-->
ಜೀವನ ಸಂಭ್ರಮ : ಸಂಚಿಕೆ - 48

ಜೀವನ ಸಂಭ್ರಮ : ಸಂಚಿಕೆ - 48

ಜೀವನ ಸಂಭ್ರಮ : ಸಂಚಿಕೆ - 48
                       
            
     ಮಕ್ಕಳೇ..... ನಾವು ಇಂದು ಆನಂದ ಪಡುವುದು ಹೇಗೆ ಎಂದು ತಿಳಿದುಕೊಳ್ಳೋಣ. ಆನಂದ ಹೇಗೆ ಉಂಟಾಗುತ್ತದೆ..? ಆನಂದ ಪಡಲು ಏನು ಬೇಕು...? ಇದರ ಬಗ್ಗೆ ಮನಶಾಸ್ತ್ರದಲ್ಲಿ ಏನು ಹೇಳುತ್ತದೆ ನೋಡೋಣ.  
       ಮಕ್ಕಳೇ ನಾವು ಯಾವುದೇ ವಸ್ತುವನ್ನು ಮನಸ್ಸಿಟ್ಟು ನೋಡಿದಾಗ, ಮನಸ್ಸಿನಲ್ಲಿ ಆ ಚಿತ್ರ ಮೂಡುತ್ತದೆ. ಅದೇ ರೀತಿ ಒಂದು ವಸ್ತುವಿನ ಬಗ್ಗೆ ಕೇಳಿದಾಗ, ಆ ವಸ್ತುವಿನ ಅನೇಕ ಚಿತ್ರಗಳು ಮನಸ್ಸಿನಲ್ಲಿ ಮೂಡುತ್ತದೆ. ಉದಾಹರಣೆಗೆ.... ಹೂ ಎಂದಾಗ ನಾವು ನೋಡಿದ ಅನೇಕ ಹೂವಿನ ಚಿತ್ರಗಳು ಮನಸ್ಸಿನಲ್ಲಿ ಮೂಡುತ್ತದೆ. ಒಂದು ಹೂ ನೋಡಿದಾಗ ಆ ಹೂವಿನ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ. ಆ ಹೂವು ಬಾಡಿದರೂ, ಕಣ್ಮರೆಯಾದರೂ ಸಹ , ಆ ಚಿತ್ರ ಮನಸ್ಸಿನಲ್ಲಿ ಹಾಗೆ ಇರುತ್ತದೆ. ಆನಂದ ಪಡಬೇಕಾದರೆ ಭಾವನೆಗಳು ಮುಖ್ಯ. ಭಾವನೆಗಳಲ್ಲಿ ಎರಡು ವಿಧ. ಧನಾತ್ಮಕ ಭಾವನೆಗಳಾದ ಪ್ರೀತಿ, ಪ್ರೇಮ, ಮರುಕ, ಪರೋಪಕಾರ ಮತ್ತು ಕರುಣೆ ಇತ್ಯಾದಿ. ಋಣಾತ್ಮಕ ಭಾವನೆಗಳಾದ ದ್ವೇಷ, ಅಸೂಯೆ, ಮತ್ಸರ, ಕೋಪ ಮತ್ತು ತಾಪ ಮುಂತಾದವುಗಳು. ಮನಸ್ಸಿನಲ್ಲಿ ಮೂಡಿದ ಚಿತ್ರದ ಜೊತೆ, ಮನಸ್ಸಿನಲ್ಲಿ ಮೂಡಿದ ಭಾವನೆಗಳು ಬೆರೆಯುತ್ತದೆ. ಆ ವಸ್ತುವಿನ ಜೊತೆ ಪ್ರೇಮ ಭಾವನೆ ಮೂಡಿದರೆ, ಮನಸ್ಸಿನಲ್ಲಿ ಆನಂದ ಉಂಟಾಗುತ್ತದೆ. ಆ ವಸ್ತುವಿನ ಜೊತೆ ಋಣಾತ್ಮಕ ಭಾವನೆ ಬೆರೆತರೆ ಮನಸ್ಸಿನಲ್ಲಿ ದುಃಖದ ಅನುಭವವಾಗುತ್ತದೆ. ಸುಖ ದುಃಖಕ್ಕೆ ಮನಸ್ಸಿನ ಭಾವನೆ ಮುಖ್ಯ. ಅಂದರೆ ಚಿತ್ರ ನೋಡುವುದು ಮತ್ತು ಭಾವನೆ ಮೂಡುವುದು ಹಾಗೂ ಆನಂದ ಪಡುವುದು