-->
ಹಕ್ಕಿ ಕಥೆ : ಸಂಚಿಕೆ - 59

ಹಕ್ಕಿ ಕಥೆ : ಸಂಚಿಕೆ - 59

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ


               
          
   ಮಕ್ಕಳೇ ನಮಸ್ತೇ.... ಈ ವಾರದ ಹಕ್ಕಿಕಥೆಗೆ ಸ್ವಾಗತ.
      ನಾನು ಈ ಹಕ್ಕಿಯನ್ನು ಮೊತ್ತ ಮೊದಲನೆ ಬಾರಿಗೆ ನೋಡಿದ್ದು ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ. ಅವತ್ತು ಸಂಜೆ ವಾಕಿಂಗ್‌ ಮಾಡುತ್ತಾ ರಸ್ತೆಯಲ್ಲಿ ಹೋಗುವ ಬದಲು ಕೆರೆ ಏರಿ ಮೇಲೆ ನಡೆದುಕೊಂಡು ಹೋಗ್ತಾ ಇದ್ದೆ. ಕೆರೆಯ ಒಂದು ಬದಿಯಲ್ಲಿ ನೀರು ನಿಂತಿದ್ದಲ್ಲಿ ಜೊಂಡು ಹುಲ್ಲು ಬೆಳೆದುಕೊಂಡಿತ್ತು. ಆ ಹುಲ್ಲಿನ ಮೇಲೆ ನೀಲಿ ಬಣ್ಣದ ಹಕ್ಕಿಯೊಂದು ನಡೆದಾಡುತ್ತಿತ್ತು. ಮುಂದೆ ಮುಂದೆ ನಡೆಯುತ್ತಾ ಅದು ಸರಿಯಾಗಿ ಕಾಣುವ ಜಾಗಕ್ಕೆ ಹೋದಾಗ ನೋಡಿ ಆಶ್ಚರ್ಯವಾಯಿತು. ಪಕ್ಕನೆ ನೋಡಲು ಹುಂಡುಕೋಳಿಯನ್ನೇ ಹೋಲುವ ಹಕ್ಕಿ. ದೇಹ ಮತ್ತು ರೆಕ್ಕೆಗಳು ನೀಲಿ ಮಿಶ್ರಿತ ನೇರಳೆ ಬಣ್ಣ. ನಾಮದ ಕೋಳಿಗೆ ಇರುವಂತೆ ಹಣೆಯವರೆಗೂ ಚಾಚಿದ ಕೊಕ್ಕು ಆದರೆ ಕೆಂಪು ಬಣ್ಣದ್ದು. ಉದ್ದನೆಯ ಕಾಲುಗಳು ಜೊತೆಗೆ ಅಷ್ಟೇ ಉದ್ದದ ಬೆರಳುಗಳು. ಈ ಉದ್ದನೆಯ ಬೆರಳುಗಳ ಸಹಾಯದಿಂದಲೇ ಇವುಗಳು ನೀರಿನಮೇಲೆ ಬೆಳೆಯುವ ಜಲ ಸಸ್ಯಗಳ ಮೇಲೆ ಕಾಲಿಟ್ಟುಕೊಂಡು ಮುಳುಗದೇ ವಾಕಿಂಗ್‌ ಮಾಡುತ್ತವೆ ಮತ್ತು ಆಹಾರ ಅರಸುತ್ತವೆ. ಜಲಸಸ್ಯಗಳೇ ಇದರ ಪ್ರಧಾನ ಆಹಾರ, ಜೊತೆಗೆ ಶಂಕುಹುಳ, ಏಡಿ ಮತ್ತು ಕೀಟಗಳನ್ನೂ ತಿನ್ನುತ್ತದೆ. ಮಳೆಗಾಲದ ಜೂನ್‌ ನಿಂದ ಸಪ್ಟೆಂಬರ್‌ ನಡುವೆ ಕೆರೆಯಲ್ಲಿ ಬೆಳೆಯುವ ಜೊಂಡು ಹುಲ್ಲುಗಳನ್ನು ಬಳಸಿ ನೀರಿಗಿಂತ ತುಸು ಎತ್ತರದಲ್ಲಿ ಬುಟ್ಟಿಯಾಕಾರದ ಗೂಡನ್ನು ಮಾಡಿ ಮೊಟ್ಟೆ ಇಟ್ಟು ಮರಿಮಾಡುತ್ತದೆ. ಸಂತಾನೋತ್ಪತ್ತಿ ಕಾಲದಲ್ಲಿ ಗಂಡು ಹಕ್ಕಿ ದೊಡ್ಡದಾಗಿ ಕೂಗುತ್ತದೆ. 
        ನಾನು ಕರ್ನಾಟಕದಲ್ಲಿ ಓಡಾಡಿದ ಹಲವಾರು ಊರುಗಳಲ್ಲಿ ಎಲ್ಲಿ ಕೆರೆ ಇದೆಯೋ, ಎಲ್ಲಿ ಜಲಸಸ್ಯಗಳು ಬೆಳೆದಿದೆಯೋ ಅಲ್ಲೆಲ್ಲ ಈ ಹಕ್ಕಿಯನ್ನು ನೋಡಿದ್ದೇನೆ. ಅಪಾಯ ಎಂದು ತೋರಿದಾಗ ನೀರಿನ ಮೇಲೆ ಓಡುತ್ತಾ ಹಾರಿಬಿಡುವ ರೀತಿ ಬಹಳ ವಿಶೇಷ. ಕೆರೆಯಲ್ಲಿ ಬೆಳೆದ ಜಲಸಸ್ಯಗಳನ್ನು ಬೋಟಿಂಗ್‌ ಮೊದಲಾದ ಕಾರಣಕ್ಕೆ ಒಂದೂ ಇಲ್ಲದಂತೆ ತೆರವು ಮಾಡಿದರೆ ಈ ಹಕ್ಕಿಯ ಆಹಾರವನ್ನೇ ಕಸಿದುಕೊಂಡಂತೆ. ರಸ್ತೆ, ರೈಲುಮಾರ್ಗ, ಅಥವಾ ಇನ್ನಿತರ ಅಭಿವೃದ್ಧಿ ಕಾಮಗಾರಿಗಾಗಿ ಕೆರೆಯ ಪಾತ್ರ ಕಿರಿದಾದರೆ ಅಥವಾ ಒತ್ತುವರಿಯಾದರೆ ಈ ಹಕ್ಕಿಯ ಆವಾಸವೂ ಕಿರಿದಾದಂತೆ. ಇದರಿಂದಾಗಿ ಆಹಾರ ಹುಡುಕುತ್ತಾ ಇವು ನೀರುನಿಂತ ಗದ್ದೆಗಳಲ್ಲಿಯೂ ಕಾಣಸಿಗುತ್ತವೆ. ಈಗ ಮಳೆಗಾಲ ಆದ್ದರಿಂದ ಈ ಹಕ್ಕಿ ನಿಮ್ಮೂರ ಕೆರೆಯಲ್ಲೂ ಕಾಣಸಿಗಬಹುದು.
ಕನ್ನಡದ ಹೆಸರು: ನೀಲಿ ನಾಮದ ಕೋಳಿ
ಇಂಗ್ಲೀಷ್‌ ಹೆಸರು: Purple Moorhen
ವೈಜ್ಞಾನಿಕ ಹೆಸರು: Porphyrio porphyrio
ಛಾಯಾಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************

Ads on article

Advertise in articles 1

advertising articles 2

Advertise under the article