-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 62

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 62

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 62
            
           ಮಾನವ ದೇಹದಲ್ಲಿರುವ ಅತ್ಯಂತ ಶ್ರೇಷ್ಠ ಜತೆಗಾರರು ಯಾರೆಂದು ಪ್ರಶ್ನಿಸಿದಾಗ , ಸಿಗುವ ಉತ್ತರ ಒಂದೇ "ಕಣ್ಣು". ದೇಹದಲ್ಲಿ ಕೈ-ಕಾಲು - ಕಿವಿಗಳು ಜತೆಯಾಗಿ ಕಂಡು ಬಂದರೂ ಕಣ್ಣುಗಳಷ್ಟು ಶ್ರೇಷ್ಠ ಸಂಬಂಧ ಅವುಗಳಲ್ಲಿ ಕಾಣುವುದಿಲ್ಲ. ಏಕೆಂದರೆ ಕಣ್ಣುಗಳು ಎಡ ಮತ್ತು ಬಲ ಭಾಗದಲ್ಲಿ ಪ್ರತ್ಯೇಕವಾಗಿದ್ದರೂ ಪರಸ್ಪರ ಜತೆಯಾಗಿಯೇ ತೆರೆಯುತ್ತದೆ. ಜತೆಯಾಗಿಯೇ ಮುಚ್ಚುತ್ತವೆ. ಅತ್ತರೂ ಜತೆಯಾಗಿ ಅಳುತ್ತವೆ. ಆನಂದಭಾಷ್ಪ ಕೂಡಾ ಜತೆಯಾಗಿ ಸ್ಪುರಿಸುತ್ತವೆ. ಪರಸ್ಪರ ಒಂದನ್ನೊಂದು ಜೀವನಪೂರ್ತಿ ನೋಡದಿದ್ದರೂ ಶ್ರೇಷ್ಠ ಸಂಬಂಧ ಹೇಗಿರಬೇಕೆಂದು ಜಗತ್ತಿಗೆ ಪರಿಚಯಿಸಿದೆ.
      ಇತ್ತೀಚೆಗೆ ಎಲ್ಲಾ ಹಳ್ಳಿಗಳಲ್ಲೂ ನೋಡಿದರೂ ಒಂದೇ ಕಷ್ಟ. ಬಹುತೇಕ ಮನೆಗಳಲ್ಲಿ ಇಬ್ಬರು ಮಕ್ಕಳು ಇರುತ್ತಾರೆ. ಅವರಿಬ್ಬರೂ ಉನ್ನತ ವ್ಯಾಸಂಗ ಪಡೆದು ಉದ್ಯೋಗ ನಿಮಿತ್ತ ಬೆಂಗಳೂರಿನಂಥಹ ಹೈಟೆಕ್ ಸಿಟಿಗಳಲ್ಲಿ ಹೆಂಡತಿ ಮಕ್ಕಳೊಂದಿಗೆ ಶಾಶ್ವತವಾಗಿ ವಾಸವಾಗುತ್ತಾರೆ. ಇತ್ತ ಊರಿನಲ್ಲಿ ಸಕಲ ಸೌಲಭ್ಯಗಳಿರುವ ದೊಡ್ಡ ಮನೆಯಲ್ಲಿ , ಅಪಾರ ಆಸ್ತಿ- ತೋಟ ನೋಡಿಕೊಳ್ಳಲು ವೃದ್ಧ ಅಪ್ಪ - ಅಮ್ಮ ಮಾತ್ರ ಬಾಕಿಯಾಗಿರುತ್ತಾರೆ. ಅವರಿಗೂ 60 ವರುಷ ದಾಟಿದ ಸಂಕಟ. ಹಳ್ಳಿಯ ಪ್ರಶಾಂತ ಪರಿಸರದಲ್ಲಿ ಬದುಕಿದ ಜೀವಕ್ಕೆ , ನಗರದ ಅಶಾಂತ ಪರಿಸರಕ್ಕೆ ಹೊಂದಿಕೊಳ್ಳಲಾಗದ ಪರಿಸ್ಥಿತಿ. ಹಾಗಾಗಿ ನಗರಕ್ಕೆ ಹೊಂದಿಕೊಳ್ಳದೆ ಹಳ್ಳಿಯಲ್ಲಿಯೇ ಬದುಕುವ ಅನಿವಾರ್ಯತೆ. ಮಕ್ಕಳ ಅಗಲುವಿಕೆಯಿಂದಾಗಿ ಇತ್ತ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ ಎಂಬ ನೋವು ಸದಾ ಕೊರೆಯುತ್ತಿರುತ್ತದೆ. ಅವರಿಗೆ ಕೆಲಸ ಮಾಡಲು ಮನವಿದೆ ಆದರೆ ದೇಹದಲ್ಲಿ ಶಕ್ತಿಯಿಲ್ಲ. ಕೃಷಿ – ಬೇಸಾಯ - ಮನೆ ಕೆಲಸಕ್ಕೆ ಕೂಲಿ ಕೆಲಸಗಾರರು ಸಿಗುವುದಿಲ್ಲ. ತೋಟ, ಗದ್ದೆ ಎಲ್ಲಾ ಪಾಳು ಬಿದ್ದಿದೆ. ತರಕಾರಿಗಳು ಬೆಳೆಯುತ್ತಿಲ್ಲ. ಮನೆ ತುಂಬ ಜೇಡರ ಬಲೆ ಹರಡಿದೆ. ಹಪ್ಪಳ-ಉಪ್ಪಿನಕಾಯಿ ಮಾಡುವವರಿಲ್ಲ. ಹುಷಾರಿಲ್ಲದಾಗ ಆರೈಕೆ ಮಾಡುವವರಿಲ್ಲ. 
