-->
ಪ್ರೀತಿಯ ಪುಸ್ತಕ : ಸಂಚಿಕೆ - 20

ಪ್ರೀತಿಯ ಪುಸ್ತಕ : ಸಂಚಿಕೆ - 20

ಪ್ರೀತಿಯ ಪುಸ್ತಕ
ಸಂಚಿಕೆ - 20

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ 

                              ಏತೋ ಮುಂಡಾ ಯುದ್ಧವನ್ನು ಗೆದ್ದ 
      ಪ್ರೀತಿಯ ಮಕ್ಕಳೇ..... ಆದಿವಾಸಿ ಜೀವನದ ಕಥೆ ಇದು. ‘ಏತೋ’ ಒಬ್ಬ ಆದಿವಾಸಿ ಹುಡುಗನ ಹೆಸರು. ಅವನು ಆದಿತ್ಯವಾರ ಅಂದರೆ ಏತವಾರ ಹುಟ್ಟಿದ್ದು. ಅದಕ್ಕೇ ಅವನ ಹೆಸರು ಏತೋ. ಅವನ ಅಜ್ಜ ಮಂಗಲ. ಏತೋನ ಅಮ್ಮ, ಅಪ್ಪ ಇಬ್ಬರೂ ತೀರಿಹೋಗಿ ಅಜ್ಜ ಮಂಗಲನೇ ಏತೋವನ್ನು ಸಾಕುತ್ತಿದ್ದಾರೆ. ಏತೋ ಮತ್ತು ಮಂಗಲ ಇಬ್ಬರೂ ಊರಿನ ಜಮೀನುದಾರ ಮೋತಿಬಾಬು ಹತ್ತಿರ ಕೂಲಿ ಕೆಲಸ ಮಾಡುತ್ತಾರೆ. ಮಂಗಲನಿಗೆ ತನ್ನ ಮೊಮ್ಮಗ ಶಾಲೆಗೆ ಹೋಗಬೇಕು, ಓದಿ ದೊಡ್ಡವನಾಗಬೇಕು ಅಂತ ಬಹಳ ಆಸೆ. ಆದರೆ ಬಡತನದಿಂದಾಗಿ ಕೆಲಸ ಮಾಡಲೇ ಬೇಕಾಗಿರುತ್ತದೆ. ಶಾಲೆಯ ಅಕ್ಕಪಕ್ಕ ಸುಳಿದಾಡುವಾಗೆಲ್ಲಾ ಏತೋಗೆ ಮಾಸ್ತರು ಯುದ್ಧದ ಕತೆಗಳನ್ನು ಹೇಳುವುದು ಕೇಳುತ್ತಿರುತ್ತದೆ. ಅವರ ಸಮುದಾಯದ ಬಿರ್ಸಾ ಮುಂಡ, ಸಿದ್ದು ಮತ್ತು ಕನ್ಹು ಬ್ರಿಟಿಷರ ವಿರುದ್ಧ ಯುದ್ಧ ಮಾಡಿದ ಕತೆಗಳೂ ಅವನ ಕಿವಿಗೆ ಬೀಳುತ್ತಿದ್ದವು. ಈಗ ನಮ್ಮೆದುರು ನಿಲ್ಲುವ ಪ್ರಶ್ನೆ - ಈ ನಮ್ಮ ಏತೋ ಯಾವ ಯುದ್ಧವನ್ನು ಗೆದ್ದಿರಬಹುದು...? ಯಾರ ಜೊತೆಗೆ ಯುದ್ಧ ಮಾಡಿರಬಹುದು....? ಯಾಕೆ ಯುದ್ಧ ಮಾಡಿರಬಹುದು. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪುಸ್ತಕದ ಒಳಗೆ ಇದೆ. ಓದಿ ನೋಡಿ. ಆದಿವಾಸಿ ಬದುಕಿನ ಚಿತ್ರಣ ನೀಡುತ್ತದೆ, ಈ ಪುಸ್ತಕ. ಇದರಲ್ಲಿ ಚಿತ್ರಗಳಿಲ್ಲ, ಛಾಯಾಚಿತ್ರಗಳು ಇವೆ. ಖಂಡಿತವಾಗಿಯೂ ಎಲ್ಲರೂ ಓದಲೇ ಬೇಕಾದ ಪುಸ್ತಕ. 
ಲೇಖಕರು: ಮಹಾಶ್ವೇತಾ ದೇವಿ 
ಅನುವಾದ: ಗೊರೂರು ಶ್ರೀನಿವಾಸಮೂರ್ತಿ 
ಛಾಯಾಚಿತ್ರಗಳು: ರವಿಕಾಂತ್ ದ್ವಿವೇದಿ
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ   
ಬೆಲೆ: ರೂ.8 (ಹಳೆಯ ಪ್ರತಿ, ಈಗ ಬೆಲೆ ಬದಲಾಗಿರಲೂಬಹುದು)
ಎಂಟು, ಒಂಬತ್ತನೆಯ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರ ಸಹಕಾರದೊಂದಿಗೆ ಆರು ಏಳು ತರಗತಿಯವರೂ ಓದಬಹುದು. 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************

     

Ads on article

Advertise in articles 1

advertising articles 2

Advertise under the article