚರಣೆ ಈ ಸಂದರ್ಭದಲ್ಲಿ ಅವರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು.
.......................................... ಸಾನ್ವಿ ಸಿ ಎಸ್ 
5ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article