ಮನಸ್ಸು. ಆದರೆ ಈ ಮನಸ್ಸಿನ ಸಂಪರ್ಕಕ್ಕೆ ವಸ್ತುಗಳು ಬರುವುದು ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮಗಳಿಂದ. ನಾವು ಯಾವುದೇ ವಸ್ತುವನ್ನು ನೋಡಿದಾಗ, ಕೇಳಿದಾಗ, ಮೂಸಿದಾಗ, ರುಚಿಸಿದಾಗ ಮತ್ತು ಸ್ಪರ್ಶಿಸಿದಾಗ , ಆ ವಸ್ತುವಿನ ಜೊತೆ ಭಾವನೆ ಬೆರೆತಾಗ, ಯಾವ ಭಾವನೆಗಳು ಬೆರೆಯುತ್ತೋ ಹಾಗೆ ಆನಂದ ಅಥವಾ ದುಃಖ ಉಂಟಾಗುತ್ತದೆ. ಅಂದರೆ ನಿಸರ್ಗ ನಾವು ಆನಂದ ಪಡಲು ಬೇಕಾದ ವ್ಯವಸ್ಥೆಗಳನ್ನು ಮಾಡಿದೆ. ನಮ್ಮನ್ನು ರೂಪಿಸಿದ್ದೆ ನಿಸರ್ಗ. ನಾವು ಆನಂದ ಪಡಬೇಕಾದರೆ ಕಣ್ಣಿನ ಮೂಲಕ ಸುಂದರ ವಸ್ತುಗಳನ್ನು ನೋಡಬೇಕು. ಕಿವಿಗಳ ಮೂಲಕ ಮಧುರ ಧ್ವನಿಗಳನ್ನು ಕೇಳಬೇಕು. ಮೂಗಿನ ಮೂಲಕ ಸುವಾಸನೆಗಳನ್ನು ಆಘ್ರಾಣಿಸಬೇಕು. ನಾಲಿಗೆ ಮೂಲಕ ರುಚಿಗಳನ್ನು ಸವಿಯಬೇಕು ಹಾಗೆ ಸ್ಪರ್ಶದ ಸುಖ , ಕಠಿಣ , ಮೃದು, ಶಾಖದ ಸವಿ ಅನುಭವಿಸಲು ಚರ್ಮ ಬೇಕು. ಅಂದರೆ ಸಂತೋಷ ಪಡಲು ಕಣ್ಣು , ಕಿವಿ, ಮೂಗು , ನಾಲಿಗೆ , ಚರ್ಮ ಮತ್ತು ಮನಸ್ಸು ಬೇಕು. ಇದೆಲ್ಲವನ್ನು ನಿಸರ್ಗ ನಮಗೆ ನೀಡಿದೆ. ಆದರೆ ವಸ್ತುಗಳು ಮಾತ್ರ ಹೊರಗೆ ನಿಸರ್ಗದಲ್ಲಿದೆ ಮತ್ತು ಜಗತ್ತಿನಲ್ಲಿದೆ. ನಾವು ನಿಸರ್ಗ ನೀಡಿದ ಕಣ್ಣು , ಕಿವಿ, ನಾಲಿಗೆ , ಮೂಗು , ಚರ್ಮ ಹಾಗೂ ಮನಸ್ಸನ್ನು ಸರಿಯಾಗಿ ಬಳಸಿದರೆ ಆನಂದ ಪಡಬಹುದು. ನಿಸರ್ಗ ನಮ್ಮನ್ನು ರೂಪಿಸಿದ್ದು , ಆನಂದ ಪಡಲು ವಿನಹ ದುಃಖ ಪಡಲು ಅಲ್ಲ. ಮನುಷ್ಯ ಬದುಕಲು ಬೇಕಾದ ನೀರು, ಗಾಳಿ , ಆಹಾರ ಮತ್ತು ಬೆಳಕನ್ನು ನಿಸರ್ಗವೇ ನೀಡಿದೆ. ಇಷ್ಟೆಲ್ಲಾ ಇದ್ದರೂ ಆನಂದವಿಲ್ಲ ಏಕೆ....? ಏಕೆಂದರೆ ನಾವು ವಸ್ತುಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಿದ್ದೇವೆ. ವಸ್ತುಗಳಲ್ಲಿ ಎಷ್ಟು ಮನಸ್ಸನ್ನು ಕೇಂದ್ರೀಕರಿಸುತ್ತೇವೋ ಅಷ್ಟು ದುಃಖವಾಗುತ್ತದೆ.
