-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093

                                
         ಸರ್ವಜ್ಞ ಕವಿಯು, “ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು” ಎಂದು ಸೊಗಸಾಗಿ ಮೇಟಿಯ ಮಹತ್ವವನ್ನು ಕೊಂಡಾಡಿದ್ದಾರೆ. ಭಾರತದ ಜೀವನಾಡಿಯೇ ಮೇಟಿ ವಿದ್ಯೆ. ಮೇಟಿಯೆಂದರೆ ಕೃಷಿ. ಜನರ ಆರೋಗ್ಯ, ಆಹಾರ, ಸೌಂದರ್ಯ, ನಾಗರಿಕ ಜೀವನಗಳಿಗೆ ಮೇಟಿಯೇ ಜೀವಾಳ. ರಾಷ್ಟ್ರದ ಆರ್ಥಿಕ, ಕೈಗಾರಿಕಾ ಮತ್ತು ಖಾದ್ಯ ಸಂಪನ್ಮೂಲಗಳು ಮೇಟಿಯಿಂದಲೇ ಒದಗುತ್ತವೆ. ಹಸಿರು ಕ್ರಾಂತಿಯಂತಹ ಕಾರ್ಯಕ್ರಮಗಳು, ಜೈ ಕಿಸಾನ್ ಘೋಷಣೆ, ಕೃಷಿ ಉಡಾನ್ ಯೋಜನೆ, ಕೃಷಿ ಸಿಂಚಾಯಿ ಮತ್ತು ವನಧನ್ ಯೋಜನೆಗಳೆಲ್ಲವೂ ಕೃಷಿಯ ಅನಿವಾರ್ಯತೆಗಳಿಗೆ ಪ್ರತಿಬಿಂಬವಾಗಿವೆ. ಕೃಷಿಯಿಲ್ಲದೇ ಇರುತ್ತಿದ್ದರೆ ಭೂಮಿಯ ಮೇಲೆ ಜೀವ ಸಂಕುಲ ಅದೃಶ್ಯವಾಗುತ್ತಿತ್ತು. ಕೃಷಿಯ ಬಗ್ಗೆ ನಮಗೆ ಕಾಳಜಿಯಿದೆಯಾದರೂ ನಮ್ಮಲ್ಲಿ ಸೋಮಾರಿತನವೇ ಅಧಿಕ. ಬೆಳಗ್ಗಿನಿಂದ ಸಂಜೆಯ ತನಕ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಅನೇಕರಲ್ಲಿ ಕೃಷಿ ಕೌಶಲ್ಯವೂ ಕಡಿಮೆ. ಕೃಷಿ ಕೌಶಲ್ಯ ಇದ್ದವರಿಗೂ ಕೃಷಿ ವಾತಾವರಣವು ಪೂರಕವಾಗಿರದೇ ಇರುವುದುಂಟು, ಹಣಕಾಸಿನ ಕೊರತೆ, ಕಡಿಮೆ ಫಲವತ್ತತೆ, ಅಲ್ಪ ಜಮೀನಿನ ಅನುಭೋಗ, ನೀರಾವರಿಯ ಕೊರತೆ, ಅನುಭವೀ ಮಾನವ ಶಕ್ತಿಯ ಕೊರತೆ ಹೀಗೆ ಭಾರತೀಯ ಕೃಷಿಕ ಅಸಂಖ್ಯ ಸಮಸ್ಯೆಗಳ ಅಂಗಳದೊಳಗೆ ಕುಸಿದಿರುತ್ತಾನೆ. ಮೇಟಿ ಲಾಭದಾಯಕವಾಗಿದ್ದರೂ ಲಾಭ ಪಡೆಯಲಾಗದ ಗೊಂದಲಗಳೊಳಗೆ ಬಸವಳಿಯುತ್ತಾನೆ. ಪಾರಂಪರಿಕ ಕೃಷಿ ವಿಧಾನ ಅಥವಾ ನಾವಿನ್ಯತಾ ಕೃಷಿ ವಿಧಾನಗಳ ಮೂಲಕ ಕೃಷಿಯಲ್ಲಿ ಖುಷಿಯ ಬದುಕು ಕಟ್ಟಿಕೊಂಡವರು ನಮಗೆ ಪ್ರೇರಕರು. ಶ್ರಮ ಪಡದೆ ಕೃಷಿಯಿಂದ ಗಳಿಕೆ ಕನಸು. ಅದಕ್ಕಾಗಿಯೇ ಕಾಯಕವೇ ಕೈಲಾಸ, ಕೈಕೆಸರಾದರೆ ಬಾಯಿ ಮೊಸರು ಮುಂತಾದ ಹೇಳಿಕೆಗಳಿವೆ. ಈ ಲೇಖನದಲ್ಲಿ ಸಾಧಕ ಕೃಷಿಕರೊಬ್ಬರ ಪರಿಚಯ ಮಾಡಲು ಉದ್ದೇಶಿಸಿದ್ದೇನೆ.  
       ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ನಿವಾಸಿ ಅಮೈ ಮಹಾಲಿಂಗ ನಾಯ್ಕರ ಬಗ್ಗೆ ಕೇಳದವರು ಕಡಿಮೆ. ಅವರಿಗೆ ರಾಜ್ಯ ಕೃಷಿ ಇಲಾಖೆಯು ಕೃಷಿ ಸಾಧಕನೆಂಬ ನೆಲೆಯಲ್ಲಿ ಕೃಷಿ ಪಂಡಿತ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ .  
         ಭಾರತ ಸರಕಾರವು ಅಮೈ ಮಹಾಲಿಂಗ ನಾಯ್ಕ್ ಅವರಿಗೆ 2022ನೇ ಸಾಲಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕಲ್ಲಂಗಳ ಕೇಪು ಸರಕಾರಿ ಪ್ರೌಢ ಶಾಲೆಯ ವನಸಿರಿ ಕಾರ್ಯಕ್ರಮದಲ್ಲಿ ನನಗೆ ಆತ್ಮೀಯರಾದ ಅವರನ್ನು ಭೇಟಿಯಾಗುವ, ಮಾತನಾಡುವ, ಅವರನ್ನು ಆಲಿಸುವ ಸದವಕಾಶವು ಇತ್ತೀಚೆಗೆ ದೊರೆಯಿತು. ಕೃಷಿಯ ಮೇಲಿನ ಅವರ ಆದರ, ಆಸಕ್ತಿ , ಅಸಾಧಾರಣ ಪರಿಶ್ರಮವೇ ಕೃಷಿ ಆಸಕ್ತರಿಗೆ ಪ್ರೇರಣೆ. 
      ಪದ್ಮಶ್ರೀ ಪುರಸ್ಕಾರವು ಅನೇಕ ಕೃಷಿಕರಿಗೆ ದೊರೆತಿದೆ. ಮಹಾಲಿಂಗ ನಾಯ್ಕರು ಕೃಷಿ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡ ಪರಿ ಅನನ್ಯ, ರೋಚಕ ಮತ್ತು ರೋಮಾಂಚಕಾರಿ. ಬಡವರಾಗಿ ಕೂಲಿನಾಲಿ ಮಾಡಿ ಜೀವಿಸುತ್ತಿದ್ದ ಶ್ರೀಯುತರು ಪದ್ಮಶ್ರೀ ಪುರಸ್ಕಾರದವರೆಗೆ ಬೆಳೆದು ನಿಂತ ಕಥೆ ಅದು ವೀರಗಾಥೆ. ದಾನವಾಗಿ ಸಿಕ್ಕಿದ ಬೋಳು ಗುಡ್ಡೆಯನ್ನು ನಂದನವನವನ್ನಾಗಿ ಸುಂದರಗೊಳಿಸಿದ ಅವರ ಕೃಷಿ ಬದುಕು ಎಲ್ಲರಿಗೂ ಆದರ್ಶ. ಹಗಲು ಕೂಲಿ, ರಾತ್ರಿ ಗುಡ್ಡದಲ್ಲಿ ದುಡಿಮೆ ಇದು ಅವರ ಜೀವನ ಪಥ. ಬಾವಿ ತೋಡಿ ಯಶಸ್ಸು ಪಡೆಯಲಾಗದೆ ಚಿಂತಿತರಾಗಿದ್ದ ಇವರಿಗೆ ಸುರಂಗ ತೋಡಿ ನೀರು ಪಡೆಯುವ ಯೋಚನೆಯೊಂದು ಹೊಳೆಯಿತು, ನಾಲ್ಕೈದು