-->
ನಾಗ ಮತ್ತು ವೃಕ್ಷ ಅವಳಿ ಚೇತನ - ವಿಶೇಷ ಲೇಖನ

ನಾಗ ಮತ್ತು ವೃಕ್ಷ ಅವಳಿ ಚೇತನ - ವಿಶೇಷ ಲೇಖನ

     ನಾಗರ ಪಂಚಮಿಯ ವಿಶೇಷ ದಿನದಂದು ಉರಗತಜ್ಞ ಗುರುರಾಜ ಸನಿಲ್ ಇವರು ಮಕ್ಕಳ ಜಗಲಿಗಾಗಿ ಬರೆದಿರುವ ವಿಶೇಷ ಲೇಖನ       

          ಪ್ರಸಿದ್ಧ ಪತ್ರಿಕೆ, ‘ಮಕ್ಕಳ ಜಗಲಿ’ ಯ ಹಿರಿಯ, ಕಿರಿಯ ಓದುಗ ಮಿತ್ರರಿಗೆ ನಾಡ ಹಬ್ಬ ನಾಗರ ಪಂಚಮಿಯ ಶುಭಾಶಯಗಳು. 
ಶ್ರೀ ಮನ್ಮಹಾಭಾರತದಲ್ಲಿ, ಜನಮೇಜಯ ಮಹಾರಾಜನು ಸರ್ಪಸತ್ರ ಯಾಗವನ್ನು ಕೊನೆಗೊಳಿಸಿ ವೇದವ್ಯಾಸರಿಂದ ಮಹಾಭಾರತ ಕಥನವನ್ನು ಆಲಿಸಲು ಕುಳಿತ ಶುಭದಿನವೇ ನಾಗರಪಂಚಮಿಯಾಗಿ ಆಚರಣೆಗೊಂಡಿತು ಎನ್ನಲಾಗುತ್ತದೆ. ಶ್ರೀಮದ್ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು, ‘ಸರ್ಪಗಳಲ್ಲಿ ವಾಸುಕಿಯು ನಾನಾಗಿದ್ದೇನೆ!’ ಎಂದೂ ಹೇಳಿದ್ದಾನೆ. ಆಧ್ಯಾತ್ಮಿಕ ಕ್ಷೇತ್ರದಲ್ಲಿಯೂ ನಾಗರಹಾವನ್ನು, ಕುಂಡಲಿನೀ ಶಕ್ತಿ(serpent power)ಯ ಪ್ರತೀಕವೆಂದು ತಿಳಿಯಲಾಗಿದೆ. ಹೀಗೆ ವಿಶ್ವದಾದ್ಯಂತ ನಾನಾ ರೂಪಗಳಲ್ಲಿ ನಾಗಾರಾಧನೆ ಹಾಸುಹೊಕ್ಕಾಗಿದೆ. ಆದರೆ ಇದು ಮೂಲತಃ ನಿಸರ್ಗಾರಾಧನೆಯ ಸಂಕೇತವೂ ಹೌದು. ಆದ್ದರಿಂದ ಈ ಉಪಾಸನೆಯ ಹಿಂದೆ ನಮ್ಮ ಪ್ರಾಚೀನರಿಗಿದ್ದ ಉದ್ದೇಶವನ್ನು ಈ ದಿನ ಮನನ ಮಾಡಿಕೊಳ್ಳುವುದು ಅಗತ್ಯವೆನಿಸುತ್ತದೆ. 
