-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093


              
             ಬಲ ಎಂದೊಡನೆ ನೆನಪಿಗೆ ಬರುವುದು ಶಕ್ತಿ. ಭೀಮ ಬಲ ಅಥವಾ ಹನುಮನ ಶಕ್ತಿಯ ಬಗ್ಗೆ ಕೇಳದವರಿಲ್ಲ. ವಿದೇಶಿಗಳಾದ ಮೊಘಲರು, ಫ್ರೆಂಚರು, ಡಚ್ಚರು, ಬ್ರಿಟಿಷರು ಮೊದಲಾದವರು ಭಾರತವನ್ನು ಅವರಲ್ಲಿರುವ ಬಲದಿಂದಲೇ ಆಳಿದರೆಂಬುದು ಇತಿಹಾಸ. ತೋಳ ಬಲ, ಮದ್ದು ಗುಂಡುಗಳ ಬಲ, ಸೇನಾಬಲ, ಹಣದ ಬಲ ಹೀಗೆ ನಾನಾ ರೀತಿಯಲ್ಲಿ ಬಲವನ್ನು ವಿವರಿಸುತ್ತೇವೆ. ಬಲವಿಹೀನನನ್ನು ದುರ್ಬಲ ಎಂಬುದಾಗಿಯೇ ವ್ಯಾಖ್ಯಾನಿಸುವರು. ಆದರೆ ನಾನು ಇಲ್ಲಿ ವಿವರಿಸಲು ಹೊರಟಿರುವ ಬಲ, “ಆತ್ಮ ಬಲ”. ಎಲ್ಲ ಬಲಗಳ ತಾಯಿ ಬೇರು, ಆತ್ಮ ಬಲ. 
ಆತ್ಮಬಲವುಳ್ಳವರ ಕಾರ್ಯವೈಖರಿಯೇ ವಿಶಿಷ್ಟ. ಅವರು ನೇರ, ದಿಟ್ಟ ಮತ್ತು ನಿರಂತರವಾಗಿ ಕರ್ತವ್ಯಶೀಲರಾಗಿರುತ್ತಾರೆ. ಆತ್ಮಬಲವಿರುವವರ ಮುಂದೆ ದೌರ್ಬಲ್ಯಗಳು ಸೋಲುತ್ತವೆ. ಆತ್ಮ ಬಲವಿರದವರಲ್ಲಿರುವ ಇತರ ಎಲ್ಲ ಬಲಗಳೂ ನಿಷ್ಪ್ರಯೋಜಕವಾಗುತ್ತವೆ. ಛಲ ಮತ್ತು ಆತ್ಮ ಬಲಗಳು ಜೊತೆಗೂಡಿದರೆ ಅಸಾಧ್ಯವಾದುದೂ ಸಾಧ್ಯವಾಗುತ್ತದೆ, ನಾವು ಸತ್ಯವಾನ ಮತ್ತು ಸಾವಿತ್ರಿಯ ಕತೆಯನ್ನು ಪುರಾಣ ಪಠ್ಯವಾಗಿ ಓದಿದ್ದೇವೆ. ಸತ್ಯವಾನನ ಹೆಂಡತಿ ಸಾವಿತ್ರಿ. ಅಲ್ಪಾಯುಷಿಯಾದರೂ ಆತನನ್ನು ಸಾವಿತ್ರಿ ವರಿಸಿದವಳು. ತನ್ನ ಸತ್ಯ, ಪ್ರೀತಿ ಮತ್ತು ಭಕ್ತಿಯ ಬಲದಿಂದ ತನ್ನ ಗಂಡನನ್ನು ದೀರ್ಘಾಯುಷಿಯನ್ನಾಗಿ ಮಾಡಬಲ್ಲೆನೆಂಬ ಆತ್ಮ ಬಲ ಸಾವಿತ್ರಿಗಿತ್ತು. ಆದರೆ ವಿಧಿ ಬಿಡಲಿಲ್ಲ. ಸತ್ಯವಾನನ ಕತ್ತಿಗೆ ಪಾಶ ಬಿತ್ತು; ಅವನು ಉಳಿಯಲಿಲ್ಲ. ಸಾವಿತ್ರಿಯು ಧೃತಿಗೆಡಲಿಲ್ಲ. ಸತ್ಯವಾನನ ಪ್ರಾಣದ ಜೊತೆಗೆ ಯಮಲೋಕಕ್ಕೂ ಹೋದಳು. ತನ್ನ ಗಂಡನನ್ನು ಮರಳಿಸದಿದ್ದರೆ ತಾನು ಹೋಗೆನು ಎಂದು ಹಠ ಮಾಡಿದಳು. ಯಮನು ನೀಡಿದ ವರಗಳನ್ನು ಬಳಸಿ ಅತ್ತೆ ಮಾವಂದಿರಿಗಿದ್ದ ದೈಹಿಕ ನ್ಯೂನತೆಗಳನ್ನು ಗುಣ ಪಡಿಸಿದಳು. ಕೊನೆಯ ವರವಾಗಿ ತಾನು ತಾಯಿಯಾಗುವಂತೆ ಅನುಗ್ರಹಿಸು ಎಂದಾಗ ಯಮ ಹಾಗೇಯೇ ಆಗಲಿ ಎಂದನು. ಸಾವಿತ್ರಿ ತಾಯಿಯಾಗ ಬೇಕಾದರೆ ಸತ್ಯವಾನನನ್ನು ಯಮನು ಬದುಕಿಸಲೇ ಬೇಕಾದ ಸಂದಿಗ್ಧತೆಗೆ ಒಳಗಾದನು. ಸಾವಿತ್ರಿಯ ಆತ್ಮಬಲ ಯಮನ ಸೋಲಿಗೆ ಕಾರಣವಾಗುತ್ತದೆ.
