ಹಕ್ಕಿ ಕಥೆ : ಸಂಚಿಕೆ - 63
Tuesday, September 6, 2022
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ, ಈ ವಾರದ ಹಕ್ಕಿ ಕಥೆಗೆ ಸ್ವಾಗತ. ಗೌರಿ ಗಣೇಶ ಹಬ್ಬಕ್ಕೆಂದು ನನ್ನ ಮಡದಿಯ ಊರು ಸಾಗರಕ್ಕೆ ಹೋಗಿದ್ದೆ. ಅಲ್ಲಿನ ಗದ್ದೆಗಳು, ಕೆರೆಗಳು ನೋಡಲಿಕ್ಕೆ ಬಹಳ ಚಂದ ಇರ್ತವೆ. ಬೆಳಗ್ಗೆ ಎದ್ದು ಬಿಸಿಬಿಸಿ ಕಾಫಿ ಕುಡಿದು ವಾಕಿಂಗ್ ಹೋಗಿ ಬರೋಣ ಅಂತ ಹೊರಟೆ. ಅಲ್ಲಿ ಗಣಪತಿಕೆರೆ ಅನ್ನುವ ಹೆಸರಿನ ಕೆರೆ ಒಂದಿದೆ. ಅ ಕೆರೆಯ ದಡದಲ್ಲೇ ಗಣಪತಿ ದೇವಸ್ಥಾನ ಮತ್ತು ಅದರ ಪಕ್ಕದಲ್ಲೇ ಮಸೀದಿಯೂ ಇದೆ. ಒಂದುಕಡೆ ಕುಳಿತುಕೊಂಡು ಕೆರೆಯ ಸೌಂದರ್ಯವನ್ನು ಆಸ್ವಾದಿಸಲು ಕಾಂಕ್ರೀಟ್ ಬೆಂಚುಗಳನ್ನು ಹಾಕಿದ್ದಾರೆ. ಅಲ್ಲೇ ಕುಳಿತುಕೊಂಡು ಬೆಳಗ್ಗಿನ ವಾತಾವರಣದ ಆನಂದವನ್ನು ಅನುಭವಿಸ್ತಾ ಇದ್ದೆ.
ದೂರದಲ್ಲಿ ಹುಲ್ಲಿನ ಸುತ್ತಮುತ್ತ ನೀರುಕೋಳಿಗಳು ತಮ್ಮ ಬೆಳಗ್ಗಿನ ಕೆಲಸದಲ್ಲಿ ಮಗ್ನವಾಗಿದ್ದವು. ಕೆರೆಯ ಮಧ್ಯೆ ಒಂದುಕಡೆ ವಿದ್ಯುತ್ ತಂತಿಗಳು ಹಾದುಹೋಗಿದ್ದವು. ಜೋರಾಗಿ ಕೆ,ಕ್ಕೆ,ಕ್ಕೆ,ಕ್ಕೆ,ಕ್ಕೆ ಎಂದು ಶಬ್ದಮಾಡುತ್ತಾ ಹಕ್ಕಿಯೊಂದು ವೇಗವಾಗಿ ಹಾರಿಬಂದು ತಂತಿಯ ಮೇಲೆ ಕುಳಿತುಕೊಂಡಿತು. ಆಕಾರ ನೋಡಿದಾಗ ಮಿಂಚುಳ್ಳಿ ಎಂದು ಖಾತ್ರಿಯಾಯ್ತು. ಆದರೆ ನಾನು ಆವರೆಗೆ ನೋಡಿದ ಮಿಂಚುಳ್ಳಿಗಳಿಗಿಂತ ದೊಡ್ಡದು. ಬಿಳೀ ಬಣ್ಣದ ದೇಹ. ದೇಹದ ಮೇಲೆಲ್ಲ ಕಪ್ಪುಬಣ್ಣದ ವಿನ್ಯಾಸಗಳು. ತಲೆಯ ಮೇಲೊಂದು ಜುಟ್ಟು. ಎದೆಯ ಬಾಗದಲ್ಲಿ ಕಪ್ಪುಬಣ್ಣದ ನೆಕ್ಲೆಸ್ ನಂತಹ ರಚನೆ. ತುಸು ಉದ್ದನೆಯ ಬಾಲ. ತಂತಿಯ ಮೇಲೆ ಕುಳಿತು ತಲೆ ಮತ್ತು ಬಾಲವನ್ನು ಕುಣಿಸುತ್ತಾ ಸುತ್ತಲೂ ನೋಡುತ್ತಾ ಇತ್ತು.
ಸ್ವಲ್ಪ ಹೊತ್ತಿನಲ್ಲೇ ಮತ್ತೆ ಹಾರಾಟ ಆರಂಭಿಸಿ ಕೆರೆಯ ಮೇಲೆ ಸುತ್ತುಹಾಕಲು ಪ್ರಾರಂಭಿಸಿತು. ಹೀಗೆ ಕೆಲಕಾಲ ಸುತ್ತು ಹಾಕುತ್ತಾ ಇರುವಾಗಲೇ ಕೆರೆಯ ಮಧ್ಯೆ ಒಂದುಕಡೆ ಏನೋ ಆಹಾರ ಕಂಡಿರಬೇಕು. ಹೆಲಿಕಾಪ್ಟರ್ ಆಕಾಶದಲ್ಲಿ ಒಂದೇಕಡೆ ನಿಲ್ಲುವಂತೆ, ತನ್ನ ರೆಕ್ಕೆಯನ್ನು ವೇಗವಾಗಿ, ವಿಶಿಷ್ಟವಾಗಿ ಬಡಿಯುತ್ತಾ ತಲೆಬಗ್ಗಿಸಿ ನೀರಿನಲ್ಲಿರುವ ಬೇಟೆಯನ್ನೇ ಗಮನಿಸುತ್ತಾ ಕೆಲವು ಸೆಕೆಂಡುಗಳ ಕಾಲ ಅಕಾಶದಲ್ಲಿ ನಿಂತುಬಿಟ್ಟಿತ್ತು (ಇದನ್ನು ಹೋವರಿಂಗ್ ಎಂದು ಕರೆಯುತ್ತಾರೆ). ಸರಿಯಾಗಿ ಗುರಿಯನ್ನು ನಿರ್ಧರಿಸಿಕೊಂಡು ಮಿಸೈಲ್ ನಂತೆ ತನ್ನ ದೇಹವನ್ನು ನೇರಮಾಡಿಕೊಂಡು ನೀರಿಗೆ ಧುಮುಕಿತು. ಕೆಲವೇ ಸೆಕೆಂಡುಗಳಲ್ಲಿ ನೀರಿನಿಂದ ಹೊರಬಂದಾಗ ಅದರ ಬಾಯಿಯಲ್ಲೊಂದು ಮೀನಿತ್ತು.
ನೀರಿನೊಳಗೆ ಓಡಾಡುವ ಮೀನು ಎಷ್ಟು ಆಳದಲ್ಲಿದೆ, ಎಷ್ಟು ವೇಗದಲ್ಲಿ ಓಡಾಡುತ್ತಿದೆ ಎಂಬುದನ್ನು ಆಕಾಶದಲ್ಲಿ ಹಾರುತ್ತಲೇ ಲೆಕ್ಕಹಾಕಿ ಅದರ ಮೇಲೆ ಮಿಸೈಲ್ ನಂತೆ ಧಾಳಿ ಮಾಡಿ ಹಿಡಿಯುವ ಕಲೆ ಮತ್ತು ದೃಷ್ಟಿಶಕ್ತಿ ಪಡೆದ ಈ ಹಕ್ಕಿಯೇ ಧನ್ಯ. ಬಯಲು ಪ್ರದೇಶದ ಕೆರೆಯ ನೀರಿನಲ್ಲಿ ಬೇಟೆಯಾಡುವ ಈ ಹಕ್ಕಿ ಮಳೆಗಾಲ ಕಡಿಮೆಯಾದ ನಂತರ ಅಂದರೆ ಆಗಸ್ಟ್ ನಿಂದ ಮೇ ತಿಂಗಳ ನಡುವೆ ಗುಡ್ಡದ ಇಳಿಜಾರಿನಲ್ಲಿ ಕೊಳವೆಯಂಥ ತೂತು ಕೊರೆದು ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿಮಾಡುತ್ತದೆ ಎಂದು ಅಧ್ಯಯನಕಾರರು ಹೇಳುತ್ತಾರೆ
ಕನ್ನಡದ ಹೆಸರು: ಕಪ್ಪು ಬಿಳಿ ಮಿಂಚುಳ್ಳಿ
ಇಂಗ್ಲೀಷ್ ಹೆಸರು: Pied Kingfisher
ವೈಜ್ಞಾನಿಕ ಹೆಸರು: Ceryle rudis
ಚಿತ್ರ ಕೃಪೆ : ಅಂತರ್ಜಾಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************