        ಎಲ್ಲರೂ ನಗರದ ಆಕರ್ಷಣೆಯಲ್ಲಿರುವ ಕಾರಣ ಹಳ್ಳಿಯ ಶಾಲೆಗಳಲ್ಲಿ ಮಕ್ಕಳಿಲ್ಲ. ಮದುವೆ - ಶುಭ ಕಾರ್ಯಕ್ಕೆ ಎಲ್ಲರೂ ತಮ್ಮ ತಮ್ಮ ವಾಹನಗಳಲ್ಲಿ ಹಕ್ಕಿಯಂತೆ ಹಾರಿ ಬರುತ್ತಾರೆ. ಊಟ ಮಾಡಿ ಕೈ ತೊಳೆದು ಕುಶಲೋಪಚಾರ ಮಾತಾಡುವ ಎಂದು ತಿರುಗಿ ನೋಡಿದರೆ ಮತ್ತೆ ಅವರ ತಂಡ ನಗರಕ್ಕೆ ಹೊರಡಲು ಕಾರು ಸ್ಟಾರ್ಟ್ ಆಗಿದೆ. ಎಲ್ಲರಿಗೂ ಹತ್ತಾರು ಗಂಟೆ ಮೊಬೈಲ್ ನಲ್ಲಿ ಹರಟೆ ಹೊಡೆಯಲು ಸಮಯವಿದೆ. ಆದರೆ ವರುಷಕ್ಕೊಮ್ಮೆ ಸಿಗುವ ಮುಖಾಮುಖಿ ಭೇಟಿಯಲ್ಲಿ ಮಾತಾಡಲು ಪುರುಸೊತ್ತಿಲ್ಲ.
       ಸಂಬಂಧಗಳು ಮಾನವ ಬಂಧರಹಿತವಾಗುತಿದೆ. ಅಪಾರ ಆಶೆಯ ಹೆತ್ತ ಹೊತ್ತ ಕರುಳಿಗೆ ಮಕ್ಕಳನ್ನು, ಮೊಮ್ಮಕ್ಕಳನ್ನು ಮುದ್ದಿಸುವ, ಆಲಿಂಗಿಸುವ ಅವಕಾಶವಿಲ್ಲ, ಉದ್ಯೋಗದಲ್ಲಿರುವ ಮಕ್ಕಳಿಗೆ ಸ್ವಲ್ಪವೂ ಸಮಯವಿಲ್ಲ. 
      ಹಳ್ಳಿಯ ಶಾಲೆಗಳಲ್ಲಿ ಸ್ಕೂಲ್ ಡೇ - ರಾಷ್ಟ್ರೀಯ ಹಬ್ಬದಾಚರಣೆಗೆ ಜನರಿಲ್ಲ. ಗಣೇಶೋತ್ಸವವಾಗಲಿ, ಸ್ವಾತಂತ್ರ್ಯ ದಿನಾಚರಣೆಯಾಗಲಿ, ಮೆರವಣಿಗೆ ಹೋಗಲು ಹಳ್ಳಿಗಳಲ್ಲಿ ಮಕ್ಕಳಿಲ್ಲ. ಜೀವನ ಸಂಭ್ರಮವಿಲ್ಲ, ಕೇವಲ status ಸಂಭ್ರಮ ಮಾತ್ರ ಇದೆ.
