-->
ಹಕ್ಕಿ ಕಥೆ : ಸಂಚಿಕೆ - 60

ಹಕ್ಕಿ ಕಥೆ : ಸಂಚಿಕೆ - 60

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ

              
      ಮಕ್ಕಳೇ ನಮಸ್ತೇ…... ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಒಂದು ದಿನ ಮಧ್ಯಾಹ್ನ ನನ್ನ ಶಾಲೆಯ ಲೈಬ್ರೆರಿ ಕೊಠಡಿಯಲ್ಲಿ ಕುಳಿತು ದಿನಪತ್ರಿಕೆ ಓದುತ್ತಿದ್ದೆ. ಶಾಲೆಯ ಅಡುಗೆ ಕೋಣೆ ಅಲ್ಲೇ ಪಕ್ಕದಲ್ಲಿತ್ತು. ಅಡುಗೆ ಸಿಬ್ಬಂದಿ ಅಡುಗೆ ಕೆಲಸವನ್ನೆಲ್ಲ ಮುಗಿಸಿ, ಪಾತ್ರೆಗಳನ್ನು ತೊಳೆದಿಟ್ಟು ಮನೆಗೆ ಹೋಗಿದ್ದರು. ಪಾತ್ರೆ ತೊಳೆದ ನೀರು ಅಲ್ಲೇ ಒಂದು ಗುಂಡಿಯಲ್ಲಿ ಇಂಗುವ ವ್ಯವಸ್ಥೆ ಮಾಡಿದ್ದೆವು. ವಾಚನಾಲಯದಲ್ಲಿ ಕುಳಿತು ಓದುತ್ತಿದ್ದರೆ ಕಿಟಕಿಯ ಆ ಕಡೆಗೆ ಈ ಇಂಗು ಗುಂಡಿ ಕಾಣುತ್ತಿತ್ತು. ಮಧ್ಯಾಹ್ನ ಮಕ್ಕಳೆಲ್ಲ ಪಾಠ ಕೇಳುತ್ತಾ ಮೌನವಾಗಿದ್ದಾಗ ಇಡೀ ಶಾಲೆಯಲ್ಲಿ ನಿಶ್ಶಬ್ದ ವಾತಾವರಣ. ಸಣ್ಣದೊಂದು ಹಕ್ಕಿ ಓಡಾಡಿದರೂ ತಿಳಿಯುವಷ್ಟು ಮೌನ. ದಿನಪತ್ರಿಕೆ ಓದುತ್ತಾ ಆಗಾಗ ಹೊರಗಡೆ ಕಣ್ಣಾಡಿಸುವುದು ನನ್ನ ಅಭ್ಯಾಸ.
      ಅಷ್ಟು ಹೊತ್ತಿಗೆ ಗಿಡಗಳ ಎಡೆಯಿಂದ ಯಾವುದೋ ಪುಟ್ಟ ಹಕ್ಕಿ ಓಡಾಡಿದ ಶಬ್ದ ಕೇಳಿತು. ಸಹಜವಾಗಿ ನನ್ನ ಗಮನ ಆಕಡೆಗೆ ಹೋಯಿತು. ಪೊದೆಗಳ ನಡುವೆ ಹಸಿರು ಮಿಶ್ರಿತ ಹಳದಿಬಣ್ಣದ ಹಕ್ಕಿಗಳು ಓಡಾಡುವುದು ಕಾಣಿಸಿತು. ನಿಧಾನವಾಗಿ ಅವುಗಳು ಅಲ್ಲೇ ಇದ್ದ ಗಿಡಗಳಲ್ಲಿ ಕುಪ್ಪಳಿಸುತ್ತಾ ಕೊಂಬೆ, ಎಲೆಯ ಸಂದಿಗೊಂದಿಗಳಲ್ಲಿ ಏನನ್ನೋ ಹುಡುಕುತ್ತಿದ್ದವು. ಪುಟಾಣಿ ಕೀಟಗಳು ಸಿಕ್ಕರೆ ಹಿಡಿದು ತಿನ್ನುತ್ತಿದ್ದವು. ಪುಟ್ಟ ಕಾಡುಹೂವಿನ ಸಸ್ಯಗಳಿಗೆ ಹೋಗಿ ಹೂವಿನ ಮಕರಂದ ಹೀರುತ್ತಿದ್ದವು. ಹೀಗೇ ಆಟವಾಡುತ್ತಾ ನೀರಿನ ಗುಂಡಿಗೆ ಬಂದು ನೀರುಕುಡಿದು ನೀರಿನಲ್ಲಿ ಮುಳುಗಿ ಸ್ನಾನಮಾಡಿ ಬಿಸಿಲಿನ ಧಗೆ ಆರಿಸಿಕೊಳ್ಳುತ್ತಿದ್ದವು.