   “ಪೃಥ್ವಿಯಲ್ಲಿ ಏಕಾಣುಜೀವಿಯಿಂದ ಜೀವಸಂಕುಲದ ಸೃಷ್ಟಿಯಾಗಿ ಸಸ್ತನಿವರ್ಗದಿಂದ ಮಾನವನ ಉಗಮವಾಯಿತು. ಆರಂಭದಲ್ಲಿ ಅಲೆಮಾರಿಯಾಗಿದ್ದ ಮಾನವ ತನ್ನ ಬದುಕಿನ ವಿಕಾಸ ಪ್ರಕ್ರಿಯೆಯಿಂದಾಗಿ ಅಲೆಮಾರಿ ಬದುಕನ್ನು ಕೊನೆಗೊಳಿಸಿ ನದಿ, ಸರೋವರಗಳ ಪ್ರದೇಶಗಳಲ್ಲಿ ನೆಲೆ ನಿಂತು ಕೃಷಿ ಬದುಕನ್ನಾಯ್ದು ಜೀವಿಸತೊಡಗಿದ. ಇದೇ ಕಾಲಘಟ್ಟದಲ್ಲಿ ಅವನೊಳಗೆ ಮಾನವ ಸಂಬಂಧಗಳ ಅರಿವು, ಸೃಷ್ಟಿಯ ಕುರಿತು ವಿಸ್ಮಯ, ಭೂತ, ಪ್ರೇತ, ದೈವ, ದೇವರುಗಳ ಕುರಿತು ಜಿಜ್ಞಾಸೆ, ಪರಿಕಲ್ಪನೆಗಳು ಮೂಡತೊಡಗಿದವು. ಇದೇ ಕಾಲದಲ್ಲಿ ಸತತ ಕೃಷಿನಾಶ, ಪ್ರಾಣಹಾನಿ, ಜಾನುವಾರು ಮತ್ತು ಮಕ್ಕಳಿಗೆ ಕೆಲವು ಸಾಂಕ್ರಾಮಿಕ ರೋಗರುಜಿನಗಳನ್ನು ಹರಡುತ್ತಿದ್ದಂಥ ಕಾಡುಹಂದಿ ಮತ್ತು ಕಾಡುಕೋಣ, ಬಿಳಿಬಣ್ಣದ (ಅಲ್ಬಿನೊ) ಕನ್ನಡಿಹಾವು, ಕಾಳಿಂಗಸರ್ಪ, ನಾಗರಹಾವು, ಮೊಸಳೆ ಹಾಗು ಇನ್ನಿತರ ಕಾಡುಪ್ರಾಣಿಗಳಿಂದ ಆತ ಹೈರಾಣಾಗುತ್ತಿದ್ದ. ಅಂಥ ಸಂದರ್ಭದಲ್ಲಿಯೇ ಆತನಿಂದ ನಾಗಾರಾಧನೆ ಮತ್ತು ಪ್ರಾಣಿಯಾರಾಧನೆಗಳು ಹುಟ್ಟಿಕೊಂಡವು.   
          ಈ ಆಚರಣೆಗಳ ಮೂಲ ಉದ್ದೇಶ ಮೇಲಿನಂಥ ಕ್ರೂರ ಮೃಗಗಳ ಅಸಾಮಾನ್ಯ ಶಕ್ತಿ, ಸಾಮರ್ಥ್ಯ, ಫಲವಂತಿಕೆ ಹಾಗು ಅವುಗಳ ವಿಷದ ಪ್ರಭಾವದ ಮೇಲೆ ತಮ್ಮ ಕೆಲವು ಕಾಲ್ಪನಿಕ ವಿಧಿಯಾರಾಧನೆಗಳ ಮೇಲಿನ ದೃಢ ವಿಶ್ವಾಸದಿಂದ ಮಾನವ ನಿಯಂತ್ರಣವನ್ನು ಸಾಧಿಸಬಹುದು ಎಂಬುದು ಆ ಕಾಲದ ಮಾನವನ ಕಲ್ಪನೆಯಾಗಿರಬೇಕು. ಆದ್ದರಿಂದ ಅಂಥ ಜೀವರಾಶಿಗಳು ವಾಸಿಸುವ ನೆಲೆಗಳನ್ನು ಆತ ಅವುಗಳಿಗೇ ಮೀಸಲಿಟ್ಟು ವನ, ಬನ, ನಾಗಬನ, ದೇವರಕಾಡು, ಕಾವು, ಕಾಪು, ಕಾನ- ಎಂದೆಲ್ಲ ಕರೆದ. ಪ್ರಾಣಿ ಆರಾಧನೆಯ ಆರಂಭದಲ್ಲಿ ಮನುಷ್ಯ ಪೂಜಿಸಲಾರಂಭಿಸಿದ ಪ್ರಥಮ ಜೀವಿಯೇ ನಾಗರಹಾವು! ನಂತರ ಮೃಗಾರಾಧನೆ ಸೇರ್ಪಡೆಗೊಂಡಿತು” ಎನ್ನುತ್ತದೆ ಮಾನವ ಶಾಸ್ತ್ರ. 