ಸುರಂಗ ತೋಡಿ ಜೀವನದ ಹಲವಾರು ರಾತ್ರಿಗಳನ್ನು ಸವೆಸಿದರೂ ನೀರು ದೊರೆಯದಿದ್ದಾಗ ಎಂತಹವರೂ ನಿರಾಶರಾಗುವರು, ಆದರೆ ಛಲಬಿಡದ ತ್ರಿವಿಕ್ರಮನಂತೆ ಮಹಾಲಿಂಗ ನಾಯ್ಕರು ಆಶಾವಾದಿಯಾಗಿಯೇ ಹೊಸ ಹೊಸ ಸುರಂಗಗಳನ್ನು ತೋಡುವ ಕೆಲಸವನ್ನು ಮುಂದುವರಿಸಿದರು. ಅವರ ಭಗೀರಥ ಪ್ರಯತ್ನಕ್ಕೆ 120ಅಡಿಗಿಂತಲೂ ಹೆಚ್ಚು ಉದ್ದದಲ್ಲಿ ಕಲ್ಲು-ಬಂಡೆಗಳೆಡೆಯಲ್ಲಿ ತೋಡಿದ ಸುರಂಗವೊಂದರಲ್ಲಿ ಗಂಗೆ ಪ್ರತ್ಯಕ್ಷಳಾದಳು. ಸುರಂಗ ತಜ್ಞನ ಈ ಗೆಲುವು ಅವರ ಜೀವನದ ನಲಿವಾಗಯಿತು. ಬೋಳು ಗುಡ್ಡದಲ್ಲಿ ಅಡಿಕೆ, ಬಾಳೆ, ಕಾಳುಮೆಣಸು, ಕೊಕ್ಕೋ ಮತ್ತು ತರಕಾರಿ ಬೆಳೆಸಿ ತನ್ನ ಜೀವನಕ್ಕೆ ಸುಭದ್ರತೆಯನ್ನು ತಂದರು.
ಎಲ್ಲ ಕಡೆಯೂ ಸುರಂಗ ನೀರನ್ನು ಕೊಡುವುದಿಲ್ಲ. ಹಾಗಾಗಿ ಸುರಂಗ ತೋಡುವವರು ಕಡಿಮೆ. ಸುರಂಗ ತೋಡುವುದು ಬಹಳ ಕಷ್ಟ. ಸುರಂಗವೆಂದಾಗ ಅದು ಉದ್ದವಾಗಿರುತ್ತದೆಯೇ ವಿನಹ ಅಗಲ ಮತ್ತು ಎತ್ತರ ಇರುವುದಿಲ್ಲ. ಅಗಲ ಮತ್ತು ಎತ್ತರ ಹೆಚ್ಚಿದಂತೆ ಕುಸಿಯುವ ಭೀತಿಯಿದೆ. ವ್ಯಕ್ತಿ ನುಸುಳುವಷ್ಟು ಅಗಲ ಮತ್ತು ಎತ್ತರಕ್ಕೆ ಸುರಂಗ ತೋಡುತ್ತಿದ್ದರು. (ಈಗ ಯಾರೂ ಸುರಂಗ ತೋಡುವುದಿಲ್ಲ ಎನ್ನಬಹುದು). ಕೊರೆಯುತ್ತಾ ಒಳ ಹೋದಂತೆ ಮಣ್ಣನ್ನು ಹೊತ್ತು ಹೊರಗೆ ತರುವುದು ಬಹಳ ತ್ರಾಸ. ಮಣ್ಣನ್ನು ಹೊರಲು ಗಿಡ್ಡದ ವ್ಯಕ್ತಿಗಳೇ ಸಿಗಬೇಕು. ಗಿಡ್ಡವಿದ್ದವರು ಮಣ್ಣನ್ನು ಬಹಳ ಕಷ್ಟದಲ್ಲಿ ಹೊತ್ತು ಹೊರ ತರುವರು. ನೇರ ನಡೆದು ಬರುವಂತಿಲ್ಲ. ಹೊರೆ ಹೊತ್ತು ಬಾಗಿ ಹೊರ ನಡೆಯಬೇಕು. ಎಡ ಅಥವಾ ಬಲ ಮಗ್ಗುಲಿಗೆ ನಡೆದು ಹೊರಬರಬೇಕು. ಒಳ ಹೋದಂತೆ ಬೆಳಕೂ ಇಲ್ಲ. ದಾರಿ ಕಾಣದು. ಸುರಂಗದ ಅಕ್ಕ ಪಕ್ಕಗಳು ತಾಗಿ, ಹೊರುವವರ ಮಣಿಕೈ, ಮಂಡಿ ಮತ್ತು ಬೆರಳುಗಳಿಗೆ ಗಾಯವಾಗುತ್ತಾ ರಕ್ತ ಜಿನುಗುತ್ತಾ ಸಂಕಟ ಪಡುವರು. ಜೊತೆಗೆ ಆಮ್ಲಜನಕ ಕಡಿಮೆಯಾಗಿ ಉಸಿರು ಕಟ್ಟುವ ವಾತಾವರಣ. ನಿಧಾನವಾಗಿ ಹೊರ ಬರಬೇಕು. ಇಬ್ಬರು ಕೈ ಕೈ ಹಿಡಿದು ಹೊರ ಬರುವಂತಿಲ್ಲ, ಯಾಕೆಂದರೆ ಕತ್ತಲಿನಲ್ಲಿ ಸುರಂಗದ ಅಂಕು ಡೊಂಕಿನಲ್ಲಿ ನಡಿಗೆಯನ್ನು ಪರಸ್ಪರ ಹೊಂದಿಸಲಾಗುವುದಿಲ್ಲ.  ಸುರಂಗ ತೋಡುವ ಪಯಣ ಬಹಳ ಯಾತನಾಮಯ. ಸಣ್ಣ ಹಣತೆಯ ಬೆಳಕಿನಲ್ಲಿ ಕೆಲಸ ಮಾಡಬೇಕು. ಹಣತೆಯು ಉರಿಯಲು ಬೇಕಾದ ಆಮ್ಲಜನಕದ ಕೊರತೆಯಿಂದ ಪದೇ ಪದೇ ಅದು ನಂದುವುದು, ಸುರಂಗ ತೋಡುವವರಿಗೂ ದಮ್ಮು ಕಟ್ಟಿದಂತಾಗಿ ಪದೇ ಪದೇ ನಡೆದು ಹೊರಗೆ ಬರಬೇಕು. ಬಹಳ ನಿಧಾನ ಗತಿಯಿಂದ ಸಾಗುವ ಕೆಲಸವಿದು. ಒಳಗೆ ಮಣ್ಣು ಕುಸಿಯುವುದು, ಕೆಲವೊಮ್ಮೆ ಮಣ್ಣಿನೆಡೆಗೆ ದೇಹವೇ ಸಿಕ್ಕಿ ಹಾಕುವುದು, ಮೇಲಿನಿಂದ ಸಣ್ಣ ಪುಟ್ಟ ಕಲ್ಲುಗಳು ತಲೆ, ಬೆನ್ನಿಗೆ ಬೀಳುವುದು, ಮೇಲ್ಭಾಗ ಸರಿಪಡಿಸುವಾಗ ಮುಖಕ್ಕೆ ಬೀಳುವುದು ಹೀಗೆ ಯಾತನೆಯ ಮೇಲೆ ಯಾತನೆಯ ಯಾನ. ತಾನು ಹಗಲಿನಲ್ಲಿದ್ದೇನೋ ರಾತ್ರಿಯಲ್ಲಿದ್ದೇನೋ ಎಂಬುದನ್ನೂ ತಿಳಿಯಲಾಗದ ಸ್ಥಿತಿ. ಸುರಂಗ ತೋಡುವುದೆಂದರೆ ಸೇನೆಯಲ್ಲಿರುವ ಯೋಧನಿಗಿರುವಂತೆ ಜೀವನ್ಮರಣದ ಹೋರಾಟ. ಪ್ರಾಣ ಭೀತಿಯ ಕಾಯಕವಾದರೂ ಮಹಾಲಿಂಗ ನಾಯ್ಕರು ಹಲವಾರು ಸುರಂಗಗಳನ್ನು ತೋಡಿದ್ದಾರೆಂದರೆ ಅವರದು ಅದೆಂತಹ ಸಾಹಸ ಅಲ್ಲವೇ...? ಅಭಿಮನ್ಯುವಿನ ಶೌರ್ಯ, ಭಗೀರಥನ ಪ್ರಯತ್ನ ಅವರನ್ನು ಸಾಧಕನ್ನಾಗಿ ಗುರುತಿಸುವಂತೆ ಮಾಡಿದೆ. ಅವರ ಸಾಧನಾ ಪಥವನ್ನು ನಾವೂ ಅನುಸರಿಸಿದರೆ ಸೋಲೆಂಬುದಿರದು.
