-->
ಅಕ್ಕನ ಪತ್ರ : ಸಂಚಿಕೆ - 33

ಅಕ್ಕನ ಪತ್ರ : ಸಂಚಿಕೆ - 33

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 33


        ನಮಸ್ತೆ ಮಕ್ಕಳೇ.... ನಾನು ಚೆನ್ನಾಗಿದ್ದೇನೆ... ಹೇಗಿದ್ದೀರಿ ನೀವೆಲ್ಲ..?
     ಅಬ್ಬಾ! ಅದೆಷ್ಟು ಬೇಗ ದಿನಗಳು ಕಳೆದು ಹೋಗುತ್ತಿವೆ! ತರಗತಿಯೊಳಗಿನ ಪಠ್ಯ ಚಟುವಟಿಕೆಗಳಿಗೊಂದು ಸಣ್ಣ ಬಿಡುವು.... ದಸರಾ ರಜೆಗೆ ಮಾನಸಿಕವಾಗಿ ಸಿದ್ಧರಾಗಿದ್ದೇವೆ...!ಯೋಜನೆಗಳನ್ನು ಯೋಚಿಸುವಷ್ಟರಲ್ಲಿ ರಜೆ ಮುಗಿದು ಹೋದದ್ದೇ ಗೊತ್ತಾಗೋದಿಲ್ಲ ಅಲ್ವಾ?
       ಏನ್ಮಾಡೋಣ ಈ ರಜೆಯಲ್ಲಿ..? ನಮ್ಮ ನೆರೆಹೊರೆಯಲ್ಲಿ ಅಥವಾ ನಮ್ಮ ಮನೆಯಲ್ಲಿಯೇ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯರಿರಬಹುದು... ಅವರ ಮಾತುಗಳನ್ನು ದಾಖಲಿಸೋಣವೇ...? ಅನುಭವವೇ ಶಿಕ್ಷಣ. ಯಶಸ್ಸಿನ ಯಾವ ಹಾದಿಯೂ ಪರಿಶ್ರಮವನ್ನು ಹೊರತಾಗಿರುವುದಿಲ್ಲ. ಈಗೀಗ ನಾವು ನಿರಂತರ ಅಭ್ಯಾಸ ಮಾಡದೆ ಯಶಸ್ಸಿನ‌ ನಿರೀಕ್ಷೆಯಲ್ಲಿ ನಿರಾಸೆಯನ್ನು ಅನುಭವಿಸುತ್ತೇವೆ. ಆಗಿನ ಕಾಲದಲ್ಲಿ ಈ ಪಯಣ ಎಷ್ಟೊಂದು ಕಷ್ಟ ವಾಗಿದ್ದಿರಬಹುದು! ಸೋತು ಗೆದ್ದಾಗ ಸಿಗುವ ನಿಜವಾದ ಗೆಲುವು ಹೆಚ್ಚು ಮುದ ನೀಡುತ್ತದೆ.
      ಬಹುಶಃ ನಮ್ಮ ಆಸುಪಾಸಿನಲ್ಲಿರುವ ಹಿರಿಯರ ಜೊತೆಗಿನ ಒಂದಷ್ಟು ಮಾತುಕತೆ ನಮಗೆ ಬದುಕಿನ‌ ಪಾಠವಾಗಬಹುದು. ಎಷ್ಟೋ ಸಲ ಅವರು ನೆನಪುಗಳ ಜೊತೆ ಸಂಭ್ರಮಿಸುವುದನ್ನು ನೋಡುವುದೇ ಖುಷಿ. ಈ ಸಂತೋಷದಲ್ಲಿ ನಾವು ಭಾಗಿಗಳಾಗುತ್ತಾ ರಜೆಯಲ್ಲಿ ಹೊಸದೊಂದು ಅನುಭವವನ್ನು ಕಲಿಕೆಯ ಜೋಳಿಗೆಯಲ್ಲಿ ತುಂಬಿಸಿಕೊಳ್ಳೋಣ.
     ಸಂದರ್ಶನಕ್ಕಾಗಿಯೇ ಕೆಲವೊಂದು ಪೂರಕ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು, ಅವರ ಬದುಕಿನ ಪಥದ ವಿವಿಧ ಮಜಲುಗಳಿಗೆ ಅವುಗಳನ್ನು ವಿಸ್ತರಿಸಿಕೊಳ್ಳಿ. ಸಾಧಕರೇ ಆಗಬೇಕೆಂದಿಲ್ಲ... ನಿಮ್ಮ ಪರಿಸರದಲ್ಲಿ ಅತ್ಯಂತ ಹಿರಿಯರಿದ್ದರೆ ಅವರೊಂದಿಗೂ ಮಾತನಾಡಿ. ಸಾತಂತ್ರ್ಯದ ಕಥೆಗಳೂ ದೊರೆಯಬಹುದು! ಹಿರಿಯರ ಆಶೀರ್ವಾದದ ನೆರಳಿನಲ್ಲಿ ನಾವು ಬೆಳೆಯೋಣ.
       ಮೊನ್ನೆಯ ಪತ್ರಕ್ಕೆ ಪ್ರೀತಿಯ ನುಡಿಯಾದ ಎಲ್ಲರಿಗೂ ವಂದನೆಗಳು. ಅತ್ಯಂತ ಕುತೂಹಲದಿಂದ ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ. ಹೊಸ ಪ್ರಯೋಗ ಹೇಗನ್ನಿಸಿತು?ಯಾರ ಜೊತೆ ಮಾತನಾಡಿದ್ರಿ..? ಅವರ ನುಡಿಗಳು ಪ್ರೇರಣೆಯಾಯಿತೇ..? ಬರೆದು ಕಳಿಸ್ತೀರಲ್ಲಾ..?
       ಆರೋಗ್ಯ ಜೋಪಾನ. ಮುಂದಿನ ಪತ್ರದಲ್ಲಿ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು.
................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************
Ads on article

Advertise in articles 1

advertising articles 2

Advertise under the article