ದುಃಖಕ್ಕೆ ಕಾರಣ: 
      1) ಪ್ರತಿಯೊಂದು ವಸ್ತು ಇದ್ದಂತೆ ಇರುವುದಿಲ್ಲ. ಒಂದು ದಿನ ನಾಶವಾಗುತ್ತಿದೆ. ಹಾಗಾಗಿ ಅದು ನಾಶವಾಗುವುದರೊಳಗೆ ಚೆನ್ನಾಗಿ ಬಳಸಿ ಆನಂದಿಸಬೇಕು. ಒಂದು ಹೂವು ಸಂಜೆಯೊಳಗೆ ಬಾಡುತ್ತದೆ ಎಂದು ಗೊತ್ತಾದಾಗ, ಮೊದಲೇ ಮುಡಿದು ಆನಂದ ಪಡಬೇಕು. ವಸ್ತು ಸಂಗ್ರಹ, ಜೀವನದಲ್ಲಿ ಬಳಸಿ ಆನಂದ ಪಡುವುದು. ಜೀವನ ಆಂದರೆ ನಾವು ಸಿರಿವಂತಿಕೆ ತೋರಿಸಲು ಮನೆ ನಿರ್ಮಿಸುತ್ತೇವೆ. ಬೆಲೆಬಾಳುವ ವಸ್ತುಗಳನ್ನು ಖರೀದಿಸುತ್ತೇವೆ. ಆದರೆ ನಿರ್ಮಿಸಿದ ಮನೆಯಲ್ಲಿ ಆನಂದವಾಗಿ ಇಲ್ಲದಿದ್ದರೆ, ಬೆಲೆ ಬಾಳುವ ವಸ್ತು ಧರಿಸಿ ಆನಂದಿಸದಿದ್ದರೆ ಏನು ಪ್ರಯೋಜನ...? ಗಳಿಸಿದ್ದು , ಕೂಡಿಸಿದ್ದು ಬಳಸಿ ಆನಂದ ಪಡುವುದಕ್ಕೆ ಎನ್ನುವುದನ್ನು ಮರೆಯಬಾರದು.
      2) ಹೋಲಿಕೆ ತಪ್ಪು. ಅವರದು ಅವರಿಗೆ, ನಮ್ಮದು ನಮಗೆ. ಇದ್ದುದರಲ್ಲಿ ನಾವು ಆನಂದ ಪಡಬೇಕು. ಜಗತ್ತಿನಲ್ಲಿ ಯಾವುದೇ ಎರಡು ವಸ್ತು ಸಮನಾಗಿಲ್ಲ ಎನ್ನುವುದನ್ನು ತಿಳಿದಿರಬೇಕು. ಅನೇಕ ಜನ ಊಟಕ್ಕೆ ಕುಳಿತುಕೊಳ್ಳುತ್ತೇವೆ. ಎಲ್ಲರೂ ಒಂದೇ ವೇಗದಲ್ಲಿ, ಒಂದೇ ಪ್ರಮಾಣದಲ್ಲಿ ಊಟ ಮಾಡುವುದಿಲ್ಲ. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಊಟ ಮಾಡಿ ಆನಂದಿಸುತ್ತಾರೆ. ಅವರಷ್ಟು ನಾನು ಊಟ ಮಾಡಲಿಲ್ಲ ಎಂದು ಕೊಂಡರೆ ತಾಪವಾಗುತ್ತದೆ. ನಮಗೆ ಸಾಧ್ಯವಿಲ್ಲದಿದ್ದರೂ ಅವರಷ್ಟೇ ಊಟ ಮಾಡಿದರೆ ಅಜೀರ್ಣ ಉಂಟಾಗಿ, ಅನಾರೋಗ್ಯವಾಗುತ್ತದೆ. ಹಾಗಾಗಿ ನಮಗೆ ಸೇರಿದ್ದು ನಮಗೆ. ಅವರಿಗೆ ಸೇರಿದ್ದು ಅವರಿಗೆ ಎನ್ನುವ ಭಾವ ಇರಬೇಕು.
