ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು
Monday, August 29, 2022
Edit
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
ಪರಿಸರ ಸ್ವಚ್ಛತೆ
ಪಟ್ಟಣಕ್ಕೆ ರಮ್ಯತೆ
ಸ್ವಚ್ಛ ಭಾರತ
ಸ್ವಸ್ಥ ಭಾರತ
ಚುಟುಕದಲ್ಲಿರುವ ಪಟ್ಟಣ ಎಂಬ ಪದವು ಸಮಗ್ರ ಭಾರತ ದೇಶವನ್ನೇ ಪ್ರತಿನಿಧಿಸುತ್ತದೆ. ಭಾರತದ ಸೌಂದರ್ಯ ಹೆಚ್ಚಿಸಲು ಸ್ವಚ್ಛತೆ ಹೇಗೆ ಅನಿವಾರ್ಯವೋ; ಹಾಗೆಯೇ ದೇಶದ ಆರೋಗ್ಯಕ್ಕೂ ಸ್ವಚ್ಛತೆಯು ಅತ್ಯಗತ್ಯವಾಗಿದೆ. ದೇಶವಾಸಿಗಳ ನೆಮ್ಮದಿಗೆ ಆರೋಗ್ಯವೇ ಪ್ರಧಾನ ತಳಹದಿ. ಭಾರತದ ಈಗಿನ ಪ್ರಧಾನಿಯವರ ಮಹಾನ್ ಆಶಯ ಸ್ವಚ್ಛ ಭಾರತ. ದೇಶ ಮತ್ತು ದೇಹ ಎರಡೂ ಸ್ವಚ್ಛವಾಗಿರಬೇಕು. ದೇಹ ಎಂದೊಡನೆ ನಮ್ಮ ಮನಸ್ಸು ಮತ್ತು ಭಾವನೆಗಳೂ ಪರಿಶುದ್ಧವಾಗಿರಬೇಕೆಂಬುದಾಗಿ ಪ್ರತ್ಯೇಕವಾಗಿ ವಿವರಣೆ ಅನಗತ್ಯ.
ಶೌಚಾಲಯಗಳ ಕೊರತೆಯು ನಮ್ಮ ದೇಶದಲ್ಲಿ ಬಯಲು ಶೌಚದ ರೂಢಿಗೆ ಕಾರಣವಾಗಿದೆ. ದೇಶದ ಅಸಂಖ್ಯ ಕುಟುಂಬಗಳಿಗೆ ಬಡತನದಿಂದಾಗಿ ಸ್ವಂತ ಶೌಚಾಲಯವನ್ನು ಹೊಂದಲೂ ಕಷ್ಟವಾಗುತ್ತಿದೆ. ಸಾರ್ವಜನಿಕ ಶೌಚಾಲಯಗಳಿದ್ದರೂ, ಅವುಗಳನ್ನು ಶುಚಿಯಾಗಿರಿಸುವಲ್ಲಿ ಸಮಸ್ಯೆಗಳಿವೆ. ಇದರಿಂದಾಗಿ ಸಾರ್ವಜನಿಕ ಶೌಚಾಲಯಗಳೂ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿವೆ. “ಸ್ವಚ್ಛಮೇವ ಜಯತೇ” ಈ ಮಾತನ್ನು ಸರಿಯಾಗಿ ಅರ್ಥೈಸಿರುವ ನಮ್ಮ ಪ್ರಧಾನಿಗಳು ಮನೆಗೊಂದು ಶೌಚಾಲಯ ಎಂದು ಘೋಷಿಸಿ ಆಡಳಿತ ಯಂತ್ರವನ್ನು ಚುರುಕುಗೊಳಿಸಿದುದರ ಪರಿಣಾಮವಾಗಿ, ಇಂದು 'ಹರ್ ಹರ್ ಘರ್ ಘರ್ ಶೌಚಾಲಯ್' ಕಾರ್ಯಕ್ರಮ ಯಶಸ್ವಿಯಾಗುತ್ತಿದೆ. ಸ್ವಚ್ಚ ಭಾರತದ ಕಲ್ಪನೆಗೆ ಬಯಲು ಶೌಚ ತೊಲಗಿಸಲೇ ಬೇಕೆಂಬ ಆಶಯ ಈಡೇರುತ್ತಿದೆ.
