-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 60

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 60

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    

             ಇನ್ನೊಬ್ಬರ ಜೀವನದಲ್ಲಿ ನಮ್ಮ ನಮ್ಮ ಪಾತ್ರಗಳನ್ನು ಬೇಗ ತಿಳಿದುಕೊಳ್ಳಬೇಕು.ಇಲ್ಲವಾದರೆ ಭ್ರಮಾ ಲೋಕದಲ್ಲಿನ ನಮ್ಮ ಬದುಕು ಸತ್ತ ಹೆಣಗಳಿಗಿಂತ ಭಾರವಾಗಿರುತ್ತೆ. ಅದೊಂದು ಪ್ರಸಿದ್ಧ ನಾಟಕ ಕಂಪೆನಿ. ಅಲ್ಲೊಬ್ಬ ಕಲಾವಿದನು ಇಡೀ ನಾಟಕದಲ್ಲಿ ತನಗೆ ಕೊಟ್ಟಿರುವ ಪಾತ್ರವನ್ನು ಅರ್ಥೈಸಿಕೊಂಡು ಅದಕ್ಕೆ ನ್ಯಾಯವನ್ನು ಒದಗಿಸುತ್ತಿದ್ದನು. ಅಲ್ಲದೆ ತನ್ನ ಜತೆಗಾರ ಕಲಾವಿದರ ಜತೆ ಸರಳವಾಗಿ ವರ್ತಿಸಿ ಅವರವರ ಪಾತ್ರಗಳ ಬಗ್ಗೆ ಚರ್ಚಿಸಿ ಅವರಿಗೆ ಧನಾತ್ಮಕ ಬೆಂಬಲ ನೀಡಿ , ಅಗತ್ಯವಿದ್ದರೆ ಮಾತ್ರ ಸಲಹೆಗಳನ್ನು ನೀಡುತ್ತಾ ನಾಟಕದ ಯಶಸ್ವಿಗೆ ಕೊಡುಗೆ ನೀಡುತ್ತಿದ್ದನು. ಅದೇ ತಂಡದಲ್ಲಿದ್ದ ಇನ್ನೊಬ್ಬ ಕಲಾವಿದನು ತಾನೇ ಶ್ರೇಷ್ಠ ಕಲಾವಿದ , ತನಗಿಂತ ದೊಡ್ಡ ಕಲಾವಿದರೇ ಇಲ್ಲ ಎಂಬ ಭ್ರಮೆ ಹಾಗೂ ಹುಂಬತನದಿಂದ ತನ್ನ ಪಾತ್ರ ನಿರ್ವಹಣೆ ಬಗ್ಗೆ ಚಿಂತಿಸದೆ ಇತರರ ಪಾತ್ರ ನಿರ್ವಹಣೆ ಬಗ್ಗೆ ಅನಗತ್ಯವಾಗಿ ಮಧ್ಯ ಪ್ರವೇಶಿಸಿ ಅವರಿಗೆ ಹಾಗೆ ಮಾಡಬೇಕು - ಹೀಗೆ ಮಾಡಬೇಕು ಎಂದು ಪುಕ್ಕಟೆ ಸಲಹೆ ನೀಡುತ್ತಿದ್ದ. ಆದರೆ ತನ್ನ ಪಾತ್ರ ನಿರ್ವಹಣೆಯಲ್ಲಿ ಯಾವುದೇ ಸುಧಾರಣೆ ಕಾಣುತ್ತಿರಲಿಲ್ಲ. ಕೊನೆಗೆ ನಾಟಕ ಪ್ರದರ್ಶನ ದಿನ ತನ್ನ ನೀರಸ ಪ್ರದರ್ಶನದೊಂದಿಗೆ ಎಲ್ಲರ ಮನ ಗೆಲ್ಲುವಲ್ಲಿ ಸೋತು ಕೊನೆಗೆ ಮೂಲೆಗುಂಪಾಗುತ್ತಾನೆ. ಕಲಾವಿದನಾಗಿ ಅವಕಾಶ ವಂಚಿತನಾಗುತ್ತಾನೆ. ಆದರೆ ತನ್ನ ಪಾತ್ರದ ಅಗತ್ಯತೆ ಹಾಗೂ ಮಹತ್ವವನ್ನು ಅರಿತ ಕಲಾವಿದ ಎಲ್ಲರಿಂದಲೂ ಮೆಚ್ಚುಗೆ ಗಳಿಸುತ್ತಾನೆ.
       ಹೌದಲ್ವ..... ಗೆಳೆಯರೆ... ನಮ್ಮ ಬದುಕಿನ ನಾಟಕದಲ್ಲೂ ನಮ್ಮ ಪಾತ್ರವನ್ನು ಸರಿಯಾಗಿ ಅರ್ಥೈಸಿಕೊಂಡು , ಇನ್ನೊಬ್ಬರ ಜೀವನದಲ್ಲೂ ನಮ್ಮ ನಮ್ಮ ಪಾತ್ರಗಳ ಅಗತ್ಯತೆ ಬಗ್ಗೆ ತಿಳಿದುಕೊಂಡು ಮುನ್ನೆಡೆಯಬೇಕು. ನಾನಿಲ್ಲದೆ ಇನ್ನೊಬ್ಬರ ಬದುಕು ಸಾಗದು..... ಈ ಲೋಕ ಮುನ್ನಡೆಯದು ಎಂಬ ಭ್ರಮಾ ಲೋಕದಲ್ಲಿ ಮುಳುಗಿ ವರ್ತಿಸಿದರೆ ಕೊನೆಗೊಮ್ಮೆ ನಮ್ಮನ್ನು ನಾವು ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು. ಬದುಕು ಸತ್ತ ಹೆಣಗಳಿಗಿಂತ ಕಡೆಯಾಗಿ ಬಿಡಬಹುದು. ಹಾಗಾಗಿ ಪ್ರತಿಯೊಬ್ಬರು ಸರ್ವಸ್ವತಂತ್ರರು. ಅವರವರಿಗೆ ಅವರದ್ದೆ ಆಗಿರುವ ಕನಸುಗಳಿವೆ.... ಬದುಕುವ ಹಕ್ಕಿದೆ. ಆ ಕನಸುಗಳಿಗೆ ರೆಕ್ಕೆಗಳಾಗಿ ಸಹಕರಿಸೋಣ. ಅಗತ್ಯ ಬೆಂಬಲ ನೀಡೋಣ. ನಮ್ಮ ಕನಸುಗಳನ್ನು ಇನ್ನೊಬ್ಬರ ಮೇಲೆ ಹೇರಿ ಅವನ್ನು ನುಚ್ಚುನೂರಾಗಿಸುವ ಪ್ರಯತ್ನ ಕೈ ಬಿಡೋಣ. ನಾವು ಬದುಕಿ... ಇನ್ನೊಬ್ಬರನ್ನೂ ಬದುಕಲು ಬಿಡೋಣ. ಈ ಮನೋಸ್ಥಿತಿಯ ಬದಲಾವಣೆಗೆ ನಾವೆಲ್ಲರೂ ಬೆಂಬಲವಾಗಿರೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************Ads on article

Advertise in articles 1

advertising articles 2

Advertise under the article