      3) ಈ ಜಗತ್ತೇ ನಮ್ಮದು. ನನ್ನೊಬ್ಬನದಲ್ಲ ಹಾಗೆ ಇನ್ನೊಬ್ಬನದಲ್ಲ. ನಮ್ಮದು ಎಂದಾಗ ಇಲ್ಲಿರುವ ಎಲ್ಲಾ ವಸ್ತು , ಜೀವಿ , ಸಕಲ ವಸ್ತು ನಮ್ಮವೆ. ನಾವು ಕಷ್ಟಪಟ್ಟು ಅನೇಕ ವಸ್ತುಗಳನ್ನು ಸಂಗ್ರಹಿಸುತ್ತೇವೆ. ಇದರ ಮಾಲೀಕರು ನಾವಂದುಕೊಳ್ಳುತ್ತೇವೆ. ಈ ಜಗತ್ತಿನಲ್ಲಿಯ ಯಾವುದೇ ವಸ್ತುವನ್ನು ಬಳಸದೆ ನಾವು ಸೃಷ್ಟಿಸಿದ್ದೇ ಆದಲ್ಲಿ ನಾವು ಅದರ ಮಾಲೀಕರು. ಈಗ ನಾವು ಮಾಲೀಕರೆಂದು ಹೇಳಿಕೊಳ್ಳುವ ವಸ್ತು ನಾವು ಸೃಷ್ಟಿಸಿದ್ದಲ್ಲ. ಈ ಭೂಮಿ ವಸ್ತು ಯಾವತ್ತೂ ನಮ್ಮ ಯಜಮಾನರು ಇವರೆಂದು ಹೇಳಿಲ್ಲ. ಆ ವಸ್ತುಗಳ ಮೇಲೆ ನಮ್ಮ ಹೆಸರಿಲ್ಲ. ಈ ಜಗತ್ತೇ ದೇವನ ವ್ಯಕ್ತ ರೂಪ. ಅಂದರೆ ಇಲ್ಲಿರುವುದೆಲ್ಲ ಅವನದೇ. ನಿಸರ್ಗ ನಮ್ಮನ್ನು ರೂಪಿಸಿದ್ದು, ಇವುಗಳನ್ನು ಬಳಸಿ ಆನಂದಿಸಲಿ ಎಂದು. ಈ ಸಂದರ್ಭದಲ್ಲಿ ನನ್ನ ಊರಿನ ಘಟನೆ ನೆನಪಿಗೆ ಬರುತ್ತದೆ. ನನ್ನ ಊರು ಒಂದು ಹಳ್ಳಿ. ಅಲ್ಲಿ ಪ್ರತಿಯೊಂದನ್ನು ಹಂಚಿಕೊಂಡು ಬಳಸುತ್ತಿದ್ದರು. ನಮ್ಮ ಮನೆಯಲ್ಲಿ ಕಾಯಿತುರಿಯುವ ಮಣೆ, ಸಾವಿಗೆ ಮಣೆ, ನೇಗಿಲು, ಹಲುವೆ ಮತ್ತು ಕುಡುಗೋಲು ಎಲ್ಲಾ ಹಂಚಿಕೊಂಡು ಬಳಸುತ್ತಿದ್ದರು. ಆನಂದ ಪಡುತ್ತಿದ್ದರು. ನಮ್ಮಲ್ಲಿ ಇಲ್ಲದ್ದನ್ನು ಬೇರೆಯವರಿಂದ ಪಡೆದು ಬಳಸುತ್ತಿದ್ದರು. ಜಗತ್ತಿನಲ್ಲಿ ದೊರಕುವ ವಸ್ತುಗಳನ್ನು ಪರಸ್ಪರ ಬಳಸಿ ಆನಂದಿಸಬೇಕು. ಗಳಿಸುವುದು ಜೀವನವಲ್ಲ, ಬಳಸಿ ಆನಂದಿಸುವುದು ಜೀವನ. ನಾವು ಅನುಭವದಲ್ಲಿ ಶ್ರೀಮಂತರಾಗಬೇಕೆ ವಿನಹ ವಸ್ತುಗಳಿಂದಲ್ಲ.