   ಆದರೆ ಕೇವಲ ಏಳು ಅಡಿಗಳಷ್ಟು ಉದ್ದ ಮತ್ತು ಮೂರು ಇಂಚುಗಳಷ್ಟು ದಪ್ಪ ಬೆಳೆಯಬಲ್ಲ ಹಾಗು ಕೆಲವೊಮ್ಮೆ ಇರುವೆಯಂಥ ಪುಟ್ಟ ಜೀವಿಗೂ ಹೆದರಿ ಪಲಾಯನ ಮಾಡುವ ಮತ್ತು ತಾನು ಹುಟ್ಟಿ ಸಾಯುವವರೆಗೆ ಸದಾ ಕೊಳಚೆ, ಕಶ್ಮಲ ಪ್ರದೇಶಗಳಲ್ಲೇ ಬದುಕುವ ನಾಗರಹಾವು ಎಂಬ ಸರೀಸೃಪವನ್ನೇ ನಮ್ಮ ಪೂರ್ವಜರು ಏಕೆ ದೈವತ್ವಕ್ಕೇರಿಸಿರಬಹುದು? ಇತರ ಅತ್ಯಧಿಕ ವಿಷದ, ಅಪಾಯಕರ ಹಾವುಗಳಲ್ಲಿ ಇಲ್ಲದಿರುವಂಥ ಯಾವ ಗುಣ ಸಾಮರ್ಥ್ಯವನ್ನು ಅವರು ನಾಗರಹಾವಿನಲ್ಲಿ ಕಂಡಿರಬಹುದು? ಎಂಬ ಪ್ರಶ್ನೆಗಳು ಮೂಡುವುದಿಲ್ಲವೇ! ಹಾಗಿದ್ದರೆ ನಾಗರಹಾವಿನ ಕುರಿತು ಸ್ವಲ್ಪ ತಿಳಿಯೋಣ. 

         ಈ ಹಾವನ್ನು ಹೆಡೆಹಾವು, ಗೋಧಿನಾಗರ, ನಾಗ, ಸರ್ಪ, ಒಳ್ಳೆಯದು-ಎಂದೆಲ್ಲ ಕರೆಯಲಾಗುತ್ತದೆ. ಉಡುಪಿ ಜಿಲ್ಲೆಯ ಕೆಲವು ಕನ್ನಡ ಪ್ರದೇಶದ ಜನರು ಇದನ್ನು ಸಾಕ್ಷಾತ್ ದೇವರ ಸ್ವರೂಪವೆಂದು ಭಾವಿಸುತ್ತಾರಾದ್ದರಿಂದ ಅವರು ದೇವರಹಾವು, ಘನಹಾವು ಎನ್ನುತ್ತಾರೆ. ತುಳುವಿನಲ್ಲಿ: ನಾಗೆ, ಸರ್ಪೆ, ಉಚ್ಚು, ಮರಿ, ಪರಪ್ಪುನವು, ಎಡ್ಡೆಂತಿನವು- ಎಂಬ ಹೆಸರುಗಳಿವೆ. ಆಂಗ್ಲಭಾಷೆಯಲ್ಲಿ: ಸ್ಪೆಕ್ಟಕಲ್ಡ್ ಕೋಬ್ರ (spectacled cobra) ವೈಜ್ಞಾನಿಕ ನಾಮ: ನಾಜ ನಾಜ (naja naja) ಎಂದು. ‘ನಾಗ’ ಪದವು ಸಂಸ್ಕೃತದ್ದಾಗಿದ್ದು ಇದರರ್ಥ ‘ಅವ್ಯಕ್ತಶಕ್ತಿ ‘ಪರಮಾತ್ಮ’ ಎಂದೂ ಪುರಾಣಗ್ರಂಥವೊಂದು ಹೇಳುತ್ತದೆ. ‘ಸರ್ಪ’ ಎಂದರೆ ಕೇವಲ ನಾಗರಹಾವು ಮಾತ್ರವಲ್ಲ, ಸರೀಸೃಪ ಪದದ ಸರಳ ರೂಪವೇ ಸರ್ಪ ಎಂದು. ‘ನಾಜ ನಾಜ’ ಹೆಸರು ಕೂಡಾ ಭಾರತೀಯ ಯಾವುದೋ ಭಾಷೆಯಿಂದ ಬಂದಿದೆ ಎನ್ನಲಾಗುತ್ತದೆ. ಉತ್ತರ ಭಾರತದ ಹಿಂದೂಗಳು ನಾಗರಹಾವಿನ ಹೆಡೆಯ ಮೇಲಿನ ಗುರುತನ್ನು `ಕೃಷ್ಣನು ಹಾವಿನ ಹೆಡೆಯ ಮೇಲೆ ಕುಣಿದಾಗ ಮೂಡಿದ ಗುರುತು!’ ಎಂದು ನಂಬುತ್ತಾರೆ. 