       ವೃದ್ಧ ತಂದೆ- ತಾಯಿಗೆ ನಡೆಯಲು ಆಗುವುದಿಲ್ಲ.  ಒಳ್ಳೆಯ ಡಾಕ್ಟರನ್ನು ನೋಡಿ, ಒಳ್ಳೆಯ ಚಿಕಿತ್ಸೆ ಪಡೆಯಿರಿ ಎಂದು ಲಕ್ಷಗಟ್ಟಲೆ ಹಣ ಕಳಿಸಲು ತಯಾರಾಗಿರುವ ಮಕ್ಕಳು - ಮೊಮ್ಮಕ್ಕಳು. ಅಂತ್ಯಕಾಲದಲ್ಲಿ ಪ್ರೀತಿ-ವಾತ್ಸಲ್ಯಗಳನ್ನು ಮೀರಿದ ಔಷಧಿಯಿಲ್ಲ. ಕೊನೆಗಾಲದಲ್ಲಿಯಾದರೂ ಜತೆಯಲ್ಲಿರಬೇಕು ಎಂದು ಇವರಿಗೆ ತಿಳಿಸಿ ಹೇಳುವವರು ಯಾರು? ಹೀಗೆ ಹತ್ತಾರು ಸಮಸ್ಯೆಗಳ ಮಧ್ಯೆ ಹೈರಾಣವಾಗುತ್ತಿರುವ ಹಳ್ಳಿ ಸಮುದಾಯಕ್ಕೆ ಆಸರೆಯಾಗುವವರು ಯಾರು?
       ಹಳ್ಳಿಯ ಸಮುದಾಯ ಪೂರ್ತಿ ಕುಸಿದು ಹೋಗಿದೆ. ಸುಖ-ಸಂತೋಷಗಳು ಮಾಯವಾಗಿವೆ. ಹಣ ಗಳಿಸುವ ಓಟದ ರೇಸ್ ನಲ್ಲಿ ಹೈಟಕ್ ಸಿಟಿಗಳಲ್ಲಿ ಹೆಣಗಾಡುತ್ತಿರುವ ಯುವಪೀಳಿಗೆಯವರೂ ಸುಖದಲ್ಲಿಲ್ಲ. ಅತ್ತ ಹಳ್ಳಿಗಳಲ್ಲಿ ಅವರ ತಂದೆ ತಾಯಿಗಳೂ ಸುಖದಲ್ಲಿಲ್ಲ. ಇತ್ತ ನಗರಗಳಲ್ಲಿ ಮಕ್ಕಳೂ ಸುಖದಲ್ಲಿಲ್ಲ. ಸುಖವಿಲ್ಲದ ಬದುಕು ಬದುಕಿ ಸಾಧಿಸುವುದಾದರೂ ಏನನ್ನು?.
        ನೀವು ನಿಮ್ಮ ಜೀವನದಲ್ಲಿ ಎಷ್ಟು ಸಾಧಿಸುತ್ತೀರಿ ಎಂಬುದು ಮುಖ್ಯ. ಅದಕ್ಕಿಂತ ಮುಖ್ಯವಾದುದು ಅಷ್ಟೆಲ್ಲಾ ಸಾಧನೆ ಮಾಡಿದ ಬಳಿಕ ನೀವು ಎಷ್ಟು ಸಂತಸ ಮತ್ತು ನೆಮ್ಮದಿಯಿಂದ ಇದ್ದೀರಿ ಎಂಬುದು. ನಿಮ್ಮ ಸಾಧನೆ ನಿಮಗೆ ಸಂತಸ ತರದಿದ್ದರೆ ಅದರಿಂದ ಏನು ಪ್ರಯೋಜನ?. ಮಾನವೀಯ ಸಂಬಂಧಗಳೆಲ್ಲ ಪರಸ್ಪರ ಕಣ್ಣಿನ ಸಂಬಂಧಗಳಂತೆ ಶ್ರೇಷ್ಠ ಸಂಬಂಧ ತೋರಿಸಬೇಕು. ಪರಸ್ಪರ ನಮ್ಮವರಿಗೆ ಕಣ್ಣುಗಳಾಗುವ ಧನಾತ್ಮಕ ಬದಲಾವಣೆ ಬಗ್ಗೆ ನಾವು ಯೋಚಿಸಬೇಕಾಗಿದೆ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article