-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

                     
       ನಮ್ಮ ದೇಹ ಪಂಚಭೂತಗಳಿಂದ ಕೂಡಿದೆ. ಪಂಚಭೂತಗಳೆಂದರೆ ಭೂಮಿ, ಆಕಾಶ, ವಾಯು, ನೀರು ಮತ್ತು ಅಗ್ನಿ. ಈ ಅಂಶಗಳಿಲ್ಲದೆ ಜೀವಿ ಬದುಕಲು ಸಾಧ್ಯವೇ....? ಇವುಗಳಲ್ಲಿ ಒಂದಂಶದ ಲೋಪವಾದರೆ ಏನಾಗಬಹುದೆಂದು ಯೋಚಿಸಿದ್ದೇವೆಯೇ...? ಉಸಿರಾಟ ವಾಯುವಿಲ್ಲದೇ ಸಾಧ್ಯವೇ....? ಕೃತಕ ಆಮ್ಲಜನಕ ತಯಾರಿಸಬಹುದಲ್ಲವೇ...? ಎಂದು ಅತೀ ಬುದ್ಧಿವಂತರು ಕೇಳಬಹುದು. ಈ ಪ್ರಶ್ನೆ ಮೂರ್ಖತನದಿಂದ ಕೂಡಿದೆ ಎಂದು ಅನಿಸುವುದಿಲ್ಲವೇ...? ಕೊರೋನಾ ಕಾಯಿಲೆಯಿಂದ ಉಸಿರಾಟದ ಪ್ರಕ್ರಿಯೆ ಏರುಪೇರಾದಾಗ ರೋಗಿಗೆ ದಿನವೊಂದಕ್ಕೆ ಆಮ್ಲಜನಕ ಪೂರೈಸಲು ಸಹಸ್ರಾರು ರೂಪಾಯಿ ಖರ್ಚು ಮಾಡಬೇಕಾಯಿತೆಂಬುದು ನಮ್ಮ ಅನುಭವದಲ್ಲಿದೆ. ಇಷ್ಟಕ್ಕೂ ಪ್ರಕೃತಿ ರಹಿತವಾಗಿ ಆಮ್ಲಜನಕದ ಉತ್ಪಾದನೆ ಸಾಧ್ಯವಾಗಿದೆಯೇ...? ಉಸಿರಾಟಕ್ಕೆ ನಮ್ಮ ಪ್ರಕೃತಿ ಯಾವುದೇ ಪ್ರತಿಫಲ ಬಯಸುವುದಿಲ್ಲ. ಓರ್ವ ಜೀವಿಯ ಬದುಕಿನಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಮ್ಲಜನಕ ಬೇಕು. ಮಿಲಿಯಾಂತರ ಜೀವಿಗಳು ಈ ಭೂಮಿಯ ಮೇಲಿದ್ದಾರೆ. ಹಾಗಾದುದರಿಂದ ನಮಗೆ ಪ್ರಕೃತಿಯ ಮೇಲೆ ತೀರಿಸಲಾಗದ ಋಣವಿದೆ.
         ನಾವು ವಿದ್ಯುತ್ ಬಲ್ಬುಗಳ ಮೂಲಕ ಬೆಳಕು ಪಡೆಯಬಹುದು. ಆದರೆ ಈ ಬೆಳಕು ಸಸ್ಯಗಳ ಬೆಳವಣಿಗೆಗೆ ಅವುಗಳ ಆಹಾರೋತ್ಪಾದನಾ ಕಾರ್ಯಗಳಿಗೆ ಸಹಾಯವಾಗದು. ಅದಕ್ಕೆ ಬೇಕು ಸೂರ್ಯನ ಶಾಖಯುಕ್ತ ಪ್ರಖರ ಬೆಳಕು. ವಿದ್ಯುತ್ ನೀಡುವ ಬೆಳಕು ಮತ್ತು ಶಾಖವನ್ನು ಸೂರ್ಯ ನೀಡಬಲ್ಲ. ಆದರೆ ವಿದ್ಯುತ್ ಶಕ್ತಿಯಿಂದ ಸೂರ್ಯನ ಬೆಳಕು ಮತ್ತು ಶಾಖ ಪಡೆಯಲಾಗುತ್ತದೆಯೇ...? ಬಾವಿ ತೋಡಿ ಒರತೆ ಸಿಕ್ಕಿದಾಗ ನೀರನ್ನು ಮಾಡಿದೆ ಎಂದು ನಾವು ಬೀಗುತ್ತೇವೆ. ಆದರೆ ನಮಗೆ ನೀರನ್ನು ಮಾಡಲು ಸಾಧ್ಯವೇ....? ವಿಜ್ಞಾನದ ಪ್ರಯೋಗಾಲಯ ತಯಾರು ಮಾಡುವ ಹನಿ ಹನಿ ನೀರೂ ಅಪಾರ ಸಮಯ ಮತ್ತು ಹಣವನ್ನು ತಿನ್ನುತ್ತದೆ. ಆದರೆ ಭೂಮಿಯಲ್ಲಿ ದೊರೆಯುವ ನೀರು ಪರಿಸರದ ಕೊಡುಗೆ. ಹಾಗೆಯೇ ಭೂಮಿತಾಯಿಯ ಒಡಲಿರದೇ ಇದ್ದರೆ ನಮಗೆ ಆಹಾರ ದೊರೆಯಬಹುದೇ? ನಮ್ಮ ಹುಟ್ಟು, ಬದುಕು ಮತ್ತು ಸಾವುಗಳಿಗೆ ಸಮಸ್ಥಿತಿಯ ಪಂಚಭೂತಗಳೇ ಕಾರಣ. ಆದರೆ ಪಂಚಭೂತಗಳ ಸಮಸ್ಥಿತಿಯನ್ನು ಭಗ್ನಗೊಳಿಸುವುದರ ಮೂಲಕ ನಾವು ನಮ್ಮ ಬದುಕನ್ನು ವಿನಾಶಗೊಳಿಸುತ್ತಿದ್ದೇವೆ. ನಮ್ಮ ಕ್ಷಯಕ್ಕೆ ನಾವೇ ಕಾರಣರಾಗುತ್ತಿದ್ದೇವೆ. ನಮ್ಮೆಲ್ಲ ರೋಗ ರುಜಿನುಗಳಿಗೆ, ಕಷ್ಟ ಕಾರ್ಪಣ್ಯಗಳಿಗೆ ನಮ್ಮ ವಿನಾಶಕಾರಕ ದುರ್ಬುದ್ಧಿಯೇ ಕಾರಣ.
            ನಮ್ಮ ಹಿರಿಯರು ಹೋಮ ಹವನಗಳ ಧೂಮವನ್ನು ಗಗನಕ್ಕೆ ಕಳುಹಿಸಿ ನಭೋಮಂಡಲವನ್ನು ಶುಚಿಯಾಗಿಡುತ್ತಿದ್ದರು. ಹೋಮ ಹವನಗಳಲ್ಲಿ ಬಲಸುವ ಸೌದೆ, ಸಮಿದೆ, ತುಪ್ಪ ಮೊದಲಾದುವುಗಳು ಸುಡಲ್ಪಟ್ಟಾಗ ಹೊರಡುವ ಧೂಮಕ್ಕೆ ರೋಗರುಜಿನು ಕಾರಕ ಕೀಟಗಳನ್ನು ನಿಗ್ರಹಿಸುವ ಶಕ್ತಿಯಿತ್ತು. ಧೂಪ ಧೂಮಗಳಿಗಿರುವ ಶಕ್ತಿ ವಾಹನಗಳು ಮತ್ತು ಕಾರ್ಖಾನೆಗಳು ಹೊರ ಚೆಲ್ಲುವ ಪೆಟ್ರೋಲಿಯಂ ಇಂದನಗಳಿಗಿಲ್ಲ. ಧೂಮಗಳು ಮನುಷ್ಯನ ಶ್ವಾಸಕೋಶವನ್ನು ಘಾಸಿಗೊಳಿಸುತ್ತವೆ. ಶಾಖದಿಂದ ಭೂಮಿಯನ್ನು ಕಾಪಿಡುವ ಓಝೋನ್ ಪದರಗಳನ್ನು ಶಿಥಿಲಗೊಳಿಸಿ ಭೂಮಂಡಲದ ಶಾಖದ ಮಟ್ಟವನ್ನು ಏರು ಪೇರುಗೊಳಿಸುತ್ತದೆ. ಜೀವ ಸಂಕುಲಗಳ ನಾಶಕ್ಕೆ ಓಝೋನ್ ಪದರದ ನಾಶವೂ ಕಾರಣವಾಗುತ್ತದೆ. ಪಂಚಭೂತಗಳ ಸಂರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರಿಗಿದೆ. ಜವಾಬ್ದಾರಿಯ ನಿರ್ವಹಣೆಯಲ್ಲಿ ಜಾಗೃತರಾಗೋಣ
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
********************************************

Ads on article

Advertise in articles 1

advertising articles 2

Advertise under the article