       ನಾಗರಹಾವು, ಇತರೆಲ್ಲ ಹಾವುಗಳಿಗಿಂತಲೂ ಮನೋಹರವಾದ ಉರಗ! ಭಯ, ಕೋಪಗೊಂಡಾಗ ರ‍್ರನೆ ಹೆಡೆಯರಳಿಸಿ ನಿಲ್ಲುವ ಅದರ ರಮಣೀಯ ಸೌಂದರ್ಯಕ್ಕೆ ಮಾರುಹೋಗದ ಮನಸ್ಸುಗಳೇ ಇಲ್ಲ! ಈ ಹಾವಿನಲ್ಲಿ ವಿಷವೆಂಬ ರಾಸಾಯನಿಕವೊಂದು ಇಲ್ಲದಿದ್ದಲ್ಲಿ ಅದನ್ನೊಮ್ಮೆ ಪ್ರೀತಿಯಿಂದ ಹಿಡಿದೆತ್ತಿ ಕೋಮಲವಾಗಿ ಮೈದಡವಿ ಮುದ್ದಿಸಬೇಕು ಎಂಬ ತುಡಿತನ್ನೆಬ್ಬಿಸುವ ಮುಗ್ಧ ಜೀವಿಯದು ಎಂಬುದು ಪ್ರಾಣಿಪ್ರಿಯರ ಮಾತು. ತಾನು ಹುಟ್ಟಿ, ಸಾಯುವವರೆಗೆ ಎಂದೂ ವ್ಯತ್ಯಾಸಗೊಳ್ಳದ ನಾಗರಹಾವಿನ ಗುಣಸ್ವಭಾವದಲ್ಲಿ ನಾವು ಆರೋಪಿಸಿರುವಂಥ ಕ್ರೂರ, ಭಯಂಕರ, ದ್ವೇಷ, ಸೇಡು ಎಂಬ ಯಾವ ಅಸಂಗತವನ್ನೂ ಕಾಣಲು ಸಾಧ್ಯವಿಲ್ಲ. 
       ನಾಗರಹಾವಿನ ಕಡಿತ, ವಿಷದ ತೀಕ್ಷ್ಣತೆ ಮತ್ತದಕ್ಕೆ ಹಿಂದಿನ ಕಾಲದಲ್ಲಿ ಸೂಕ್ತ ಔಷಧೋಪಚಾರಗಳು ಇರದಿದ್ದುದರಿಂದಲೂ ಹಾಗು ತಮ್ಮ ಕೃಷಿ ಬದುಕಿಗೆ ಮಾರಕವೆನಿಸುತ್ತಿದ್ದ ಅನೇಕ ಬಗೆಯ ಕ್ರಿಮಿಕೀಟ, ಇಲಿ, ಹೆಗ್ಗಣ, ಪಕ್ಷಿಗಳಂಥ ವಿವಿಧ ಜೀವರಾಶಿಗಳನ್ನು ನಾಗರಹಾವುಗಳು (ಎಲ್ಲ ಪ್ರಭೇದದ ಹಾವುಗಳೂ ರೈತ ಮಿತ್ರರೇ) ಭಕ್ಷಿಸುತ್ತ ತಮ್ಮ ಬೆಳೆಗಳನ್ನು ಸಂರಕ್ಷಿಸುತ್ತಿದ್ದುದನ್ನೂ ಕಂಡರಿಯುತ್ತಿದ್ದ ಪೂರ್ವಜರಿಗೆ ನಾಗರಹಾವು ತಮ್ಮ ಕಲ್ಪನೆಗೂ ಮೀರಿದ ಭಯಾನಕ ಜೀವಿ ಮಾತ್ರವಲ್ಲದೆ, ದೈವೀಶಕ್ತಿಯ ಪ್ರತೀಕ, ಕೃಷಿ ಸಮೃದ್ಧಿ ದೇವತೆ, ಮೃತ್ಯುದೇವತೆ, ಸಂತಾನದೇವತೆ, ನಾಗ ಸರ್ವ ರೋಗ ನಿವಾರಕ ಮತ್ತು ಆತ ಮುನಿದರೆ ರೋಗ ರುಜಿನಗಳನ್ನೂ ತರಬಲ್ಲ! ಎಂದೆಲ್ಲ ಅನ್ನಿಸಿದ್ದರಲ್ಲಿ ಆಶ್ಚರ್ಯವಿಲ್ಲ. 

