-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093

                   
        ದೌರ್ಬಲ್ಯ ಸಂಚಿಕೆ 1ರಲ್ಲಿ ನಮ್ಮ ಕೆಲಸಗಳನ್ನು ಮುಂದೂಡುವುದರಿಂದ ಉಂಟಾಗುವ ಸಮಸ್ಯೆಗಳನ್ನು ಜ್ಞಾಪಿಸಿದೆವು. ಈ ಸಂಚಿಕೆಯಲ್ಲಿ ಇನ್ನೂ ಒಂದೆರಡು ನಮ್ಮ ದೌರ್ಬಲ್ಯಗಳನ್ನು ನೆನಪಿಸಿ ಅವುಗಳಿಂದ ಹೊರ ಬರಲು ಪ್ರಯತ್ನಿಸೋಣವೇ.....? 
           ಹರಟೆಯೆಂದರೆ ನಮಗೆ ಬಹಳ ಇಷ್ಟ. ಓರಗೆಯವರ ಜೊತೆಗೆ ಅಥವಾ ಮನೆಗೆ ಬಂದವರ ಜೊತೆಗೆ ಮುಖಾಮುಖಿಯಾಗಿ ಮಾತನಾಡುತ್ತಾ ಕುಳಿತರೆ ನಮಗೆ ಸಮಯ ಮುಗಿದದ್ದೇ ತಿಳಿಯುವುದಿಲ್ಲ. “ಹೋ ಘಂಟೆ ರಾತ್ರಿ ಒಂಭತ್ತಾಯಿತು. ಬನ್ನಿ ಊಟಕ್ಕೆ,” ಎಂದು ಅಮ್ಮ ಕರೆದಾಗಲೇ, ಮಧ್ಯಾಹ್ನ ಘಂಟೆ ಮೂರಕ್ಕೆ ಆರಂಭಗೊಂಡ ನಮ್ಮ ಪಟ್ಟಾಂಗ ನಿಲ್ಲುತ್ತದೆ. ಗಣಿತ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಒಂದು ಅಭ್ಯಾಸದ ಹತ್ತು ಗಣಿತ ಸಮಸ್ಯೆಗಳನ್ನು ಬಿಡಿಸಲು ಶನಿವಾರದಂದು ಮನೆಗೆಲಸ ಕೊಟ್ಟಿದ್ದಾರೆ. ಆದನ್ನು ಮಾಡಿ ಮುಗಿಸಲು ಕಡಿಮೆಯೆಂದರೂ ಒಂದು ಘಂಟೆ ಬೇಕು. ಕನ್ನಡ ಅಧ್ಯಾಪಕರು ಕಿರು ಪರೀಕ್ಷೆಗೆ ಓದಲು ಹೇಳಿದ್ದಾರೆ. ಅದನ್ನು ಓದಲು ಒಂದು ಘಂಟೆ ಬೇಕು. ಹೀಗೆ ಬೇರೆ ಬೇರೆ ಕೆಲಸಗಳಿಗೆ ಅಧ್ಯಾಪಕರು ನೀಡಿದ ಎಲ್ಲ ಕೆಲಸಗಳನ್ನು ಮೂರು ಘಂಟೆಯಿಂದಲೇ ಮಾಡ ತೊಡಗಿದ್ದರೆ ಈಗಾಗಲೇ ಕೆಲಸ ಮುಗಿದುಬಿಡುತ್ತಿತ್ತು. ಇನ್ನು ನಿದ್ದೆಗೆಟ್ಟು ಕೆಲಸ ಮಾಡಿದರೆ ನಿದ್ದೆಯ ಅಮಲಿನಲ್ಲಿ ತಪ್ಪುಗಳೇ ಆಗಿ, ಎಲ್ಲವೂ ಹಾಳು. ಆರೋಗ್ಯವೂ ಹಾಳು ಅಲ್ಲವೇ.....? 
