ಜೀವನ ಸಂಭ್ರಮ : ಸಂಚಿಕೆ - 50
Sunday, August 28, 2022
Edit
ಜೀವನ ಸಂಭ್ರಮ : ಸಂಚಿಕೆ - 50
ಮಕ್ಕಳೇ..... ಈ ಲೇಖನವನ್ನು ರಷ್ಯಾದ ನೊಬೆಲ್ ಪಾರಿತೋಷಕ ಪಡೆದ ಲೇಖಕ ಲಿಯೋಟಾಲ್ ಸ್ಟಾಯ್ ಬರೆದಿದ್ದನ್ನು, ಮಾನ್ಯ ಸಿದ್ದೇಶ್ವರ ಸ್ವಾಮೀಜಿಗಳು ಸಾಂದರ್ಭಿಕವಾಗಿ ಒಂದು ಪ್ರವಚನದಲ್ಲಿ ಹೇಳಿದ್ದರು. ಅದನ್ನು ಈ ಲೇಖನದಲ್ಲಿ ಆಯ್ದುಕೊಳ್ಳಲಾಗಿದೆ. ಒಬ್ಬ ರಾಜನಿದ್ದ. ಆತ ಜನಾನುರಾಗಿ. ಪ್ರಜೆಗಳ ಬಗ್ಗೆ ಅತ್ಯಂತ ಪ್ರೀತಿ ಹೊಂದಿದ್ದನು. ಆತನಿಗೆ ಒಂದು ಆಸೆಯಾಯಿತು. ತನ್ನ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಬೇಕು. ಪ್ರಜೆಗಳು ಆನಂದ ಪಡಬೇಕು. ಆ ರೀತಿ ಆಚರಿಸಬೇಕು ಎಂದು ತೀರ್ಮಾನಿಸಿ, ಹುಟ್ಟುಹಬ್ಬದ ದಿನ ಒಂದು ಬೆಟ್ಟದ ಮೇಲೆ ಮುಂಜಾನೆ ಕೂರುವುದು. ಆ ದಿನ ಜನ ಬರಬೇಕು. ಅವರು ಬೆಳಗಿನಿಂದ ಸಂಜೆಯವರೆಗೆ ಎಷ್ಟು ಜಮೀನನ್ನು ಸುತ್ತುತ್ತಾರೋ ಅಷ್ಟು ಜಮೀನು ನೀಡುವುದಾಗಿ ಡಂಗೂರ ಸಾರಿಸಿದ. ರಷ್ಯಾದಲ್ಲಿ ಬಹುತೇಕ ಎಲ್ಲರಿಗೂ ಜಮೀನು ಇತ್ತು. ಹಾಗಾಗಿ ಕೇವಲ ಒಬ್ಬ ವ್ಯಕ್ತಿ ಬಂದ. ಆತನಿಗೆ ಜಮೀನಿನ ಕೊರತೆ ಇರಲಿಲ್ಲ. ಆದರೆ ಹೆಚ್ಚು ಜಮೀನು ಪಡೆದು, ಶ್ರೀಮಂತನಾಗಿ ಬದುಕಿ, ಸಾಯಬೇಕು ಎಂಬುದು ಅವನ ಆಸೆಯಾಗಿತ್ತು. ಹುಟ್ಟುಹಬ್ಬದ ದಿನ ರಾಜ ಬಂದು ಬೆಟ್ಟದ ಮೇಲೆ ಒಂದು ಚೇರ್ ಹಾಕಿಕೊಂಡು ಕುಳಿತನು. ಆಸೆ ಹೊಂದಿರುವ ಒಬ್ಬ ವ್ಯಕ್ತಿ ಮಾತ್ರ ಬಂದಿದ್ದಾನೆ. ರಾಜನಿಗೆ ಬಹಳ ಸಂತೋಷ. ಒಬ್ಬನಾದರೂ ಬಂದನಲ್ಲ ಎಂದು. ಬಂದ ವ್ಯಕ್ತಿ ಬಂದು ಹೆಗಲಿಗೆ ನೀರಿನ ಬಾಟಲಿ ಹಾಗೂ ಊಟದ ಡಬ್ಬಿ ಮತ್ತೊಂದು ಹೆಗಲಿನಲ್ಲಿ ಗುದ್ದಲಿಯನ್ನು ನೇತು ಹಾಕಿಕೊಂಡಿದ್ದ. ಇವರೆಲ್ಲ ಸೂರ್ಯೋದಯಕ್ಕೆ ಮುನ್ನ ಬಂದಿದ್ದರು. ಸೂರ್ಯೋದಯಕ್ಕೆ ಸರಿಯಾಗಿ ಗಂಟೆ ಬಾರಿಸಿದರು. ಬಂದಿದ್ದ ವ್ಯಕ್ತಿ ಓಡಲು ಶುರು ಮಾಡಿದ. ಜಮೀನಿನ ಆಸೆಯಿಂದ, ಊಟ ಮತ್ತು ನೀರು ಕುಡಿಯುವುದನ್ನು