      4) ಸ್ಪರ್ಧೆ ನಮ್ಮೊಳಗೆ ಇರಬೇಕು. ಇಂದಿಗಿಂತ ನಾಳೆ ನಾನು ಉತ್ತಮವಾಗಬೇಕೆಂಬ ಸ್ಪರ್ಧೆ ಇದ್ದಾಗ, ದಿನೇ ದಿನೇ ನಾವು ಬೆಳೆಯಬಹುದು. ಪ್ರಶಸ್ತಿಗಾಗಿ ಸ್ಪರ್ಧೆಯಲ್ಲ. ಸ್ಪರ್ಧೆಯಲ್ಲಿ ನಾನು ಎಷ್ಟು ಆನಂದ ಪಟ್ಟೆ ಅನ್ನುವುದು ಮುಖ್ಯವಾಗುತ್ತದೆ. ಇಲ್ಲಿ ಸ್ಥಾನ ಮುಖ್ಯ ಅಲ್ಲ. ಆನಂದ ಮುಖ್ಯ.
      5) ಅತಿ ಆಸೆ ನಮ್ಮನ್ನು ಕೊಲ್ಲುತ್ತದೆ. ಆಸೆ ಬೇಡವೆಂದಲ್ಲ, ಆಸೆ ಕೊಲ್ಲುವಂತೆ ಇರಬಾರದು. ಯಾವುದನ್ನೇ ಆಗಲಿ ಎಷ್ಟು ಬೇಕೋ, ಅಷ್ಟಕ್ಕೆ ಸೀಮಿತವಾಗಿರಬೇಕು. ಊಟ, ತಿಂಡಿ , ಸಂಬಂಧ ವಸ್ತು ಯಾವುದೇ ಆಗಿರಲಿ ಮಿತವಾಗಿರಬೇಕು. ಯಾವುದೇ ಆಗಿರಲಿ ಕೊರತೆ ಆಗಿರಬಾರದು. ಹೆಚ್ಚು ಆಗಿರಬಾರದು ಮಧ್ಯಮ ದಾರಿ ಸರಿಯಾದ ಮಾರ್ಗ. ಬುದ್ಧ ಹೇಳಿದಂತೆ ಆಸೆಯೇ ದುಃಖಕ್ಕೆ ಮೂಲ.
      6) ನನ್ನದು ಎನ್ನುವುದು ಕಡಿಮೆ ಇದ್ದಾಗ , ನಾನು ಅನ್ನುವ ಅಹಂ ಕಡಿಮೆ ಇರುತ್ತದೆ. ನನ್ನದು ಹೆಚ್ಚಾದಂತೆ ನಾನು ಅನ್ನುವ ಅಹಂ ಹೆಚ್ಚಾಗುತ್ತದೆ. ಅದು ವಸ್ತುವಿನ ಮೇಲೆ ವ್ಯಾಮೋಹ ಹೆಚ್ಚಾಗಿ ಬಂಧನವಾಗುತ್ತದೆ. ಆಗ ಜಗತ್ತನ್ನ ನೋಡಿ ಆನಂದಿಸಲು ಸಾಧ್ಯವಿಲ್ಲ. ನನ್ನದು ಅನ್ನುವುದು ಖಾಯಂ ಆಗಿ ನಮ್ಮಲ್ಲಿ ಇರುವುದಿಲ್ಲ. ಅದನ್ನು ಅರಿತು ನಾನು ನನ್ನದನ್ನು ಕಡಿಮೆ ಮಾಡಿಕೊಂಡರೆ, ಸಂತೋಷ ಪಡಲು ಸಾಧ್ಯ. 
