-->
ಅನುಕರಣೆಯೆಂಬ.... : ಲೇಖನ

ಅನುಕರಣೆಯೆಂಬ.... : ಲೇಖನ

ಗೀತಾ ಶ್ಯಾನ್ ಭಾಗ್
ಸರಕಾರಿ ಅಭ್ಯಾಸಿ ಪ್ರೌಢಶಾಲೆ. 
ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ.

            
            ಪ್ರೀತಿಯ ಮಕ್ಕಳೆ... ಬಾಲ್ಯ ಎಷ್ಟು ಸುಂದರ!!! ಕುತೂಹಲಗಳ ಆಗರ...! ಸಣ್ಣ ಸಣ್ಣ ಸಂತಸದ ವಿಷಯಗಳೂ ಸಂಭ್ರಮಗಳೆ....!! ಅಲ್ಲವೆ..?
      ಅಪ್ಪ ಇಷ್ಟವಾದರೆ ಅಪ್ಪನೇ ಹೀರೋ..
ಅಮ್ಮ ಇಷ್ಟವಾದರೆ ಅವಳೇ ಹಿರೋಯಿನ್...
ಹಾಗೆಯೇ ದೊಡ್ಡಪ್ಪ, ಚಿಕ್ಕಪ್ಪ, ದೊಡ್ಡಮ್ಮ, ಚಿಕ್ಕಮ್ಮ, ಮಾವ, ಅತ್ತೆ..... ಹೀಗೆ ಹಲವು ಸಂಬಂಧಿಗಳಲ್ಲಿ ಹೆಚ್ಚು ಆಪ್ತರಾದವರು ಹೀರೋಗಳಾಗಿ ಮನಸ್ಸಲ್ಲಿ ಮಿಂಚುತ್ತಾರೆ. ಅವರ ನೋಟ, ಮಾತು, ಹಾವ ಭಾವ, ಕೆಲಸ, ಅವರು ನಮಗೆ ನೀಡುವ ಉಡುಗೊರೆಗಳು.... ಮುಂತಾದ ಸಂಗತಿಗಳಿಂದ ನಾವು ಅವರನ್ನು ನಮ್ಮ ಆಪ್ತವಲಯದ ವಿವಿಧ ಭಾವಪರಿಧಿಗಳಲ್ಲಿ ಇಟ್ಟು ಕೊಳ್ಳುತ್ತೇವೆ. ಬೆಳೆಯುತ್ತ ಬೆಳೆಯುತ್ತಾ ಸಹಜವಾಗಿಯೇ ಹೊರ ಪ್ರಪಂಚದ ಸಂಪರ್ಕ ನಮಗೆ ಹೆಚ್ಚುತ್ತಾ ಹೋಗುತ್ತದೆ. ಮುಂದೊಂದು ದಿನ ಶಾಲಾ ಶಿಕ್ಷಣಕ್ಕೂ ದಾಖಲಾಗುತ್ತೇವೆ. ಒಮ್ಮೆ ನಮ್ಮದೇ ಬಾಲ್ಯದ ಆರಂಭದ ನೆನಪುಗಳನ್ನು ಮಗುಚಿಹಾಕೋಣ:
      ಇಷ್ಟವಾದ ರಕ್ತ ಸಂಬಂಧಿಗಳನ್ನು ಅನುಕರಿಸುವ ನಾವು (ಅಪ್ಪನಂತೆ ಲುಂಗಿಯುಟ್ಟು ಮಲಗಿದ ಮಗನನ್ನೋ.. ಅಮ್ಮನಂತೆ ಸೀರೆಯುಟ್ಟು ಮಕ್ಕಳನ್ನಾಡಿಸುವ ನಟನೆಯೆ ಮಗಳನ್ನೋ ನೋಡಿದ್ದೇವಲ್ಲ?) ಕ್ರಮೇಣ ಹೊರ ಪ್ರಪಂಚಕ್ಕೆ ತೆರೆದುಕೊಳ್ಳುತ್ತೇವೆ. ಅಂಗನವಾಡಿಯಾದರೆ ಅಲ್ಲಿಯ ಶಿಕ್ಷಕಿಯೋ, ಆಯಾನೋ ನಮ್ಮ ಹಿರೋಯಿನ್ ಗಳಾಗ್ತಾರೆ. ಸಾಧ್ಯವಾದಲ್ಲೆಲ್ಲ ನಾವು ಅವರನ್ನು ಅನುಕರಿಸುತ್ತೇವೆ. 
     ಮುಂದೆ ಪ್ರಾಥಮಿಕ ಶಾಲೆಯಲ್ಲಿ ಇಷ್ಟದ ಶಿಕ್ಷಕರನ್ನು ಅನುಸರಿಸುತ್ತೇವೆ. ಪ್ರಯಾಣದ ದಾರಿಯಲ್ಲಿ ಸಿಗುವ ಬಸ್ ಡ್ರೈವರ್, ಕಂಡಕ್ಟರ್ ಮತ್ತು ಅಪರೂಪಕ್ಕೆ ಕಾಣುವ ಪೋಲೀಸ್, ಶಾಲೆಗೆ ಭೇಟಿ ನೀಡುವ ವೈದ್ಯರು, ದಾದಿಯರು.... ಹೀಗೆ ನಮ್ಮ ಇಷ್ಟದ ಮೇರೆಗೆ ಇಷ್ಟವಾದ ವೃತ್ತಿಪರರ ಅನುಕರಣೆ ಸಾಗುತ್ತಾ ಹೋಗುತ್ತದೆ.
