ಪ್ರೀತಿಯ ಪುಸ್ತಕ : ಸಂಚಿಕೆ - 25
Friday, September 23, 2022
Edit
ಪ್ರೀತಿಯ ಪುಸ್ತಕ
ಸಂಚಿಕೆ - 25
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ..... ಗುಬ್ಬಚ್ಚಿಗಳು ಈಗ ಹೆಚ್ಚಾಗಿ ಕಾಣ ಸಿಗುವುದಿಲ್ಲ ಅಲ್ಲವೇ? ಯಾಕೆ ಹೀಗೆ ಎಂಬ ಪ್ರಶ್ನೆ ನಮಗೆ ಬಂದೇ ಬರುತ್ತದೆ ಅಲ್ಲವೇ? ಈ ಪುಸ್ತಕದ ಮೊದಲ ಕಥೆಯಲ್ಲಿ ನಿಸರ್ಗ ಎಂಬ ಪುಟ್ಟ ಹುಡುಗಿ ಅವಳ ಮಾಮಾನ ಹತ್ತಿರ ಈ ಪ್ರಶ್ನೆ ಕೇಳುತ್ತಾಳೆ. ಉತ್ತರ ಕಂಡುಕೊಳ್ಳುತ್ತಾಳೆ. ಪಟ್ಟಣದಲ್ಲಿ ಇರುವ ತನ್ನ ಮನೆಗೆ ಬಂದು ಗುಬ್ಬಚ್ಚಿ ತನ್ನ ಮನೆಗೆ ಬರುವ ಹಾಗೆ ಮಾಡುತ್ತಾಳೆ. ಅವಳು ಏನೆಲ್ಲಾ ಮಾಡಿರಬಹುದು, ಊಹಿಸುವಿರಾ? ಕಣ್ಣು ಕಾಣದ ಶಂಕರ ಎಂಬ ಹುಡುಗನಿಗೆ ಅವನ ಅಮ್ಮ ಹೇಗೆ ಕಣ್ಣಾಗುತ್ತಾಳೆ; ಚಿಂಟು ಪಿಂಟು ರಾಕೆಟ್ ಆಟ ಹೇಗೆ ಆಡುತ್ತಾರೆ; ಬಂಗಾರಿ ಬೆಕ್ಕಿನ ಪ್ರೀತಿ ಹೀಗೇ ಎಂಟು ಕಥೆಗಳಿವೆ. ಪುಟ್ಟ ಪುಸ್ತಕ. ಪುಟ್ಟ ಪುಟ್ಟ ಕಥೆಗಳು. ಪರಿಸರ ಪ್ರೀತಿಯ ವಿಚಾರಗಳು, ಪ್ರಾಣಿ ಪ್ರೀತಿ, ಮಮತೆ ವಾತ್ಸಲ್ಯದ ಕಥೆಗಳು ಇಲ್ಲಿವೆ. ಪ್ರತಿ ಕಥೆಗೂ ಒಂದೊಂದು ಚಿತ್ರ ಇವೆ.
ಲೇಖಕರು: ಬೇಲೂರು ರಘನಂದನ
ಚಿತ್ರಗಳು: ವಿಶ್ವ ವಿನ್ಯಾಸ, ಮೈಸೂರು
ಪ್ರಕಾಶಕರು: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ (9449174662, 9448628511)
ಬೆಲೆ: ರೂ.70/
ಆರು, ಏಳು ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರ ಸಹಕಾರದೊಂದಿಗೆ ಕಿರಿಯ ತರಗತಿಯವರೂ ಓದಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************