             ನಮ್ಮ ಪೂರ್ವಜರ ಪೂಜ್ಯ ನಂಬಿಕೆ, ಆರಾಧನೆಗಳು ಇಂದಿಗೂ ಉಳಿದು ಬಂದಿರುವುದು ಹೆಮ್ಮೆಯ ವಿಚಾರ. ಆದರೆ ಅಂಥ ಜೀವರಾಶಿಗಳಿಗಾಗಿ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಮಲೆನಾಡು ಮತ್ತು ಕರ್ನಾಟಕದಾದ್ಯಂತ ಮೀಸಲಿರಿಸಿದ್ದ ಸಹಸ್ರಾರು ನಾಗಬನಗಳು, ದೇವರಕಾಡುಗಳು ಹಾಗು ಭಾರತದ ಹಲವೆಡೆಗಳಲ್ಲಿನ ಅಸಂಖ್ಯಾತ ಸಮೃದ್ಧ ಹುತ್ತಗಳಿಂದು ನಿರಂತರವಾಗಿ ನಾವು ಹಮ್ಮಿಕೊಳ್ಳುವ, `ನಾಗಬನ ಜೀರ್ಣೋದ್ಧಾರ ಮತ್ತು ನಾಗ ಬ್ರಹ್ಮಸ್ಥಾನ ಜೀರ್ಣೋದ್ಧಾರ’ ಎಂಬ ಪಿಡುಗಿಗೂ, ನಗರೀಕರಣಕ್ಕೂ ಬಲಿಯಾಗುತ್ತಿರುವುದು ದುರಂತ! ಹಾಗಿದ್ದರೆ ನಾಗನೆಂದು ಆರಾಧಿಸುವ ಶಕ್ತಿ ಯಾವುದು ಮತ್ತು ಯಾವ ನಾಗನಿಗಾಗಿ ಈ ಕಾಂಕ್ರೀಟ್ ಬನಗಳು, ಆಚರಣೆಗಳು? ಎಂಬ ಪ್ರಶ್ನೆಗಳು ಮೂಡುವುದಿಲ್ಲವೇ! 
          ನಾಗಬನ, ದೇವರಕಾಡುಗಳಂಥ ಹಸಿರುತಾಣಗಳು ಪ್ರಾಚೀನರಿಂದ ಸಂರಕ್ಷಿಸಲ್ಪಟ್ಟ ಅರಣ್ಯ ತುಕ್ಕಡಿಗಳು. ಇವು ಅನೇಕ ಜೀವವೈವಿಧ್ಯಗಳ ಅಗ್ರತಾಣಗಳೆಂದು ಪರಿಗಣಿಸಲ್ಪಟ್ಟಿವೆ. ನಮ್ಮವರು ಅನೇಕ ವೃಕ್ಷಗಳನ್ನು, ಹಲವು ಪ್ರಾಣಿಪಕ್ಷಿಗಳ ಸುಪ್ತ ಚೇತನಗಳನ್ನು ದಿವ್ಯ ಶಕ್ತಿಗಳೆಂದು ನಿರ್ಧರಿಸಿದ್ದರಿಂದಲೇ ಅವುಗಳನ್ನು ಪೂಜಿಸುತ್ತ ಬಂದರು. ಅಶ್ವತ್ಥ, ಆಲ, ಔದುಂಬರ, ನೇರಳೆ, ರೆಂಜೆ (ಬಕುಳ), ಸುರಗಿ ಮರಗಳು ಪ್ರಾಣಿಪಕ್ಷಿಗಳಿಗೆ ವರ್ಷವಿಡೀ ಆಹಾರಾಶ್ರಯವನ್ನು ನೀಡಿ ಸಲಹುವ ಅಮೂಲ್ಯ ವೃಕ್ಷರಾಶಿಗಳು. ಇಂಥ ಪ್ರದೇಶದ ಸುತ್ತಮುತ್ತ ಅಂತರ್ಜಲದ ಹರಿವು ಸಮೃದ್ಧವಾಗಿದ್ದು ಅಲ್ಲಿನ ಬಾವಿ, ಕೊಳ, ಸರೋವರಗಳ ನೀರು ಬೇಸಿಗೆಯ ಅಂತ್ಯದವರೆಗೂ ಇಂಗದಿರುವುದು ಮತ್ತು ಸಮಶೀತೋಷ್ಣ ವಾತಾವರಣವೂ ಇರುವುದರಿಂದಲೇ ನಾಗರಹಾವು ಮತ್ತಿತರ ಹಾವುಗಳು ಅಂಥ ತಾಣಗಳಲ್ಲಿ ವಾಸಿಸಲು ಇಷ್ಟಪಡುವುದು.