(ಎಷ್ಟೋ ಸಲ ನಮಗರಿವಿಲ್ಲದೆ.!!!) ಜೀವನದ ಹಾದಿಯಲ್ಲಿ ಹಂತ ಹಂತಕ್ಕೂ ಸಿಗುವ ಅಪರೂಪದ ಮತ್ತು ನಮಗೆ ಅಪ್ಯಾಯಮಾನವೆನಿಸುವ ವ್ಯಕ್ತಿಗಳೆಲ್ಲೋ ನಮ್ಮ ಅನುಕರಣೆಯ ಮೂಲವಾಗುತ್ತಾರೆ. ಬೆಳೆದಂತೆಲ್ಲಾ ಹಿಂದಿನ ಶಿಕ್ಷಕರ, ದಾದಿಯರ, ಆಯಾಗಳ , ಪೋಲೀಸರ , ಡ್ರೈವರ್ ರವರ ಹೀರೋ ಪಟ್ಟ ನಮ್ಮಲ್ಲಿ ಝೀರೋಗೆ ಹತ್ತಿರವಾಗುತ್ತಾ.... ಆಗಾಗ ಚಾಲ್ತಿಯಲ್ಲಿರುವ ನಟ, ನಟಿಯರು, ಆಟಗಾರರು, ಸಂಗೀತ- ನೃತ್ಯಪಟುಗಳು... ನಮ್ಮ ಅನುಕರಣೆಯ ಭಾಗವಾಗುತ್ತಾರೆ. ಈ ಅನುಕರಣೆಯೆಂಬ ಬೋಧನೆಯಿಲ್ಲದ ಶಿಕ್ಷಣದಿಂದ ನಾವು ಹಲವು ವಿಷಯಗಳನ್ನು ನಮಗೆ ಗೊತ್ತಿಲ್ಲದೇ ಕಲಿಯುತ್ತೇವೆ ಮತ್ತು ಈ ಒಟ್ಟೂ ಅನುಕರಣೆಯೆಂಬ ನಿಗೂಢ ಪ್ರಕ್ರಿಯೆಗಳು ನಮಲ್ಲಿ ನಮಗರಿವಿಲ್ಲದಂತೆ ಒಬ್ಬ ವ್ಯಕ್ತಿಯನ್ನು ವ್ಯಕ್ತಿತ್ವವನ್ನು ನಿರ್ಮಾಣ ಮಾಡಿಬಿಡುತ್ತವೆ...!
       ಬದುಕಿನ ಯಾವೆಲ್ಲ ಸಂಪರ್ಕ- ಸಂಬಂಧಗಳಿಂದ ನಾನು ರೂಪಿಸಲ್ಪಟ್ಟೆ? ಎಂಬ ಪ್ರಶ್ನೆಗೆ ಬಹುತೇಕ ಉತ್ತರ ನಮಗೆ ಗೊತ್ತೇ ಇರುತ್ತದೆ. ಯಾರನ್ನು ಅನುಕರಿಸುತ್ತೇವೆ? ಮತ್ತು ಯಾಕೆ?... ಈ ಪ್ರಶ್ನೆಗಳಿಗೆ ಉತ್ತರ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ. ಯಾರನ್ನು ಎಷ್ಟು ಅನುಕರಿಸಬೇಕೆಂಬ ಅರಿವನ್ನು ನಮ್ಮ ಬದುಕಿನ ಅನುಭವಗಳೆ ಸ್ಪಷ್ಟಪಡಿಸುತ್ತವೆ. ಹಾಗಾಗಿ ಕಾಲಕಾಲಕ್ಕೆ ಸೂಕ್ತ ತಿದ್ದುಪಡಿಗಳೊಂದಿಗೆ ಯೋಗ್ಯ ವ್ಯಕ್ತಿಗಳನ್ನು ಅನುಕರಿಸುವುದು ಸಾಮಾಜಿಕವಾಗಿಯೂ ವೈಯಕ್ತಿಕವಾಗಿಯೂ ಆರೋಗ್ಯಕರ.
        ಆದರೆ, ಶಿಕ್ಷಕರ ವಾಕ್ಚಾತುರ್ಯವನ್ನು ಅನುಕರಿಸುವ ಬದಲು ಅವರ ಬೈಗುಳವನ್ನು ಅನುಕರಿಸಿದ್ದೇವೆ.! ಬಡವನಾದರೂ ಗುಣಸಿರಿವಂತಿಕೆಯ ಮಾವನನ್ನು ಅನುಕರಿಸುವ ಬದಲು ಶ್ರೀಮಂತ ದೊಡ್ಡಪ್ಪನ ದರ್ಪವನ್ನು ಅನುಕರಿಸಿದ್ದೇವೆ.!! ಸತ್ಯದ ಎದೆಗೆ ಒದ್ದಂತೆ ಸುಳ್ಳನ್ನು ಹೇಳಿ ನಂಬಿಸಿ ಗೆಲ್ಲುತ್ತೇವೆಂದು ಮತ್ತಾರನ್ನೋ ಅನುಕರಿಸಿದ್ದೇವೆ.!!! ಗೋಸುಂಬೆಗಳಂತೆ ಕಾಲಕಾಲಕ್ಕೆ ಬಣ್ಣ ಬದಲಾಯಿಸಿ ಜವಾಬ್ದಾರಿಗಳಿಂದ ಬಚಾವಾಗಲು ನಾವೇ ಆಯ್ಕೆಮಾಡಿಕೊಂಡ ಯಾರೋ ಹೀರೋ ನಮಗೆ ಮಾತಾಡದೇ ಹೇಳಿಕೊಟ್ಟಿದ್ದಾನೆ....!