       ಈ ಪುಟಾಣಿ ಹಳದಿ ಬಣ್ಣದ ಹಕ್ಕಿಗಳು ಓಡಾಡುತ್ತಿದ್ದರೆ ಸೇವಂತಿಗೆ ಹೂವು ಓಡಾಡುವಂತೆ ಕಾಣುತ್ತಿತ್ತು. ಸುಮಾರು ಗುಬ್ಬಚ್ಚಿ ಗಾತ್ರದ ಈ ಹಕ್ಕಿಗಳದ್ದು ಹಸಿರುಮಿಶ್ರಿತ ಹಳದಿ ಬಣ್ಣದ ದೇಹ, ಚೌಕಾಕಾರದ ಬಾಲದ ತುದಿ, ಸಮೀಪದಿಂದ ನೋಡಿದರೆ ಮಾತ್ರ ಗಮನಕ್ಕೆ ಬರುವ ಕಣ್ಣಿನ ಸುತ್ತಲಿನ ವಿಶೇಷವಾದ ರಚನೆ. ಈ ಹಕ್ಕಿಯ ಕಣ್ಣಿನ ಸುತ್ತ ಬಿಳೀ ಬಣ್ಣದ ಉಂಗುರದಾಕಾರದ ರಚನೆ. ಬಿಳೀ ಫ್ರೇಮಿನ ಕನ್ನಡಕ ಹಾಕಿದೆಯೋ ಎಂಬಂತೆ ಕಾಣುವ ಈ ರಚನೆಯಿಂದಾಗಿಯೇ ಈ ಹಕ್ಕಿಗೆ ಬೆಳ್ಗಣ್ಣ ಎಂಬ ಹೆಸರು ಬಂದಿದೆ. ಕೀಟಗಳು ಮತ್ತು ಹೂವಿನ ಮಕರಂದ ಇದರ ಮುಖ್ಯ ಆಹಾರ. ಕಾಡಂಚಿನ ಪ್ರದೇಶಗಳು, ಉದ್ಯಾನವನಗಳಲ್ಲಿ ಗುಂಪುಗುಂಪಾಗಿ ಹಾರುತ್ತಾ ಕುಪ್ಪಳಿಸುತ್ತಾ ಓಡಾಡುತ್ತವೆ. ಮೇ ತಿಂಗಳಿನಿಂದ ಜುಲೈ ಮಧ್ಯೆ ಪುಟ್ಟ ಬಟ್ಟಲಿನಾಕಾರದ ಗೂಡನ್ನು ಮಾಡಿ, ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ಗಂಡು ಮತ್ತು ಹೆಣ್ಣು ಹಕ್ಕಿ ನೋಡಲು ಒಂದೇ ರೀತಿ ಇರುತ್ತವೆ. ಈ ಪುಟಾಣಿ ಹಕ್ಕಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ನಿಮ್ಮ ಆಸುಪಾಸಿನಲ್ಲೂ ಈ ಪುಟಾಣಿ ಹಕ್ಕಿಗಳು ಇರಬಹುದು. 
ಕನ್ನಡದ ಹೆಸರು: ಬೆಳ್ಗಣ್ಣ( ಬಿಳಿ ಕಣ್ಣ)
ಇಂಗ್ಲೀಷ್‌ ಹೆಸರು: Oriental White-eye
ವೈಜ್ಙಾನಿಕ ಹೆಸರು: Zosterops palpebrosus
ಛಾಯಾಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************

Ads on article

Advertise in articles 1

advertising articles 2

Advertise under the article