      ಈಗ ಮೊಬೈಲಿನ ಗೀಳು ಕೂಡಾ ನಮ್ಮಲ್ಲಿ ಹೆಚ್ಚುತ್ತಿದೆ. ಇದರಿಂದಾಗಿ ಹಾಸಿಗೆಯಲ್ಲೆರಗಿದ ಮೇಲೂ ಹಾಳು ಹರಟೆಗೆ ಮತ್ತು ಫೊಟೋ, ವೀಡಿಯೋ ಹಾಗೂ ಸಂದೇಶಗಳ ವಿನಿಮಯಗಳಿಗೆ ನಮ್ಮ ಸಮಯ ಪೋಲಾಗುತ್ತಿದೆ. ಕಳೆದು ಹೋದ ಸಮಯ ಮರಳಿ ಬಾರದು. ಅನಗತ್ಯ ವಿಷಯಗಳಿಗೆ ನಾವು ಸಮಯವನ್ನು ಬಳಸಲೇ ಬಾರದು. ನಾವು ಎಲ್ಲರೊಡನೆಯೂ ಮಾತನಾಡೋಣ. ಆದರೆ ಮಿತಿಯಿರಲಿ. ಅತಿಯಾದರೆ ಅಮೃತವೂ ವಿಷವಾಗುತ್ತದೆ. ನಾವು ಸಮಯದ ಸದ್ಬಳಕೆಯನ್ನು ಮಾಡಿ ನಮ್ಮ ಭವಿಷ್ಯವನ್ನು ಭವ್ಯಗೊಳಿಸಲು ಪ್ರಯತ್ನಿಸಬೇಕು. ವಿಪರೀತವಾದ ಮನರಂಜನೆಗಾಗಿ ನಮ್ಮ ಸಮಯವನ್ನು ನಾವು ಹಾಳುಮಾಡುತ್ತಿರುವುದೂ ನಮ್ಮನ್ನು ಕಳಪೆಗೊಳಿಸುವ ದೌರ್ಬಲ್ಯವಾಗಿದೆ. ಕೆಲವರು ಸ್ನಾನ ಶೌಚಗಳಿಗೆ, ತಿಂಡಿ ತೀರ್ಥಗಳಿಗೆ, ನಿದ್ದೆ ವಿಶ್ರಾಂತಿಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಸಮಯವನ್ನು ವಿನಿಯೋಗ ಮಾಡುವುದಿದೆ. ವಿಶ್ರಾಂತಿಯಲ್ಲೂ ಕಥೆ ಪುಸ್ತಕ, ಜ್ಞಾನವರ್ಧಕ ಪುಸ್ತಕಗಳನ್ನು ಓದಿ ಮನರಂಜನೆಯೊಂದಿಗೆ ನಮ್ಮ ವ್ಯಕ್ತಿತ್ವವನ್ನು ಬೆಳೆಸಬಹುದೆಂಬುದನ್ನು ಗಮನಿಸದಿರುವುದೂ ದೌರ್ಬಲ್ಯವೇ ಸರಿ.   ನಾವು ನಮ್ಮ ಸಂದೇಹಗಳನ್ನು ಪರಿಹರಿಸಲು ಬೇರೆಯವರ ಜೊತೆಗೆ ಪ್ರಶ್ನಿಸುವುದರಲ್ಲಿ ಹಿಂದೆ ಸರಿಯುವುದೂ ನಮ್ಮ ದೌರ್ಬಲ್ಯವಾಗಿದೆ. ಅಧ್ಯಾಪಕರು ಪಾಠ ಮಾಡಿ ಅರ್ಥ ಆಗಿದೆಯೇ ಎಂದು ಪ್ರಶ್ನಿಸುವುದು ಸಹಜ. ಆದರೆ ಅರ್ಥ ಆಗದವರೂ ಅರ್ಥವಾದವರಂತೆ ಸೋಗು ಹಾಕಿದರೆ ಯಾರಿಗೆ ನಷ್ಟ ಹೇಳಿ ಮಕ್ಕಳೆ. ನಮಗೆ ಅರ್ಥ ಆಗದ ಅಂಶಗಳನ್ನು ಪ್ರಶ್ನೆ ಮಾಡಿದರೆ ನಮ್ಮ ಮರ್ಯಾದೆ ಹೋದೀತು ಎಂದು ಬಾಯ್ಮುಚ್ಚುವುದು ತಪ್ಪು. ಅರ್ಥಆಗದ ವಿಚಾರಗಳನ್ನು ಕೇಳಿ ತಿಳಿಯುವುದರಿಂದ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಪ್ರಶ್ನೆ ಮಾಡಿ ಮಾಹಿತಿ ಪಡೆಯುವವರನ್ನು ಮೂಢರು ಎಂದು ಯಾರೂ ಹೇಳುವುದಿಲ್ಲ ಅಥವಾ ಗ್ರಹಿಸುವುದಿಲ್ಲ. ಅರ್ಥ ಆಗದೇ ಅರ್ಥವಾಯಿತೆಂದು ನಾಟಕ ಮಾಡಿದವರ ಬಗ್ಗೆ ಸತ್ಯಾಂಶ ಗೊತ್ತಾದಾಗ, “ಮೂಢ” ಎಂಬ ಹಣೆ ಪಟ್ಟಿ ನಮಗೆ ಬಂದೇ ಬರುತ್ತದೆ. ಆದುದರಿಂದ ನಮಗೆ ಗೊತ್ತಾಗದ ವಿಚಾರಗಳನ್ನು ಕೇಳಿ ತಿಳಿಯುವುದು ಶ್ರೇಷ್ಠವಾದ ಗುಣ.  
