-->
ಸಂಚಾರಿಯ ಡೈರಿ : ಸಂಚಿಕೆ - 7

ಸಂಚಾರಿಯ ಡೈರಿ : ಸಂಚಿಕೆ - 7

ಸಂಚಾರಿಯ ಡೈರಿ : ಸಂಚಿಕೆ - 7

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
 
            ಹಾಸ್ಟೆಲ್ ರೂಂನಲ್ಲಿ ಕೇರಂ ಆಡುತ್ತಿದ್ದ ಗೆಳೆಯರ ಬಳಗವೊಂದು ಚಾರಣಕ್ಕೆ ತೆರಳುವ ಯೋಜನೆ ಹಾಕಿಕೊಂಡಿತ್ತು..... ಗೋಡೆಗಳಿಗೂ ಕಿವಿಯಿದ್ದದ್ದರಿಂದ ಅಕ್ಕಪಕ್ಕದ ಕೋಣೆಗೂ ವಿಚಾರ ವ್ಯಾಪಿಸಿ ನಮ್ಮನ್ನೂ ಸೆಳೆದುಬಿಟ್ಟಿತ್ತು..
        ಅಂತೂ ಇಂತು ಸುಬ್ರಹ್ಮಣ್ಯದ ಕುಮಾರಪರ್ವತ ಏರುವ ಸಾಹಸಕ್ಕೆ ಕೈಹಾಕಿದ್ದೆವು.. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಬಳಿಯ ಕುಮಾರಪರ್ವತದ ತುತ್ತ ತುದಿಗೇರುವ ತುಡಿತದೊಂದಿಗೆ ಎಂಟು ಜನರ ಗುಂಪು ಹೊರಟಿತ್ತು.... ಹಾಸ್ಟೆಲ್‌ನಿಂದ ಹೊರಟಿದ್ದ ನಮ್ಮ ತಂಡ ಸುಬ್ರಹ್ಮಣ್ಯ ತಲುಪೋ ಹೊತ್ತಿಗೆ ಗಂಟೆ ಹನ್ನೆರಡರ ಆಸುಪಾಸಿನಲ್ಲಿತ್ತು.. ದೇವಳದಲ್ಲಿ ಜನಸಂದಣಿ‌ ಹೆಚ್ಚಿದ್ದರಿಂದ ಷಡಾನನನಿಗೆ ಹೊರಗಿನಿಂದಲೇ ನಮಸ್ಕರಿಸಿ , ದೈವಬಲದೊಂದಿಗೆ ನಮ್ಮ ಪ್ರಯಾಣ ಶುರು ಆಗಿತ್ತು..
    ಅಲ್ಲಿಂದ ಸುಮಾರು ಒಂದು‌ ಕಿಲೋಮೀಟರ್ ದೂರದಲ್ಲಿ ಕುಮಾರಪರ್ವತದ ಆಗಮನ ದಾರಿ‌ ಇತ್ತು.. ಅದಾಗಲೇ ಟ್ರೆಕ್ಕಿಂಗ್ ಮುಗಿಸಿ‌ ಬಂದಿದ್ದ ಓರ್ವರು , "ಟೆಂಟ್ ತಂದಿದ್ದೀರಾ ? ರಾತ್ರಿ ಮಲ್ಗೋಕೆ ಏನ್ ಮಾಡ್ತೀರಾ ? ತಿಂಡಿ ತಗೊಂಡಿದೀರಾ ?" ಅಂತೆಲ್ಲಾ ಪ್ರಶ್ನಿಸತೊಡಗಿದರು.. ಅಂತೂ ನಮ್ಮ ಕಾಲ್ನಡಿಗೆ ನಲ್ನುಡಿಯಿಂದ ಆರಂಭವಾಯಿತು.. ನಮ್ಮಲ್ಲಿ‌ ಹೌದು ಎಂಬ ಉತ್ತರದ ಲಭ್ಯತೆ ಇದ್ದಿದ್ದು ಕೊನೆಯ ಪ್ರಶ್ನೆಗೆ ಮಾತ್ರ! ಬೆನ್ನಿಗೇರಿದ್ದ ತಿಂಡಿಪೊಟ್ಟಣಗಳು, ನೀರಿನ ಬಾಟಲಿ, ಬಟ್ಟೆಬರೆಗಳೆಲ್ಲಾ ಹೆಗಲಿನ ಜತೆ ನೋವಿನ ಒಪ್ಪಂದ ಮಾಡಿಕೊಂಡಿದ್ದವೇನೋ ಎಂಬಂತೆ ನಿಧಾನವಾಗಿ ನೋವು ಶುರುವಾಗುತ್ತಿದ್ದರೂ ಹುರುಪಿಗಂತೂ ಎಣೆಯಿರಲಿಲ್ಲ! ನಿಶ್ಯಬ್ದ ಕಾಡಿನಲ್ಲಿ‌ , ಆಳೆತ್ತರದ ಮರಗಳ ನಡುವೆ, ತಂಪಾದ ಗಾಳಿಯ ಹೊಯ್ದಾಟ ಯಾನಕ್ಕೆ ಮೆರುಗು ನೀಡಿತ್ತು.. ಅಲ್ಲೊಂದು ಕ್ಷಣ ಕುಳಿತು , ನಿಂತು ಏರು-ತಗ್ಗು ಹತ್ತಿಳಿಯೋವಾಗ ಸಾಕುಸಾಕಾಗಿತ್ತು.. ದಣಿದ ದೇಹದ ದನಿ ಪ್ರಕೃತಿಗೆ ಕೇಳಿತ್ತೋ ಏನೋ ಹತ್ತಿರದಲ್ಲೇ ಒಂದು ಹೊಳೆಯ ಸದ್ದು ಕೇಳುತ್ತಿತ್ತು.. ಕಾಡಹೊಳೆಯಲ್ಲಿ ಮೀಯದವ ನಾಡಮಳೆಯಲಿ ಮಿಂದಾನೇ ಅಂತಾ ಗೆಳೆಯರ ಚಟಾಕಿ ಹಾರಿತ್ತು.. ತಕ್ಷಣ ಅದರತ್ತ ಓಡಿ , ನೀರಾಟ ಆಡಿದೆವು.. ಸ್ಫಟಿಕದಂತಹ ಶುಧ್ಧ ಸಲಿಲದ ಜಳಕ ಮನಕೆ ಪುಳಕ ತಂದಿತ್ತು.. ಕಾಲಿಗೆರಡು ಜಿಗಣೆಯೂ ಕಚ್ಚಿತ್ತು!
           ಕಡಿದಾದ ದಾರಿಯಲ್ಲಿ , ಹೆಜ್ಜೆಯ ಮೇಲೊಂದು ಹೆಜ್ಜೆಯನಿಡುತ್ತಾ ಬಂದಿದ್ದ ನಮ್ಮ ತಂಡಕ್ಕೆ ಆ ಕಾಡಿನ ಮಧ್ಯದಲ್ಲಿ‌ ಕಂಡ ಏಕೈಕ ಮನೆ 'ಭಟ್ರ ಮನೆ'. ನಿಜಾರ್ಥದಲ್ಲಿ ಅಲ್ಲಿ ಚಾರಣಿಗರಿಗೆ ಊಟ, ಮಲಗಲು ಜಾಗವೂ ಇದ್ದಿತ್ತು.. ನಾವಂತೂ ಅಲ್ಲಿ‌ ಉಳಿಯುವ ಯೋಚನೆಯಲ್ಲಿರಲಿಲ್ಲ.. ಅಲ್ಲಂತೂ ಒಪ್ಪೊತ್ತಿನ ಊಟಕ್ಕೆ ೧೨೦ , ಮಲಗುವ ಅಂದಾಜಿದ್ದರೆ ೧೫೦ ಆಗಿಬಿಡುತ್ತದೆ ಎಂದರು.. ಅಲ್ಲಿಂದ ಸೀದಾ ನಾವು ಫಾರೆಸ್ಟ್‌ ಆಫಿಸ್ ತೆರಳಿ , ಅಲ್ಲಿ ಎಂಟ್ರಿ ಫೀಸ್ ಕುರಿತಾಗಿ ಮಾಹಿತಿ ಪಡೆದೆವು.. ಅದಂತೂ ಒಬ್ಬರಿಗೆ ೩೫೦ , ಒಂದು ವೇಳೆ ಚಾರಣಿಗರು ಸ್ಥಳೀಯರಾಗಿದ್ದರೆ ಉಚಿತ ಎಂದರು.. ಹಾಗೋ ಹೀಗೋ ಚೌಕಾಸಿ ಮಾಡಿ ,೧೦೦ ಕ್ಕಿಳಿಸುವಲ್ಲಿ ಸಫಲರಾಗಿದ್ದೆವು ! ಅಲ್ಲಿಂದ ನಮ್ಮ ತಲೆ ರಾತ್ರಿ ಮಲಗೋ ಜಾಗ ಹುಡುಕೋ ಕಡೆ ಗಮನ ಹರಿಸಿತ್ತು .. ಆಕಡೆ ಈ ಕಡೆ ಅಂತ ಹುಡುಕಿ ಕೊನೆಗೊಂದು ಕಡೆ ನಮ್ಮ ಟಾರ್ಪಾಲಿನ್ ಹರಡಿಬಿಟ್ಟೆವು.. ಎಂಟು ಜನ ಮಲಗಿದ್ದ ಟಾರ್ಪಾಲಿನ್ ಎಂಟಡಿಯೂ ಇದ್ದಿರಲಿಲ್ಲ!ಹೆಂಗೋ ಸೊಳ್ಳೆ ಕಡಿತ, ಛಳಿಯ ಹೊಡೆತ, ಅಕ್ಕಪಕ್ಕದ ಟೆಂಟ್‌ನೋರ ಗೊರಕೆ ಸಹಿಸಿಕೊಂಡು ನಿದ್ದೆ ಮಾಡಿದೆವು ..
       
