
ಜೀವನ ಸಂಭ್ರಮ : ಸಂಚಿಕೆ - 47
Sunday, August 7, 2022
Edit
ಜೀವನ ಸಂಭ್ರಮ : ಸಂಚಿಕೆ - 47
ಮಕ್ಕಳೇ..... ನಮ್ಮ ಮನಸ್ಸಿಗೆ ಅಗಾಧ ಸಾಮರ್ಥ್ಯವಿದೆ. ಅಲ್ಲದೆ ಅದು ಸದಾ ಚಂಚಲ. ಒಂದು ಕಡೆ ನಿಲ್ಲುವುದಿಲ್ಲ. ಇದೇ ಮನಸ್ಸು ಅತಿ ಆಸೆಗೂ ಕಾರಣ. ಹಾಗಾಗಿ ಇದು ತಳದಲ್ಲಿ ರಂಧ್ರ ಇರುವ ಬಕೆಟ್ ಇದ್ದಂತೆ. ತಳದಲ್ಲಿ ರಂಧ್ರವಿರುವ ಬಕೆಟ್ ಗೆ ಎಷ್ಟು ನೀರು ಹಾಕಿದರೂ ನಿಲ್ಲುವುದಿಲ್ಲ. ಅದೇ ರೀತಿ ಅತಿ ಆಸೆಯೂ ಕೂಡ ರಂದ್ರವಿರುವ ಬಕೆಟ್ ನಂತೆ. ಎಷ್ಟು ಸಂಗ್ರಹಿಸಿದರೂ ಸಾಕಾಗುವುದಿಲ್ಲ. ಇದಕ್ಕೆ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಅವರು ಹೇಳಿದ ಕಥೆ ತುಂಬಾ ಸುಂದರವಾಗಿದೆ.
ಒಂದು ರಾಜ್ಯದಲ್ಲಿ ಒಬ್ಬ ಅರಸನಿದ್ದ. ಅರಸನ ತಲೆ ಕೂದಲು , ಗಡ್ಡ ತೆಗೆಯಲು , ಮೀಸೆ ಸರಿಪಡಿಸಲು ಒಬ್ಬ ಕ್ಷೌರಿಕನನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಆತ ಪಕ್ಕದ ಹಳ್ಳಿಯವನು. ದಿನಾ ಕಾಡಿನ ದಾರಿಯಲ್ಲಿ ನಡೆದು ಬಂದು ರಾಜನ ಗಡ್ಡ ತೆಗೆದು , ಮೀಸೆ ಸರಿಪಡಿಸುತ್ತಿದ್ದನು. ಅದಕ್ಕೆ ದಿನಕ್ಕೆ ಮೂರು ಆಣೆ ಹಣ ನೀಡುತ್ತಿದ್ದ ರಾಜ. ಈ ಕ್ಷೌರಿಕ ಮೂರು ಆಣೆಯಲ್ಲಿ ಆನಂದವಾಗಿ ಬದುಕುತ್ತಿದ್ದ. ಉಣ್ಣಲು, ತಿನ್ನಲು ಮತ್ತು ತೊಡಲು ಕೊರತೆ ಇರಲಿಲ್ಲ. ಒಂದು ದಿನ ಅರಮನೆಯಿಂದ ಮನೆಗೆ ಹೋಗಲು ಕಾಡುದಾರಿಯಲ್ಲಿ ನಡೆಯುತ್ತಿದ್ದ. ಸುಸ್ತಾಗಿತ್ತು ಮರದಡಿ ಕುಳಿತು ವಿಶ್ರಮಿಸಿದ. ಆಗ ಆತನಿಗೆ ಅರಿವಿಲ್ಲದಂತೆ ನಿದ್ರೆ ಬಂದಿತ್ತು. ನಿದ್ರೆ ಮಾಡಿ ಎದ್ದು ಕುಳಿತಾಗ ಆತನ ಸಮೀಪ ಏಳು ಹಂಡೆಗಳು ಬಂದಿದ್ದವು. ಅದರಲ್ಲಿ ಚಿನ್ನ ತುಂಬಿತ್ತು. "ನಾವು ನಿಮ್ಮ ಮನೆಗೆ ಬರಲೇ..." ಎಂದು ಕೇಳಿದವು ಕ್ಷೌರಿಕನಿಗೆ. ಬಹಳ ಆನಂದವಾಯಿತು ಕ್ಷೌರಿಕನಿಗೆ. ಯಾರಿಗಿದ್ದರೂ ಉಚಿತವಾಗಿ ದೊರೆತರೆ ಆನಂದವೇ.... ಆಗ ಕ್ಷೌರಿಕ ಹೇಳಿದ , "ನಿಮ್ಮನ್ನು ತೆಗೆದುಕೊಂಡು ಹೋಗಲು ಏನಾದರೂ ವ್ಯವಸ್ಥೆ ಮಾಡಲೇನು?" ಎಂದು. ಅದಕ್ಕೆ ಹಂಡೆಗಳು , "ನೀವೇನು ವ್ಯವಸ್ಥೆ ಮಾಡುವುದು ಬೇಡ. ನಾವೇ ಬರುತ್ತೇವೆ" ಎಂದವು. ನಂತರ ಕ್ಷೌರಿಕ ಕಾಡಿನ ದಾರಿಯಲ್ಲಿ ನಡೆದು ಮನೆಗೆ ಬರುವ ಹೊತ್ತಿಗೆ ಏಳೂ ಹಂಡೆಗಳು ಬಂದು ಮನೆ ಮುಂದೆ ಇದ್ದವು. ಇದನ್ನು ನೋಡಿ ಖುಷಿಯಿಂದ ಹೆಂಡತಿಗೆ ಹೇಳಿದ. ಹೆಂಡತಿಗೆ ಪರಮಾನಂದ. ಹೆಂಡತಿ ಮತ್ತು ಗಂಡ ಇಬ್ಬರೂ ಸೇರಿ ಎಲ್ಲಾ ಹಂಡೆಗಳನ್ನು ಮನೆಯೊಳಗೆ ಸೇರಿಸಿ, ಮನೆ ಬಾಗಿಲು ಹಾಕಿಕೊಂಡರು. ಇದುವರೆಗೂ ಎಂದು ಮನೆ ಬಾಗಿಲು ಹಾಕಿರಲಿಲ್ಲ. ಪ್ರತಿಯೊಂದು ಹಂಡೆಯನ್ನು ಪರೀಕ್ಷಿಸಿದರು. ಮೊದಲನೇ ಹಂಡೆ ತುಂಬಾ ಹಣವಿತ್ತು. ಹೀಗೆ ಆರನೇ ಹಂಡೆಯವರೆಗೂ ಹಣ ತುಂಬಿತ್ತು. ಏಳನೇ ಹಂಡೆ ನೋಡಿದಾಗ ಅದರಲ್ಲಿ ಎರಡು ಇಂಚು ಭಾಗ ಹಣದ ಕೊರತೆ ಇತ್ತು. ಆರು ಹಂಡೆಗಳನ್ನು ನೋಡಿದಾಗ ಇದ್ದ ಸಂತೋಷ, ಏಳನೇ ಹಂಡೆ ನೋಡಿದಾಗ ಇರಲಿಲ್ಲ. ಏನು ಮಾಡುವುದು ಎಂದು ಹೆಂಡತಿಯನ್ನು ಕೇಳಿದಾಗ , ಹೆಂಡತಿ ಹೇಳಿದಳು "ಏನಿಲ್ಲ , ಇದನ್ನ ತುಂಬಿಸುವುದು" ಎಂದಳು. ಇದರ ಅರ್ಥ ಆರು ಹಂಡೆಗಳು ತುಂಬಿದುದು ಆನಂದ ಕೊಡಲಿಲ್ಲ. ಅವರ ಮನದಲ್ಲಿ ಏಳನೇ ಹಂಡೆಯ ಕೊರತೆ ಕಾಡತೊಡಗಿತ್ತು. ಮನೆಯಲ್ಲಿ ಇದ್ದ ಆನಂದ ಮರೆಯಾಯಿತು. ತಿನ್ನಲು ಉಣ್ಣಲು ಕೊರತೆ ಇರಲಿಲ್ಲ. ಈಗ ತುಂಬಿಸುವದಕ್ಕೋಸ್ಕರ... ತಿನ್ನಲು, ಉಣ್ಣಲು ಕೊರತೆಯಾಯಿತು. ಹೊಸ ಬಟ್ಟೆ ಇಲ್ಲ. ಏನು ಇತ್ತೋ ಹಳೆ ಬಟ್ಟೆ , ಅವರಿಗೆ ಸಾಕಾಯ್ತು. ದೇಹ ಬಡವಾಯಿತು. ಸಪ್ಪೆ ಮೋರೆ ಹಾಕಿಕೊಂಡು ಎಂದಿನಂತೆ ಹಳೆ ಬಟ್ಟೆ ಹಾಕಿಕೊಂಡು , ಅರಮನೆಗೆ ತನ್ನ ಕೆಲಸಕ್ಕೆ ಹೋದ. ರಾಜ ನೋಡಿದ "ಯಾಕಪ್ಪಾ ಹೀಗಾಗಿದ್ದೀಯ, ಕೊರತೆ ಇದೆಯೇ..?" ಎಂದು ಪ್ರಶ್ನಿಸಿದ. ಅದಕ್ಕೆ ಕ್ಷೌರಿಕ ಹೇಳಿದ. "ಸ್ವಾಮಿ, ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆ ಹೆಚ್ಚಾಗಿದೆ. ಜೀವನ ನಿಭಾಯಿಸುವುದು ಕಷ್ಟ" ಎಂದು ಹೇಳಿದ. "ಹಾಗಾದರೆ ಎಷ್ಟು ಬೇಕು?" ಎಂದು ರಾಜ ಕೇಳಿದ. ಹತ್ತು ಆಣೆಯಾದರೂ ಬೇಕಾಗುತ್ತದೆ ಎಂದ ಕ್ಷೌರಿಕ. ಆಗ ರಾಜ ದಿನಾ 10 ಆಣೆ ಕೊಡಲು ಶುರು ಮಾಡಿದ. ಹೀಗೆ ಮೂರು ತಿಂಗಳು ಆಯ್ತು. ಕ್ಷೌರಿಕನಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ದಿನಾ ಎಂಟು ಆಣೆ ಹಾಕಿದರೂ , ಏಳನೇ ಹಂಡೆ ಮಾತ್ರ ತುಂಬಲಿಲ್ಲ. ಅದು ಎಷ್ಟು ಹಾಕಿದರೂ ತುಂಬುವಂತಹ ಹಂಡೆಯಲ್ಲ. ಅದನ್ನು ರಾಜ ಸೂಕ್ಷ್ಮವಾಗಿ ಗಮನಿಸಿ , ಒಮ್ಮೆ ಕೇಳಿದ. ನಿನಗೆ ಹತ್ತು ಹಣೆ ಕೊಟ್ಟರೂ ಮುಖದಲ್ಲಿ ಸಂತೋಷವಿಲ್ಲ. ಏನಾದರೂ ಹಂಡೆ-ಪಂಡೆ ಸಿಕ್ಕಿದೆಯೇ ಎಂದು ಕೇಳಿದ. ಆಗ ಕ್ಷೌರಿಕ , "ಇದರ ಬಗ್ಗೆ ನಿಮಗೆ ಹೇಗೆ ಗೊತ್ತಾಯಿತು ಸ್ವಾಮಿ" ಎಂದ. ರಾಜ ಹೇಳಿದ.... "ನಮ್ಮ ತಾತ ಹೇಳುತ್ತಿದ್ದ... ಹೀಗೆ ಏನು ಹಂಡೆಗಳಿವೆ. ಅದರಲ್ಲಿ ಒಂದು ಅಂಡೆ ಸ್ವಲ್ಪ ಖಾಲಿ ಇರುತ್ತದೆ. ಅದನ್ನು ತುಂಬಲು ಇಡೀ ರಾಜ್ಯದ ಬೊಕ್ಕಸ ಹಾಕಿದರೂ ತುಂಬುವುದಿಲ್ಲ. ಹಾಗಾಗಿ ಅವು ಬಂದರೆ ಬರಬೇಡ ಎಂದು ಹೇಳು ಎಂದು ಹೇಳಿದ್ದ. ಆ ಹಂಡೆಗಳು ನನ್ನ ಹತ್ತಿರ ಬಂದವು. ನಾನು ಮನೆಗೆ ಕರೆಯಲಿಲ್ಲ" ಎಂದ. ಇದನ್ನು ಕೇಳಿದ ಕ್ಷೌರಿಕನಿಗೆ ಅರ್ಥವಾಗಿತ್ತು....
