-->
ಜೀವನ ಸಂಭ್ರಮ : ಸಂಚಿಕೆ - 46

ಜೀವನ ಸಂಭ್ರಮ : ಸಂಚಿಕೆ - 46

ಜೀವನ ಸಂಭ್ರಮ : ಸಂಚಿಕೆ - 46
                       
                                ಮತ್ಸರ           
          ಮಕ್ಕಳೇ...... ಇದು ನಡೆದ ಘಟನೆ ಹಾಗೂ ನಡೆಯುತ್ತಿರುವ ಘಟನೆಗಳು. ಈ ಮತ್ಸರ ಎಷ್ಟು ಜನರ ಜೀವನಕ್ಕೆ ಮಾರಕ...? ಎಷ್ಟು ಜನರ ಸುಂದರ ಬದುಕು ಸಂಕಷ್ಟಕ್ಕೆ ದೂಡಿದೆ ನೋಡೋಣ...... ಈ ಘಟನೆ ಓದಿ.
ಒಂದು ಸರ್ಕಾರಿ ಇಲಾಖೆ. ಇದರಲ್ಲಿ ಬರುವ ಹೆಸರನ್ನು ಬದಲಿಸಲಾಗಿದೆ. ಈ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿ ಹರೀಶ್. ಈ ಕಚೇರಿಯಲ್ಲಿ ಒಬ್ಬ ಅಧಿಕಾರಿ ಗುರುಮೂರ್ತಿ ಎನ್ನುವವನು ಇದ್ದನು. ಪ್ರತಿವರ್ಷ ನಡೆಯುವಂತೆ ತಾಲ್ಲೂಕು ಹಂತದ ಕಾರ್ಯಕ್ರಮ ನಡೆಯಿತು. ಒಂದು ಶಾಲೆಯ ಶಿಕ್ಷಕ ಕಮಲೇಶ ಕ್ರೀಡಾಕೂಟದಲ್ಲಿ ತಪ್ಪು ಮಾಡಿದನೆಂದು ಗುರುತಿಸುತ್ತಾರೆ. ತಪ್ಪು ಮಾಡಿದನೋ ಇಲ್ಲವೋ ಗೊತ್ತಿಲ್ಲ. ಈ ವಿಚಾರವನ್ನು ತಾಲೂಕು ಮಟ್ಟದ ಅಧಿಕಾರಿ ಹಾಗೂ ಇತರರ ಶಿಫಾರಸಿನ ಮೇರೆಗೆ ಕ್ರೀಡಾ ಚಟುವಟಿಕೆಯಿಂದ ನಿಷೇಧದ ಆದೇಶ ಹೊರಡಿಸಿದರು. ಅಂದಿನಿಂದ ತಪ್ಪನ್ನು ಇತ್ಯರ್ಥ ಪಡಿಸಿಕೊಳ್ಳ - ಬೇಕಾದವರು ಮರೆತು ಮತ್ಸರ ಪ್ರಾರಂಭಿಸಿದರು. ಮುಂದೆ ಸುಮಾರು ವರ್ಷಗಳ ಕಾಲ ಮಕ್ಕಳ ಕ್ರೀಡೆಗೆ ತರಬೇತಿ ಕೊಟ್ಟಿದ್ದಾನೋ ಇಲ್ಲವೋ ಗೊತ್ತಿಲ್ಲ ಆದರೆ ತಾಲೂಕು ಮಟ್ಟದ ಕ್ರೀಡೆಯಿಂದ ಆ ಶಾಲೆಯ ಮಕ್ಕಳು ಸತತವಾಗಿ ವಂಚನೆಗೆ ಒಳಗಾದರು. ನಿಷೇಧ , ಶಿಕ್ಷಕನಿಗೆ ಮಾತ್ರ ಆಗಿದ್ದರೂ ಸಹ , ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಆಸಕ್ತಿ ವಹಿಸಲಿಲ್ಲ. ಇದು ಮಕ್ಕಳಿಗೆ ಆದಂತಹ ಅನ್ಯಾಯ. ಆತನ ಮನಸ್ಸು ತಪ್ಪನ್ನ ಕಂಡುಹಿಡಿದು , ಶಿಕ್ಷೆಗೆ ಒಳಪಡಿಸುವುದೇ ಆಗಿತ್ತೇ ವಿನಹ ಮಕ್ಕಳ ಬೆಳವಣಿಗೆಗೆ ಅಥವಾ ತಾನು ವೃತ್ತಿಯಲ್ಲಿ ಬೆಳೆಯಬೇಕೆನ್ನುವ ಕಡೆಗೆ ಆದ್ಯತೆ ನೀಡಲಿಲ್ಲ. ಅಧಿಕಾರಿಗಳು ಭಡ್ತಿ ಹೊಂದಿ ಬೇರೆ ಬೇರೆ ಜಿಲ್ಲೆಗೆ ಹೋಗಿ ಈಗ ನಿವೃತ್ತಿಯಾಗಿದ್ದಾರೆ.      
