-->
ಸ್ವಾತಂತ್ರ್ಯ ಎಂಬ ಜವಾಬ್ದಾರಿ...

ಸ್ವಾತಂತ್ರ್ಯ ಎಂಬ ಜವಾಬ್ದಾರಿ...

ಮಕ್ಕಳ ಜಗಲಿಯ ಎಲ್ಲಾ ಓದುಗರಿಗೂ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಶುಭಾಶಯಗಳು.......


            "ನಾಳೆಯಿಂದ ಭಾರತ ಸ್ವತಂತ್ರ. ಆದರೆ ಇಂದು ರಾತ್ರಿಯೇ ದೇಶ ವಿಭಜನೆಯಾಗುತ್ತದೆ. ನಾಳೆ ಅತ್ಯಂತ ದುಃಖದ ದಿನ. ಇದು ಜವಾಬ್ದಾರಿಯ ಹೊರೆಯನ್ನು ನಮ್ಮ ಮೇಲೆ ಹೊರಿಸಿದೆ. ದೇವರು ನಮಗೆ ಆ ಹೊರೆಯನ್ನು ಭರಿಸುವ ಶಕ್ತಿಯನ್ನು ಕೊಡಲಿ" - ಇದು ಮಹಾತ್ಮಾ ಗಾಂಧೀಜಿಯವರ ಮಾತು.
     1947ರ ಆಗಸ್ಟ್ 14 ರ ರಾತ್ರಿ ಪ್ರಥಮ ಪ್ರಧಾನ ಮಂತ್ರಿಯಾಗಿ ಜವಾಹರ ಲಾಲ್ ನೆಹರೂ ಪ್ರಮಾಣ ವಚನ ತೆಗೆದುಕೊಂಡ ನಂತರ ಮಾತನಾಡಬೇಕಿತ್ತು. ಅದಕ್ಕಾಗಿ ಸಿದ್ಧತೆ ಮಾಡಿ ಲಿಖಿತ ಭಾಷಣವನ್ನು ತಯಾರಿಸಬೇಕೆಂದು ಅವರು ಬಯಸಿದ್ದರು. ಆದರೆ ಇಡೀ ದಿನ ಬಿಡುವಿಲ್ಲದ ಒತ್ತಡಗಳಿಂದ ಸಾಧ್ಯವಾಗಲಿಲ್ಲ. ರಾತ್ರಿ ಊಟ ಮುಗಿಸಿ ಭಾಷಣ ಬರೆಯಲು ಯೋಚಿಸಿದ್ದರು. ಆದರೆ ನೆಹರೂ ಕುಟುಂಬದ ಸದಸ್ಯರೊಂದಿಗೆ ಊಟಕ್ಕೆ ಕುಳಿತಿದ್ದಾಗಲೆ ಲಾಹೋರ್ ನಿಂದ ಅವರಿಗೆ ದೂರವಾಣಿ ಕರೆ ಬಂದಿತು. ಊಟ ಬಿಟ್ಟೆದ್ದು ಕರೆಯನ್ನು ತೆಗೆದುಕೊಂಡರು. ಸುಮಾರು ಅರ್ಧ ಗಂಟೆ ಸಂಭಾಷಣೆ ನಡೆಯಿತು. ವಿಚಾರ ಲಾಹೋರ್ ನಲ್ಲಿ ನಡೆದ ಮತೀಯ ಹತ್ಯಾಕಾಂಡಕ್ಕೆ ಸಂಬಂಧಿಸಿತ್ತು. ಊಟ ಸೇರಲಿಲ್ಲ. ನೆಹರೂ ಅವರಿಗೆ ಲಿಖಿತ ಭಾಷಣವನ್ನು ತಯಾರಿಸುವ ಮನಸ್ಥಿತಿಯೇ ಉಳಿದಿರಲಿಲ್ಲ. ಭಾಷಣವನ್ನು ತಯಾರಿಸದೆಯೇ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋದರು. ಆದರೆ ಆ ದಿನ ಅವರು ಮಾಡಿದ ಭಾಷಣ 20ನೆಯ ಶತಮಾನದ ವಿಶ್ವದ 11 ಅತ್ಯುತ್ತಮ ಭಾಷಣಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವುದನ್ನು 'ದಿ ಗಾರ್ಡಿಯನ್' ಪತ್ರಿಕೆ ತಿಳಿಸಿದೆ.