     7) ಆರ್ಥಿಕತೆ ಬೆಳೆದಂತೆ ವಸ್ತುವಿಗೆ ಬೆಲೆ ಕಟ್ಟುತ್ತಿದ್ದೇವೆ. ಬೇರೆ ಬೇರೆ ದೇಶದಿಂದ ವಸ್ತುಗಳನ್ನು ತಂದು ಮನೆಯಲ್ಲಿ ಅಲಂಕಾರಿಕವಾಗಿ ಜೋಡಿಸಿಡುತ್ತೇವೆ. ಅದನ್ನು ಬಳಸಿ ಆನಂದ ಪಟ್ಟಿರುವುದಿಲ್ಲ. ಮಕ್ಕಳೇ ನಾವು ವಸ್ತುವಿಗೆ ಬೆಲೆ ಕಟ್ಟುವುದಲ್ಲ ಬದಲಿಗೆ ಅದರ ಬಳಸಿ ಆನಂದ ಪಡಬೇಕು. ನಾವು ಬಳಸಿ ಎಷ್ಟು ಆನಂದ ಪಟ್ಟಿವಿ ಅನ್ನುವುದು ಮುಖ್ಯ. ಬೆಲೆ ಆನಂದಕ್ಕೆ ವಿನಹ ವಸ್ತುವಿಗೆ ಅಲ್ಲ.
     8) ನಾವು ಹಿಂದಿನ ಕಹಿ ಘಟನೆ ನೆನೆದು ದುಃಖಿತರಾಗುತ್ತೇವೆ. ಆ ಘಟನೆ ಪುನ ಬರುವುದಿಲ್ಲ. ಆಗಿದ್ದು ಆಗಿಹೋಗಿದೆ, ಚಿಂತಿಸಿ ಫಲವಿಲ್ಲ. ಹಾಗೆಯೇ ನಾಳೆಯ ಬಗ್ಗೆ ಚಿಂತಿಸಿ ಫಲವಿಲ್ಲ. ಈ ಕ್ಷಣ ಏನಿದಿಯೋ ಅದು ನಮ್ಮದು. ಈ ಕ್ಷಣವನ್ನು ಆನಂದ ಪಡುವಂತೆ ಬಳಸಬೇಕು. ಈ ಕ್ಷಣವನ್ನು ಆನಂದಿಸಬೇಕಾದರೆ , ಎಲ್ಲಾ ಮರೆತುಬಿಡಬೇಕು. ಆಗ ಮನಸ್ಸು ಈ ಕ್ಷಣವನ್ನು ಆನಂದಿಸುತ್ತದೆ.
     9) ನಿಸರ್ಗ ನಮಗೆ ಒಂದೊಂದು ಸಾಮರ್ಥ್ಯ ನೀಡಿದೆ. ಆ ಸಾಮರ್ಥ್ಯವನ್ನು ನನಗಾಗಿ ಮತ್ತು ಸಮಾಜಕ್ಕೆ ಬಳಸಿ ಆನಂದಿಸಬೇಕು. ಆ ಸಾಮರ್ಥ್ಯ ಬಳಸಿ ಕೆಲಸ ಮಾಡುವಾಗ ಸ್ವಚ್ಛತೆಗೆ ಮತ್ತು ಸೌಂದರ್ಯಕ್ಕೆ ಒತ್ತು ನೀಡಬೇಕು. ಆಗ ಆನಂದ ತನ್ನಿಂದ ತಾನೇ ಆಗುತ್ತದೆ. ಕೆಲಸ ಮಾಡುವುದೆಂದರೆ ಕೆಲವರು ಬುದ್ದಿ ಬಳಸಿ, ಕೆಲವರು ದೈಹಿಕ ಶ್ರಮ ಬಳಸಿ , ಕೆಲವರು ಹಣ ವಿನಯೋಗಿಸಿ ಕೆಲಸ ಮಾಡುವರು. ಯಾವುದೇ ಕೆಲಸ ಆನಂದ ಕೊಡಬೇಕಾದರೆ ಪ್ರೀತಿಯಿಂದ ಮಾಡಬೇಕು. ಚಿತ್ರಕಲೆ, ಶಿಲ್ಪಕಲೆ , ನೃತ್ಯ, ಸಂಗೀತ, ವ್ಯವಸಾಯ, ವ್ಯಾಪಾರ , ಮತ್ತು ಪ್ರವಚನ ಯಾವುದೇ ಇರಲಿ, ಇಷ್ಟಪಟ್ಟು ಪ್ರೀತಿಯಿಂದ ಮಾಡಬೇಕು. ನಾವು ಎಲ್ಲಾ ಸಾಮರ್ಥ್ಯವನ್ನು ಪಡೆಯಲು ಸಾಧ್ಯವಿಲ್ಲ. ನಮ್ಮಲ್ಲಿರುವ ಸಾಮರ್ಥ್ಯವನ್ನು ಬಳಸಿ ಆನಂದ ಪಡಬೇಕು. ನಮ್ಮಲ್ಲಿಲ್ಲದ ಸಾಮರ್ಥ್ಯವನ್ನು ನೋಡಿ, ಕೇಳಿ, ಮುಟ್ಟಿ , ರುಚಿಸಿ ಆನಂದಿಸುವ ಮನಸ್ಸು, ಬುದ್ದಿ ಮತ್ತು ಜ್ಞಾನ ಬಹಳ ಮುಖ್ಯ.
