ಜೀವನ ಸಂಭ್ರಮ : ಸಂಚಿಕೆ - 49
Sunday, August 21, 2022
Edit
ಜೀವನ ಸಂಭ್ರಮ : ಸಂಚಿಕೆ - 49
ಮಕ್ಕಳೇ, ಇಂದಿನ ಲೇಖನದಲ್ಲಿ ಅತೀ ಆಶೆಯಿಂದ ಏನಾಗುತ್ತೆ ನೋಡೋಣ. ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಪ್ರವಚನದಲ್ಲಿ ಹೇಳಿದ ಕಥೆ ಇದು.
ಒಂದು ಕಾಡಿನಲ್ಲಿ ಒಂದು ಆನೆ ಇತ್ತು. ಅದಕ್ಕೆ ತಿನ್ನಲು ಏನೂ ಕೊರತೆ ಇರಲಿಲ್ಲ. ನೀರು ಕುಡಿಯಲು ನದಿ ಇತ್ತು. ತಿರುಗಾಡಲು ವಿಶಾಲ ಜಾಗ ಇತ್ತು. ರಾಜನಂತೆ ತಿಂದು ತಿರುಗಾಡುತ್ತಿತ್ತು. ಒಮ್ಮೆ ಇದರ ಸಮೀಪ ಹೊಸದಾಗಿ ಹುಲ್ಲು ಹುಲುಸಾಗಿ ಬೆಳೆದಿತ್ತು. ಬೆಲ್ಲದ ನೀರು ಹಾಕಲಾಗಿತ್ತು. ಇದನ್ನು ನೋಡಿ ಆನೆಗೆ ತಿನ್ನುವ ಆಶೆಯಾಯಿತು. ಆನೆ ಇದ್ದ ಜಾಗದಲ್ಲಿ ಮರದ ಮೇಲೆ, ಒಂದು ಗಿಳಿಯಿತ್ತು. ಇದು ಆನೆಯ ಆಶೆ ಕಂಡು ಹೇಳಿತು.... "ನೋಡು, ನಿನಗೆ ತಿನ್ನಲು, ಕುಡಿಯಲು ಮತ್ತು ಓಡಾಡಲು ಕೊರತೆ ಇಲ್ಲ. ಆ ಹೊಸದಾಗಿ ಬೆಳೆದಿರುವ ಹುಲ್ಲಿನ ಕಡೆ ಹೋಗಬೇಡ. ಯಾವಾಗಲೂ ಇಲ್ಲದ್ದು ಈಗ ಇದೆ ಅಂದರೆ ಏನೋ ಮೋಸ ಇದೆ. ಕಂಡ ಕಡೆ ಮನಸ್ಸು ಹರಿಸಬೇಡ" ಎಂದಿತು. ಆಗ ಆನೆ..... "ನೀನು ದಡ್ಡ. ಈ ತರದ ಸೊಗಸಾದ ಹುಲ್ಲನ್ನು ಬಿಡುವುದುಂಟೆ, ಇದು ದೇವರು ನನಗಾಗಿ ನೀಡಿರುವುದು" ಎಂದು ಹೇಳಿ, ಹುಲ್ಲನ್ನು ತಿನ್ನಲು ಹೋಯಿತು. ಆನೆಯು ಹುಲ್ಲನ್ನು ತಿನ್ನುತ್ತಾ ಇತ್ತು. ಆನೆಗೆ ಬಹಳ ಆನಂದವಾಗಿ ತಿನ್ನುತ್ತ- ತಿನ್ನುತ್ತ ಮುಂದೆ ಹೆಜ್ಜೆ ಹಾಕಿತು. ಮುಂದೆ ಗುಂಡಿ ತೋಡಿ, ಅದರ ಮೇಲೆ ಚಪ್ಪರ ಹಾಕಿ, ಚಪ್ಪರದ ಮೇಲೆ ಮಣ್ಣನ್ನು ಹರಡಿ, ಉಲ್ಲನ್ನು ಬೆಳೆಸಲಾಗಿದೆ. ಅದಕ್ಕೆ ಚೆನ್ನಾಗಿ ಗೊಬ್ಬರ ಹಾಕಿದ್ದರಿಂದ ಹುಲ್ಲು ಸೊಗಸಾಗಿ ಬೆಳೆದಿತ್ತು. ಅದರ ಮೇಲೆ ಬೆಲ್ಲದ ನೀರನ್ನು ಹಾಕಲಾಗಿತ್ತು. ಆನೆಯು ಹುಲ್ಲನ್ನು ತಿನ್ನುತ್ತಾ ಕಾಲನ್ನು ಇಡುತ್ತಿದ್ದಂತೆ ಗುಂಡಿಗೆ ಬಿದ್ದಿತ್ತು. ಆನೆ ಹಿಡಿಯಲು ಮಾಡಿದ ಖೆಡ್ಡ ಇದಾಗಿತ್ತು. ಗುಂಡಿಯಿಂದ ಮೇಲೆ ಬರಲು ಆನೆಗೆ ಸಾಧ್ಯವಾಗಲಿಲ್ಲ. ಅದು ಸ್ವಾತಂತ್ರ ಕಳೆದುಕೊಂಡಿತ್ತು. ಅದಕ್ಕೆ ತರಬೇತಿಯನ್ನು ಮಾನವ ನೀಡಿದ. ತರಬೇತಿ ಪಡೆದ ಮೇಲೆ ಮಾನವನ ಗುಲಾಮನಾಗಿ , ಮಾನವ ಹೇಳಿದಂತೆ ಜೀವನವೆಲ್ಲ ಕಳೆಯುತ್ತಿತ್ತು.
ಅದೇ ಸಮಯಕ್ಕೆ ಇನ್ನೊಂದು ಘಟನೆ ನಡೆಯಿತು. ಮರದ ಮೇಲಿದ್ದ ಗಿಳಿಯು ತನ್ನ ಆಹಾರಕ್ಕಾಗಿ ಹೊರಗಡೆ ಹೋಗಿತ್ತು. ಈ ಆನೆ ಖೆಡ್ಡಕ್ಕೆ ಬೀಳಿಸಿದ್ದ ಮಾನವನೇ ಒಂದು ಪಂಜರವನ್ನು ಗಿಳಿಯು ವಾಸವಿದ್ದ ಮರದಲ್ಲಿ ನೇತು ಹಾಕಿದ್ದ. ಮಾವಿನ ಹಣ್ಣನ್ನು ಇಟ್ಟಿದ್ದ. ಪಂಜರದ ಬಾಗಿಲು ತೆರೆದಿತ್ತು, ಬಾಗಿಲು ಹೇಗಿತ್ತು ಎಂದರೆ ಪಕ್ಷಿ ಪಂಜರದ ಒಳಗೆ ಹೋಗುತ್ತಲೇ ಬಾಗಿಲು ಮುಚ್ಚಿಕೊಳ್ಳುವಂತೆ ಇತ್ತು. ಗಿಳಿ ಎಲ್ಲಾ ಕಡೆ ಸುತ್ತಾಡಿ ಮರಕ್ಕೆ ಬಂದಿತ್ತು. ಮರದ ಮೇಲೆ ಕೂತು ಪಂಜರ ಮತ್ತು ಅದರಲ್ಲಿರುವ ಹಣ್ಣನ್ನು ನೋಡಿತು. ಆಗ ಮಾವಿನ ಹಣ್ಣಿನ ಕಾಲವಲ್ಲ. ಹಾಗಾಗಿ ಈ ಹಣ್ಣು ನೋಡುತ್ತಲೇ ಆ ಹಣ್ಣನ್ನು ತಿಂದು ಆನಂದ ಪಡಬೇಕೆಂದು ಗಿಳಿಯ ಮನಸ್ಸಿಗೆ ಅನಿಸಿತು. ಅದೇ ಮರದ ಮೇಲೆ ಕುಳಿತ್ತಿದ್ದ ಕಾಗೆ , "ನೀನೇ ಆನೆಗೆ ಬುದ್ಧಿ ಹೇಳಿದ್ದಿ, ಮತ್ತೆ ನೀನು ಅದೇ ತಪ್ಪು