ಸರಕಾರದ ಕಾರ್ಯಕ್ರಮಗಳು ಜನಪರವಾಗಿದ್ದರೂ, ಸಾರ್ವಜನಿಕರಲ್ಲಿ ನಿರ್ಮಲೀಕರಣದ ಇಚ್ಛಾ ಶಕ್ತಿ ಬಲಗೊಂಡಿಲ್ಲ. ಅವರಲ್ಲಿ ಮಾನಸಿಕ ಬದಲಾವಣೆ ಆಗಬೇಕು. ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರ ಮನಃಪರಿವರ್ತನೆಯಾಗದೇ ಸ್ವಚ್ಛ ಭಾರತದ ಕಲ್ಪನೆ ಕನಸಿನ ಮಾತು. ನಮ್ಮ ಕಸ ನಮ್ಮಿಂದಲೇ ವಿಲೇವಾರಿ, ನಮ್ಮ ಕಸ ಇನ್ನೊಬ್ಬನಿಗೆ ಹೊರೆಯಾಗಬಾರದು- ಎಂಬ ಸ್ವಯಂ ಪ್ರಜ್ಞೆ ಎಲ್ಲರ ಮನದಾಳದಲ್ಲಿ ಸ್ಥಿರಗೊಳ್ಳಬೇಕು. ಸ್ವಚ್ಛತೆ ಮತ್ತು ಅದರ ಪ್ರಯೋಜನಗಳು ಎಲ್ಲರ ಮನದಲ್ಲಿ ಬಲವಾಗಿ ನೆಲೆಯೂರುವಂತೆ ಜನ ಜಾಗೃತಿ ಕಾರ್ಯಕ್ರಮಗಳು ಜರಗುತ್ತಿರಬೇಕು. ಸ್ವಚ್ಛತೆಯು ನಮ್ಮ ಅವಿನಾಭಾವಿ ಸಂಬಂಧಿಯಾಗಿರಬೇಕು.
ಕೊಳೆಗೇರಿಗಳು ಹೆಚ್ಚಿದಂತೆ ರೋಗಗಳ ಹುಟ್ಟು ಮತ್ತು ಹರಡುವಿಕೆ ಅಗಾಧವಾಗುತ್ತದೆ. ಕೊಳೆಗೇರಿಗಳನ್ನು ನಿರ್ಮೂಲನ ಮಾಡುವುದು ಪ್ರತಿಯೊಬ್ಬರ ಬದ್ಧತೆಯಾಗಿದೆ. ಮನೆಯ ಕಶ್ಮಲ ನೀರು ಹರಿಯಲು ಚರಂಡಿಗಳು, ಚರಂಡಿಗಳ ಮೂಲಕ ಬರುವ ನೀರನ್ನು ಶುದ್ಧಾಗಾರಗಳಿಗೆ ಸಂಪರ್ಕಿಸಬೇಕು. ಶುದ್ದೀಕರಣ ಸ್ಥಾವರಗಳಿಂದ ಶುದ್ಧಗೊಂಡ ನೀರನ್ನು ಮರುಬಳಕೆಗೆ ವಿತರಿಸ ಬೇಕು. ಕಸದಿಂದ ರಸ ಎಂಬಂತೆ ಕಶ್ಮಲಗಳನ್ನು ಸಾವಯವ ಗೊಬ್ಬರಗಳಾಗಿ ರೂಪಾಂತರಿಸಿ ಕೃಷಿ ಚಟುವಟಿಕೆಗಳಿಗೆ ಬಳಸಬೇಕು. ಇದು ಸಾಧ್ಯವಾದಾಗ ಸ್ವಚ್ಛ ಭಾರತ ಸಾಕ್ಷಾತ್ಕಾರವಾಗುತ್ತದೆ. ಇದೇ ರೀತಿಯಲ್ಲಿ ಪ್ರಾಣಿಗಳನ್ನು ಮೀಯಿಸಿದ ನೀರು, ಸ್ನಾನಾಗಾರಗಳ ನೀರು ಶುದ್ಧೀಕರಣಗೊಂಡು ಪುನರ್ಬಳಕೆಯಾದರೆ ಸ್ವಚ್ಛತೆಯನ್ನು ಕಾಪಾಡಲು ಸಾಧ್ಯವಿದೆ.
