-->
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ : ಸಂಚಿಕೆ - 30

ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ : ಸಂಚಿಕೆ - 30

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 30

       ನಮಸ್ತೆ ಮಕ್ಕಳೇ...... ಭಾರತ ಮಾತೆಯ ಮಡಿಲಿನಲ್ಲಿ ನಾವೆಲ್ಲರೂ ಎಂದಿಗೂ ಸುರಕ್ಷಿತ ಅಲ್ವಾ....? ನಿಮಗೆಲ್ಲರಿಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭಾಶಯಗಳು...
    ಈ ದಿನ ದೇಶದಾದ್ಯಂತ ಸಂಭ್ರಮಕ್ಕೇ ಇದೊಂದೇ ಕಾರಣವಿರಬಹುದೇನೋ... ಅಬ್ಬಾ..! 75 ವರ್ಷಗಳು...! ದೇಶ ದಾಸ್ಯದಿಂದ ಮುಕ್ತವಾಗಲು ನಡೆದ ಹೋರಾಟದ ಹಾದಿಯ ರೋಚಕ ಇತಿಹಾಸವನ್ನೊಮ್ಮೆ ಸಾಧ್ಯವಾದಾಗ ಓದೋಣ. ಆಗ ಅರಿವಾಗಬಹುದು ಈ ಸಂಭ್ರಮದ ಕಾರಣ. ಪರಕೀಯರ ದಾಳಿಗೆ ಒಳಗಾಗುತ್ತಲೇ ಬದಲಾವಣೆಗೆ ತೆರೆದುಕೊಂಡು ಇಂದು ಜಗತ್ತಿನಲ್ಲಿ ಅತ್ಯಂತ ಗೌರವದ ಸ್ಥಾನವನ್ನು ಗಳಿಸಿಕೊಂಡಿದೆ ನಮ್ಮ ದೇಶ.
       ಸುಮಾರು‌ 80ರ ಹರೆಯ ಮೇಲ್ಪಟ್ಟ ಹಿರಿಯರು ನಮ್ಮ ನಡುವಿದ್ದರೆ ಅವರ ನೆನಪುಗಳಲ್ಲಿ ಆ ದಿನಗಳ ಕಥೆಯನ್ನು ಕೇಳಬಹುದಿತ್ತು. ನಿಮ್ಮ ಮನೆಯಲ್ಲಿ ಅಥವಾ ನೆರೆಹೊರೆಯಲ್ಲಿ ಇಂತಹ ಹಿರಿಯರಿದ್ದರೆ ದಯವಿಟ್ಟು ಅವರ ಅನುಭವಗಳಿಗೆ ಕಿವಿಯಾಗಿ. ನಾವೆಷ್ಟು ಅದೃಷ್ಟವಂತರು ಅಲ್ವಾ?  ದಿನಗಳು ಹಾಗೆಯೇ ಇರುತ್ತವೆ... ಒಂದರ ನಂತರ ಇನ್ನೊಂದು ದಿನ ಅದೇ ನಿರ್ಲಿಪ್ತತೆಯಿಂದ ಮುಗಿದು ಹೋಗುತ್ತದೆ. ಬಹುಶಃ ಪ್ರತಿದಿನವನ್ನೂ ಅವಿಸ್ಮರಣೀಯವನ್ನಾಗಿಸ - ಬೇಕಾದವರು ನಾವು.. ! ಕೆಲವರನ್ನು ಗಮನಿಸುತ್ತೇವೆ. ಬಹಳಷ್ಟು ನೀರಸವಾಗಿ, ಎಲ್ಲದರಲ್ಲೂ ತಪ್ಪನ್ನು ಹುಡುಕುತ್ತಾ ದೂರುತ್ತಾ ಏನನ್ನೂ ಮಾಡದೆ ದಿನ ಕಳೆಯುವವರು....! ಬದುಕಿನ ಖುಷಿಯನ್ನು ಕಟ್ಟಿಕೊಳ್ಳಬೇಕಾದವರು ನಾವೇ... ಸೇವೆ, ತ್ಯಾಗ, ಸಹಾಯ, ಸ್ಪಂದನೆ, ಪ್ರೀತಿ, ಕರುಣೆ...... ಹೀಗೆ ಮೌಲ್ಯಗಳ ಜೊತೆಗೆ ದೇಶಪ್ರೇಮ ಜಾಗೃತಗೊಳ್ಳಬೇಕು.
      ಹಾವೇರಿ ಜಿಲ್ಲೆಯ ಮೋಟೆಬೆನ್ನೂರು ಎಂಬುದೊಂದು ಹಳ್ಳಿ. ಆ ಹಳ್ಳಿಯಲ್ಲಿ ದೇಶಭಕ್ತರೊಬ್ಬರು ಭಾಷಣ ಮಾಡುತ್ತಿದ್ದರು. ಅವರ ಭಾಷಣದಲ್ಲಿ “ವಿದೇಶೀ ವಸ್ತ್ರಗಳನ್ನು ತ್ಯಜಿಸಿ ನಮ್ಮ ದೇಶದಲ್ಲೇ ತಯಾರು ಮಾಡಿದ ಬಟ್ಟೆಗಳನ್ನು ತೊಡಬೇಕು” ಎಂದೆಲ್ಲ ಹೇಳುತ್ತಿದ್ದರು. ಆ ಮಾತು ಕೇಳುತ್ತಿದ್ದ 8-10 ವರ್ಷದ ಒಬ್ಬ ಬಾಲಕ ತನ್ನ ತಲೆ ಮುಟ್ಟಿ ನೋಡಿದ. ಅವನ ತಲೆಯ ಮೇಲೆ ವಿದೇಶಿ ಟೊಪ್ಪಿಗೆ ಇತ್ತು. ಕೂಡಲೆ ಟೊಪ್ಪಿಗೆಯನ್ನು ತೆಗೆದು ನೆಲಕ್ಕೆಸೆದ.. ಈ ಬಾಲಕನೇ ಮೈಲಾರ ಮಹಾದೇವಪ್ಪ. ಕರ್ನಾಟಕದಿಂದ ದಂಡಿ ಸತ್ಯಾಗ್ರಹದಲ್ಲಿ ಭಾಗವಹಿಸಿದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆ ಇವರದು. ಮಕ್ಕಳೇ , ಏಳನೆಯ ತರಗತಿಯ ಪ್ರಥಮ ಭಾಷೆ ಕನ್ನಡ ಪಠ‌್ಯ ಪುಸ್ತಕದಲ್ಲಿ ಇವರ ಬಗ್ಗೆ ಪಾಠವಿದೆ. ಅತ್ಯಂತ ಸಣ್ಣ ವಯಸ್ಸಿನಲ್ಲಿ ಶಾಲೆ ತೊರೆದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಖಾದಿ ಸಂಸ್ಥೆ ಯನ್ನು ಸ್ಥಾಪಿಸಿ, ಔಷಧ ಶಾಸ್ತ್ರ ವನ್ನೂ ಅಭ್ಯಾಸ ಮಾಡಿ, ಜನಸೇವೆ, ದೇಶ ಸೇವೆ ಎನ್ನುತ್ತಾ ತಮ್ಮ ಬಾಳನ್ನು ಮುಡಿಪಾಗಿಟ್ಟವರು ಮಹಾದೇವಪ್ಪ ಮತ್ತು ಅವರ ಪತ್ನಿ ಸಿದ್ಧಮ್ಮ. ಬ್ರಿಟಿಷ್ ಸರಕಾರದ ಅಮಾನವೀಯ ಘಟನೆಗಳನ್ನು ಪ್ರತಿಭಟಿಸಲು ಹೋದಾಗ ಅನ್ಯಾಯವಾಗಿ ಗುಂಡೇಟಿಗೆ ಬಲಿಯಾಗಿ ಹುತಾತ್ಮರಾದರು ಮಹಾದೇವಪ್ಪ. ಓದುತ್ತಾ ಹೋದಂತೆ ಇಂತಹ ಸಾವಿರಾರು ಮಹಾತ್ಮರು ದೇಶಕ್ಕಾಗಿಯೇ ಬಾಳನ್ನು ಬೆಳಕಾಗಿಸಿದವರಿದ್ದಾರೆ....!
      ದೇಶಕ್ಕಾಗಿ ನಾವೇನು ಮಾಡಬಹುದು....? ಎನ್ನುವ ಪ್ರಶ್ನೆಗೆ ನಾವೆಲ್ಲರೂ ಜವಾಬ್ದಾರಿಯಿಂದ ಉತ್ತರಿಸಬೇಕಾಗಿದೆ. ಜಗತ್ತಿನ ಎಲ್ಲ ರಾಷ್ಟ್ರಗಳಿಗಿಂತಲೂ ಶ್ರೇಷ್ಠ ವಾದ, ಸುಂದರವಾದ ದೇಶ ನಮ್ಮದು. ಧರೆಯಲ್ಲಿ‌ ಅವತರಿಸಿದ‌ ಸ್ವರ್ಗ‌ ನಮ್ಮ ನೆಲ. ಇಲ್ಲಿನ ಮಣ್ಣು ಮಲಿನವಾಗಬಾರದು. ನೀರು ಅಮೃತವಾಗಬೇಕು. ಗಾಳಿ ಬದುಕಾಗಬೇಕು. ಸಂಬಂಧಗಳು ಬದುಕುಳಿಯಬೇಕು... ಹಿರಿಯರು ಹಾಸಿದ ಸಂಸ್ಕೃತಿ, ಸಂಸ್ಕಾರದ ಪಥದಲ್ಲಿ ಎಡವದಂತೆ ಮುನ್ನಡೆಯುವ ಜೊತೆಗೆ ಮುಂದಿನವರಿಗೂ ಅದೇ ಪಾವಿತ್ರ್ಯತೆಯಿಂದ ವರ್ಗಾಯಿಸಬೇಕಿದೆ... ಈಗಲೂ ಗಡಿಯಲ್ಲಿ ‌ಕಾವಲುಗಾರರಾಗಿ ನಮ್ಮನ್ನು ರಕ್ಷಿಸುವ ಸಲುವಾಗಿ ಹಗಲು ರಾತ್ರಿಯ ಭೇದ ಮರೆತು , ನಾವು ಅನುಭವಿಸುತ್ತಿರುವ ಸಂತೋಷಗಳನ್ನೆಲ್ಲಾ ತೊರೆದು, ದೇಶ ರಕ್ಷಣೆಯಲ್ಲಿ ಪರಮ ಸುಖವನ್ನು ಕಾಣುತ್ತಿರುವ ಸಾವಿರಾರು ಸೋದರರಿದ್ದಾರೆ.. ಅವರಿಗೆ ನಾವೆಂದಿಗೂ ಋಣಿಗಳು.  
     ಮಕ್ಕಳೇ.... ಕಾಲ ಸದ್ದಿಲ್ಲದೆ ಸರಿದು ಹೋಗುತ್ತಿದೆ.... ನಾವು ವರ್ತಮಾನದಲ್ಲಿ ಬದುಕುತ್ತಿದ್ದೇವೆ.... ಗತ ಕಾಲವು ಪಾಠವಾಗವೇಕು.. ಭವಿಷ್ಯ ಭದ್ರತೆಯ ಭರವಸೆಯಾಗಬೇಕಾದರೆ.... ಈ ನೆಲದ ಹಸಿರು ಸೊಬಗು ಉಳಿಯಬೇಕು‌... 75ರಷ್ಟೇ.. ಅಥವಾ... ಅದಕ್ಕಿಂತಲೂ ವಿನೂತನವಾಗಿ ಶತಮಾನೋತ್ಸವದಲ್ಲೂ ಈ ಸಂಭ್ರಮ ಮುಗಿಲು ಮುಟ್ಟಬೇಕು... ನಮ್ಮ ಜವಾಬ್ದಾರಿಗಳು ಹಿರಿದಲ್ಲವೇ......? ತುಂಬಾ ಮಾತನಾಡಿದೆ ಅಲ್ವಾ? ಇನ್ನೊಂದು ವಿಚಾರ... ನಾನು ನಿನ್ನೆ ನಮ್ಮೂರಿನ ದಾರಿಯಲ್ಲಿ ಸಾಗಿದಷ್ಟೂ ದೂರ ರಾಷ್ಟ್ರಧ್ವಜದ ನೆರಳಿತ್ತು. ಮನೆ ಮನೆಗಳಲ್ಲಿಯೂ ಮುಗಿಲನ್ನು ಚುಂಬಿಸುತ್ತಾ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಧ್ಜಜಗಳು ಇದುವರೆಗಿನ ಅಭಿಮಾನವನ್ನು ಇಮ್ಮಡಿಗೊಳಿಸಿತು. ದೇಶ ನನ್ನದು, ನನ್ನದು ನಾಡು ಎನ್ನದ ಮಾನವನೆದೆ ಸುಡುಗಾಡು ಎನ್ನುವ ರಾಷ್ಟ್ರ ಕವಿ ಕುವೆಂಪು ಅವರ ಮಾತು ನೆನಪಾಯಿತು...! ದೇಶವೆಂದರೆ ಉಸಿರು.. ನಿತ್ಯ ಸಂಭ್ರಮ... ಅಭಿಮಾನ..‌ ಗೌರವ.... ಜವಾಬ್ದಾರಿ... ಪ್ರೀತಿ.. ಸ್ಫೂರ್ತಿ.... ಎಲ್ಲವೂ. ಪದಗಳನ್ನು ಮೀರಿದ ಭಾವವನ್ನು ಕೊಡುವ ಅನುಭೂತಿ ಅಲ್ವಾ...? 
     ಕಳೆದ ಸಲದ ನಿಮ್ಮೆಲ್ಲರ ಪತ್ರಗಳು ಎಂದಿನಂತೆ ಪ್ರೀತಿ.. ಭರವಸೆಯ ಗುಚ್ಛವಾಗಿ ಕೈಸೇರಿತು. ನಾನೆಷ್ಟು ಮಾತನಾಡಿದೆ... ನಿಮಗೂ ಮಾತನಾಡಬೇಕು ಅಂತಾ ಅನ್ನಿಸ್ತಿದೆಯಾ...? ತಡಮಾಡದೆ ಬರೆದು ಕಳುಹಿಸಿ. ಸರಿ ಹಾಗಾದ್ರೆ. ಮುಂದಿನ‌ ಪತ್ರದಲ್ಲಿ ಮತ್ತೆ ಭೇಟಿಯಾಗೋಣ. ಆರೋಗ್ಯ ಜೋಪಾನ. ಅಲ್ಲಿಯವರೆಗೆ ಅಕ್ಕನ ನಮನಗಳು. 
................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article