ಜೀವನ ಸಂಭ್ರಮ : ಸಂಚಿಕೆ - 53
Sunday, September 25, 2022
Edit
ಜೀವನ ಸಂಭ್ರಮ : ಸಂಚಿಕೆ - 53
ನಾವು ಒಂದು ನಗರದ ಬಡಾವಣೆಯಲ್ಲಿ ವಾಸವಾಗಿದ್ದೇವೆ. ನಮ್ಮ ಪಕ್ಕದ ಮನೆಯಲ್ಲಿ ವೈದ್ಯ ಕುಟುಂಬವಿದೆ. ಅವರಿಗೆ ಎರಡು ಮಕ್ಕಳು. ಒಂದು ಗಂಡು ಮತ್ತೊಂದು ಹೆಣ್ಣು. ಚಿಕ್ಕ ಮಕ್ಕಳು. ಈ ಮಕ್ಕಳಿಗೆ ನನ್ನ ಪತ್ನಿ ಮತ್ತು ಮಗನ ಜೊತೆ ತುಂಬಾ ಒಡನಾಟ. ಮಕ್ಕಳೆಂದ ಮೇಲೆ ಕೇಳಬೇಕೆ...? ಕೂಗಾಟ, ಕಿರಿಚಾಟ ಸಾಮಾನ್ಯ. ನಮ್ಮ ಎದುರು ಮನೆಯಲ್ಲಿ ಒಂದು ಕುಟುಂಬವಿದೆ. ಗಂಡ, ಹೆಂಡತಿ ಮತ್ತು ಎರಡು ದೊಡ್ಡ ಹೆಣ್ಣು ಮಕ್ಕಳು. ಈ ಎರಡು ಹೆಣ್ಣು ಮಕ್ಕಳು ವಿವಾಹವಾಗಿದ್ದಾರೆ. ಮನೆಯಲ್ಲಿ ಕೇವಲ ವಯಸ್ಸಾದ ಗಂಡ ಮತ್ತು ಹೆಂಡತಿ. ಈ ಕುಟುಂಬ ಯಾರ ಜೊತೆಯಲ್ಲೂ ಬೆರೆಯುವುದಿಲ್ಲ, ಮಾತನಾಡುವುದಿಲ್ಲ. ನಮ್ಮ ಮನೆಗೆ ಯಾರೇ ಬಂದರು ಕಿಟಕಿ ಸರಿಸಿ, ಇಣುಕಿ ನೋಡುವರು. ನನ್ನ ಪತ್ನಿ ಮತ್ತು ಮಗ ಪಕ್ಕದ ಮನೆಯ ಮಕ್ಕಳೊಂದಿಗೆ ಶಟಲ್ ಆಟವನ್ನು ಮನೆ ಮುಂದಿರುವ ರಸ್ತೆಯಲ್ಲಿ ಆಡುತ್ತಿದ್ದರು. ಆ ಶಟಲ್ ಬಾಲ್ ಅವರ ಕಾಂಪೌಂಡಿನ ಒಳಗೆ ಬಿದ್ದರೆ, ಆ ಬಾಲನ್ನು ತೆಗೆದುಕೊಂಡು ಅವರು ಮನೆಯ ಒಳಗೆ ಹೋಗುವರು. ಬಾಲನ್ನೇ ನೀಡುತ್ತಿರಲಿಲ್ಲ. ಮಕ್ಕಳು ಆಡುವಾಗ ಜೋರಾಗಿ ಧ್ವನಿ ಬಂದರೆ ಜಗಳ ಮಾಡುತ್ತಿದ್ದರು. ಸಾಕಷ್ಟು ಬಾರಿ ಜಗಳ ಮಾಡಿದ್ದಾರೆ. ಆ ಮಕ್ಕಳ ಆಟ ಪಾಠಗಳನ್ನು ನೋಡಿ ಆನಂದಿಸುವ ಬದಲು, ಏಕೆ ಹೀಗೆ ಮಾಡುತ್ತಾರೆ...? ಜೀವನ ಎಂದರೆ ಒಂಟಿತನವೇ... ಅಲ್ಲ ಜೀವನ ಎಂದರೆ ಪರಸ್ಪರ ಅವಲಂಬನೆ.
ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತು ಮತ್ತು ಜೀವಿಗಳು ಪರಸ್ಪರ ಅವಲಂಬನೆ ಹೊಂದಿವೆ. ಒಂದು ಬೀಜ ಗಿಡವಾಗಬೇಕಾದರೆ ಮಣ್ಣಿನ ಸಂಗ, ನೀರಿನ ಸಂಗ ಮತ್ತು ಬೆಳಕಿನ ಸಂಗ ಅಗತ್ಯ. ಇದರಲ್ಲಿ ಒಂದು ಇಲ್ಲದಿದ್ದರೆ ಬೀಜ ಚಿಗುರುವುದಿಲ್ಲ. ಹಾಗೆ ನೀರು, ಎರಡು ಪರಮಾಣು ಜಲಜನಕ ಒಂದು ಪರಮಾಣು ಆಮ್ಲಜನಕ ಸೇರಿ ಆಗಿದೆ. ಪಕ್ಷಿಗಳು ಬದುಕಲು ಗಿಡದ ಆಶ್ರಯ ಬೇಕು. ಗಿಡದಹಣ್ಣು ಆಹಾರವಾಗಿ ಬಳಸುತ್ತವೆ. ಆಶ್ರಯಕ್ಕಾಗಿ ಗಿಡವನ್ನೇ ಅವಲಂಬಿಸಿವೆ. ವಾತಾವರಣದ ಗಾಳಿಯನ್ನು ಬಳಸಿ ಉಸಿರಾಡುತ್ತದೆ. ನಿಸರ್ಗದಿಂದ ನೀರನ್ನು ಬಳಸುತ್ತವೆ. ಇದರಲ್ಲಿ ಒಂದು ಇಲ್ಲದಿದ್ದರೂ ಬದುಕುವುದಿಲ್ಲ. ಪ್ರಾಣಿ-ಭಕ್ಷಕ ಪ್ರಾಣಿಗಳು ಆಹಾರಕ್ಕಾಗಿ ಬೇರೆ ಪ್ರಾಣಿಗಳನ್ನು ಅವಲಂಬಿಸಿವೆ. ನಿಸರ್ಗವನ್ನು ಗಾಳಿ ಮತ್ತು ನೀರು ಜೊತೆಗೆ ಆವಾಸಕ್ಕಾಗಿ ಬಳಸಿ ಅವಲಂಬಿಸಿವೆ. ಗಿಡಗಳು ಸೂರ್ಯನ ಬೆಳಕನ್ನು, ನೀರನ್ನು, ಪ್ರಾಣಿಗಳ ಉಸಿರಾಟದಿಂದ ಬರುವ ಇಂಗಾಲದ ಡೈಯಾಕ್ಸೈಡ್ ಅನ್ನು ತಮ್ಮ ದ್ಯುತಿ ಸಂಶ್ಲೇಷಣೆಗೆ ಅವಲಂಬಿಸಿವೆ. ಸಾಗರ ಮತ್ತು ಜಲಚರಗಳು ವಾತಾವರಣದ ಆಮ್ಲಜನಕ ಮತ್ತು ಸೂರ್ಯನ ಬೆಳಕು ಹಾಗೂ ತಾಪಮಾನವನ್ನು, ಆಹಾರಕ್ಕಾಗಿ ಬೇರೆ ಸಸ್ಯ ಅಥವಾ ಸಣ್ಣ ಜೀವಿಯನ್ನು ಅವಲಂಭಿಸಿವೆ. ಹೀಗಿರುವಾಗ ಮನುಷ್ಯ ಏಕಾಂಗಿಯಾಗಿ ಇರಲು ಸಾಧ್ಯವೇ? ಇಲ್ಲ.