         
        ಈಗೀಗ ಕರ್ನಾಟಕದಾದ್ಯಂತ ವ್ಯಾಪಿಸುತ್ತಿರುವ ಒಂದು ವಿಚಿತ್ರನಂಬಿಕೆ ಎಂದರೆ, ‘ನಾಗನಡೆ, ನಾಗಬೀದಿ!’ ಎಂಬುದು. ಆದ್ದರಿಂದ ನಾಗರ ಹಾವುಗಳ ಜೀವನಕ್ರಮವನ್ನು ಅನೇಕ ವರ್ಷಗಳಿಂದ ಅಧ್ಯಯನಿಸುತ್ತ ಬಂದಿದ್ದರಿಂದ ನನಗೆ ತಿಳಿದ ಸಂಕ್ಷಿಪ್ತ ವಿವರ ಹೀಗಿದೆ: ನಾಗರಹಾವೊಂದು ತಾನು ಹುಟ್ಟಿ, ಸಾಯುವವರೆಗೆ ತನ್ನ ಸುತ್ತಮುತ್ತಲಿನ ಶತ್ರುಜೀವಿಗಳೊಂದಿಗೆ ಹೋರಾಡುತ್ತಲೇ ಜೀವಿಸಬೇಕಾದ ಅನಿವಾರ್ಯತೆ ಅದಕ್ಕಿದೆ. ಹಾಗಾಗಿ ಅದು ಯಾವ ಪ್ರದೇಶದಲ್ಲಿ ತನಗೆ ಆಹಾರ, ನೀರು, ಸಂಗಾತಿ, ವಿಶ್ರಮಿಸಲು ಇಲಿ ಹೆಗ್ಗಣದ ಬಿಲ ಮತ್ತು ಹುತ್ತಗಳು ದೊರಕುತ್ತವೋ ಅಂಥ ಪರಿಸರವನ್ನಾಯ್ದುಕೊಂಡು ಬದುಕುತ್ತದೆ. 
             ನಾಗರಹಾವು (ಹಾವುಗಳೆಲ್ಲ ಶೀತರಕ್ತ ಜೀವಿಗಳಾಗಿವೆ) ಶೀತರಕ್ತ ಜೀವಿ. ಅದಕ್ಕೆ ಉಷ್ಣದೇಹಿಗಳಷ್ಟು ಆಹಾರ, ನೀರಿನ ಅಗತ್ಯವಿಲ್ಲ. ಆದ್ದರಿಂದ ಅದು ಐದಾರು ದಿನಗಳಿಗೊಮ್ಮೆ ಆಹಾರ ಸೇವಿಸಬಹುದು ಮತ್ತು ಎರಡು, ಮೂರು ತಿಂಗಳ ಕಾಲ ಉಪವಾಸವೂ ಇರಬಲ್ಲದು. 
   ಹೀಗಿರುವ ನಾಗರಹಾವಿಗೆ ಒಂದು ದಿನ ಹಸಿವೆಯೆದ್ದು, ತನ್ನ ಬಿಲದಿಂದ ಹೊರಟು ತುಸು ದೂರದ ಜನವಸತಿ ಅಥವಾ ಆಹಾರವಿರುವ ಪ್ರದೇಶಕ್ಕೆ ಹೋಗಬೇಕಾದರೆ ಅದೆಂದಿಗೂ ಮನುಷ್ಯರು ಸಂಚರಿಸುವಂಥ ರಸ್ತೆ ಅಥವಾ ಕಾಲುದಾರಿಯ ನಡುವೆ ರಾಜಾರೋಷವಾಗಿ ಸಂಚರಿಸದು. ಅದು ಹಾಗೆ ಹೊರಟ ಕೆಲವೇ ಕ್ಷಣದೊಳಗೆ ಅನೇಕ ಭಕ್ಷಕ ಜೀವಿಗಳಲ್ಲೊಂದರ ಹೊಟ್ಟೆಯನ್ನು ಸೇರುವುದು ಖಚಿತ! ಹಾಗಾಗಿಯೇ ನಾಗರಹಾವೊಂದು (ಎಲ್ಲ ಪ್ರಭೇದದ ಹಾವುಗಳ ಸಂಚಾರಕ್ರಮವೂ ಹೀಗೆಯೇ ಇರುತ್ತದೆ) ಯಾವಾಗಲೂ ಕಲ್ಲುಮುಳ್ಳು, ಪೊದೆಗಂಟಿಗಳೆಡೆ, ಗೋಡೆ ಮತ್ತು ಪಾಳುಬಿದ್ದ ಪ್ರದೇಶದ ಸಂದುಗೊಂದುಗಳಿಂದಲೇ ಸಂಚರಿಸುವುದನ್ನು ಕಾಣಬಹುದು. ಹೀಗೆ ಸಂಚರಿಸುವುದರಿಂದ ಆ ಹಾವಿಗೆ ಸಿಗುವ ಪ್ರಧಾನ ರಕ್ಷಣೆಯೆಂದರೆ, ಮಿಂಚಿನವೇಗವಾಗಿ ಬಂದಪ್ಪಳಿಸಿ ಹಿಡಿಯಲೆತ್ನಿಸುವ ಗಿಡುಗ, ಹದ್ದುಗಳಿಗೆ ಮೂಲೆಯೊಂದರಲ್ಲಿ ಸಂಚರಿಸುವ ತನ್ನನ್ನು ಹಿಡಿಯಲು ಅವುಗಳ ರೆಕ್ಕೆಗಳು ತಡೆಯೊಡ್ಡುತ್ತವೆ ಎಂಬ ಅರಿವು ಹಾವಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಆದರೆ ನಾಗರಹಾವಿನ ಈ ಬಗೆಯ ಸಂಚಾರಕ್ರಮ ಮತ್ತು ಅವುಗಳು ವಾಸಿಸುವ ವಠಾರವನ್ನು, 'ನಾಗನ ಬೀದಿ, ನಾಗ ನಡೆಯ ಜಾಗ!’ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ.      

