ಹಕ್ಕಿ ಕಥೆ : ಸಂಚಿಕೆ - 61
Tuesday, August 23, 2022
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ. ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಸುಮಾರು ಆರು ವರ್ಷಗಳ ಹಿಂದೆ ಬೇಸಗೆ ರಜೆಯಲ್ಲಿ ನಾನೊಮ್ಮೆ ಉತ್ತರಕನ್ನಡ ಜಿಲ್ಲೆಯ ಯೆಲ್ಲಾಪುರ ಸಮೀಪದ ಮಂಚಿಕೇರಿ ಎಂಬ ಹಳ್ಳಿಗೆ ಹೋಗಿದ್ದೆ. ಅಲ್ಲೇ ಸಮೀಪದ ಹಾಸಣಗಿ ಎಂಬ ಶಾಲೆಯಲ್ಲಿ ನಮ್ಮ ನಾಟಕದ ಗೆಳೆಯ ಅವಿನಾಶ ಮತ್ತು ಅವನ ಮಿತ್ರರು ಮಕ್ಕಳಿಗಾಗಿ ಬೇಸಗೆ ಶಿಬಿರವನ್ನು ನಡೆಸಿಕೊಡಲು ಹೋಗಿದ್ದರು. ಅದರ ಕೊನೆಯ ದಿನ ಮಕ್ಕಳಿಂದ ಆಲೀಬಾಬಾ ಮತ್ತು ನಲವತ್ತು ಕಳ್ಳರು ನಾಟಕ ಪ್ರದರ್ಶನ ಇದೆ ಎಂದು ತಿಳಿದು ನಾನದನ್ನು ನೋಡಲು ಒಂದು ದಿನ ಮೊದಲೇ ಹೋಗಿದ್ದೆ. ಮಂಚಿಕೇರಿಯಿಂದ ಸುಮಾರು ಎರಡು ಕಿಲೋಮೀಟರ್ ಒಳಗೆ ಸ್ವಲ್ಪ ಕಾಡುದಾರಿಯಲ್ಲಿ ಹೋದರೆ ಹಾಸಣಗಿ ಶಾಲೆ ಸಿಗುತ್ತಿತ್ತು. ಹೋದ ದಿನ ಬೇಸಗೆ ಶಿಬಿರದ ಮಕ್ಕಳ ಜೊತೆ ಸೇರಿ, ಅಲ್ಲಿನ ಸ್ಥಳೀಯ ಆಯೋಜಕರನ್ನು ಪರಿಚಯ ಮಾಡಿಕೊಂಡು ಬಹಳ ಸಂತೋಷದಿಂದ ದಿನ ಸಾಗಿತ್ತು. ರಾತ್ರಿ ಬಹಳ ಸೊಂಪಾಗಿ ನಿದ್ರೆಯೂ ಬಂದಿತ್ತು. ಬೆಳಗ್ಗೆ ಐದೂವರೆಗೆ ಎಚ್ಚರವೂ ಆಗಿತ್ತು.
ಎದ್ದು ಮುಖ ತೊಳೆದು ಸ್ವಲ್ಪ ದೂರ ವಾಕಿಂಗ್ ಹೋಗಿ ಬರೋಣ ಎಂದು ಹೊರಟೆ. ಸ್ವಲ್ಪ ದೂರ ಹೋದಾಗ ಯಾವುದೋ ಹಕ್ಕಿ ಇಂಪಾಗಿ ಹಾಡುವ ಧ್ವನಿ ಕೇಳಿಸಿತು. ಮಾತ್ರವಲ್ಲ ಒಂದಷ್ಟು ದೂರದಲ್ಲಿ ರಸ್ತೆಯ ಪಕ್ಕದ ಗಿಡದ ಕೊಂಬೆಯ ಮೇಲೆ ಉದ್ದ ಬಾಲದ ಹಕ್ಕಿಯೊಂದು ಕುಳಿತಿರುವುದು ಕಾಣಿಸಿತು. ಬೈನಾಕುಲರ್ ಹಿಡಿದು ನೋಡಿದರೆ ನಾನು ಈ ವರೆಗೂ ಕಂಡಿರದ ಹಕ್ಕಿ. ತಕ್ಷಣ ನೋಡಿದಾಗ ಮಡಿವಾಳ (ರಾಬಿನ್) ಹಕ್ಕಿಯಂತೆ ಕಾಣುವ ದೇಹದ ಆಕಾರ, ರಾಬಿನ್ ಹಕ್ಕಿಗಿಂತ ಉದ್ದವಾದ ಬಾಲ, ಬೆನ್ನು, ತಲೆ, ರೆಕ್ಕೆಯ ಭಾಗಗಳೆಲ್ಲ ಕಡುನೀಲಿ ಮಿಶ್ರಿತ ಕಪ್ಪು ಬಣ್ಣ, ಬೆನ್ನಿನ ಕೆಳಭಾಗ ಮತ್ತು ಬಾಲದ ಆರಂಭದಲ್ಲಿ ಶುಭ್ರ ಬಿಳಿ ಬಣ್ಣ, ಹೊಟ್ಟೆಯ ಭಾಗ ಕೇಸರಿ ಮಿಶ್ರಿತ ಕಂದು ಬಣ್ಣ.