ಸತ್ಯವಾನ ಸಾವಿತ್ರಿಯ ಬಗೆಗೆ ನಾವು ಓದಿರುವುದು ಕಥೆಯಿರಬಹುದು. ಎಲ್ಲ ಕಥೆಗಳೂ ಮಾನವನ ಬದುಕಿಗೆ ಬೆಳಕನ್ನು ಕೊಡುವ ದಾರಿದೀಪಗಳು. ನಮ್ಮ ಬದುಕನ್ನು ಸುಂದರಗೊಳಿಸಲು, ಮಧುರಗೊಳಿಸಲು ನಮ್ಮಲ್ಲಿ ಆತ್ಮ ಬಲವು ಅಗಾಧ ಪ್ರಮಾಣದಲ್ಲಿರಬೇಕು. ಸ್ವಾಮೀ ವಿವೇಕಾನಂದರು ಸರ್ವ ಧರ್ಮ ಸಭೆಯಲ್ಲಿ ಮಾತನಾಡಲು ಅಮೇರಿಕಾದ ಚಿಕಾಗೋ ಎಂಬಲ್ಲಿಗೆ ಹೋದರೆಂದು ಓದಿರುವಿರಿ. ಸಂತರ ಉಡುಗೆ ತೊಡುಗೆಯಲ್ಲಿದ್ದ ವಿವೇಕಾನಂದರು ಅಮೇರಿಕನರಿಗೆ ಬೈರಾಗಿಯಂತೆ ಕಂಡರು. ಎಲ್ಲರೂ ಅವರನ್ನು ಗೇಲಿ ಮಾಡಿದರು, ಹಂಗಿಸಿದರು. ಆದರೆ ವಿವೇಕಾನಂದರು ಕುಗ್ಗಲಿಲ್ಲ. ಅವರ ಆತ್ಮ ಬಲವು ಸರ್ವಧರ್ಮ ಸಭೆಯಲ್ಲಿ ಹಂಗಿಸಿದವರ, ಗೇಲಿ ಮಾಡಿದವರ ಕೈಗಳಿಂದಲೇ ಚಪ್ಪಾಳೆಗಳನ್ನು ಹೊಡೆಯಿಸಿತು. 
ಓದುವ ಕಾಲದಲ್ಲಿ ಅಂಬೇಡ್ಕರ್ ಪಟ್ಟ ಪಾಡು, ಅನುಭವಿಸಿದ ಯಾತನೆ, ಎದುರಿಸಿದ ಕಷ್ಟಗಳೆಲ್ಲವೂ ನಮ್ಮ ಅರಿವಿನಲ್ಲಿದೆ. ಅವರಷ್ಟು ನೋವುಂಡವರು ಇನ್ನೊಬ್ಬರಿಲ್ಲ. ಆದರೆ ಅವರ ಆತ್ಮ ಬಲ ಅವರನ್ನು ಕುಗ್ಗಿಸಲಿಲ್ಲ. ಸ್ವತಂತ್ರ ಭಾರತದ ಸಂವಿಧಾನ ಶಿಲ್ಪಿಯಾಗಿ ಅಂಬೇಡ್ಕರರು ಬೆಳಗಲು ಅವರ ಆತ್ಮ ಬಲವೇ ಕಾರಣ
ಮಕ್ಕಳೇ, ನೀವೂ ಎದೆಗುಂದಬೇಡಿ. ನೀವು ಇರಿಸುವ ಹೆಜ್ಜೆ ಪುಟ್ಟದಿರಬಹುದು. ಹಿಮಾಲಯ ಏರಿದವರೂ, ಚಂದ್ರನಲ್ಲಿ ಇಳಿದವರೂ ಪುಟ್ಟ ಹೆಜ್ಜೆಯುಳ್ಳವರೇ ಆಗಿದ್ದಾರೆ. ಆದರೆ ಅವರ ಆತ್ಮ ಬಲ ಅವರನ್ನು ಉನ್ನತಿಗೇರಿಸಿದೆ. ಆತ್ಮ ಬಲವನ್ನು ದೃಢಗೊಳಿಸುವುದರಿಂದಲೇ ನಿಜವಾದ ಜೀವನ ಸುಖವನ್ನು ಅನುಭವಿಸಲು ಸಾಧ್ಯ ಎಂಬುದನ್ನು ಅರಿಯಿರಿ. ನಮಸ್ಕಾರ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
********************************************


Ads on article

Advertise in articles 1

advertising articles 2

Advertise under the article