      ನಾವೆಲ್ಲ ಸ್ವಾತಂತ್ರ್ಯ ದಿನಾಚರಣೆಯನ್ನು ರಾಷ್ಟ್ರ ನಾಯಕರ ಮೇಲೆ ಒಂದಷ್ಟು ಟೀಕೆಗಳನ್ನು ಮಾಡುತ್ತಾ, ಒಂದು ಸಂಭ್ರಮದ ದಿನವಾಗಿಯೆ ಆಚರಿಸುತ್ತೇವೆ. ಆದರೆ ಒಂದನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದವರಿಗೆ ಅದು ಮಾಡಬೇಕಾದ ಒಂದು ಕೆಲಸದ ರೂಪದಲ್ಲಿತ್ತೇ ಹೊರತು ಅಭೂತ ಪೂರ್ವ ಸಂಭ್ರಮವೇನೂ ಆಗಿರಲಿಲ್ಲ. ಗಾಂಧೀಜಿಯಂತೂ ದೆಹಲಿಯಿಂದ ಬಹು ದೂರದ ಕಲ್ಕತ್ತಾದಲ್ಲಿ ಮತೀಯ ಗಲಭೆಗಳನ್ನು ತಡೆಯುವುದರಲ್ಲಿ ನಿರತರಾಗಿದ್ದರೆ ಹೊರತು ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾಗವಹಿಸಲೂ ಇಲ್ಲ. ಗವರ್ನರ್ ಜನರಲ್ ಲೂಯಿ ಮೌಂಟ್ ಬ್ಯಾಟನ್ ಬಲು ನೋವಿನಿಂದಲೇ "ಇವತ್ತು ನನ್ನೊಂದಿಗೆ ಇರಲೇ ಬೇಕಾದ ವ್ಯಕ್ತಿ ಇಲ್ಲದಿರುವ ಶೂನ್ಯತೆ ಆವರಿಸಿದೆ" ಎಂದೇ ಹೇಳುತ್ತಾರೆ. ಸ್ವಾತಂತ್ರ್ಯವನ್ನು ಗಳಿಸಿಕೊಂಡಾಗ ನಡೆದ ಮತೀಯ ಗಲಭೆಗಳು ಮತ್ತು ದೇಶ ವಿಭಜನೆಯ ಅಪಾರ ಸಾವು ನೋವುಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಸ್ವಾತಂತ್ರ್ಯವನ್ನು ಒಂದು ಸಂಭ್ರಮವಾಗಿ ಆಚರಿಸುವ ಕಾಲಮಾನದ ಭಾರತವೇ ಆಗ ಇರಲಿಲ್ಲ. ಆ ಸನ್ನಿವೇಶ ಹೇಗಿತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳದೆ ಮೊದಲನೆಯ ಸ್ವಾತಂತ್ರ್ಯ ದಿನವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.
                     ಮೊತ್ತ ಮೊದಲು ಗವರ್ನರ್ ಜನರಲ್ ಮತ್ತು ವೈಸರಾಯ್ ಎಂಬ ಪರಿಕಲ್ಪನೆಗಳನ್ನು ತಿಳಿದುಕೊಳ್ಳಬೇಕು. ತನ್ನದೇ ಸ್ವತಂತ್ರ ಅಧಿಕಾರವನ್ನು ಹೊಂದಿದ್ದ ಆಡಳಿತಾತ್ಮಕ ಮುಖ್ಯಸ್ಥ ಗವರ್ನರ್ ಜನರಲ್. ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯ ಮುಖ್ಯಸ್ಥನಾಗಿ ಭಾರತಕ್ಕೆ ಬಂದ ಮೊದಲ ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್. ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯ ಕೊನೆಯ ಗವರ್ನರ್ ಜನರಲ್ ಕ್ಯಾನಿಂಗ್. ಕ್ಯಾನಿಂಗ್ ಅವರ ಅವಧಿಯಲ್ಲಿ 1857ರ ಕ್ರಾಂತಿ ನಡೆದು ಬ್ರಿಟಿಷ್ ಸರಕಾರ ಭಾರತದಲ್ಲಿ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವನ್ನು ಕೊನೆಗೊಳಿಸಿ ತಾನೇ ಆಡಳಿತವನ್ನು ನಡೆಸಲು ಪ್ರಾರಂಭಿಸುತ್ತದೆ. ಆಗ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್ ಜನರಲ್ ಹುದ್ದೆ ರದ್ದಾಯಿತು. ಆಮೇಲೆ ಭಾರತದಲ್ಲಿದ್ದುಕೊಂಡು ಆಡಳಿತ ನಡೆಸಿದವರು ಬ್ರಿಟಿಷ್ ಸರಕಾರದ ಪ್ರತಿನಿಧಿಗಳೆ ಹೊರತು ಸ್ವತಂತ್ರ ಅಧಿಕಾರ ಹೊಂದಿದವರಲ್ಲ. ಬ್ರಿಟನ್ನಿನ ರಾಣಿ ಕ್ಯಾನಿಂಗ್ ಅವರನ್ನೆ ತನ್ನ ಸರಕಾರದ ಪ್ರತಿನಿಧಿಯಾಗಿ ಮಾಡುತ್ತದೆ. ಕ್ಯಾನಿಂಗ್ ಭಾರತದ ಮೊದಲ ವೈಸರಾಯ್. ಭಾರತ ಸ್ವಾತಂತ್ರ್ಯ ಶಾಸನವನ್ನು ಅನುಷ್ಠಾನಗೊಳಿಸಲು ಬ್ರಿಟಿಷ್ ಸರಕಾರ 20ಫೆಬ್ರವರಿ 1947ರಂದು ಭಾರತಕ್ಕೆ ಕಳಿಸಿದ ಮೌಂಟ್ ಬ್ಯಾಟನ್ ಕೊನೆಯ ವೈಸರಾಯ್. ಜವಾಹರ ಲಾಲ್ ನೆಹರೂ ಅವರ ಮಧ್ಯಂತರ ಸರಕಾರಕ್ಕೆ ಅಧಿಕಾರ ಹಸ್ತಾಂತರ ಮಾಡಿದ ತಕ್ಷಣ ಬ್ರಿಟಿಷ್ ಚಕ್ರವರ್ತಿಯ ಅಧಿಕಾರವೆ ಹೊರಟು ಹೋಯಿತು. ಆದ್ದರಿಂದ ಆಮೇಲೆ ಮೌಂಟ್ ಬ್ಯಾಟನ್ ವೈಸರಾಯ್ ಅಲ್ಲ. ಆದರೆ ಭಾರತ ಸರಕಾರದ ಮುಖ್ಯಸ್ಥರಾಗಿರುವಂತೆ ನೆಹರೂ ಮತ್ತು ಸರ್ದಾರ್ ಪಟೇಲರು ಮೌಂಟ್ ಬ್ಯಾಟನ್ ಅವರನ್ನು ಆಹ್ವಾನಿಸುತ್ತಾರೆ.     
      15 ಆಗಸ್ಟ್ 1947ರಿಂದ ಮೌಂಟ್ ಬ್ಯಾಟನ್ ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಆಗುತ್ತಾರೆ. ಯಾಕೆಂದರೆ ಈಗ ಅವರ ಅಧಿಕಾರ ಬ್ರಿಟಿಷ್ ಸರಕಾರದ ಪ್ರತಿನಿಧಿತ್ವದ್ದಲ್ಲ. ಭಾರತದ ತಾತ್ಕಾಲಿಕ ಸಂಸತ್ತಾಗಿಯೂ ಕೆಲಸ ಮಾಡಿದ ಸಂವಿಧಾನ ರಚನಾ ಸಭೆಯು ಸೃಷ್ಟಿಸಿದ ಭಾರತ ಸರಕಾರದಿಂದಲೆ ಕೊಡಮಾಡಿದ ಅಧಿಕಾರ. ಆದ್ದರಿಂದ ಭಾರತದ ಮುಖ್ಯಸ್ಥರಾಗಿ ಅವರಿಗೆ ಸ್ವತಂತ್ರ ಅಧಿಕಾರವಿತ್ತು. ಮೌಂಟ್ ಬ್ಯಾಟನ್ ಅವರು 20ಜೂನ್ 1948ರಂದು ಬ್ರಿಟನ್ ಗೆ ಹೊರಟು ಹೋದರು. 21ಜೂನ್ 1948ರಿಂದ ಸಿ.ರಾಜಗೋಪಾಲಾಚಾರಿ ಅವರು ಸ್ವತಂತ್ರ ಭಾರತದ ಮೊದಲ ಮತ್ತು ಕೊನೆಯ ಭಾರತೀಯ ಗವರ್ನರ್ ಜನರಲ್ ಆಗಿ ಅಧಿಕಾರ ವಹಿಸಿಕೊಂಡು 25 ಜನವರಿ 1950ರ ವರೆಗೂ ಅಧಿಕಾರದಲ್ಲಿದ್ದರು. 26 ಜನವರಿ 1950ರಂದು ಜಾರಿಗೆ ಬಂದ ಸಂವಿಧಾನವು ರಾಷ್ಟ್ರಪತಿ ಹುದ್ದೆಯನ್ನು ಸೃಷ್ಟಿಸಿದ್ದರಿಂದ ಗವರ್ನರ್ ಜನರಲ್ ಹುದ್ದೆ ಶಾಶ್ವತವಾಗಿ ರದ್ದಾಯಿತು.
                 ಮೊದಲ ಸ್ವಾತಂತ್ರ್ಯ ದಿನದ ಸಂಭ್ರಮದ ಬಹುದೊಡ್ಡ ತಡೆ ದೇಶೀಯ ರಾಜರುಗಳ ಸಂಸ್ಥಾನಗಳಾಗಿದ್ದವು. ಅವಿಭಜಿತ ಭಾರತದಲ್ಲಿ 635 ಸಂಸ್ಥಾನಗಳು; ಅಂದರೆ 635 ರಾಜರುಗಳಿದ್ದರು. ಅವರವರ ರಾಜ್ಯದಲ್ಲಿ ಅವರು ಒಳಾಡಳಿತದಲ್ಲಿ ಸ್ವತಂತ್ರರಾಗಿದ್ದರು. ಬ್ರಿಟಿಷ್ ಸರಕಾರ ಸ್ವತಂತ್ರಗೊಳಿಸಿದ್ದು ಬ್ರಿಟಿಷರ ನೇರ ಅಧೀನದಲ್ಲಿದ್ದ ಭಾರತದ ಪ್ರದೇಶಗಳನ್ನು ಮಾತ್ರ. ರಾಜರುಗಳ ರಾಜ್ಯವನ್ನು ನೆಹರೂ ಸರಕಾರದ ಅಧೀನಕ್ಕೆ ಒಪ್ಪಿಸುವ ಅಧಿಕಾರ ಬ್ರಿಟಿಷರಿಗೆ ಇರಲಿಲ್ಲ. ಯಾಕೆ ಎಂಬುದಕ್ಕೆ ಇನ್ನೊಂದು ಹಿನ್ನೆಲೆ ಇದೆ. ಅದೇ ಸಹಾಯಕ ಸೈನ್ಯ ಪದ್ಧತಿ.
        ವೆಲ್ಲೆಸ್ಲಿ ಎಂಬ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್ ಜನರಲ್ ಸಹಾಯಕ ಸೈನ್ಯ ಪದ್ಧತಿ ಎಂಬ ಒಪ್ಪಂದವನ್ನು 1798ರಲ್ಲಿ ಜಾರಿಗೆ ತಂದು ದೇಶೀಯ ರಾಜರುಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಈ ಒಪ್ಪಂದದ ಪ್ರಕಾರ ದೇಶೀಯ ರಾಜರು ಬ್ರಿಟಿಷರ ಅನುಮತಿ ಇಲ್ಲದೆ ಬೇರೆ ರಾಜ್ಯದೊಂದಿಗೆ ಯುದ್ದ ಮಾಡುವ, ಬೇರೆ ರಾಜ್ಯದೊಂದಿಗೆ ಸ್ವತಂತ್ರರಾಗಿ ವ್ಯವಹರಿಸುವ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ. ಈ ರಾಜರುಗಳಿಗೆ ಮಿಲಿಟರಿ ರಕ್ಷಣೆಯನ್ನು ಒದಗಿಸುವ ಜವಾಬ್ದಾರಿ ಬ್ರಿಟಿಷರದು. ಬ್ರಿಟಿಷರ ಒಂದು ಸೈನ್ಯದ ತುಕಡಿ ಮತ್ತು ಒಬ್ಬ ರೆಸಿಡೆಂಟನನ್ನು ತಮ್ಮ ರಾಜ್ಯದಲ್ಲಿಟ್ಟುಕೊಂಡು ಅವರೆಲ್ಲರ ಖರ್ಚನ್ನು ನೋಡಿಕೊಳ್ಳುವುದು ರಾಜರುಗಳ ಜವಾಬ್ದಾರಿಯಾಗಿತ್ತು. ವಿದೇಶಾಂಗ ಮತ್ತು ರಕ್ಷಣೆಯನ್ನು ಹೊರತುಪಡಿಸಿದರೆ ದೇಶೀಯ ರಾಜರುಗಳ ಒಳಾಡಳಿತದಲ್ಲಿ ಬ್ರಿಟಿಷರಿಗೆ ಅಧಿಕಾರ ಇರಲಿಲ್ಲ (ಈಗಲೂ ರಾಜ್ಯಗಳನ್ನು ವಿದೇಶಿ ದಾಳಿಯಿಂದ ರಕ್ಷಿಸುವ ಜವಾಬ್ದಾರಿ ಕೇಂದ್ರ ಸರಕಾರದ್ದಾಗಿದ್ದು ಇದು ಸಹಾಯಕ ಸೈನ್ಯ ಪದ್ಧತಿಯ ತಳಹದಿಯಲ್ಲಿಯೇ ಇದೆ).1858ರಲ್ಲಿ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವನ್ನು ಕೊನೆಗೊಳಿಸಿ ಬ್ರಿಟಿಷ್ ಸರಕಾರವೆ ಆಡಳಿತ ಪ್ರಾರಂಭಿಸಿದಾಗ ಕಂಪನಿಯು ದೇಶೀಯ ರಾಜರುಗಳೊಂದಿಗೆ ಮಾಡಿದ ಒಪ್ಪಂದವನ್ನು ತಾನೂ ಪಾಲಿಸುವುದಾಗಿ ಆಶ್ವಾಸನೆ ನೀಡಿತ್ತು. ಆದ್ದರಿಂದ ಭಾರತ ಸ್ವಾತಂತ್ರ್ಯ ಶಾಸನದಲ್ಲಿ ದೇಶೀಯ ರಾಜರುಗಳಿಗೆ ಏನಾದರೊಂದು ವ್ಯವಸ್ಥೆಯನ್ನು ಮಾಡಬೇಕಾದ ಜವಾಬ್ದಾರಿ ಬ್ರಿಟಿಷ್ ಸರಕಾರಕ್ಕಿತ್ತು.
