-->
ಜೀವನ ಸಂಭ್ರಮ : ಸಂಚಿಕೆ - 52

ಜೀವನ ಸಂಭ್ರಮ : ಸಂಚಿಕೆ - 52

ಜೀವನ ಸಂಭ್ರಮ : ಸಂಚಿಕೆ - 52                                    
           
        ಮಕ್ಕಳೇ, ನಾವು ಕುವೆಂಪು ರವರು ಬರೆದ ವಿಶ್ವಮಾನವ ಗೀತೆ ಓದಿದ್ದೇವೆ. ಈ ಪದ್ಯ ಓದಿದಾಗ ವಿಶ್ವಮಾನವರಾಗುವುದು ಹೇಗೆ..? ಎನ್ನುವುದು ತಿಳಿದು ಬರುತ್ತದೆ. ವಿಶ್ವಮಾನವ ಅಂದರೆ ಯಾರು...?. ಅವನ ವರ್ತನೆ ಹೇಗಿರುತ್ತದೆ...? ನೋಡೋಣ.
    ಗ್ರೀಕ್ ದೇಶದ ರಾಜಧಾನಿ ಅಥೆನ್ಸ್ ಪಟ್ಟಣ. ಇಲ್ಲಿ ಒಬ್ಬ ಡೈಯೋಜೆನಿಸ್ ಎನ್ನುವ ತತ್ವಜ್ಞಾನಿ ಇದ್ದ. ಆತನ ವೇಷ ಭೂಷಣ ನಮ್ಮ ರಾಜ್ಯದ ಕನ್ನಡದ ಸರ್ವಜ್ಞನ ಹಾಗೆ. ಸೊಂಟಕ್ಕೆ ಒಂದು ಬಟ್ಟೆ ಬಿಟ್ಟರೆ ಇನ್ಯಾವ ಬಟ್ಟೆ ಇರಲಿಲ್ಲ. ಕೈಯಲ್ಲೊಂದು ಬಿಕ್ಷಾಪಾತ್ರೆ. ಇನ್ನೊಂದು ಕೈಯಲ್ಲಿ ಒಂದು ಕೋಲು. ಜೊತೆಯಲ್ಲಿ ಒಂದು ನಾಯಿ. ನಾಯಿ ಎಂದೂ ಡಯೋಜೆನಿಸ್ ನನ್ನು ಬಿಟ್ಟಿರಲಿಲ್ಲ.
       ಒಮ್ಮೆ ಹಗಲಿನ ವೇಳೆಯಲ್ಲಿ ಉರಿಯುತ್ತಿರುವ ದೀಪದ ಲಾಂದ್ರ ಹಿಡಿದು ಡಯೋಜೆನಿಸ್ ಹೋಗುತ್ತಿದ್ದ. ಜನ ನೋಡುತ್ತಿದ್ದರು. ಎಲ್ಲರಿಗೂ ಆಶ್ಚರ್ಯ. ಅವರಲ್ಲಿ ಒಬ್ಬ ಕೇಳಿಯೇ ಬಿಟ್ಟ. "ಏನು ಡಯೋಜೆನಿಸರೆ, ಹಗಲಿನಲ್ಲಿ ಉರಿಯುತ್ತಿರುವ ಲಾಂದ್ರ ಹಿಡಿದು ಹೊರಟಿದ್ದೀರಲ್ಲ, ಎಲ್ಲಿಗೆ...?" ಎಂದು. ಅದಕ್ಕೆ ಹೇಳಿದ. "ಈ ಊರಲ್ಲಿ ನನ್ನ ನಾಯಿಯಷ್ಟೇ ಸಂತೋಷವಾಗಿ ಇರುವವರು ಯಾರಾದರೂ ಇದ್ದಾರೆ ಏನು ಎಂದು ಪರೀಕ್ಷಿಸಲು ಹೊರಟಿದ್ದೇನೆ. ನನ್ನ ನಾಯಿಗೆ ತೊಡಲು ಬಟ್ಟೆ ಇಲ್ಲ. ವಾಸ ಮಾಡಲು ಮನೆ ಇಲ್ಲ. ಅಡುಗೆ ಮಾಡಲು ಅಡುಗೆ ಕೋಣೆ ಇಲ್ಲ. ಶೌಚ ಮಾಡಲು ಶೌಚಾಲಯವಿಲ್ಲ. ಮುಂದಿನ ಊಟ ಎಲ್ಲಿ ಅಂತ ಗೊತ್ತಿಲ್ಲ. ಆದರೂ ಎಷ್ಟು ಸಂತೋಷವಾಗಿದೆ ನೋಡಿ. ಯಾರಾದರೂ ಇದ್ದರೆ ಹೇಳಿ" ಎಂದು ಕೇಳಿದ ಡಯೋಜೆನಿಸ್. ಅದಕ್ಕೆ ಆ ವ್ಯಕ್ತಿ ಹೇಳಿದ ನೋಡಿ, "ಅಲ್ಲಿ ಕುಡಿದು ಮಲಗಿದ್ದಾನಲ್ಲ, ಅವನಿಗೆ ಸಂತೋಷವಿಲ್ಲವೇ...?" ಎಂದು ಕೇಳಿದ. ಅದಕ್ಕೆ ಡಯೋಜೆನಿಸ್ ಹೇಳಿದ, "ನಾನು