ಮೊತ್ತ ಮೊದಲಿನೆಯದಾಗಿ ಗೃಹ ನಿರ್ಮಾಣದೊಂದಿಗೆ ಶೌಚಾಲಯಗಳನ್ನು ನಿರ್ಮಿಸುವುದು ಮತ್ತು ಬಳಸುವುದು ಖಡ್ಡಾಯವಾಗಬೇಕು. ಅಡುಗೆ ಮನೆಯ ನೀರು ಭೂಮಿಗಿಂಗುವಂತೆ ಇಂಗುಗುಂಡಿಗಳ ರಚನೆ ಮಾಡಬೇಕು. ಅಡುಗೆ ಮನೆಯ ಕಸ ಸಾವಯವ ಗೊಬ್ಬರಗಳನ್ನಾಗಿ ಮಾಡಲು ಮನೆ ಮನೆಯಲ್ಲೂ ವ್ಯವಸ್ಥೆಗಳಿರಬೇಕು. ಈ ಗೊಬ್ಬರವನ್ನು ಮನೆಯ ಕೈತೋಟದ ಕೃಷಿಗೆ ಬಳಸುವಂತಾಗಬೇಕು. ತ್ಯಾಜ್ಯವಸ್ತುವನ್ನು ಒಣ ಮತ್ತು ಹಸಿ ಕಸಗಳೆಂದು ವರ್ಗೀಕರಿಸಬೇಕು. ಹಸಿ ಕಸವನ್ನು ಗೊಬ್ಬರ ಮಾಡಬಹುದಾದರೆ, ಒಣ ಕಸಗಳನ್ನು ಮರುಬಳಕೆ ಮಾಡುವ ಬಗ್ಗೆ ಕ್ರಿಯಾಯೋಜನೆ ಮತ್ತು ಚಾಲನೆ ಅತ್ಯಗತ್ಯ. ಒಣ ಕಸಗಳ ವಿಲೇಯಲ್ಲಿ ಜನರು ಗ್ರಾಮಪಂಚಾಯತ್ ಆಡಳಿತಕ್ಕೆ ಸಹಕರಿಸಬೇಕು. ಕಾಲು ದಾರಿಗಳು, ರಸ್ತೆಗಳು, ಉಗಿ ಬಂಡಿ ಹಳಿಗಳು, ಸಾರ್ವಜನಿಕ ಕಟ್ಟಡಗಳು ಮತ್ತು ಸಮುಚ್ಚಯಗಳನ್ನು ಸ್ವಚ್ಛವಾಗಿಡಲು ಸಂಬಂಧಿಸಿದವರು ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಿಸಬೇಕು. ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಪರಿಸರದ ಸ್ವಚ್ಛತೆಗೆ ಶ್ರಮಸೇವೆಗಳನ್ನು ನೀಡುವ ಮನೋಗುಣ ಬೆಳೆಸ ಬೇಕು. ದಾರಿ ನಡೆಯುವಾಗ ಸಿಕ್ಕಿದ ಕಸಗಳನ್ನು ಹೆಕ್ಕಿ ಕಸದ ತೊಟ್ಟಿಗೆ ಹಾಕುವುದು, ತಿಂದ ಚಾಕಲೇಟು ಕಸ ಅಥವಾ ತಿಂಡಿ ಪೊಟ್ಟಣಗಳನ್ನು ಎಲ್ಲೂ ಎಸೆಯದೆ ಕಸದ ತೊಟ್ಟಿಗೆನೇ ಹಾಕುವುದು, ಸ್ಯಾನಿಟರಿ ನ್ಯಾಪ್ಕಿನ್ ಗಳ ಸಂಗ್ರಹ ಮತ್ತು ವಿಲೇವಾರಿ, ವಾಯು ಮತ್ತು ಜಲಮಾಲಿನ್ಯವನ್ನು ಸಂಪೂರ್ಣವಾಗಿ ಕೈಬಿಡುವುದು, ಬೀದಿ ವ್ಯಾಪಾರಿಗಳಿಗೆ ಕಸದ ಪೆಟ್ಟಿಗೆಯ ವ್ಯವಸ್ಥೆ; ಪ್ಲಾಸ್ಟಿಕ್ ಬಳಕೆಯನ್ನು ಸ್ಥಗಿತಗೊಳಿಸುವುದು, ಕೃಷಿಯಲ್ಲಿ ಸಾವಯವ ವಿಧಾನ ಅಳವಡಿಸುವುದು ಹೀಗೆ ನಮ್ಮ ಎಲ್ಲ ಕಾರ್ಯಕ್ರಮಗಳು ಪರಿಸರ ಸ್ನೇಹಿಯಾದಾಗ, ಹೃನ್ಮನಗಳನ್ನು ಪುಳಕಿಸುವ ಸ್ವಚ್ಛ ಭಾರತ ಸಾಕಾರಗೊಳ್ಳುವುದರಲ್ಲಿ ಸಂದೇಹವಿಲ್ಲ.
ಭಾರತವು ಸ್ವಚ್ಛವಾಗಲು ಪ್ರಥಮವಾಗಿ ನಮ್ಮ ಮನಸ್ಸು ಸ್ವಚ್ಛವಾಗಬೇಕು. ಮನಸ್ಸಿನ ಸ್ವಚ್ಚತೆಯೊಂದಿಗೆ ನಮ್ಮ ಐಷಾರಾಮೀ ಆಸೆಗಳನ್ನು ಅದುಮಿಡಬೇಕು. ಸ್ವಾರ್ಥಪೂರ್ಣ ಅಶುದ್ಧ ಮನಸ್ಸಿನ ಒಡೆಯರು ನಾವು. ಸ್ವಚ್ಛ ಆಡಳಿತವನ್ನಾಗಲೀ, ಸ್ವಚ್ಛ ಪರಿಸರವನ್ನಾಗಲೀ, ಸ್ವಚ್ಛ ಗಾಳಿ-ನೀರು-ಆಹಾರಗಳನ್ನಾಗಲಿ ಪೂರೈಸಲು ನಮ್ಮ ಕಲುಷಿತ ಮನಸ್ಸು ದೊಡ್ಡ ತಡೆಗೋಡೆಯಾಗಿದೆ. ಈ ಗೋಡೆಯು ಸ್ವಚ್ಛ ಭಾರತ- ಸ್ವಸ್ಥ ಭಾರತದ ಬೃಹದಾಸೆಯನ್ನು ಮಣ್ಣುಗೂಡಿಸುತ್ತದೆ. ಸ್ವಚ್ಛ ಭಾರತಕ್ಕಾಗಿ ಎಲ್ಲ ಆಸೆ ಆಮಿಷಗಳಿಂದ ನಾವೆಲ್ಲರೂ ಹೊರ ಬರೋಣ, ಭಾರತವನ್ನು ಮಲಿನ ಮುಕ್ತಗೊಳಿಸೋಣ. ಸ್ವಚ್ಛ ಬಾರತದ ಪ್ರತ್ಯಕ್ಷೀಕರಣವೇ ನಮ್ಮ ದೇಶವಾಸಿಗಳೆಲ್ಲರ ತುಡಿತವಾಗಿರಲಿ, ಜೈ ಹಿಂದ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
********************************************