
ಸಂಚಾರಿಯ ಡೈರಿ : ಸಂಚಿಕೆ - 6
Thursday, August 18, 2022
Edit
ಸಂಚಾರಿಯ ಡೈರಿ : ಸಂಚಿಕೆ - 6
ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
ಒಡಿಶಾ ರಾಜ್ಯದಲ್ಲಿರುವ ಹತ್ತಾರು ಪ್ರಖ್ಯಾತ ಪ್ರವಾಸಿ ತಾಣಗಳಲ್ಲಿ ಉದಯಗಿರಿ ಖಂದಗಿರಿ ಗುಹೆಗಳು ಬಹಳ ಪ್ರಸಿದ್ಧಿ ಪಡೆದಿವೆ. ಇವು ಒಡಿಶಾದ ರಾಜಧಾನಿ ಭುಭನೇಶ್ವರದಲ್ಲಿವೆ. ಈ ಗುಹೆಗಳನ್ನ ನಿರ್ಮಿಸಿದಾತ ಖರವೇಲ ಎಂಬ ರಾಜ. ಈತ ಜೈನ ಸನ್ಯಾಸಿಗಳ ವಿಶ್ರಾಂತಿಗಾಗಿ ನಿರ್ಮಿಸಿದ ಎಂದು ಶಾಸನಗಳು ಹೇಳುತ್ತವೆ.
ಅಂದಹಾಗೆ ಈ ಗುಹಾ ರಚನೆಗಳಲ್ಲಿ ದೊಡ್ಡದೆನಿಸಿದ ರಾಣಿಗುಹೆ, ಎರಡು ಮಾಳಿಗೆಯನ್ನು ಹೊಂದಿದ್ದು ದೂರದಿಂದ ನೋಡುವಾಗ ರಾಷ್ಟ್ರಪತಿ ಭವನದಂತೆ ಕಾಣಿಸುತ್ತದೆ. ಕಂಬಗಳು ಶೀತಲೀಕೃತ ವಸ್ತುವಿನಂತೆ ತಣ್ಣಗಿದ್ದು , ಸುಡು ಸುಡು ಬಿಸಿಲಿನ ಭುಭನೇಶ್ವರದಲ್ಲೂ ಈ ಗುಹೆಗಳು ತಂಪಿನ ಆಗರಗಳಾಗಿವೆ..
ಭಾರತೀಯ ಪುರಾತತ್ವ ಇಲಾಖೆಯ ಅಡಿಯಲ್ಲಿ ಬರುವ ಈ ತಾಣದಲ್ಲಿ 10 ಕ್ಕೂ ಹೆಚ್ಚಿನ ಗುಹೆಗಳಿವೆ. ಹಾಥಿಗುಫಾ, ಅನಂತಗುಫಾ, ಗಣೇಶ ಗುಫಾ ಪ್ರಮುಖವಾದುವು. ಈ ಖಂದಗಿರಿ ಹಾಗೂ ಉದಯಗಿರಿ ಗುಹೆಗಳು ವಿರುದ್ಧ ದಿಕ್ಕಿನ ಬೆಟ್ಟಗಳಲ್ಲಿ ನಿರ್ಮಿತವಾಗಿವೆ ಅಂದರೆ ಖಂದಗಿರಿಯ ಎದುರಿನ ಬೆಟ್ಟದಲ್ಲಿ ಉದಯಗಿರಿಯ ಗುಹೆಗಳು ನಿರ್ಮಿತವಾಗಿವೆ. ಪ್ರತಿಯೊಂದು ಗುಹೆಗಳಲ್ಲೂ ಒಂದೊಂದು ವೈಶಿಷ್ಠ್ಯಗಳಿವೆ. ಕೆಲವು ಗುಹೆಗಳು ಯುದ್ಧದ ಸಂಕೇತಗಳನ್ನು ಸೂಚಿಸಿದ್ದರೆ, ಕೆಲವು ಚಿತ್ತರಂಜಿತ ಅಲಂಕಾರಕ್ಕೆ/ಕೆತ್ತನೆಗೆ ಹೆಸರಾಗಿವೆ. ಕೆಲವು ಗುಹೆಗಳಲ್ಲಿ ಕಥೆಗಳಿವೆ, ಇನ್ನುಳಿದುವುಗಳಲ್ಲಿ ಮೂರ್ತಿಗಳಿವೆ. ಬ್ರಾಹ್ಮಿ ಲಿಪಿಯ ಶಾಸನಗಳೂ ಸಹ ಇಲ್ಲಿ ಕಂಡುಬಂದಿವೆ. ಅಂದವಾದ ಮೆಟ್ಟಿಲುಗಳನ್ನು ಗುಹೆಗಳ ಸೌಂದರ್ಯ ಇಮ್ಮಡಿಗೊಳಿಸಿವೆ.
ಈ ತಾಣವನ್ನು ಒಡಿಶಾ ಸರ್ಕಾರ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದೆ ಕಾರಣ ಈ ತಾಣದ ಸುತ್ತಮುತ್ತಲೂ ಅಂದವಾದ ಉದ್ಯಾನ ನಿರ್ಮಾಣ ಮಾಡಿದೆ. ಕುಡಿಯುವ ನೀರು, ಶೌಚಾಲಯ ಎಲ್ಲವೂ ಇದೆ. ಪ್ರವೇಶ ಶುಲ್ಕ ೩೦ ರೂಪಾಯಿ.
ಹೋಗೋದು ಹೇಗೆ: ಒಡಿಶಾ ರಾಜಧಾನಿ ಭುಭನೇಶ್ವರ ದೇಶದ ಬಹುತೇಕ ರಾಜ್ಯಗಳಿಂದ ವಿಮಾನ , ರೈಲು ಸಂಪರ್ಕ ಹೊಂದಿದೆ. ಮುಖ್ಯ ಬಸ್ ನಿಲ್ದಾಣದಿಂದ ನಗರ ಸಾರಿಗೆ ಸೌಲಭ್ಯ ಕೂಡಾ ಇದೆ. ಬಾಡಿಗೆ ಕಾರುಗಳೂ ಲಭ್ಯವಿವೆ.
ಮುಂದಿನ ವಾರ ಇನ್ನಷ್ಟು ಹೊಸ ಊರುಗಳ ಹೊಸ ಸುದ್ದಿಗಳೊಂದಿಗೆ ಮತ್ತೆ ಸಿಗುತ್ತೇನೆ... ಬಾಯ್....
ಕಾಡಂಗಾಡಿ , ಮಂಚಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob : 9663135413
******************************************