
ಹಕ್ಕಿ ಕಥೆ : ಸಂಚಿಕೆ - 62
Tuesday, August 30, 2022
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ, ಈ ವಾರದ ಹಕ್ಕಿಕಥೆಗೆ ಸ್ವಾಗತ. ಕೊರೊನಾ ಬಂದು ಮೊದಲನೇ ಬಾರಿ ಲಾಕ್ ಡೌನ್ ಆಗಿ ನಾವೆಲ್ಲ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಬಂದದ್ದು ನೆನಪಿರಬೇಕಲ್ಲ. ಮನೆಯಲ್ಲೇ ಕುಳಿತು ಮೊಬೈಲ್ ನೋಡಿ ನೋಡಿ ಬೇಜಾರು ಬರುವಷ್ಟು ಗೃಹಬಂಧನ ಆಗಿಬಿಟ್ಟಿತ್ತು. ನಾನು ಸ್ವಲ್ಪ ಹಳ್ಳಿಪ್ರದೇಶದಲ್ಲಿ ವಾಸವಾಗಿರುವ ಕಾರಣ ಬೆಳಗ್ಗೆ ಮತ್ತು ಸಂಜೆ ಸ್ವಲ್ಪ ದೂರ ವಾಕಿಂಗ್ ಹೋಗಿ ಬರುತ್ತಿದ್ದೆ. ಹಾಗೆ ಹೋಗುವಾಗ ಕ್ಯಾಮರಾ ಜೊತೆಗೆ ತೆಗೆದುಕೊಂಡು ಹೋಗುತ್ತಿದ್ದೆ. ನಮ್ಮ ಮನೆ ಇರುವಲ್ಲಿಂದ ಸ್ವಲ್ಪದೂರದಲ್ಲಿ ಒಂದು ಗೇರು ಮರಗಳು ಇರುವ ಗುಡ್ಡ ಇದೆ. ಗುಡ್ಡದ ನಡುವಿನ ಕಾಲುದಾರಿಯಲ್ಲಿ ನಡೆಯುತ್ತಾ ಗುಡ್ಡದ ತುದಿವರೆಗೂ ವಾಕಿಂಗ್ ಮಾಡಲು ತೀರ್ಮಾನಿಸಿದೆ. ಸಂಜೆಯ ಹೊತ್ತು ಆದ್ದರಿಂದ ಹಕ್ಕಿಗಳ ಚಿಲಿಪಿಲಿ ಕೇಳುತ್ತಿತ್ತು. ನಡೆಯುತ್ತಿದ್ದ ದಾರಿಯ ಒಂದು ಬದಿಯಿಂದ ಶೋ..ಬೀ.. ಗೀ... ಎಂಬ ಕೂಗು ಕೇಳಿಸಿತು. ಸ್ವಲ್ಪ ದೂರದಿಂದ ಮತ್ತೆ ಅದೇ ಶೋ..ಬೀ..ಗೀ ಕೂಗು ಕೇಳಿತು. ನಾನು ನಡೆಯುವುದನ್ನು ನಿಲ್ಲಿಸಿ ನಿಂತುಬಿಟ್ಟೆ. ಶಬ್ದ ಬರುವ ಕಡೆಗೇ ಗಮನಿಸಲು ಆರಂಭಿಸಿದೆ. ಎರಡು ಹಕ್ಕಿಗಳು ಪರಸ್ಪರ ಬಹಳ ಗಹನವಾಗಿ ಚರ್ಚೆಮಾಡಿಕೊಳ್ಳುತ್ತಿವೆಯೇನೋ ಎಂಬಂತೆ ನಿರಂತವಾಗಿ ಪೊದೆಗಳ ಕಡೆಯಿಂದ ಧ್ವನಿಗಳು ಕೇಳುತ್ತಿತ್ತು. ಸ್ವಲ್ಪ ಹೊತ್ತಿನಲ್ಲೇ ಸುಮಾರು ಗುಬ್ಬಚ್ಚಿ ಗಾತ್ರದ ಎರಡು ಪುಟಾಣಿ ಹಕ್ಕಿಗಳು ಪರಸ್ಪರ ಮಾತನಾಡಿಕೊಳ್ಳುತ್ತಾ ಪೊದೆಯ ಸಂದಿಯಲ್ಲಿ, ಕೊಂಬೆಗಳ ಮೇಲೆ ಕುಪ್ಪಳಿಸುತ್ತಾ, ಎಲ್ಲ ಕಡೆ ಕೀಟಗಳ ಮೊಟ್ಟೆ, ಲಾರ್ವಾ, ಹುಳುಗಳನ್ನು ಹುಡುಕಿ ತಿನ್ನುತ್ತಾ ಚುರುಕಾಗಿ ಓಡಾಡುತ್ತಿದ್ದವು.