       ಸರ್ಕಾರ ಜಾರಿಗೆ ತಂದಿರುವ ಅಧಿನಿಯಮ ಮಾಹಿತಿ ಹಕ್ಕು. ದೇಶದ ಭದ್ರತೆಗೆ ಸಂಬಂಧಿಸಿದನ್ನು ಹೊರತುಪಡಿಸಿ , ಸರ್ಕಾರದ ಅನುದಾನದಿಂದ ನಡೆಯುವ ಎಲ್ಲಾ ಚಟುವಟಿಕೆಗಳ ಮಾಹಿತಿಯನ್ನು ಪಡೆಯಲು ಅವಕಾಶ ಕಲ್ಪಿಸಿದೆ. ಇದರ ಉದ್ದೇಶ ಸರ್ಕಾರದ ಅನುದಾನ ದುರುಪಯೋಗ ಮಾಡಬಾರದು ಎಂಬುದೇ ಆಗಿತ್ತು. ಆದರೆ ಈತ ಮಾಹಿತಿ ಹಕ್ಕಿನ ಉದ್ದೇಶವನ್ನು ತನ್ನ ಮತ್ಸರ ಈಡೇರಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾರಂಭಿಸಿದ. ಈ ಇಬ್ಬರು ಅಧಿಕಾರಿಗಳು ಎಲ್ಲೆಲ್ಲಿ ಕೆಲಸ ಮಾಡಿದ್ದಾರೋ ಆ ಕಚೇರಿಗಳಿಗೆ ಮಾಹಿತಿ ಹಕ್ಕಿನ ಅರ್ಜಿಗಳನ್ನು ಸಲ್ಲಿಸುವ ಮೂಲಕ ಕಚೇರಿಗಳನ್ನ ಸ್ಮಶಾನವನ್ನಾಗಿ ಮಾಡಿದ.
        ಈ ಮೂವರಲ್ಲಿ ಯಾರು ತಪ್ಪು ಮಾಡಿದ್ದಾರೋ ಇಲ್ಲವೋ ತಿಳಿಯದು. ಆದರೆ ಇವರು ಎಲ್ಲೆಲ್ಲಿ ಕೆಲಸ ಮಾಡಿದ್ದಾರೋ , ಆ ಕಚೇರಿಗೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸುವುದು ಮಾಮೂಲಾಯಿತು. ಇದು ಇವರ ತಪ್ಪನ್ನು ಹುಡುಕಿ ದಂಡನೆಗೆ ಒಳಪಡಿಸಬೇಕೆನ್ನುವ ಹಠದಿಂದ , ಮಾಹಿತಿ ಹಕ್ಕಿನ ಅರ್ಜಿಗಳ ಸಂಖ್ಯೆ ಹೆಚ್ಚಾಯ್ತು. ಇದರಿಂದ ಇವರಿಗೆ ಅನುಕೂಲವಾಗುವ ತೀರ್ಮಾನ ಬರದಿದ್ದರೆ ಮತ್ತೆ ಇವರ ವಿರುದ್ಧ ಪುನಃ ಮಾಹಿತಿ ಹಕ್ಕಿನ ಚಲಾವಣೆ, ದೂರು ಪ್ರಾರಂಭವಾಯಿತು. ಈ ಘಟನೆ ನೋಡಿದಾಗ ಈ ಇಬ್ಬರು ಅಧಿಕಾರಿಗಳು ಕೆಲಸ ಮಾಡಿದ ಕಚೇರಿಯ ಗೋಳು ಹೇಳತೀರದು. ಮಾಹಿತಿ ಹಕ್ಕು