-->
ಹಕ್ಕಿ ಕಥೆ : ಸಂಚಿಕೆ - 64

ಹಕ್ಕಿ ಕಥೆ : ಸಂಚಿಕೆ - 64

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
              
              ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿಕಥೆಗೆ ಸ್ವಾಗತ.... ಕೊರೊನಾ ಲಾಕ್ ಡೌನ್ ಆದ ದಿನಗಳವು. ಪ್ರತಿದಿನ ಸಂಜೆಯ ಹೊತ್ತು ನಮ್ಮ ಮನೆಯ ಹಿಂದಿನ ಡಾಮರ್ ಇಲ್ಲದ ಹಳ್ಳಿರಸ್ತೆಯಲ್ಲಿ ಸ್ವಲ್ಪದೂರ ವಾಕಿಂಗ್ ಹೋಗಿ ಬರೋಣ ಅಂತ ಹೊರಟಿದ್ದೆ. ಆ ದಾರಿಯಲ್ಲಿ ಒಂದು ದೊಡ್ಡ ಗೋಳಿಯ ಮರ ಇದೆ. ಗೋಳಿಮರ ಅಂದರೆ ಯಾವ ಹೊಸ ಮರ ಅಂತ ಕೇಳಿದ್ರಾ, ಅರಳೀಮರವನ್ನೇ ನಮ್ಮೂರಿನಲ್ಲಿ ಗೋಳಿಮರ ಅಂತ ಕರೀತಾರೆ. ಪುಟ್ಟ ಪುಟ್ಟ ಗೋಳಿಯಾಕಾರದ ಹಣ್ಣುಗಳನ್ನು ಬಿಡುವುದರಿಂದ ಗೋಳಿಮರ ಎಂಬ ಹೆಸರು ಬಂದಿರಬೇಕು. ದೂರದಿಂದಲೇ ಮರ ಕಾಣುತ್ತಿತ್ತು. ದಟ್ಟವಾದ ಮರ, ಮರದ ತುಂಬಾ ಹಣ್ಣುಗಳು ಬಿಟ್ಟಿದ್ದವು. ಹಣ್ಣುಗಳಿರುವಲ್ಲಿ ಹಕ್ಕಿಗಳು ಇರಲೇಬೇಕು ಎಂದುಕೊಂಡು ಮರ ಸರಿಯಾಗಿ ಕಾಣುವ ಜಾಗವೊಂದರಲ್ಲಿ ಕುಳಿತು ಮರವನ್ನು ನೋಡಲಾರಂಭಿಸಿದೆ. ಕೂ.. ಕುಕುಕುಕೂ... ಕುಕೂ.. ಕುಕುಕುಕೂ... ಎಂಬ ಉದ್ದನೆಯ ಶಿಳ್ಳೆಯೊಂದು ಕೇಳಿತು. ಸುಮಾರು ಉದ್ದದ ಹಾಡಿನ ಕೊನೆಗೆ ತದಿಗಿಣತೋಂ ಎಂಬ ರೀತಿಯ ಬೇರೊಂದು ಧ್ವನಿ ಕೇಳಿ ಶಿಳ್ಳೆಗಾನ ನಿಂತಿತು. ಸ್ವಲ್ಪ ಹೊತ್ತಿನ ನಂತರ ಮತ್ತೆ ಇದೇ ಶಿಳ್ಳೆಗಾನ ಮತ್ತು ಮುಕ್ತಾಯ ಹೀಗೆ ಹಲವಾರು ಬಾರಿ ನಡೆಯಿತು. ಎಷ್ಟು ಹುಡುಕಿದರೂ ಹಕ್ಕಿ ಕಾಣಿಸಲಿಲ್ಲ. 