ಕಲಿಯದೇ ಇರಲು ಸಾವಿರ ಕಾರಣಗಳನ್ನು ಪಟ್ಟಿ ಮಾಡಲು ಮತ್ತಾರದ್ದೋ ವರ್ತನೆಯನ್ನು ನಕಲು ಮಾಡಿದ್ದೇವೆ.! ಶಾಲೆಗೆ ತಡವಾಗಿ ಹೋಗಲು, ಯುನಿಫಾರ್ಮ್ ಮರೆಯಲು, ಕಂಪಾಸ್ ಪೆಟ್ಟಿಗೆಯಿಲ್ಲದಿರಲು, ಹೋಂವರ್ಕ್ ಮಾಡದಿರಲು....ಹೀಗೆ ಹಲವನ್ನು ಯಾರಿಂದ ಅನುಕರಿಸಿದೆವು...?
       ಬದುಕಿನ ಸುಂದರ ಅನುಭವಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಲು ಯಾರಾದರೂ ಹೇಳಿಕೊಟ್ಟಿದ್ದಾರೆಯೆ...? ಒಮ್ಮೆ ಯೋಚಿಸಿ....
ನಮಗೆ ಇಷ್ಟವಾದದ್ದು ಆಕರ್ಷಣೀಯವಾದುದೆಲ್ಲವೂ ಆರೋಗ್ಯಕರವೆ?... ಎಂದು ಒಮ್ಮೆ ನಮ್ಮನ್ನು ನಾವು ಪ್ರಶ್ನಿಸಿಕೊಂಡರೆ ಬದುಕಿನಲ್ಲಿ ಅನುಕರಣನೀಯ ವ್ಯಕ್ತಿಗಳು, ಮಾರ್ಗಗಳು ಸಾವಿರ ಸಾವಿರ ತೋರುತ್ತವೆ.
ಅಭಿಮಾನದ , ಆತ್ಮತೃಪ್ತಿಯ ಮತ್ತು ಗೌರವದ ದಾರಿಯ ಅನುಕರಣೆಯು ಕಠಿಣವಾದರೂ ಸದಾ ನಮ್ಮನ್ನು ಹಸನಾಗಿ ಇಡಬಲ್ಲುದು. ಬದುಕೆಂಬ ಪಯಣದ ಕೊನೆಯ ನಿಲ್ದಾಣವನ್ನು ಸರಿಯಾಗಿ ತಲುಪಲು ಯೋಗ್ಯವಾದುದನ್ನೇ ಅನುಸರಿಸೋಣ. ಯೋಗ್ಯವಾದವರನ್ನೇ ಅನುಕರಿಸೋಣ ಅಲ್ಲವೆ....?
       ಅನುಕರಣೆಯೆಂಬುದು ಸಹಜವಾದ ಪ್ರಕ್ರಿಯೆ. ಅದು ಸಹಜತೆಯ ದಾರಿಯಲ್ಲಿಯೇ ಸಾಗಲಿ. ದಿನೇ ದಿನೇ ಹೆಚ್ಚುತ್ತಿರುವ ವಿಕೃತಿಯಿಂದ ಅದರ ಅನುಕರಣೆಯಿಂದ ನವಪೀಳಿಗೆಯ ನೀವು ನರಳುವಂತಾಗದಿರಲಿ. ಪ್ರಕೃತಿಯಲ್ಲಿ ಸಹಜವಾದದ್ದು ಮಾತ್ರ ಸ್ವೀಕಾರಾರ್ಹವಾಗಿದೆ. ಹಿರಿಯರ ಶ್ಲಾಘನೆಗೆ , ಕಿರಿಯರ ಅನುಕರಣೆಗೆ ಯೋಗ್ಯವಾದ ನಡೆ ನಮ್ಮ ನಿಮ್ಮಲ್ಲೆರದ್ದಾಗಲಿ.
....................................ಗೀತಾ ಶ್ಯಾನ್ ಭಾಗ್
ಸರಕಾರಿ ಅಭ್ಯಾಸಿ ಪ್ರೌಢಶಾಲೆ. ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ.
*******************************************

Ads on article

Advertise in articles 1

advertising articles 2

Advertise under the article