ಮಾಡಬೇಡ. ನಾವು ದಿನಾ ಮಾನವರ ಜೊತೆಗಿದ್ದು , ಮಾನವರ ಬುದ್ದಿ ಗೊತ್ತಿದೆ. ಅದಕ್ಕೆ ನಾವು ಅವರ ಜೊತೆಯಿದ್ದರೂ ಅವರ ಕೈಗೆ ಸಿಕ್ಕಿಲ್ಲ. ಅವರು ಆಶೆ ತೋರಿಸಿ ಮೋಸ ಮಾಡುತ್ತಾರೆ" ಎಂದು ಹೇಳಿತು. ಮಾವಿನ ಹಣ್ಣನ್ನು ನೋಡಿದ ಗಿಳಿಗೆ, ಕಾಗೆ ಮಾತು ಹಿಡಿಸಲಿಲ್ಲ. "ಇದು ಬೇರೆ ರಾಜ್ಯದಿಂದ ಬಂದಿದೆ. ಇದನ್ನು ತಿನ್ನದಿದ್ದರೆ ನನ್ನ ಆನಂದವೇ ಹೋಗುತ್ತದೆ. ಹಾಗಾಗಿ ನೀನು ನನಗೆ ಬುದ್ಧಿ ಹೇಳಬೇಡ" ಎಂದು ಗಿಳಿ ಹೇಳಿತು. ಕಾಗೆ "ಒಳಗೆ ಹೋಗು" ಎಂದು ಹೇಳಿ ಹಾರಿ ಹೋಯಿತು. ಗಿಳಿ ಪಂಜರದ ಒಳಗೆ ಹಣ್ಣು ತಿನ್ನಲು ಹೋಯಿತು. ಪಂಜರದ ಒಳಗೆ ಹೋದ ತಕ್ಷಣ ಬಾಗಿಲು ಮುಚ್ಚಿತು. ಆಗ ಗಿಳಿಗೆ ಅರಿವಾಯಿತು. ಆ ಪಂಜರವನ್ನು ಮನುಷ್ಯ ಆನೆ ಹತ್ತಿರ ತಂದು ಹಾಕಿದ. ಗಿಳಿ ಆನೆಯ ನೋಡಿ...... "ನೀನು ತಿಳಿಯದೆ ಆಶೆಗೆ ಬಿದ್ದೆ. ನಾನು ತಿಳಿದುಕೊಂಡೆ ಈ ಆಶೆಗೆ ಬಿದ್ದು ನಮ್ಮ ಸ್ವಾತಂತ್ರ್ಯ ಹೋಯಿತು". ಎಂದಿತು.
ಮಕ್ಕಳೇ, ನಮ್ಮಲ್ಲಿ ಕೆಲವರು ತಿಳಿಯದೆ ಆಸೆಗೆ ಬಿದ್ದು ನರಳಾಡಿದರೆ, ಇನ್ನು ಕೆಲವರು ತಿಳಿದು ಆಸೆಗೆ ಬಿದ್ದು ನರಳುತ್ತಾರೆ. ಆಸೆ ಬಂಧನಕ್ಕೆ ಒಳಪಡಿಸಿ ಸ್ವಾತಂತ್ರ್ಯ ಇಲ್ಲದಂತೆ ಮಾಡಿ ಕೊಲ್ಲುತ್ತದೆ. ಕೆಲವರು ತಿಳಿಯದೆ ಚಟಕ್ಕೆ ಬಿದ್ದರೆ ಮತ್ತೆ ಕೆಲವರು ತಿಳಿದು ಚಟಕ್ಕೆ ಬೀಳುತ್ತಾರೆ. ಅದರ ದಾಸರಾಗಿ ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ , ಅಲ್ಲವೆ ಮಕ್ಕಳೆ.....
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************