
ಸಂಚಾರಿಯ ಡೈರಿ : ಸಂಚಿಕೆ - 11
Friday, September 23, 2022
Edit
ಸಂಚಾರಿಯ ಡೈರಿ : ಸಂಚಿಕೆ - 11
ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
ಭಾರತದ ಬಹುಪ್ರಸಿದ್ಧ ಪ್ರವಾಸೀ ತಾಣಗಳಲ್ಲಿ ಸ್ವರ್ಣಮಂದಿರವೂ ಒಂದು. ವೀರರ ಭೂಮಿ ಪಂಜಾಬ್‌ನ ಅಮೃತಸರ್‌ನಲ್ಲಿರುವ ಈ ಭವ್ಯ ಮಂದಿರ ಸಿಖ್ ಧಾರ್ಮಿಕ ಕೇಂದ್ರ. ಅದಾಗ್ಯೂ ಯಾವುದೇ ಧರ್ಮ ಭೇದವಿಲ್ಲದೆ ಈ ಗುರುದ್ವಾರಕ್ಕೆ ಪ್ರವೇಶವಿದೆ. 1577 ಇಸವಿಯಲ್ಲಿ ಪೂರ್ಣ ಗೊಂಡ ಈ ಗುರುದ್ವಾರಕ್ಕೆ ರಾಜಾ ರಂಜಿತ್ ಸಿಂಗ್ ಕಾಲದಲ್ಲಿ ಸ್ವರ್ಣ ಫಲಕ ಅಳವಡಿಸಲಾಯಿತು. ಅಂದಿನಿಂದ ಈ ಕಟ್ಟಡದ ಹೆಸರು ಸ್ವರ್ಣ ಮಂದಿರ ಎಂದಾಯಿತು. ಈ ಸ್ವರ್ಣ ಮಂದಿರ ಹಲವಾರು ಬಾರಿ ಕೆಡವಲ್ಪಟ್ಟಿದೆ, ಮತ್ತು ಕಟ್ಟಲ್ಪಟ್ಟಿದೆ. ಅಫ್ಘನ್ ಹಾಗೂ ಮುಘಲ್ ದಾಳಿಗೆ ಒಳಗಾದ ಈ ಗುರುದ್ವಾರ 1983 ರ ಆಪರೇಷನ್ ಬ್ಲೂ ಸ್ಟಾರ್ ಸಂದರ್ಭದಲ್ಲೂ ಹಾನಿಗೊಳಗಾಗಿತ್ತು.
ಈ ಗುರುದ್ವಾರದ ವಿಶೇಷತೆ ಏನಪ್ಪಾ ಅಂದ್ರೆ, ಇಲ್ಲಿಯ ಪ್ರವೇಶ ಮೆಟ್ಟಿಲುಗಳು ಕೆಳಮುಖವಾಗಿವೆ. ಅದರರ್ಥ ಗುರುವಿನ ಮುಂದೆ ವಿಧೇಯ ಭಾವ ಎಂದಾಗಿದೆ. ಸ್ವರ್ಣ ಮಂದಿರದ ಒಳಾಂಗಣದಲ್ಲೆಲ್ಲಾ ಅಮೃತಶಿಲೆಯ ಹಾಸುಗಳಿವೆ. ಮಂದಿರದ ಎದುರಲ್ಲಿ ಚಿಕ್ಕದಾದ ಕೆರೆಯಿದ್ದು ಅಲ್ಲಿ ಪವಿತ್ರ ಸ್ನಾನ ಮಾಡಬಹುದು. ಮಂದಿರದ ಒಳಾಂಗಣದ ಉದ್ದಕ್ಕೂ ಚಿಕ್ಕ ಚಿಕ್ಕ ಬಟ್ಟಲುಗಳಲ್ಲಿ ನೀರು ಕೊಟ್ಟು, ಆ ಬಟ್ಟಲುಗಳನ್ನು ಶುಚಿಗೊಳಿಸುವುದಕ್ಕಾಗಿ ಸ್ವಯಂಪ್ರೇರಣೆಯಿಂದ ಕೆಲವು ಭಕ್ತರು ಕುಳಿತಿರುತ್ತಾರೆ.
ದಕ್ಷಿಣದ ದೇವಾಲಯಗಳಂತೆ ಇಲ್ಲೂ ಸಹ ಭಕ್ತಾದಿಗಳಿಗೆ ಉಚಿತ ಲಂಗರ್ (ಭೋಜನ) ಇದೆ. ಪ್ರಪಂಚದ ಅತೀ ದೊಡ್ಡ ಪಾಕಶಾಲೆಗಳಲ್ಲಿ ಒಂದಾಗಿದ್ದು, ಇಪ್ಪತ್ತ ನಾಲ್ಕು ಗಂಟೆಯೂ ಹಸಿವು ನೀಗಿಸುವ ಅಮೋಘ ಕೆಲಸ ಮಾಡುತ್ತಿದೆ. ಇಲ್ಲಿಯೂ ಹಲವಾರು ಸ್ವಯಂ ಸೇವಕರು ಸ್ವ ಪ್ರೇರಣೆಯಿಂದ ತರಕಾರಿ ಹೆಚ್ಚುವ, ರೊಟ್ಟಿ ತಟ್ಟುವ, ಬಡಿಸುವ ಮತ್ತು ಶುದ್ಧೀಕರಿಸುವ ಕೆಲಸ ಮಾಡುತ್ತಾರೆ.
ಅಮೃತಸರ್ ರೈಲು ನಿಲ್ದಾಣ ಸ್ವರ್ಣ ಮಂದಿರಕ್ಕೆ ಹತ್ತಿರದ ರೈಲು ನಿಲ್ದಾಣವಾಗಿದೆ. ಅಮೃತಸರ್‌ನಲ್ಲಿಯೇ ವಿಮಾನ ನಿಲ್ದಾಣವೂ ಇದೆ. ನಿಲ್ದಾಣಗಳಿಂದ ಉಚಿತ ಬಸ್ ವ್ಯವಸ್ಥೆಯೂ ಇದೆ. ಪಕ್ಕದಲ್ಲೇ ಭಾರತದ ಸ್ವಾತಂತ್ರ್ಯ ಹೋರಾಟದ ಕರಾಳ ಸತ್ಯ ಹೇಳುವ ಜಲಿಯನ್ ವಾಲಾಭಾಗ್ ಉದ್ಯಾನವೂ ಇದೆ.
ಹಾಗಿದ್ರೆ ತಡ ಮಾಡದೇ ಪಂಜಾಬ್ ಟ್ರಿಪ್ ಪ್ಲಾನ್ ಹಾಕ್ತೀರಲ್ಲಾ.....?
ಕಾಡಂಗಾಡಿ , ಮಂಚಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob : 9663135413
******************************************