                    ಬ್ರಿಟನ್ ನಲ್ಲಿ ಕನ್ಸರ್ವೇಟಿವ್ ಪಕ್ಷ ಅಧಿಕಾರದಲ್ಲಿದ್ದು ವಿನ್ಸ್ಟನ್ ಚರ್ಚಿಲ್ ಪ್ರಧಾನ ಮಂತ್ರಿಯಾಗಿದ್ದ ತನಕ ಭಾರತಕ್ಕೆ ಸ್ವಾತಂತ್ರ್ಯವನ್ನು ಕೊಡಲು ಒಪ್ಪಿರಲಿಲ್ಲ. 1946ರಲ್ಲಿ ಬ್ರಿಟನ್ ನಲ್ಲಿ ನಡೆದ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷ ಅಧಿಕಾರ ಕಳೆದುಕೊಂಡು ಲೇಬರ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಲೇಬರ್ ಪಕ್ಷ ತಾನು ಅಧಿಕಾರಕ್ಕೆ ಬಂದರೆ ಭಾರತಕ್ಕೆ ಸ್ವಾತಂತ್ರ್ಯವನ್ನು ಕೊಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿತ್ತು. 20ಫೆಬ್ರವರಿ 1947ರಂದು ಬ್ರಿಟಿಷ್ ಪ್ರಧಾನ‌ ಮಂತ್ರಿ ಕ್ಲೈಮೆಂಟ್ ಅಟ್ಲಿ ಒಂದು ಘೋಷಣೆಯನ್ನು ಹೊರಡಿಸಿ 1948ರ ಜೂನ್ ಗೆ ಮೊದಲು ಭಾರತವನ್ನು ಸ್ವತಂತ್ರಗೊಳಿಸುವುದಾಗಿಯೂ, ದೇಶೀಯ ರಾಜರುಗಳ ಅಧಿಕಾರವನ್ನು ಮುಂದೆ ನಿರ್ಧರಿಸುವುದಾಗಿಯೂ ತಿಳಿಸಿದರು. ಅದೇ ದಿನ ಮೌಂಟ್ ಬ್ಯಾಟನ್ ಅವರನ್ನು ಭಾರತಕ್ಕೆ ಕಳಿಸಿದರು.
        ಈ ನಡುವೆ ದೇಶ ವಿಭಜನೆಯ ಕೂಗು ಭುಗಿಲೆದ್ದು ಮುಸ್ಲಿಂ ಲೀಗ್ ನಾಯಕರೊಂದಿಗೆ, ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆಯ ಮೇಲೆ ಮಾತುಕತೆ ನಡೆಸಿ ಅಂತಿಮವಾಗಿ 3ಜೂನ್ 1947ರಂದು ಮೌಂಟ್ ಬ್ಯಾಟನ್ ಯೋಜನೆಯನ್ನು ರೂಪಿಸಲಾಯಿತು. ಆ ಪ್ರಕಾರ ದೇಶ ವಿಭಜಿಸಿ ಸ್ವಾತಂತ್ರ್ಯ ಕೊಡುವುದು, ದೇಶೀಯ ರಾಜರುಗಳು ಭಾರತ ಅಥವಾ ಪಾಕಿಸ್ಥಾನಕ್ಕೆ ಸೇರಬಹುದು ಅಥವಾ ಸ್ವತಂತ್ರರಾಗಿ ಉಳಿಯಬಹುದು ಎಂದು ನಿರ್ಧರಿಸಲಾಯಿತು. ಇದೇ ಭಾರತ ಸ್ವಾತಂತ್ರ್ಯ ಶಾಸನ.