       ವಿಕಾಸ ಪ್ರಕ್ರಿಯೆಯಲ್ಲಿ ಹಾವುಗಳು ಇನ್ನೂ ಹಿಂದುಳಿದ ಜೀವಿಗಳು. ಪ್ರಕೃತಿಯು ಅವುಗಳಿಗೆ, ‘ಸೂಕ್ತ ವಾಸಸ್ಥಾನದ ಆಯ್ಕೆ, ಆಹಾರಾನ್ವೇಷಣೆ, ಆತ್ಮರಕ್ಷಣೆ ಹಾಗು ವಂಶೋತ್ಪತ್ತಿಗೆ ಸಂಗಾತಿಯ ಹುಡುಕಾಟಕ್ಕೆ ಬೇಕಾದ ಜ್ಞಾನವನ್ನಷ್ಟೇ ನೀಡಿದೆ. ಆದ್ದರಿಂದ ದ್ವೇಷ, ಸೇಡು ಎಂಬ ಯಾವ ಭಾವ ವಿಕೃತಿಗಳನ್ನೂ ನಾವು ಅವುಗಳಲ್ಲಿ ಕಾಣಲು ಸಾಧ್ಯವಿಲ್ಲ. ನಾಗಾರಾಧನೆಯ ಕುರಿತು ನಮ್ಮಲ್ಲಿ ಅನೇಕ ಆಚಾರ ವಿಚಾರಗಳಿವೆ ಹಾಗೂ ಅವೆಲ್ಲದಕ್ಕೂ ಶಾಸ್ತ್ರಗ್ರಂಥಗಳಲ್ಲಿ ಸೂಕ್ತ ಅರ್ಥ, ವಿವರಣೆಗಳು ಸಿಗುತ್ತವೆ. ಹಾಗಾಗಿ ಅವುಗಳನ್ನು ಮೂಢನಂಬಿಕೆ, ಅಂಧಶ್ರದ್ಧೆಗಳು ಎನ್ನಲಾಗುವುದಿಲ್ಲ. ಆದರೆ ನಾಗರಹಾವಿಗೂ, ಹಾಲಿಗೂ ಯಾವ ಸಂಬಂಧವೂ ಇಲ್ಲ. ಏಕೆಂದರೆ, ಸ್ತನ್ಯಪಾನದ ನಿಯಮವು ಸರೀಸೃಪಗಳಲ್ಲಿ ಇಲ್ಲ. ಹಾಗಾಗಿ ನಾಗರಹಾವು ಅಂತಲ್ಲ, ಯಾವ ಹಾವುಗಳು ಕೂಡಾ ಹಾಲು ಕುಡಿಯುವುದಿಲ್ಲ. ಹಾಗೆಯೇ ಒಂದು ನಾಗರಹಾವಿಗೆ ನಮ್ಮ ಮನೆಯೊಳಗೆ ತನ್ನ ಆಹಾರದ ಜೀವಿಗಳಿವೆ ಎಂದು ತಿಳಿದರೆ ಅದು ಹಠ ಹಿಡಿದು ಒಳಗೆ ನುಸುಳಲು ಪ್ರಯತ್ನಿಸಬಹುದು. ಆದರೆ ಆ ಹಾವಿನ ಅಂಥ ಸ್ವಾಭಾವಿಕ ಗುಣವನ್ನು ಕೂಡಾ, `ನಾಗರಹಾವೊಂದು ಪದೇಪದೇ ಮನೆಯೊಳಗೆ ಬಂದರೆ ಆ ಮನೆಗೆ ನಾಗದೋಷವಿದೆ ಎಂದರ್ಥ!’ ಎಂಬ ತಪ್ಪಾಗಿ ಅರ್ಥೈಸಿಕೊಂಡಿದ್ದೇವೆ.  