       ನಾನು ದೂರವಾಣಿಯಲ್ಲಿ ಮಾತನಾಡಿಸುವಾಗ ಕೆಲವೊಮ್ಮೆ, “ಏನು ಮಾಡುತ್ತಿದ್ದೀರಿ?” ಎಂದು ಕೇಳುವುದಿದೆ. ಆಗ ಹೆಚ್ಚಾಗಿ ಬರುತ್ತಿದ್ದ ಉತ್ತರ, “ಸುಮ್ಮನೆ ಕುಳಿತಿದ್ದೇನೆ” ಎಂದಾದರೆ ನನಗೆ ಬೇಸರವಾಗುತ್ತಿತ್ತು. ಸುಮ್ಮನೇ ಕುಳಿತುಕೊಳ್ಳುವುದು ನಮ್ಮ ದೌರ್ಬಲ್ಯವೆಂದು ನಾನು ತಿಳಿಯುತ್ತೇನೆ. ಏನೂ ಮಾಡದೇ ಸುಮ್ಮನಿದ್ದು, ಕಾಲಹರಣ ಮಾಡುವುದು, ಮಾನವ ಸಂಪನ್ಮೂಲದ ಸದ್ಬಳಕೆಯಾಗುವುದಿಲ್ಲ. ವಿರಾಮವೆನ್ನುವುದು ನಿದ್ದೆಯ ಸಮಯವಲ್ಲದೆ, ಹೊರತಾದ ಸಮಯವಲ್ಲ. ಸುಮ್ಮನೇ ಕುಳಿತುಕೊಳ್ಳುವ ವೇಳೆಯಲ್ಲಿ ಹೊಲ-ಗದ್ದೆಗಳಲ್ಲಿ ದುಡಿಯಬಹುದು, ಮಕ್ಕಳಿಗೆ ಪಾಠ ಹೇಳಬಹುದು, ಓದು- ಬರವಣಿಗೆ -ಕಸೂತಿಗಳಂತಹ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳ ಬಹುದು. ಸಮಯವನ್ನು ಬಳಸುವ ತಂತ್ರಗಾರಿಕೆ ನಾವೇ ರೂಪಿಸಬೇಕು. ಮುಪ್ಪಡರಿದವರು, ಕಾಯಿಲೆಯಿಂದ ನರಳುತ್ತಿರುವರು ಸುಮ್ಮನೇ ಕುಳಿತರೆ ತಪ್ಪಲ್ಲ. ಸುಮ್ಮನೇ ಕುಳಿತುಕೊಳ್ಳುವುದು ಯಾವುದೇ ವ್ಯಕ್ತಿಯ ಜಾಯಮಾನವಾಗಬಾರದು. ಹೀಗೆ ನಮ್ಮಲ್ಲಿರುವ ದೌರ್ಬಲ್ಯಗಳನ್ನು ಪಟ್ಟಿ ಮಾಡಿದರೆ ಅವು ಅಗಣಿತ. ಆದರೆ ನಾವು ಕ್ರಿಯಾಶೀಲ ಚಿಂತನೆಯುಳ್ಳವರಾಗಿ, ಸದಾ ಚೇತೋಹಾರಿಗಳಾಗಿ ಬದುಕುವುದೇ ಜೀವನಾನಂದಕ್ಕೆ ಕಾರಣವಾಗುತ್ತದೆ.
ನಮಸ್ಕಾರ ಮಕ್ಕಳೇ...
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
********************************************


Ads on article

Advertise in articles 1

advertising articles 2

Advertise under the article