ಕೇಳಿಸಿಕೊಳ್ಳುತ್ತೇನೆ. ನೀನೇ ವಿಚಾರಿಸು ಎಂದು ಹೇಳಿದ. ಆ ವ್ಯಕ್ತಿ ಹೋಗಿ ಆ ಕುಡುಕನನ್ನು ವಿಚಾರಿಸಿದ. ಆ ಕುಡುಕ ಹೇಳಿದ. "ನನಗೆ ಸಂತೋಷವಿದ್ದಿದ್ದರೆ ನಾನೇಕೆ ಕುಡಿಯುತ್ತಿದ್ದೆ." ಈ ಮಾತನ್ನು ಕೇಳಿ ಆ ವ್ಯಕ್ತಿ ಮೌನಿಯಾದ. ಡಯೋಜೆನಿಸ್ ತನ್ನ ನಾಯಿಯೊಂದಿಗೆ ಮುಂದುವರಿದ. 
     ಡಯೋಜೆನಿಸ್ ಎಂದರೆ ದೊಡ್ಡ ತತ್ವಜ್ಞಾನಿ. ಆತನಿಗೆ ಅನೇಕ ಶಿಷ್ಯಂದಿರು ಇದ್ದರು. ಅವರಲ್ಲಿ ಒಬ್ಬ ಸಿರಿವಂತ ಶಿಷ್ಯ ಎದುರಿಗೆ ಬಂದ. ಬಂದವನೇ ಗುರು ಡಯೋಜೆನಿಸ್ ಗೆ ನಮಸ್ಕರಿಸಿ, ಹೀಗೆ ಹೇಳಿದ. "ಗುರುಗಳೇ, ನಿಮಗೆ ವಾಸ ಮಾಡಲು ಮನೆ ಇಲ್ಲ. ನಾನು ನಿಮಗಾಗಿ ಒಂದು ಮನೆ ಕಟ್ಟಿಸಿ ಕೊಡಬೇಕೆಂದು ನಿರ್ಧರಿಸಿದ್ದೇನೆ. ಅದು ಎಲ್ಲಿರಬೇಕು..? ಅದು ಹೇಗಿರಬೇಕು...? ಹೇಳಿ ಗುರುಗಳೇ ಎಂದನು.
ಡಯೋಜೆನಿಸ್ ಹೇಳಿದ, "ನನ್ನ ಮನೆ ಹೇಗಿರಬೇಕೆಂದರೆ.... ಆ ಮನೆಯಲ್ಲಿ ಸೂರ್ಯ ಚಂದ್ರರು ಉದಯಿಸಬೇಕು. ನಕ್ಷತ್ರಗಳಿರಬೇಕು. ನದಿಗಳು ಹರಿಯುತ್ತಿರಬೇಕು. ಬೆಟ್ಟ, ಗುಡ್ಡ, ಗಿರಿ ಮತ್ತು ಶಿಖರ ಇರಬೇಕು. ಸಾಗರ ಇರಬೇಕು. ಹಚ್ಚ ಹಸಿರಾದ ಗಿಡಮರ ಇರಬೇಕು, ಅವು ಹೂವು, ಹಣ್ಣುಗಳನ್ನು ನೀಡುತ್ತಿರಬೇಕು. ಪ್ರಾಣಿ, ಪಕ್ಷಿಗಳು ಇರಬೇಕು. ಅವು ಸದಾ ಹಾಡುತ್ತಾ, ಹಾರುತ್ತಾ ಇರಬೇಕು". ಇದನ್ನು ಕೇಳಿದ ಶಿಷ್ಯ ಹೇಳಿದ, "ಹೀಗೆ ಮಾಡಲು ಸಾಧ್ಯವೇ ಗುರುಗಳೇ, ಈ ನಗರದಲ್ಲಿರುವ ಯಾವುದಾದರೂ ಕಟ್ಟಡ ತೋರಿಸಿ ಹಾಗೆ ನಾನು ಮಾಡಿಕೊಡುತ್ತೇನೆ" ಎಂದ. ಅದಕ್ಕೆ ಡಯೋಜೆನಿಸ್ ಹೇಳಿದ , ಈಗ ನಾನಿರುವುದು ಅಂತ ಮನೆ. ಈ ದೊಡ್ಡ ಮನೆ ಬಿಟ್ಟು ಚಿಕ್ಕ ಮನೆಗೆ ಬರುವುದಿಲ್ಲ. ಈಗ ನನಗೆ ಏನಾಗಿದೆ...?" ಎಂದನು. "ನಿಸರ್ಗ ದೇವತೆ ನನಗೆ ಅಂತ ಮನೆಯನ್ನೇ ನೀಡಿದೆ. ನನ್ನ ಮನೆಯ ಗೋಡೆ ಈ ಪ್ರಪಂಚದ ದಿಕ್ಕುಗಳು. ಹಗಲು ರಾತ್ರಿ ಬೆಳಕು ನೀಡಲು ಸೂರ್ಯ ಚಂದ್ರರು ಇದ್ದಾರೆ. ನೀರು ಕುಡಿಯಲು ನದಿ ಇದೆ. ತಿನ್ನಲು ಬಗೆ ಬಗೆಯ ಹಣ್ಣುಗಳು ಇವೆ. ಮಧುರ ಗಾನ ಕೇಳಲು ಪಕ್ಷಿಗಳು ಇವೆ. ನನಗೇನು ಕೊರತೆ" ಎಂದು ಹೇಳಿದ.