ಮರುದಿನ ಮತ್ತೆ ಬೈನಾಕುಲರ್ ಹಿಡಿದುಕೊಂಡು ಅದೇ ಹೊತ್ತಿಗೆ ಅದೇ ಜಾಗಕ್ಕೆ ಬಂದು ಕುಳಿತೆ. ಮತ್ತೆ ಅದೇ ಹಿಂದಿನ ದಿನ ಕೇಳಿದ ಹಾಡು ಕೇಳಿಸಿತು. ಹಕ್ಕಿ ಇದೆ ಅಂತ ಖಾತ್ರಿಯಾಯ್ತು. ಮರದ ಅಲ್ಲಾಡುವ ಕೊಂಬೆಗಳನ್ನು ಸೂಕ್ಷ್ಮವಾಗಿ ಬೈನಾಕುಲರ್ ನಲ್ಲಿ ನೋಡಿದೆ. ಪರಮಾಶ್ಚರ್ಯ. ಗುಂಡಗಿನ ದೇಹ, ಥೇಟ್ ಎಲೆಯಂತೆ ತೋರುವ ಹಸಿರುಬಣ್ಣ, ಊರಿನಲ್ಲಿ ಕಾಣಸಿಗುವ ಪಾರಿವಾಳದ್ದೇ ಗಾತ್ರ ಮತ್ತು ಆಕಾರ, ಊರಿನ ಪಾರಿವಾಳಕ್ಕೇ ಹಸಿರು ಬಣ್ಣ ಬಳಿದಂತಿತ್ತು. ಕೊಂಬೆಯಿಂದ ಕೊಂಬೆಗೆ ತನ್ನ ಗುಂಡಗಿನ ದೇಹ ಹೊತ್ತು ಓಡಾಡುತ್ತಾ ಹಣ್ಣು ತಿನ್ನುವುದರಲ್ಲಿ ಬಿಜಿಯಾಗಿದ್ದವು
       ಗಂಡುಹಕ್ಕಿ ಹೆಣ್ಣಿಗಿಂತ ಸ್ವಲ್ಪ ಚಿಕ್ಕದು, ತಿಳಿ ಹಸಿರು ದೇಹದಲ್ಲಿ ಕಡುಕಂದುಬಣ್ಣದ ರೆಕ್ಕೆಗಳು, ತಲೆಯ ಮೇಲೊಂದು ಬೂದುಬಣ್ಣದ ಟೋಪಿ. ಹೆಣ್ಣು ಹಕ್ಕಿ ಗಂಡಿಗಿಂತ ತುಸು ದೊಡ್ಡದು, ತಿಳಿಹಸಿರು ದೇಹಕ್ಕೆ ಕಡುಹಸಿರು ಬಣ್ಣದ ರೆಕ್ಕೆಗಳು. ಇವುಗಳು ಕೂಗಿನಲ್ಲೂ ವಿಭಿನ್ನ. ಕೂ.. ಕುಕುಕುಕೂ.. ಎಂಬ ಉದ್ದನೆಯ ಆಲಾಪ ಗಂಡು ಮಾಡಿದರೆ, ಸಾಕಪ್ಪಾ ನಿನ್ನ ರಾಗ ಎಂದು ತದಿಗಿಣತೋ ಎಂಬ ಮುಕ್ತಾಯ ಹೆಣ್ಣು ಹಾಡುತ್ತದೆ. ಒಂಟಿಯಾಗಿರದೆ ಗುಂಪಾಗಿರುವ ಈ ಹಕ್ಕಿಗಳು ಅಪಾಯ ಎಂದು ತೋರಿದರೆ ತಕ್ಷಣ ಹಾರಿಬಿಡುತ್ತವೆ.
       ಡಿಸೆಂಬರ್ ನಿಂದ ಮಾರ್ಚ್ ನಡುವೆ ಇವುಗಳ ಸಂತಾನ ಅಭಿವೃದ್ಧಿ ಕಾಲ. ಅರಳೀ, ಆಲ, ಉಪ್ಪಳಿಗೆ ಮೊದಲಾದ ಕಾಡುಹಣ್ಣಿನ ಗಿಡಗಳಲ್ಲಿ ಖಂಡಿತ ಕಾಣಸಿಗುವ ಈ ಹಕ್ಕಿ ನಮ್ಮ ಪಶ್ಚಿಮಘಟ್ಟಗಳ ಸುತ್ತಮುತ್ತಲಿನಲ್ಲಿ ಮಾತ್ರ ಕಾಣಸಿಗುತ್ತದೆಯಂತೆ. ನಿಮ್ಮ ಆಸುಪಾಸಿನಲ್ಲೂ ಈ ಹಕ್ಕಿ ಇರಬಹುದು.. 
ಕನ್ನಡದ ಹೆಸರು: ಹಸಿರು ಪಾರಿವಾಳ
ಇಂಗ್ಲೀಷ್ ಹೆಸರು: Grey-fronted Green Pigeon
ವೈಜ್ಞಾನಿಕ ಹೆಸರು: Treron affinis
ಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************

Ads on article

Advertise in articles 1

advertising articles 2

Advertise under the article