ಮನುಷ್ಯ ಗಾಳಿ ತಯಾರು ಮಾಡಿಕೊಳ್ಳಬಲ್ಲನೆ...? ಇಲ್ಲ. ನೀರನ್ನು ತಯಾರಿ ಮಾಡಿಕೊಳ್ಳ ಬಲ್ಲನೆ ? ಇಲ್ಲ. ಮನುಷ್ಯ ಹಣ್ಣು ಹಂಪಲ ದವಸ ಧಾನ್ಯ ತಯಾರು ಮಾಡಬಲ್ಲನೆ..? ಇಲ್ಲ. ಇದಕ್ಕೆಲ್ಲ ನಿಸರ್ಗವನ್ನೇ ಅವಲಂಬಿಸಿದ್ದಾನೆ. ಅಲ್ಲದೇ ನಿಸರ್ಗ ಪ್ರತಿಯೊಬ್ಬ ವ್ಯಕ್ತಿಗೂ ವಿಭಿನ್ನ ಸಾಮರ್ಥ್ಯ ನೀಡಿದೆ. ಆ ವ್ಯಕ್ತಿಗಳು ನಿಸರ್ಗ ನೀಡಿದ ಸಾಮರ್ಥ್ಯ ಬಳಸಿ ಬೇರೆ ಬೇರೆ ವಸ್ತುಗಳನ್ನು ತಯಾರು ಮಾಡುತ್ತಾರೆ. ಈ ಎಲ್ಲಾ ವಸ್ತುಗಳನ್ನು ಒಬ್ಬ ವ್ಯಕ್ತಿ ತಯಾರು ಮಾಡಲು ಸಾಧ್ಯವಿಲ್ಲ. ಆ ವಸ್ತುಗಳಿಗಾಗಿ ನಾವು ಬೇರೊಬ್ಬರನ್ನು ಅವಲಂಬಿಸಬೇಕಾಗುತ್ತದೆ. ಹೀಗಿರುವಾಗ ನಮಗೆ ಬೇರೊಬ್ಬರ ಸಹಾಯವಿಲ್ಲದಂತೆ ಬದುಕಲು ಕಷ್ಟ. ಆದರೂ ಕೆಲವರ ನಡವಳಿಕೆ ಯಾಕೆ ಹೀಗೆ..?
ಕೋವಿಡ್ ಮಹಾಮಾರಿ ಬಂದ ಮೇಲೆ ಬಹುತೇಕ ಮಕ್ಕಳು ಹೀಗೆ ಆಗಿದ್ದಾರೆ. ತಾವಾಯಿತು ತಮ್ಮ ಮೊಬೈಲಾಯಿತು. ದಿನವಿಡೀ ಮೊಬೈಲ್ ನಲ್ಲಿ ತಲ್ಲೀನರಾಗಿರುತ್ತಾರೆ. ಇಲ್ಲವೇ ಟಿವಿಯಲ್ಲಿ ಮುಳುಗಿರುತ್ತಾರೆ. ಇದರಲ್ಲಿ ಬರುವ ಚಿತ್ರದಲ್ಲಿ ಜೀವವಿದೆಯೇ..? ಈ ಚಿತ್ರದಲ್ಲಿ ಕಾಣುವ ಹೂವಿನಿಂದ ಪರಿಮಳ ಬರುತ್ತದೆಯೇ? ಈ ತರಹ ಸತ್ತ ಚಿತ್ರದಲ್ಲಿ ತಲ್ಲೀನರಾಗಿರುತ್ತಾರಲ್ಲ ಇದು ಸರಿಯೇ..? ಇದರಿಂದ ಸಂಬಂಧಗಳು ಬಿರುಕು ಬಿಟ್ಟಿವೆ. ಅಣ್ಣ, ತಮ್ಮ, ಅಕ್ಕ, ತಂಗಿ, ತಂದೆ, ತಾಯಿ, ಅತ್ತೆ, ಮಾವ, ಅಜ್ಜ ಮತ್ತು ಅಜ್ಜಿಯೂ ಸೇರಿದಂತೆ ಎಲ್ಲರಿಂದ ದೂರವಾಗುತ್ತಿದ್ದಾರೆ. ಸಂಬಂಧಗಳಿಂದ ಪ್ರೀತಿ, ಪ್ರೇಮ, ಮರುಕ, ಕರುಣೆ ಮತ್ತು ಕನಿಕರ ದೊರಕಿ ನಾವು ಮಾನಸಿಕವಾಗಿ ಸದೃಢರಾಗುತ್ತೇವೆ. ವಸ್ತುಗಳ ಸಂಗ ಎಷ್ಟಿರಬೇಕೋ ಅಷ್ಟು ಇದ್ದರೆ ಉತ್ತಮ. ನಿಸರ್ಗ, ಪ್ರತಿದಿನ ಹೊಸ ಹೊಸ ಜೀವಂತ ರೂಪ ನೀಡುವಾಗ, ಅದನ್ನು ನೋಡಿ ಆನಂದಿಸದಿರುವುದು ನಮ್ಮ ದೌರ್ಭಾಗ್ಯ. ಇದು ಅನೇಕ ಮನೋವಿಕಾರಕ್ಕೆ ಕಾರಣವಾಗುತ್ತದೆ. ಮಾನಸಿಕ ಕಾಯಿಲೆಗಳು ಬರುತ್ತವೆ. ಹಾಗಾಗಿ ನಾವು ನಿಸರ್ಗದ ಸನಿಹ ಸಸ್ಯ ಜೀವಿಗಳ ಸನಿಹ ಬದುಕಬೇಕಾಗಿದೆ. ನಾವು ಒಳ್ಳೆಯದರ ಸಂಗ ಮಾಡಬೇಕಾಗಿದೆ. ಇದಕ್ಕೆ ಸತ್ಸಂಗ ಎನ್ನುತ್ತಾರೆ.
ಒಬ್ಬ ವಿದೇಶಿ ಲೇಖಕ ಹೇಳುತ್ತಾನೆ "ನಿನ್ನ ಸ್ನೇಹಿತರನ್ನು ತೋರಿಸು, ನೀನು ಮುಂದೆ ಏನಾಗುತ್ತಿ ಎಂದು ಹೇಳುವೆ" ಎಂದು. ನಾವು ಯಾವುದರ ಸಂಗ ಮಾಡುತ್ತೇವೆಯೋ ಅದೇ ರೀತಿ ನಮ್ಮ ಭವಿಷ್ಯ ರೂಪಿತವಾಗುತ್ತದೆ. ಬಲ್ಲವರ ಸಂಗ, ಬಲ್ಲವರ ಸಂಗ ಸಿಗದಿದ್ದರೆ ಅವರು ಬರೆದಿರುವ ಗ್ರಂಥ, ಒಳ್ಳೆಯ ಗ್ರಂಥದ ಸಂಗ ನಮ್ಮ ಜೀವನ ಸುಂದರಗೊಳಿಸುತ್ತದೆ. ನಮ್ಮ ಜೀವನ ಸಂಭ್ರಮದಲ್ಲಿರುವಂತೆ ಮಾಡುತ್ತದೆ. ವಸ್ತು ಮತ್ತು ವ್ಯಕ್ತಿ ಸಂಗವಿಲ್ಲದೆ ಬದುಕಿಲ್ಲ. ಆದರೆ ಯಾವುದರ ಸಂಘ ಮಾಡಿದರೆ ಜೀವನ ಸಮೃದ್ಧಿಯಾಗುತ್ತದೆ, ಬದುಕು ಆನಂದವಾಗುತ್ತದೆ, ಎಂಬ ವಿವೇಕ ಇರಬೇಕು. ಹಾಗಾಗಿ ಯೋಚಿಸಿ ಸಂಗ ಮಾಡಬೇಕು ಅಲ್ಲವೇ ಮಕ್ಕಳೇ.
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************