       ಮಕ್ಕಳೇ ನಮ್ಮ ಮನೆಗಳು ಗೋಡೆಗಳಿಂದ ಕೂಡಿವೆ. ನಮ್ಮ ಮನೆಯ ಪ್ರತಿಯೊಂದು ಕೋಣೆಯು ಗೋಡೆಯಿಂದ ಮಾಡಿದೆ. ಹಾಗೆ ನಾವು ಅನೇಕ ಬಂಧನದ ಗೋಡೆಯೊಳಗೆ ಬಂಧಿಯಾಗಿದ್ದೇವೆ. ಆ ಬಂಧನದ ಗೋಡೆಗಳೆಂದರೆ ಜಾತಿ-ಮತದ ಗೋಡೆ, ಧರ್ಮದ ಗೋಡೆ, ದೇವರ ಗೋಡೆ, ಊರಿನ ಗೋಡೆ, ತಾಲೂಕಿನ ಗೋಡೆ, ಜಿಲ್ಲೆಯ ಗೋಡೆ, ರಾಜ್ಯದ ಗೋಡೆ, ರಾಷ್ಟ್ರದ ಗೋಡೆ, ಭಾಷೆಯ ಗೋಡೆ, ಆಹಾರ ವಿಹಾರದ ಗೋಡೆ, ಮತ್ತು ಸಂಸ್ಕೃತಿಯ ಗೋಡೆ. ಹೀಗೆ ನಾನಾ ವಿಧದ ಗೋಡೆಗಳ ನಡುವೆ ಬಂಧಿಗಳಾಗಿದ್ದೇವೆ. ಎಲ್ಲಿಯವರೆಗೆ ನಾವು ಈ ಬಂಧನದ ಗೋಡೆಯಲ್ಲಿ ಇರುತ್ತೇವೋ ಅಲ್ಲಿಯತನಕ ಇಲ್ಲಿ ಬಂದಿಗಳಾಗಿರುತ್ತೇವೆ. ಈ ಬಂಧನದ ಗೋಡೆ ಕೆಡವಿಬಿಟ್ಟರೆ ನಮಗೆ ಕಾಣುವುದೇ ವಿಶ್ವ. ಆಗ ವಿಶ್ವಮಾನರಾಗುತ್ತೇವೆ. ಆಗ ನಾವು ಯಾರನ್ನೇ ಆಗಲಿ ,ಯಾವುದನ್ನೇ ಆಗಲಿ, ದ್ವೇಷಿಸುವುದಿಲ್ಲ. ವಿಶ್ವಮಾನವನಲ್ಲಿ ಪ್ರೀತಿ, ಪ್ರೇಮ, ಕರುಣೆ ಮತ್ತು ಮಮತೆ ಹಾಗೂ ಪರೋಪಕಾರದಂತಹ ಗುಣಗಳು ಇರುತ್ತವೆ. ಯಾರಲ್ಲಿ ಪ್ರೀತಿ, ಪ್ರೇಮ, ಕರುಣೆ, ಮಮತೆ ಹಾಗೂ ಪರೋಪಕಾರದಂತ ಗುಣಗಳು ಇರುತ್ತವೆಯೋ ಅವರಲ್ಲಿ ಸದಾ ಸಂತೋಷ ಸಂಭ್ರಮ ಇರುತ್ತದೆ. ಮಕ್ಕಳೇ, ನಾವೆಲ್ಲರೂ ವಿಶ್ವಮಾನವರಾಗೋಣ.
.........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article