ನಮ್ಮ ಮನಸ್ಸು ಕೂಡ ತಳದಲ್ಲಿ ರಂಧ್ರವಿರುವ ಬಕೆಟ್ ಇದ್ದಂತೆ. ಈ ಮನಸ್ಸಿಗೆ ಎಷ್ಟು ಕೊಟ್ಟರೂ ಸಾಕು ಎನಿಸುವುದಿಲ್ಲ. ಅದೇ ರೀತಿ ನಮ್ಮ ಕೊರತೆಯೂ ಸಹ ರಂಧ್ರವಿರುವ ಬಕೆಟ್ ಇದ್ದಂತೆ. ಎಲ್ಲಾ ಸಂಗ್ರಹಿಸಿದರೂ ಕೊರತೆ ಮುಗಿಯುವುದಿಲ್ಲ. ಜೀವನವೇ ಅಪೂರ್ಣ, ಇದನ್ನು ಪೂರ್ಣ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಸಂಗ್ರಹಕ್ಕೆ ಗಮನಹರಿಸದೆ , ಕೊರತೆ ಕಡೆ ನೋಡದೆ , ಇರುವುದರಲ್ಲಿ ಸಂತೋಷದ ಜೀವನ ಸಾಗಿಸಬೇಕು. ಇದೇ ಜೀವನದ ಸಂಭ್ರಮ. ಎಷ್ಟು ಬೇಕು ಅಷ್ಟನ್ನು ಸಂಗ್ರಹಿಸಬೇಕು. ಕೊರತೆ ಇರದಂತೆ , ಹೆಚ್ಚು ಆಗದಂತೆ ಇತಿ-ಮಿತಿಯಲ್ಲಿ ಜೀವನ ಸಾಗಿಸಬೇಕು. ಕಡಿಮೆ ವಸ್ತುವಿನಲ್ಲಿ ಆನಂದದ ಬದುಕನ್ನು ಕಾಣಬೇಕು. ಚೆನ್ನಾಗಿ ದುಡಿಯಬೇಕು, ಗಳಿಸಬೇಕು, ಗಳಿಸಿದ್ದನ್ನು ಪೋಷಣೆಗೆ ಬೇಕಾದಷ್ಟು ಮಿತವಾಗಿ ಬಳಸಬೇಕು, ಬಳಸಿ ಆನಂದ ಪಡಬೇಕು. ಗಳಿಕೆಗಿಂತ ಹೆಚ್ಚು ಬಳಸಬಾರದು, ಬಳಸುವಾಗ ವಿವೇಕ ಇರಬೇಕು. ವಸ್ತುವಿಗೆ ಬೆಲೆ ಕಟ್ಟುವುದಲ್ಲ. ವಸ್ತುವಿನಿಂದ ನಮಗೆ ಆಗುವ ಆನಂದಕ್ಕೆ ಬೆಲೆ ಕಟ್ಟಬೇಕು. ದೊಡ್ಡ ಮನೆ ನಿರ್ಮಿಸಿ ಒಳಗೆ ಆನಂದವಿಲ್ಲದಿದ್ದರೆ ಏನು ಪ್ರಯೋಜನ...? ಆನಂದದಲ್ಲಿರುವ ಚಿಕ್ಕ ಮನೆಯಾದರೂ ಏನು ನಷ್ಟ...? ಆದರೆ ನಾವು ಆನಂದಕ್ಕೆ ಬೆಲೆ ಕೊಡುತ್ತಿಲ್ಲ. ವಸ್ತುವಿಗೆ ಬೆಲೆ ಕಟ್ಟುತ್ತಿದ್ದೇವೆ. ಆದ್ದರಿಂದ ಆನಂದವಿಲ್ಲ.
ಮಕ್ಕಳೇ ನಮಗೆ ನಿಸರ್ಗ ಎಲ್ಲವನ್ನೂ ನೀಡಿದೆ... ನಮಗೆ ಆ ಕ್ಷಣದಲ್ಲಿ ಏನು ದೊರೆತಿದೆಯೋ.. ಅದನ್ನು ಬಳಸಿ ಆನಂದ ಪಡಬೇಕೆ ವಿನಃ ಸಂಗ್ರಹಿಸಲು ಒತ್ತು ನೀಡಬಾರದು.
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************