ಪುರಾಣದ ಕಥೆಗಳಲ್ಲಿ ಬರುವ ಕೃಷ್ಣನ ಕೊಳಲಿನ ಧ್ವನಿಯಂತೆ ಇಂಪಾಗಿ ಹಾಡುವ ಈ ಹಕ್ಕಿಯ ಧ್ವನಿ ಮತ್ತು ಮೈಮೇಲಿನ ಕಡುನೀಲಿ ಮಿಶ್ರಿತ ಕಪ್ಪು ಬಣ್ಣ ನೋಡಿಯೇ ಈ ಹಕ್ಕಿಯ ಹೆಸರನ್ನು ಶಾಮ ಎಂದು ಇಟ್ಟಿರಬೇಕು. ಇಂಪಾಗಿ ಹಾಡುತ್ತಾ ಪೊದೆಗಳು ಮತ್ತು ನೆಲದ ಮೇಲೆ ಕುಪ್ಪಳಿಸುತ್ತಾ ಹುಳು ಹುಪ್ಪಟೆಗಳನ್ನು ತಿನ್ನುತ್ತಿದ್ದ ಈ ಹಕ್ಕಿಯನ್ನು ಸುಮಾರು ಅರ್ಧಗಂಟೆಯ ಕಾಲ ನೋಡುತ್ತಾ ಫೋಟೋ ತೆಗೆದದ್ದು ಅಚ್ಚಳಿಯದ ನೆನಪು. ರಾಬಿನ್ ಹಕ್ಕಿಯ ಅತ್ಯಂತ ಹತ್ತಿರದ ಸಂಬಂಧಿಯಾದ ಇದು ದಟ್ಟ ಕಾಡಿನಲ್ಲಿ, ಮನುಷ್ಯ ವಾಸದಿಂದ ದೂರ ಬದುಕುವುದೇ ಹೆಚ್ಚು. ಎಪ್ರಿಲ್ ನಿಂದ ಜೂನ್ ತಿಂಗಳ ನಡುವೆ ಪೊದೆಗಳು ಅಥವಾ ಮರದ ಪೊಟರೆಗಳಲ್ಲಿ ಹುಲ್ಲು, ಬಿದಿರಿನ ಎಲೆ ಮತ್ತು ಕಡ್ಡಿಗಳ ಸಹಾಯದಿಂದ ಗೂಡು ಮಾಡಿ, ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ಒಂದು ಕಾಲದಲ್ಲಿ ಇದರ ಇಂಪಾದ ಧ್ವನಿಗೆ ಮಾರು ಹೋಗಿ ಜನರು ಇದನ್ನು ಹಿಡಿದು ಪಂಜರದಲ್ಲಿ ಇಟ್ಟು ಸಾಕುತ್ತಿದ್ದರಂತೆ. ಆದರೆ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಅನ್ವಯ ಇಂದು ಇದನ್ನು ಪಂಜರದಲ್ಲಿ ಕೂಡಿಹಾಕಿ ಸಾಕುವುದು ನಿಷಿದ್ಧ.
ನೀವೂ ಕಾಡಿನ ಅಂಚಿನ ಊರುಗಳಿಗೆ ಪ್ರವಾಸ ಹೋದಾಗ ಈ ಹಕ್ಕಿ ನೋಡಲು ಸಿಗುತ್ತದೆಯೇ ಎಂದು ಗಮನಿಸಿ. ಮುಂದಿನ ವಾರ ಮತ್ತೆ ಸಿಗೋಣ
ಕನ್ನಡದ ಹೆಸರು: ಶಾಮ
ಇಂಗ್ಲೀಷ್ ಹೆಸರು: White-Rumped Shama
ವೈಜ್ಞಾನಿಕ ಹೆಸರು: Copsychus malabaricus
ಛಾಯಾಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************