-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093

               ಬಲಗಳು ಮನುಷ್ಯನನ್ನು ರಚನಾತ್ಮಕವಾಗಿ ರೂಪಿಸಿದರೆ ದೌರ್ಬಲ್ಯಗಳು ಆತನ ಬದುಕನ್ನು ವಿರೂಪಗೊಳಿಸುತ್ತವೆ. ದುರ್ಬಲ ಎಂದೊಡನೆಯೇ ಯಾವುದರಲ್ಲಿ ದುರ್ಬಲ ಎಂದು ಯೋಚನೆ ಮಾಡಬೇಕು. ದೇಹಬಲ, ಹಣದ ಬಲ, ಸ್ನೇಹಿತರ ಬಲ, ಅಧಿಕಾರದ ಬಲ, ರೂಪದ ಬಲ ಇಂತಹ ಯಾವುದೇ ಬಲಗಳಿದ್ದರೂ ಒಂದೇ ಒಂದು ದೌರ್ಬಲ್ಯವಿದ್ದರೂ ಮನುಷ್ಯನು ಪ್ರಪಾತಕ್ಕೆ ತಳ್ಳಲ್ಪಡುತ್ತಾನೆ. ಸಾಮಾನ್ಯವಾಗಿ ನಮ್ಮೆಲ್ಲ ಬಲಗಳನ್ನೂ ದುರ್ಬಲ ಗೊಳಿಸುವುದರಲ್ಲಿ ನಿಸ್ಸೀಮ ಎನಿಸುವ ನಮ್ಮಲ್ಲಿರುವ ಕೆಲವು ದೌರ್ಬಲ್ಯಗಳನ್ನು ಅವಲೋಕನ ಮಾಡೋಣ..... 
     ನಾವು ಮುಂದೂಡುವುದರಲ್ಲಿ ನಿಸ್ಸೀಮರು. ಈಗ ಮಾಡಬಹುದಾದ ಕೆಲಸವನ್ನು ಮತ್ತೆ ಮಾಡಿದರಾಯಿತು ಎಂದೋ, ನಾಳೆ ಮಾಡೋಣ ಎಂದೋ ನಿರ್ಧರಿಸುವುದೇ ಕೆಲಸದ ಮುಂದೂಡಿಕೆ. ಈ ಮುಂದೂಡಿಕೆಯನ್ನು ಬಹಳಷ್ಟು ಕ್ಷೇತ್ರಗಳಲ್ಲಿ ಮಾಡುತ್ತೇವೆ. ಸಂಕಟದಿಂದ ನರಳುವಂತೆ ಮಾಡುವ ಕಾಯಿಲೆಗೆ ವೈದ್ಯರ ಸಲಹೆ ಬಹಳ ಬೇಗನೆ ಪಡೆಯಬೇಕು. ನಾಳೆ.... ನಾಳೆ ... ಎಂದು ಮುಂದೂಡುವುದು ಸರಿಯೇ? ಇದರಿಂದ ರೋಗ ಉಲ್ಬಣವಾಗಿ ಅಪಾಯವೇ ಇದಿರಾಗುವುದು. ದಾನವನ್ನು ಇದ್ದಾಗ ನೀಡಬೇಕಂತೆ. ನಾಳೆ ಮಾಡಿದರಾಯಿತು ಎಂದರೆ ನಾಳೆಗೆ ನಮ್ಮ ಸಂಪತ್ತು ನಶಿಸಿದರೆ...? ದಾನ ನೀಡುವುದು ನಿಂತಂತೆಯಲ್ಲವೇ? ಸಾಲ ಮಾಡಿದ್ದೇವೆ. ಈ ದಿನ ನಮ್ಮಲ್ಲಿ ಹಣ ಇದೆ. ಸಾಲ ಮರುಪಾವತಿ ಮಾಡದೆ ಮುಂದೆ ನೀಡಿದರಾಯಿತು ಎಂದು ಕುಳಿತರೆ, ಆ ಮೊಬಲಗು ಕಳ್ಳ ಕಾಕರ ಬಾಯಿಗೋ, ಪ್ರಕೃತಿ ವಿಕೋಪಕ್ಕೋ ಬಲಿಯಾದರೆ...? ಅದೇ ರೀತಿಯಲ್ಲಿ ಬ್ಯಾಂಕಿನಲ್ಲಿ ಠೇವಣಿ ಮಾಡುವುದನ್ನೂ ಮುಂದೂಡಿದರೆ ನಮಗೆ ನಷ್ಟವಲ್ಲದೆ ಲಾಭವಾಗದು.     