ದೂರು ಸಾಮಾನ್ಯ. ಇದರಿಂದ ಸರ್ಕಾರದ ಯಾವುದೇ ಕಾರ್ಯಕ್ರಮ ಮಾಡುವುದು ತುಂಬಾ ತ್ರಾಸದಾಯಕವಾಗಬಾರದು. ವಿವಿಧ ಚಟುವಟಿಕೆ ಮಾಡಲು ಅವಕಾಶ ಇದ್ದರೂ, ಪ್ರತಿಯೊಬ್ಬರಿಗೂ ಆತಂಕವಾಗಬಾರದು. ಯಾವುದೇ ಕಾರ್ಯಕ್ರಮ ಮಾಡುವಾಗ ಸಣ್ಣಪುಟ್ಟ ತಪ್ಪುಗಳಾಗುವುದು ಸಹಜ. ನಿಯಮಗಳ ತಿಳುವಳಿಕೆ ಕೊರತೆಯಿಂದ ಆಗಬಹುದು. ಇದರಿಂದ ಮಾಹಿತಿ ಹಕ್ಕಿನ ದುರ್ಬಳಕೆಯಾಗಬಾರದು.
ಈ ಘಟನೆಯಿಂದ ತಿಳಿದು ಬರುವುದೇನೆಂದರೆ
   1. ತಪ್ಪು ಯಾರು ಮಾಡಿದರೂ ತಪ್ಪೇ. ತಪ್ಪನ್ನ ಒಪ್ಪಿಕೊಂಡು ವ್ಯವಸ್ಥೆ ಸರಿಪಡಿಸಬೇಕು. ತಪ್ಪನ್ನು ಸಮರ್ಥಿಸಲು ಪ್ರಯತ್ನಿಸುವುದು ತಪ್ಪು.
   2. ಯಾರದೋ ತಪ್ಪಿಗೆ ಇನ್ಯಾರನ್ನೋ ಗೋಳು ಹೊಯ್ದುಕೊಳ್ಳುವುದು ತಪ್ಪು.
   3. ಹಠಮಾರಿ ಧೋರಣೆ ಮಾಡಿದರೆ ಎಲ್ಲಾ ಕಾರ್ಯಕ್ರಮ ಕುಂಠಿತವಾಗಿ ಇದರ ಪರಿಣಾಮ ಮಕ್ಕಳ ಮೇಲಾಗುತ್ತದೆ. ಇದರ ಅರಿವಿರಬೇಕು. ಇದರಿಂದ ಮಕ್ಕಳ ಪ್ರತಿಭಾವಿಕಸನವಾಗದೆ ದುಷ್ಪರಿಣಾಮ ಸಮಾಜದ ಮೇಲಾಗುತ್ತದೆ.
      ಹೇಳಿ ಮಕ್ಕಳೆ , ನಿಸರ್ಗ ಜೀವಿಗಳನ್ನ ರೂಪಿಸಿರುವುದು ಸುಂದರವಾಗಿ ಶಾಂತವಾಗಿ ಸಂತೋಷದಿಂದ ಇರಲಿ ಎಂದು. ಮತ್ಸರ ಈ ನಕಾರಾತ್ಮಕ ಭಾವನೆಯಿಂದ ತನ್ನನ್ನು ತಾನು ಹಾಳು ಮಾಡುವುದಲ್ಲದೆ ಸಮಾಜದ ಅಧ:ಪತನಕ್ಕೆ ಕಾರಣವಾಗುತ್ತದೆ. ಹಾಗಾದರೆ ಸಮಾಜಕ್ಕೆ ಮಾರಕವಾದ ಈ ಮತ್ಸರ ಬೇಕೆ...?
.........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article