       `ಕೇದಿಗೆ, ಮಲ್ಲಿಗೆ, ಸಂಪಿಗೆ ಮತ್ತು ಹಿಂಗಾರಗಳಂಥ ಪರಿಮಳಯುಕ್ತ ಹೂವುಗಳೆಂದರೆ ನಾಗರಹಾವಿಗೆ ಬಲು ಪ್ರಿಯ. ಹಾಗಾಗಿ ಅದು ಸದಾ ಅಂಥ ಮರ, ಗಿಡಗಳಿರುವಲ್ಲಿ ವಾಸಿಸುತ್ತದೆ!’ ಎನ್ನುತ್ತದೆ ಮತ್ತೊಂದು ನಂಬಿಕೆ. ಆದರೆ ನಾಗರಹಾವು ಮಾತ್ರವಲ್ಲ ಇತರ ಯಾವ ಹಾವುಗಳಿಗೂ ನಮ್ಮ ಹಾಗೆ ಸುಗಂಧದ್ರವ್ಯದ ಪರಿಮಳವನ್ನಾಗಲೀ, ವಾಸನೆ, ದುರ್ವಾಸನೆಯನ್ನಾಗಲೀ ಆಘ್ರಾಣಿಸುವ ಇಂದ್ರಿಯಗಳಿಲ್ಲ. ಅವುಗಳ ವಾಸನಾ ಸಾಮರ್ಥ್ಯವು ವಿಶಿಷ್ಟವಾದುದು. ಒಂದು ಹಾವಿಗೆ ತನ್ನ ಸುತ್ತಮುತ್ತಲಿನ ಯಾವುದನ್ನಾದರೂ ಗ್ರಹಿಸಿ ಪತ್ತೆ ಹಚ್ಚಲು ಅದರ ಸೀಳುನಾಲಗೆಯೇ ಮುಖ್ಯ ಅಂಗವಾಗಿದೆ. ಆ ನಾಲಗೆಯು ನಮ್ಮ ಮೂಗಿನಂತೆ ವಾಸನೆವನ್ನು ಗ್ರಹಿಸಲಾರದು. ಹಾವಿನ ನಾಲಗೆ, ಕಣ್ಣು, ಮೂಗು ಮತ್ತು ಚರ್ಮವು ತನ್ನ ಈಡುಜೀವಿ, ಸಂಗಾತಿ, ವಾಸಸ್ಥಾನ, ಶತ್ರು ಮತ್ತು ಹವಾಮಾನದ ಏರುಪೇರುಗಳನ್ನು ಗ್ರಹಿಸುವಂಥ ವಿಶಿಷ್ಟ ವ್ಯವಸ್ಥೆಯನ್ನು ಹೊಂದಿದೆ. 
   ಈ ಜಗತ್ತಿನ ಚರಾಚರ ಸೃಷ್ಟಿಯಲ್ಲೂ ದೇವರು ಎಂಬ ಮಹಾನ್ ಶಕ್ತಿಯೇ ವ್ಯಾಪಿಸಿಕೊಂಡಿದೆ. ಆದ್ದರಿಂದ ಯಾವ ಜೀವಿಗಳಿಗೂ ಹಾನಿ ಮಾಡದೆ ನಮ್ಮ ಪೂರ್ವಜರ ಪರಿಸರಸ್ನೇಹಿ, ಭಕ್ತಿಭಾವದ ನಾಗಾರಾಧನೆಯನ್ನು ಪ್ರೀತಿಯಿಂದ ಆಚರಿಸುವ ಮೂಲಕ ನಾಗಬನ, ದೇವರಕಾಡುಗಳನ್ನು ಸಂರಕ್ಷಿಸುತ್ತ, ‘ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು, ನಿಜದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯಾ!’ ಎಂಬ ಬಸವಣ್ಣನ ನುಡಿಮುತ್ತಿನ ವ್ಯಂಗ್ಯಾರ್ಥವನ್ನು ಹುಸಿ ಮಾಡೋಣ.
...…..................................ಗುರುರಾಜ ಸನಿಲ್
"ಅಕ್ಷಯ ಮನೆ"
ಕೊಳಂಬೆ, ಪುತ್ತೂರು
ಸಂತೆಕಟ್ಟೆ ಅಂಚೆ
ಉಡುಪಿ- 576105
ಮೊಬೈಲ್: 9845083869
*******************************************

Ads on article

Advertise in articles 1

advertising articles 2

Advertise under the article