       ಮುಂದೂಡುವುದರಲ್ಲಿ ಬಹಳಷ್ಟು ಮಂದಿ ನಿಸ್ಸೀಮರಿರುತ್ತಾರೆ. ಪದ್ಯವನ್ನು ನಾಳೆ ಕಂಠ ಪಾಠ ಹೇಳಬೇಕು. ಈಗ ಸಮಯವಿದ್ದರೂ ಬೆಳಗ್ಗೆ ಬೇಗನೆದ್ದು ಓದಿ ಕಂಠ ಪಾಠ ಮಾಡಿದರಾಯಿತು ಎಂದು ಮುಂದೂಡಬಾರದು. ಬೆಳಗ್ಗೆ ವಿದ್ಯುತ್ ಇಲ್ಲದೆ ಬೆಳಕಿನ ಸಮಸ್ಯೆಯಾಗಬಹುದು, ನಿದ್ದೆ ಸರಿಯಾಗದೆ ತಲೆ ನೋವು ಬರಬಹುದು. ರಾತ್ರಿ ವಾಂತಿ ಬೇಧಿ ಆಗಬಹುದು. ಬೆಳಗ್ಗೆ ಬೇಗನೆ ಎಚ್ಚರವಾಗದೇ ಇರಬಹುದು. ಬೆಳಗಾದೊಡನೆ ಯಾರಿಗಾದರೂ ಮನೆಯಲ್ಲಿ ಸಮಸ್ಯೆಗಳೆದುರಾಗಿ ಆವರು ಮಾಡಬೇಕಾದ ಕೆಲಸವನ್ನು ವಿದ್ಯಾರ್ಥಿಯೇ ಮಾಡಬೇಕಾಗಿ ಬರಬಹುದು. ಸಮಯವಿದ್ದಾಗ ತೋರಿದ ಅಸಡ್ಡೆ ಅಥವಾ ಆಲಸ್ಯದಿಂದಾಗಿ ತರಗತಿಯಲ್ಲಿ ಸಹಪಾಠಿಗಳ ಮುಂದೆ ಮುಜುಗರಕ್ಕೊಳಗಾಗುವ ಅಥವಾ ಕಂಠಪಾಠ ಮಾಡದೆ ತರಗತಿಗೆ ಬಂದ ತಪ್ಪಿಗೆ ಶಿಕ್ಷಕರು ಕಿರಿಯದೋ ಹಿರಿಯದೋ ಶಿಕ್ಷೆಯನ್ನು ಕೊಟ್ಟರೆ...? ಆದುದರಿಂದ ಯಾವುದೇ ಕೆಲಸವನ್ನು ಮುಂದೂಡುವ ಪ್ರವೃತ್ತಿ ನಮ್ಮಲ್ಲಿರ ಬಾರದು. ಎಲ್ಲದಕ್ಕೂ ಸಕಾಲ ‘ಈಗ’ ಎಂದು ನಿರ್ಧರಿಸಬೇಕು. ಗಣಪತಿಗೆ ನಾಳೆ ಮದುವೆ ಎಂದು ಈಗಲೂ ಹೇಳುತ್ತೇವೆ. ಪುರಾಣದ ಗಣಪತಿಗೆ ಇನ್ನೂ ನಾಳೆಯನ್ನು ದಾಟಲಾಗದೆ ಮದುವೆಯೇ ಆಗಲಿಲ್ಲ ಎಂಬ ಲೇವಡಿಯಿದೆ. ಗಣಪತಿಗೆ ಮದುವೆ ಆಗಿದೆಯೋ ಇಲ್ಲವೋ ಎಂಬುದು ಬೇರೆ ವಿಚಾರ. ಆದರೆ ಯಾವುದೇ ಕೆಲಸಗಳನ್ನು ಮುಂದೂಡುವುದರಿಂದ ಆ ಕೆಲಸವನ್ನು ಮಾಡಲಾಗದೆ ಅಪಯಶಸ್ಸು ಆಗಬಹುದು. (ಮುದುವರಿಯುವುದು)
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
********************************************


Ads on article

Advertise in articles 1

advertising articles 2

Advertise under the article