       ಮುಂಜಾವಿನ ಚುಮುಚುಮು ಚಳಿಯೊಂದಿಗೆ ನಾಲ್ಕು ಗಂಟೆಗೆ ಪ್ರಯಾಣ ಪ್ರಾರಂಭಗೊಂಡಿತ್ತು.. ಅದಕ್ಕೂ ಮುನ್ನ ಅರಣ್ಯ ಕಛೇರಿಯಲ್ಲಿ ನಾವು ಒಯ್ಯಲಿದ್ದ ಪ್ಲಾಸ್ಟಿಕ್‌ಗಳ ಗಣತಿ ಮಾಡಿದರು.. ಸೇಫ್ ಡೆಪಾಸಿಟ್ ಅಂತಾ ೫೦೦ ರೂಪಾಯಿ ತೆಗೆದುಕೊಂಡು , "ಇಷ್ಟು ಪ್ರಮಾಣದ ಪ್ಲಾಸ್ಟಿಕ್ ಮರಳಿ‌ ಬಂದರೆ ಮಾತ್ರ ೫೦೦ ರೂಪಾಯಿ ವಾಪಸು ನೀಡುತ್ತೇವೆ" ಎಂಬ ಷರತ್ತು ವಿಧಿಸಿದ್ದರು. ಭಾನುವಾರದ ದಿನವೂ ಭಾನುತೇಜನಿಗೆ ಬೆಳಗ್ಗೆ ಬೇಗನೆ ಎದ್ದು ಬೆಳಗಲು‌ ಔದಾಸೀನ್ಯ! ಇನ್ನೂ ಬೆಳಕು ಹರಿಯದ ದಾರಿಯಲ್ಲಿ , ಬೆಳಕ ಅರಸುತ್ತಾ , ನಮ್ಮ ಪಯಣ ನವ ಪುಳಕದೊಂದಿಗೆ ಸಾಗಿತ್ತು. ಬೆಟ್ಟ ಏರಿದಷ್ಟು ಮುಗಿಯುತ್ತಿಲ್ಲ ; ಒಂದು ಕ್ಷಣ ಹಿಂತಿರುಗಿ ನೋಡಿದಾಗ ದೂರದಿಂದ ಸಾಲಾಗಿ ಬರುತ್ತಿರುವ ಮಿಣುಕು ನೊಣಗಳಂತೆ ಕಾಣುತ್ತಿದ್ದ ಫ್ಲಾಶ್ ಲೈಟ್ ಹಿಡಿದು ಬರುತ್ತಿದ್ದ ನೂರಾರು ಚಾರಣಿಗರ ದೃಶ್ಯ ಹಬ್ಬದಂತಿತ್ತು.. ರಭಸದಿಂದ ಬೀಸುತ್ತಿದ್ದ ಗಾಳಿಗೆ ನಮ್ಮ ಮೈ imbalance ಆಗಿಬಿಟ್ಟಿತ್ತು.. ನಮ್ಮಲ್ಲಂತೂ ಒಬ್ಬ ತಿಂದಿದ್ದು ಒಂದು ಬನ್ ಇಡೀ ದಿನಕ್ಕೆ , ಅವನಂತೂ ಪಟ - ಪಟನೇ ಬೆಟ್ಟ ಏರೋದನ್ನ ಕಂಡು ಅಚ್ಚರಿಪಟ್ಟಿದ್ದೆ‌..       
       ಕಾಡು, ಬಂಡೆ ಅಂತಾ ಅಲೆದಾಡಿ , ಕೊನೆಗೆ ೭ ಗಂಟೆ ಸುಮಾರಿಗೆ ಕುಮಾರಪರ್ವತದ ತುದಿಗೆ ಮುಟ್ಟಿದ್ದೆವು. 
      ಮೇಘಗಳ ನಿಲ್ದಾಣದಂತಿದ್ದ ಆ ಜಾಗದಲ್ಲಿ ಒಂದೊಂದೆ ಮೋಡಗಳು ಒಂದರ ಹಿಂದೆ ಒಂದರಂತೆ ಸಂದಣಿಯಿಲ್ಲದೆ ಮಂದಗತಿಯಲ್ಲಿ ಮುಂದುವರಿದಿತ್ತು. ಚಂದದಿಂದ ಒಂದು view ಗಾಗಿ ಕಾದಿದ್ದ ನಾವು ಗಾಳಿಗೆ ಮೈಯೊಡ್ಡಿ ತರಹೇವಾರಿ ಚಿತ್ರ ಕ್ಲಿಕ್ಕಿಸಿಕೊಂಡೆವು. ಅಲ್ಲಿ ನೆರೆದಿದ್ದ ಜನ ಜಾತ್ರೆ ಜನರ adventurous feel ಬಗ್ಗೆ ಸ್ಪಷ್ಟವಾಗಿ ಹೇಳುತ್ತಿತ್ತು. ಅಲ್ಲಿ ಒಂದು ಗಂಟೆ ವಿಹರಿಸಿ, ಹಿಂದಿರುಗಿದೆವು. ಏರುವಾಗ ಇದ್ದ ದಣಿವಿಗಿಂತಲೂ , ಇಳಿಯುವಾಗ ವ್ಯಾಪಿಸಿದ್ದ ಕಾಲುನೋವು ಅಸಾಮಾನ್ಯ ಎನಿಸಿತ್ತು. ಅಲ್ಲಿಂದ ಹಿಂದಿರುಗಿ ಸುಬ್ರಹ್ಮಣ್ಯ ಸಿಟಿ ತಲುಪೋವಾಗ ೧-೪೫ ಆಗಿತ್ತು..