      ಬ್ರಿಟಿಷ್ ಸಂಸತ್ತಿನಲ್ಲಿ ಮಂಡನೆಯಾದ ಭಾರತ ಸ್ವಾತಂತ್ರ್ಯ ಶಾಸನವನ್ನು ತಡೆಯಲು ವಿರೋಧ ಪಕ್ಷದ ನಾಯಕ ವಿನ್ಸ್ಟನ್ ಚರ್ಚಿಲ್ ಇನ್ನಿಲ್ಲದಂತೆ ಪ್ರಯತ್ನಿಸುತ್ತಾರೆ. "ಈಗಲೆ ಸ್ವಾತಂತ್ರ್ಯ ಕೊಡುವುದು ಬೇಡ. ಭಾರತದ ನಾಯಕರು ಜನರನ್ನು ವಿನಾಶದ ಕಡೆಗೆ ಕೊಂಡೊಯ್ಯುತ್ತಾರೆ. ಅದರ ಪಾಪ ನಿಮ್ಮ‌ ತಲೆಯ ಮೇಲಿದೆ ಮಿಸ್ಟರ್ ಅಟ್ಲಿ" ಎಂದು ಚರ್ಚಿಲ್ ನೇರ ಆರೋಪ ಮಾಡುತ್ತಾರೆ. ಆದರೆ ಮಸೂದೆ ಅಂಗೀಕಾರವಾಗಿ 18ಜುಲೈ1947ರಂದು ಚಕ್ರವರ್ತಿ ಸಹಿ ಮಾಡಿ ಕಾಯ್ದೆಯಾಗಿ ಮಾಡುತ್ತಾರೆ.
                    ಸ್ವಾತಂತ್ರ್ಯದ ಸಂಭ್ರಮವನ್ನು ಒಂದು ಕಡೆಯಿಂದ ಮತೀಯ ಗಲಭೆಗಳು ಹದಗೆಡಿಸಿದವು. ಇನ್ನೊಂದು ಕಡೆಯಿಂದ ದೇಶೀಯ ರಾಜರುಗಳು ಹದಗೆಡಿಸಿದರು. ಬಹುತೇಕ ರಾಜರುಗಳು ಸ್ವತಂತ್ರರಾಗಿ ಉಳಿಯಬಯಸಿದರು. ಮೈಸೂರು ಮಹಾರಾಜರೂ ಸ್ವತಂತ್ರರಾಗಿಯೆ ಇರಬಯಸಿದ್ದರು‌. ರಾಜಭಕ್ತರಾದ ಜನರಿಗೆ ರಾಜರಿಗೆ ಬೇಡದ ಬ್ರಿಟಿಷರ ನಿರ್ಗಮನ ಅವರಿಗೂ ಸಂತೋಷದ ವಿಷಯವಾಗಿರಲಿಲ್ಲ. ರಾಷ್ಟ್ರ ಭಕ್ತರಾದ ಜನರಿಗೆ ಒಂದೆಡೆಯಿಂದ ಮತೀಯ ಗಲಭೆಯ ನೋವು, ಮತ್ತೊಂದು ಕಡೆಯಿಂದ ತಮ್ಮ ರಾಜರು ಭಾರತೀಯ ಒಕ್ಕೂಟಕ್ಕೆ ಸೇರುವಂತೆ ಮಾಡಲು ಮತ್ತೊಂದು ಹೋರಾಟವನ್ನು ಮಾಡಬೇಕಾದ ಒತ್ತಡವಿತ್ತು. ಆಗ ಬಂದ ದೇಶೀಯ ರಾಜರುಗಳ ವಿಲೀನ ಒಪ್ಪಂದದಲ್ಲಿ ರಕ್ಷಣೆ, ಸಂಪರ್ಕ, ವಿದೇಶಾಂಗ ವ್ಯವಹಾರದ ಅಧಿಕಾರವನ್ನು ಭಾರತ ಸರಕಾರಕ್ಕೆ ಬಿಟ್ಟು ಕೊಟ್ಟರೆ ಒಳಾಡಳಿತಕ್ಕಾಗಿ ರಾಜರುಗಳು ಪ್ರತ್ಯೇಕ ಸಂವಿಧಾನ ಮಾಡಿಕೊಳ್ಳಲು ಅವಕಾಶವಿತ್ತು. ಅದೃಷ್ಟವಶಾತ್ ಮೈಸೂರು, ತಿರುವಾಂಕೂರು, ಸೌರಾಷ್ಟ್ರಗಳನ್ನು ಬಿಟ್ಟರೆ ಬೇರೆ ಯಾವ ರಾಜರೂ ಪ್ರತ್ಯೇಕ ಸಂವಿಧಾನ ರಚನಾ ಸಭೆ ಮಾಡಲಿಲ್ಲ. ತಮ್ಮದೇ ಸಂವಿಧಾನ ಸಭೆ ಮಾಡಿದ ರಾಜರುಗಳೂ ಆಮೇಲೆ ಅದನ್ನು ಅನೂರ್ಜಿತಗೊಳಿಸಿ ಭಾರತ ಸಂವಿಧಾನದಲ್ಲೆ ತಮಗೂ ವ್ಯವಸ್ಥೆ ಮಾಡಿ ಎಂದರು‌. ಆದರೆ ಕಾಶ್ಮೀರದ ಮಹಾರಾಜ ಹರಿಸಿಂಗ್ ಮಾತ್ರ ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನವೇ ಆಗಬೇಕೆಂಬ ಷರತ್ತಿನ ಒಪ್ಪಂದವನ್ನೆ ಮಾಡಿದರು. ಆ ಮಟ್ಟಿಗೆ ಹರಿಸಿಂಗ್ ಅನ್ನು ಒಪ್ಪಿಸಲು ಮೌಂಟ್ ಬ್ಯಾಟನ್ ಬಹಳ ಶ್ರಮ ವಹಿಸಿದ್ದರು. ಒಂದು ವೇಳೆ ರಾಜರುಗಳೆಲ್ಲ ಪ್ರತ್ಯೇಕ ಸಂವಿಧಾನಕ್ಕೆ ತೊಡಗಿದ್ದರೆ ದೇಶದ ಒಳಗೆಲ್ಲ ಕಾಶ್ಮೀರಗಳೇ ಆಗಿ ಇಂದಿಗೂ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮವಾಗಲು ಸಾಧ್ಯವಿರಲಿಲ್ಲ. ಈ ವಿಚಾರದಲ್ಲಿನ ಯಶಸ್ಸಿನ ಬಹುಪಾಲು ಸರ್ದಾರ್ ಪಟೇಲರಿಗೆ ಸಲ್ಲಬೇಕು.
               ಮೌಂಟ್ ಬ್ಯಾಟನ್ ಅವರಿಗೆ ಆಗಸ್ಟ್ 15 ತನ್ನ ಅದೃಷ್ಟದ ದಿನ ಎಂಬ ನಂಬಿಕೆ ಇತ್ತು. ಏಕೆಂದರೆ ಜಪಾನ್ ನೊಂದಿಗೆ ನಡೆದ ಯುದ್ಧದಲ್ಲಿ ಕಮಾಂಡರ್ ಆಗಿದ್ದ ಮೌಂಟ್ ಬ್ಯಾಟನ್ ಅವರಿಗೆ ಜಪಾನ್ ಶರಣಾದದ್ದು 1945 ಆಗಸ್ಟ್15ರಂದು. ಭಾರತ ಉತ್ತರೋತ್ತರ ಅಭಿವೃದ್ಧಿಯಾಗಬೇಕು, ಆದ್ದರಿಂದ ಆಗಸ್ಟ್ 15ರಂದೇ ತಾನು ಅಧಿಕಾರ ಹಸ್ತಾಂತರ ಮಾಡುತ್ತೇನೆ ಎಂದು ಮೌಂಟ್ ಬ್ಯಾಟನ್. ಮೌಂಟ್ ಬ್ಯಾಟನ್ ಅವರ ವಿಚಾರಕ್ಕೆ ಭಾರತದ ಜ್ಯೋತಿಷಿಗಳ ತೀವ್ರ ಆಕ್ಷೇಪ. ಆಗಸ್ಟ್ 15ರಂದು ಒಳ್ಳೆಯ ಮುಹೂರ್ತವಿಲ್ಲ; ಆ ದಿನ ಕೂಡದೆ ಕೂಡದು ಎಂದು ಜ್ಯೋತಿಷಿಗಳು. ಕೊನೆಗೆ ಆಗಸ್ಟ್ 14ರ ಮಧ್ಯ ರಾತ್ರಿ ಆಗಬಹುದು ಎಂದು ಆಯಿತು. ಮಧ್ಯರಾತ್ರಿ 12ಗಂಟೆಯಾದರೆ ಬ್ರಿಟಿಷರಿಗೆ 15ನೆಯ ತಾರೀಕು ಬಂದಾಯಿತು. ಮೌಂಟ್ ಬ್ಯಾಟನ್ ಅವರ ಅದೃಷ್ಟದ ದಿನಕ್ಕೆ ಸಮಸ್ಯೆ ಇಲ್ಲ. ಹಿಂದೂಗಳಿಗೆ ದಿನ ಪ್ರಾರಂಭವಾಗುವುದು ಸೂರ್ಯೋದಯದ ನಂತರ. ಆದ್ದರಿಂದ ಹಿಂದೂಗಳಿಗೆ 15ನೆಯ ತಾರೀಕು ಇನ್ನೂ ಬಂದಿರುವುದಿಲ್ಲ. ಜ್ಯೋತಿಷಿಗಳ ಸಮಸ್ಯೆಯೂ ಪರಿಹಾರವಾಯಿತು. ಆದ್ದರಿಂದ ಮಧ್ಯರಾತ್ರಿ ಅಧಿಕಾರ ಹಸ್ತಾಂತರವಾಗುತ್ತದೆ. ಅಲ್ಲಿ ಜ್ಯೋತಿಷಿಗಳು ಮತ್ತೆ ಸಮಯ ನಿಗದಿ ಪಡಿಸುತ್ತಾರೆ. ಮಧ್ಯರಾತ್ರಿ 