ಮರದ ಕೊಂಬೆಗಳಲ್ಲಿ ಅವುಗಳು ಓಡಾಡುತ್ತಿದ್ದರೆ ಆಕರ್ಷಕ ಹಳದಿ ಬಣ್ಣದ ಪುಟಾಣಿ ಚೆಂಡು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ನೆಗೆದಂತೆ ಕಾಣಿತ್ತಿತ್ತು. ಗಂಡು ಮತ್ತು ಹೆಣ್ಣು ಹಕ್ಕಿಗಳೆರಡೂ ಹಳದಿ ಬಣ್ಣ, ರೆಕ್ಕೆಯ ಮೇಲೆ ಎರಡು ಬಿಳೀ ಬಣ್ಣದ ಪಟ್ಟಿಗಳು. ಗಂಡು ಹಕ್ಕಿಯ ತಲೆ, ಬೆನ್ನು ಮತ್ತು ಬಾಲದ ಭಾಗ ಹೊಳೆಯುವ ಕಡುಕಪ್ಪು ಬಣ್ಣವಾದರೆ, ಹೆಣ್ಣಿನ ಬೆನ್ನು, ತಲೆ ಮತ್ತು ಬಾಲಗಳು ಹಸಿರು ಮಿಶ್ರಿತ ಹಳದಿ ಬಣ್ಣ. ಮರದ ಕೊಂಬೆಗಳ ಮೇಲೆ ಕುಪ್ಪಳಿಸುತ್ತಾ, ಇಂಪಾಗಿ ಹಾಡುತ್ತಾ, ಚುರುಕಾಗಿ ಓಡಾಡುವ ಈ ಹಕ್ಕಿಯನ್ನು ನೋಡುವುದೇ ಚಂದ. ಮೇ ತಿಂಗಳಿನಿಂದ ಆಗಸ್ಟ್ ನಡುವೆ ಇವುಗಳಿಗೆ ಸಂತಾನಾಭಿವೃದ್ಧಿ ಕಾಲ. ಮರದಮೇಲೆ ಗೂಡುಮಾಡಿ, ಮೊಟ್ಟೆ ಇಟ್ಟು ಮರಿಮಾಡಿ, ಗಂಡು ಹೆಣ್ಣು ಎರಡೂ ಹಕ್ಕಿಗಳು ಸೇರಿ ಮರಿಗಳನ್ನು ಬೆಳೆಸುತ್ತವೆ. ಇದರ ಕೂಗುವ ಧ್ವನಿಯನ್ನೇ ಬಳಸಿ ಹಿಂದಿ ಭಾಷೆಯಲ್ಲಿ ಶೋಬೀಗೀ ಎಂಬ ಹೆಸರಿನಿಂದ ಕರೆದರೆ, ಕನ್ನಡದಲ್ಲಿ ಇದರ ಇಂಪಾದ ಕಂಠಕ್ಕಾಗಿ ಮಧುರಕಂಠ ಎಂಬ ಹೆಸರು ಬಂದಿದೆ. ಪಾಕಿಸ್ತಾನದಿಂದ ಬಾಂಗ್ಲಾದೇಶದವರೆಗೆ, ಹಿಮಾಲಯದ ತಪ್ಪಲಿನಿಂದ ಶ್ರೀಲಂಕಾ ವರೆಗೂ ತುಸು ಕಾಡು ಇರುವ ಕಡೆ ಈ ಹಕ್ಕಿ ನೋಡಲು ಸಿಗುತ್ತದೆಯಂತೆ. ನಿಮ್ಮ ಆಸುಪಾಸಿನಲ್ಲೂ ಈ ಹಕ್ಕಿ ಇರಬಹುದು.
ಕನ್ನಡದ ಹೆಸರು: ಮಧುರಕಂಠ
ಇಂಗ್ಲೀಷ್ ಹೆಸರು: Common Iora
ವೈಜ್ಞಾನಿಕ ಹೆಸರು: Aegithina tiphia
ಛಾಯಾಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************