      10) ಆನಂದ ಪಡಲು ಮನೋಭಾವನೆಗಳು ಮುಖ್ಯ. ಪ್ರೇಮ ಮನೋಭಾವ ಇದ್ದರೆ, ಎಲ್ಲದರಲ್ಲೂ ಆನಂದ ಕಾಣಬಹುದು. ಕೆಟ್ಟದ್ದನ್ನು ನೋಡಿ ಬುದ್ಧಿ ಹೊಲಸಾಗುತ್ತದೆ. ಆಗ ನೋಡಿದ್ದು, ಕೇಳಿದ್ದು ಎಲ್ಲ ಕೆಟ್ಟದಾಗಿ ಕಾಣಲು ಶುರುವಾಗುತ್ತದೆ. ಇದರಿಂದ ಆನಂದ ಹೇಗೆ ಉಂಟಾಗಲು ಸಾಧ್ಯ....? ಜಗತ್ತು ಅಂದಾಗ ಒಳ್ಳೆಯದು ಕೆಟ್ಟದ್ದು ಇರುತ್ತದೆ. ಗುಲಾಬಿ ಹೂ ನೋಡಿದಾಗ ಆನಂದವಾಗುತ್ತದೆ. ಆದರೆ ಅದರ ಮುಳ್ಳನ್ನು ನೋಡಿದಾಗ ಆನಂದವಾಗುವುದಿಲ್ಲ. ಹಾಗಾಗಿ ಪಂಚೇಂದ್ರಿಯಗಳು ಆನಂದ ಪಡುವುದನ್ನು ಕಲಿಯಬೇಕು.
      11) ಸಮಸ್ಯೆ ಕುರಿತು ಚಿಂತಿಸುವುದಲ್ಲ , ಬದಲಿಗೆ ಪರಿಹಾರ ಕುರಿತು ಚಿಂತಿಸಿದರೆ ಆನಂದವಾಗುತ್ತದೆ. ನಾವು ಸಮಸ್ಯೆ ಕುರಿತು ಚಿಂತಿಸಿದರೆ, ಸಮಸ್ಯೆಯ ಭಾಗವಾಗಿ ದುಃಖಿತರಾಗುತ್ತೇವೆ. ಪರಿಹಾರ ಕುರಿತು ಚಿಂತಿಸಿದರೆ ಪರಿಹಾರದ ಭಾಗವಾಗಿ, ಪರಿಹಾರವು ಆನಂದ ಕೊಡುತ್ತದೆ.
       ಮಕ್ಕಳೇ , ಈ ಲೇಖನ ಓದಿದ ಮೇಲೆ ನೀವೇ ನಿರ್ಧರಿಸಿ. ನಿರ್ಧಾರವೇ ಬಹಳ ಮುಖ್ಯ. ವಸ್ತು ಯಾರದು ಅನ್ನೋದು ಮುಖ್ಯವಲ್ಲ. ನೋಡಿ, ಕೇಳಿ, ಆಘ್ರಾಣಿಸಿ, ಮುಟ್ಟಿ ಸಂತೋಷಪಡಲು ಕಲಿಯಬೇಕು.... ಅಲ್ಲವೇ ಮಕ್ಕಳೆ....
.........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************




Ads on article

Advertise in articles 1

advertising articles 2

Advertise under the article