ಪದ್ಮಶ್ರೀ ಮಹಾಲಿಂಗ ನಾಯ್ಕರನ್ನು ತಿಳಿದಂತೆ ಅವರ ಬಗ್ಗೆ ಅಭಿಮಾನ ಹೆಚ್ಚುತ್ತಾ ಹೋಗುತ್ತದೆ. ಮುಂದಾಗಿ ಕರೆ ಮಾಡಿ ಹೋದರೆ ಮಾತ್ರವೇ ಅವರನ್ನು ಕಾಣಬಹುದು. ಕೃಷಿಕರು ಮನೆಯಲ್ಲಿರುತ್ತಾರೆಂಬ ಸಾಮಾನ್ಯವಾದ ಭ್ರಮೆಯಿಂದ, ನಮ್ಮ ಸಮಯದಲ್ಲಿ ಅವರ ಮನೆಗೆ ಹೊದರೆ, ಅವರಿಗಾಗಿ ಅವರ ಮನೆಯಲ್ಲಿ ಕುಳಿತು ನಾವು ಕಾಯಲೇ ಬೇಕು. ಅವರು ಮನೆಯಲ್ಲಿರದೆ ಕೃಷಿ ಕಾಯದೊಳಗೆ ಮಗ್ನರಾಗಿರುತ್ತಾರೆ. ಕೆಲವೊಮ್ಮೆ ಅವರನ್ನು ತೋಟದೊಳಗೆ ಹುಡುಕಿದರೂ ಮನೆಯವರಿಗೂ ಸಿಗುವುದಿಲ್ಲವಂತೆ. ಅವರು ಟಾರ್ಚ್ ಲೈಟು ಹಿಡಿದು ಸುರಂಗದೊಳಗೆ ಹೋಗಿ ಸ್ವಚ್ಛಗೊಳಿಸುತ್ತಿರುತ್ತಾರಂತೆ.  
       ಒಬ್ಬ ಯಶಸ್ವೀ ಕೃಷಿಕನ ಕಥೆಯನ್ನು ನಿಮ್ಮ ಮುಂದೆ ಯಾಕೆ ಬಿಡಿಸಿ ಇಟ್ಟಿರುವೆನೆಂದು ಅಚ್ಚರಿಯೇ....? ನಮ್ಮಲ್ಲಿರುವ ಹಣ, ಪದವಿ, ಅಂತಸ್ತು, ಅಧಿಕಾರ ಬಲಗಳನ್ನು ಮೀರಿ ನಮ್ಮ ಯಸಸ್ಸು ನಿಂತಿದೆ. ನಮ್ಮ ಶ್ರಮದ ಬೆವರ ಪ್ರತಿಯೊಂದು ಹನಿಯೂ ನಮ್ಮ ಸಾಧನೆಯ ಕಿರೀಟಕ್ಕೆ ಜೋಡಣೆಯಾಗುವ ನಾನಾ ಗರಿಗಳು. ತಂತಮ್ಮ ಕಾರ್ಯಕ್ಷೇತ್ರದಲ್ಲಿ ಕರ್ಮ ಪ್ರೀತಿಯಿಂದ, ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ದುಡಿದರೆ ಜನ ಸಾಮಾನ್ಯನಿಗೂ ಉತ್ತುಂಗಕ್ಕೇರಲು ಸಾಧ್ಯ ಎಂಬ ಅರಿವು ಮೂಡಲು ಮಹಾಲಿಂಗ ನಾಯ್ಕರ ಜೀವನಗಾಥೆಯು ದಿಕ್ಸೂಚಿಯಾಗಲಿ ಎಂಬುದೇ ಹಾರೈಕೆ..... ನಮಸ್ಕಾರ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
********************************************

Ads on article

Advertise in articles 1

advertising articles 2

Advertise under the article