ಮರೆತಿದ್ದ. ಓಡುವುದು, ಗುದ್ದಲಿಯಿಂದ ಗುರುತು ಮಾಡುವುದು ಮಾತ್ರ ನಡೆದಿತ್ತು. ಸಂಜೆಯಾಗುತ್ತಾ ಬಂದಿತ್ತು, ಊಟ ತಿಂದಿರಲಿಲ್ಲ. ನೀರು ಕುಡಿದಿರಲಿಲ್ಲ. ಸಂಜೆಯಾಗುವುದರಲ್ಲಿ ಬೆಟ್ಟ ತಲುಪಿದ್ದ. ಏದುಸಿರು ಬಿಡುತ್ತಿದ್ದ. ಬಂದವನೇ ಇಷ್ಟು ಆಸ್ತಿ ತನ್ನದೆಂದು ಹೇಳಿದ. ಆಸ್ತಿ ಆತನದಾಗಿತ್ತು. ದೇಹ ನಿತ್ರಾಣವಾಗಿತ್ತು. ಹೃದಯ ನಿಂತಿತ್ತು. ದೇಹ ಬಿಟ್ಟಿದ್ದ. ಆಸ್ತಿ ಆತನನ್ನು
ಕೊಲ್ಲಲಿಲ್ಲ. ಆಸೆ ಆತನನ್ನು ಕೊಂದಿತ್ತು.
ಇಂದು ಆಸ್ತಿ, ಹಣ, ಅಧಿಕಾರ ಮತ್ತು ಒಡವೆಗಾಗಿ ಬಡಿದಾಡಿ ಸಾಯುತ್ತಿದ್ದಾರೆ. ಆಸ್ತಿ , ಹಣ, ಅಧಿಕಾರ ಮತ್ತು ಒಡವೆ ಮನುಷ್ಯನನ್ನು ಕೊಲ್ಲುವುದಿಲ್ಲ. ಆಸೆ ಮನುಷ್ಯನನ್ನು ಕೊಲ್ಲುತ್ತದೆ. ಮಕ್ಕಳೇ ಜಗತ್ತು ನಿಂತಿರುವುದು ಕ್ರಿಯೆಗಳ ಮೇಲೆ. ಸದಾ ಯಾವುದಾದರೂ ಒಂದು ಕೆಲಸದಲ್ಲಿ ತೊಡಗಿರಬೇಕು. ನಮ್ಮ ಹೃದಯ, ಶ್ವಾಸಕೋಶ ಏನಾದರು ವಿಶ್ರಾಂತಿ ಪಡೆದರೆ ಅಥವಾ ನಿವೃತ್ತಿ ಪಡೆದರೆ ಜೀವವೇ ಇರುವುದಿಲ್ಲ. ಅವು ಸದಾ ಕೆಲಸದಲ್ಲಿ ತೊಡಗಿರುತ್ತವೆ. ಹಾಗಿದ್ದ ಮೇಲೆ ನಾವು ಕೂಡ ಸದಾ ಕೆಲಸ ಮಾಡುತ್ತಿರಬೇಕು. ನಿಸರ್ಗ ಏನು ಸಾಮರ್ಥ್ಯ ನೀಡಿದೆಯೋ ಆ ಸಾಮರ್ಥ್ಯ ಬಳಸಿ ಆನಂದ ನೀಡುವಂತೆ ಕೆಲಸ ಮಾಡುತ್ತಿರಬೇಕು, ವಿನಹ ಜೀವ ಹೋಗುವಂತಿರಬಾರದು. ಯಾವುದೇ ಆಗಿರಲಿ ಅದು ಆನಂದಕ್ಕಾಗಿ ಇರಬೇಕು. ಮದುವೆಯಾಗಲಿ, ಮನೆಯಾಗಲಿ, ಮಕ್ಕಳಾಗಲಿ ಉದ್ಯೋಗವಾಗಲಿ ಯಾವುದೇ ಇರಲಿ ಅದು ಆನಂದಕ್ಕಾಗಿ ಎನ್ನುವುದನ್ನು ಮರೆಯಬಾರದು. ಆನಂದವಿಲ್ಲದಿದ್ದರೆ ಇವು ಏಕೆ ಬೇಕು? ಆದರೆ ನಾವು ಆನಂದಕ್ಕಾಗಿ ಕೆಲಸ ಮಾಡದೆ ದುರಾಸೆಗಾಗಿ ಕೆಲಸ ಮಾಡುತ್ತೇವೆ. ಈ ದುರಾಸೆ ಮನುಷ್ಯನನ್ನು ಕೊಲ್ಲುತ್ತಿದೆ ಅಲ್ಲವೇ ಮಕ್ಕಳೇ.
.........................................ಎಂ.ಪಿ. ಜ್ಞಾನೇಶ್
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************