11.51ರಿಂದ 12.39ರ ನಡುವೆ ಅಧಿಕಾರ ಹಸ್ತಾಂತರವಾಗಬೇಕು ಎಂದಾಗುತ್ತದೆ. ಅದರಲ್ಲಿ ಮತ್ತೆ ಜವಾಹರ ಲಾಲ್ ನೆಹರೂ ಭಾಷಣ ಮುಗಿದ ಕೂಡಲೇ ಶಂಖ ಊದಲಿಕ್ಕಿದೆ; ಆದ್ದರಿಂದ ಶಂಖ ಊದಲು ಸಮಯ ಉಳಿಸಿ ಭಾಷಣ ಮಾಡಬೇಕು ಎಂದಾಗುತ್ತದೆ. ನೆಹರೂ ಅದಕ್ಕೂ ಒಪ್ಪಿಕೊಂಡರು.
                  '14ಆಗಸ್ಟ್ 1947ರಂದು 5ನೆಯ ಅಧಿವೇಷನ ಸೇರಿದ ಸಂವಿಧಾನ ರಚನಾ ಸಭೆ ಸ್ವಾತಂತ್ರ್ಯ ದಿನವನ್ನು ಆಚರಿಸಲು ಆದೇಶ ಮಾಡಿತು. ಮಹಿಳೆಯರ ತಂಡ ರಾಷ್ಟ್ರಧ್ವಜವನ್ನು ಸಂವಿಧಾನ ರಚನಾ ಸಭೆಗೆ ಹಸ್ತಾಂತರಿಸಿತು. ಆಕಾಶಕ್ಕೆ ಹಾರುವ ಚುಕ್ಕಿ ಗಾಳಿಪಟವನ್ನು ಸ್ವಾತಂತ್ರ್ಯದ ಸಂಕೇತವೆಂದು ತೆಗೆದುಕೊಂಡು ಕೆಂಪುಕೋಟೆ ಮೇಲೆಲ್ಲ ಗಾಳಿಪಟವನ್ನು ಹಾರಾಡಿಸಲಾಯಿತು. ಬ್ರಿಟಿಷರ ನೇರ ಅಧೀನದಲ್ಲಿದ್ದ ಪ್ರಾಂತ್ಯಗಳಲ್ಲಿ, ಶಾಲೆಗಳಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗಿತ್ತು. ತಿರುವನಂತಪುರಂನಲ್ಲಿ ಬೃಹತ್ ಸೈಕಲ್ ‌ರ್ಯಾಲಿ ನಡೆಯಿತು. ಆದರೆ ಈ ಎಲ್ಲ ಸಂಭ್ರಮಗಳೂ ವಿಚಾರವಂತರಿಗೆ ಬರಿಯ ಸಂಭ್ರಮವಾಗಿರಲಿಲ್ಲ. ಜವಾಬ್ದಾರಿಯಾಗಿತ್ತು. ಸ್ವಾತಂತ್ರ್ಯವೆಂದರೇನೆ ಜವಾಬ್ದಾರಿ. ಇನ್ನೊಬ್ಬರ ಅಧೀನದಲ್ಲಿರುವವನು ಹೇಳಿದಂತೆ ಕೇಳಿದರೆ ಸಾಕು. ಸ್ವತಂತ್ರನಾದವನು ತನ್ನ, ತನ್ನ ಸಮಾಜದ, ತನ್ನ ರಾಷ್ಟ್ರದ ಒಳಿತನ್ನು ತಾನೇ ಯೋಚಿಸಿ, ನಿರ್ಧರಿಸಿ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ.
.................................. ಅರವಿಂದ ಚೊಕ್ಕಾಡಿ
ಖ್ಯಾತ ಲೇಖಕರು ಹಾಗೂ ಶಿಕ್ಷಣ ತಜ್ಞರು
ಕೊಡಂಗಲ್ಲು ಅಂಚೆ
ಮೂಡುಬಿದಿರೆ ದ.ಕ ಜಿಲ್ಲೆ
574197
Mob : +91 77603 91922
*********************************************





Ads on article

Advertise in articles 1

advertising articles 2

Advertise under the article