     ಒಟ್ಟಾರೆ ಸದಾ ಜಂಗಮವಾಣಿಯ ಜಗತ್ತಿನಲ್ಲಿ ಜಾಲಾಡುತ್ತಿದ್ದ ನಮಗೆ ಕುಮಾರಪರ್ವತದ ಟ್ರೆಕ್ಕಿಂಗ್ ಹೊಸ ಥ್ರಿಲ್ ನೀಡಿತ್ತು.. ಕರ್ನಾಟಕದ ಅತ್ಯಂತ ಕಠಿಣ ಚಾರಣ ತಾಣವಾದ ಕುಮಾರ ಪರ್ವತದಲ್ಲಿ ಟೆಂಟ್ ಇಲ್ಲದೆ ಕೊರೆವ ಚಳಿಗೆ ಬರೀ ಒಂದು ಟಾರ್ಪಾಲಿನ್ ಮೇಲಿನ‌ ನಿದ್ದೆ , ಅನಿರೀಕ್ಷಿತವಾಗಿ ಸಿಕ್ಕಿದ್ದ ಹೊಳೆಯಲ್ಲಿನ ಸ್ನಾನ, ಅಡವಿಯ ಮೌನ , ಏರು ಬೆಟ್ಟಗಳ ಸ್ತಬ್ಧ ಧ್ಯಾನ ಮರೆಯಲಾಗದ ಅನುಭವಕ್ಕೆ ಸಾಕ್ಷಿ ಆಗಿತ್ತು..
▪️ಕುಕ್ಕೆ ದೇವಳದಿಂದ ೧೪ ಕಿ.ಮೀ ಇದೆ.. (ಎಂಟ್ರಿ ಪಾಯಿಂಟ್ ೧ಕಿಮಿ)
▪️ಟೆಂಟ್ ವಗೈರೆ ಒಯ್ದರೆ ಒಳ್ಳೆಯದು..
▪️ತುಂಬಾ ಚಳಿ ಇರುವ ಕಾರಣ ಸ್ವೆಟರ್‌ನಂತಹ ಬೆಚ್ಚಗಿನ ಉಡುಪು ತೆಗೆದುಕೊಳ್ಳಿ..
▪️ನಡೆಯಲು ಶಕ್ತಿಗಾಗಿ ಆದಷ್ಟು ಪ್ರೋಟೀನ್‌ಯುಕ್ತ ಆಹಾರ ಒಯ್ಯುವುದು ಉತ್ತಮ..
▪️ಎಂಟ್ರೀ ಫೀಸ್ ೩೫೦
ಕ್ಯಾಂಪ್ ಫಯರ್ ನಿಷೇಧಿಸಲಾಗಿದೆ..
▪️ಅಲ್ಲೇ ಅಡಿಗೆ ಮಾಡೋದಿದ್ದರೆ ,ಅರಣ್ಯ ಕಛೇರಿಯ ಬಳಿ ಮಾಡಬಹುದು..
       ಮುಂದಿನ ವಾರ ಇನ್ನಷ್ಟು ಹೊಸ ಊರುಗಳ ಹೊಸ ಸುದ್ದಿಗಳೊಂದಿಗೆ ಮತ್ತೆ ಸಿಗುತ್ತೇನೆ... ಬಾಯ್....
......................................... ಸುಭಾಸ್ ಮಂಚಿ 
ಕಾಡಂಗಾಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
******************************************

Ads on article

Advertise in articles 1

advertising articles 2

Advertise under the article