-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 58

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 58

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 58
                  
            ಮನೆ ಜಗಲಿಯ ಮೂಲೆಯಲ್ಲಿರುವ ನೆರಳ ಜಾಗದ ಕುಂಡವೊಂದರಲ್ಲಿ ಬೆಳೆದ ಗುಲಾಬಿಗಿಡದಲ್ಲಿ ಹೂವಿನ ಆಗಮನದ ನಿರೀಕ್ಷೆಯಲ್ಲಿದ್ದ ಹರ್ಷಿತಾಳಿಗೆ ತುಂಬಾ ನಿರಾಶೆಯಾಗಿತ್ತು. ನೀರು-ಗೊಬ್ಬರ ಹಾಕಿ ಬಹು ಕಾಳಜಿಯಲ್ಲಿ ಬೆಳೆಸುತ್ತಿದ್ದ ಗಿಡದಲ್ಲಿ ಇನ್ನೂ ಗುಲಾಬಿ ಹೂವು ಏಕೆ ಹುಟ್ಟಲಿಲ್ಲ...? ಎಂದು ಆಕೆ ಚಿಂತಿತಳಾಗಿದ್ದಳು. ಈ ವಿಚಾರದ ಬಗ್ಗೆ ತುಂಬಾ ಜನರಲ್ಲಿ ಹೇಳಿಕೊಂಡು ಬೇಸರ ಪಡುತ್ತಿದ್ದಳು. ಒಂದು ದಿನ ಇದೇ ವಿಚಾರವನ್ನು ಗೆಳತಿಯಾದ ವಿದ್ಯಾಳಿಗೆ ಹೇಳಿದಳು. ಆಕೆಯು ಜಗಲಿಯ ಮೂಲೆಯಲ್ಲಿರುವ ತುಂಬಾ ನೆರಳಿನ ಜಾಗದಲ್ಲಿ ಗಿಡವನ್ನು ಇಟ್ಟಿದ್ದನ್ನು ಗಮನಿಸಿ ಆ ಕೂಡಲೇ ಗಿಡವನ್ನು ಸಹನೀಯ ಬಿಸಿಲಿರುವ ಜಾಗದಲ್ಲಿ ಇಟ್ಟು ಸ್ವಲ್ಪ ದಿನ ಕಾಯಲು ಹೇಳಿದಳು. ಕೆಲವೇ ದಿನಗಳಲ್ಲಿ ಅದೇ ಗಿಡದಲ್ಲಿ ಮೊಗ್ಗರಳಿ ಗುಲಾಬಿ ಹೂವು ಹೊರಬಂದಿತು. ಗಿಡದ ತುಂಬಾ ಹೂವು ಕಂಡು ಹರ್ಷಿತಾ ಖುಷಿಪಟ್ಟಳು. ಪರಿಸರ ಬದಲಾವಣೆಯಿಂದ ಆದ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಅರಿತಳು. ಹೂವು ಬರಲಿಲ್ಲ ಎಂದು ಗಿಡವನ್ನು ದೂರುವ ಬದಲು ಹೂವು ಬರುವಂಥ ಪರಿಸರದಲ್ಲಿ ಗಿಡ ನೆಟ್ಟರೆ ಖಂಡಿತಾ ಹೂವುಗಳು ಬಿರಿಯುತ್ತದೆ ಎಂಬುದನ್ನು ತಿಳಿದಳು.
       ಹೌದಲ್ಲವೇ ಗೆಳೆಯರೇ , ನಮ್ಮ ಬದುಕು ಕೂಡಾ ಹೂವಿನ ಕುಂಡದಲ್ಲಿರುವ ಗುಲಾಬಿಗಿಡದಂತೆ. ಹತ್ತಾರು ಪ್ರಯತ್ನಗಳು ಹಾಗೂ ಮನಪೂರ್ವಕವಾಗಿ ಕಾಳಜಿ ವಹಿಸಿದರೂ ಒಮ್ಮೊಮ್ಮೆ ನಿರುತ್ಸಾಹ ಪರಿಸರದ ಕಾರಣ ನಮ್ಮಲ್ಲಿ ಸಂತಸ ದಾಯಕ, ನೆಮ್ಮದಿ ಪೂರಕವಾದ ಹಾಗೂ ಸಾಧನೆಯುಕ್ತವಾದ ಹೂವು ಅರಳುವುದಿಲ್ಲ. ಒಮ್ಮೊಮ್ಮೆ ಇದಕ್ಕೆ ನಮ್ಮನ್ನು ನಾವು ದೂಷಿಸುತ್ತೇವೆ. ಕೆಲವೊಮ್ಮೆ ಇನ್ನೊಬ್ಬರನ್ನು ದೂಷಿಸಿ ಹಾಗೂ ಕಾರಣೀಕರಿಸಿ ಸುಮ್ಮನಿದ್ದುಬಿಡುತ್ತೇವೆ. ಆದರೆ ನಮ್ಮೊಳಗಿರುವ ಮೂಲ ಕಾರಣಗಳನ್ನು ಮಾತ್ರ ಹುಡುಕುವುದಿಲ್ಲ. ಒಂದೊಮ್ಮೆ ಮೂಲ ಕಾರಣಗಳನ್ನು ಅರ್ಥೈಸಿ ಅದಕ್ಕೆ ಪರಿಹಾರ ರೂಪದಲ್ಲಿ ತಾನಿರುವ ಪರಿಸರವನ್ನು ಬದಲಾಯಿಸಿಬಿಟ್ಟರೆ ಸಾಧನೆ ಹಾಗೂ ನೆಮ್ಮದಿಯ ಹೂವನ್ನು ಅರಳಿಸಬಹುದು. ಅದರಿಂದಾಗಿ ನಾವೆಲ್ಲರೂ ನೆಮ್ಮದಿಯ ಹಾಗೂ ಸಾಧನೆ ಮಾಡುವಂಥ ಪರಿಸರದಲ್ಲಿ ಇರಬೇಕು. ಆ ಪರಿಸರವನ್ನು ಗುರುತಿಸಿ ಅವನ್ನು ಸಾಧನೆಗೆ ಸೂಕ್ತವಾಗಿ ಬಳಸುವ ಕೌಶಲ ಬೆಳೆಸಬೇಕು. ಆ ಕೌಶಲ ಬೆಳಸುವ ಪಥದತ್ತ ಪಥಿಕರಾಗೋಣ. ಈ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article