-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 59

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 59

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
    
           ಆಶಾವಾದ ಎಂದರೆ ತನಗೆ ಸಿಕ್ಕಿರುವ ಎಲ್ಲಾ ಕಷ್ಟಗಳಲ್ಲಿಯೂ ಅವಕಾಶಗಳನ್ನು ಹುಡುಕುವುದು. ನಿರಾಶಾವಾದ ಎಂದರೆ ತನಗೆ ಸಿಕ್ಕಿರುವ ಎಲ್ಲಾ ಅವಕಾಶಗಳಲ್ಲಿಯೂ ಕಷ್ಟಗಳನ್ನೇ ಹುಡುಕುವುದು. ಆಶಾವಾದ ಎಂದರೆ ನಮ್ಮ ಬಗ್ಗೆ ಹಾಗೂ ನಮ್ಮ ಸುತ್ತಲ ಪ್ರಪಂಚದ ಬಗ್ಗೆ ಸಕಾರಾತ್ಮಕವಾಗಿ ಅರ್ಥೈಸುವುದು ಹಾಗೂ ಎಲ್ಲಾವನ್ನು ಪ್ರಕೃತಿ ಸಹಜವಾಗಿ ಸ್ವೀಕರಿಸುವುದು. ನಿರಾಶವಾದ ಎಂದರೆ ತನ್ನ ಹಾಗೂ ತನ್ನ ಸುತ್ತಲ ಪ್ರಪಂಚದ ಬಗ್ಗೆ ಋಣಾತ್ಮಾಕವಾಗಿ ಅರ್ಥೈಸುವುದು ಹಾಗೂ ಎಲ್ಲವನ್ನು ಅಸಹಜವಾಗಿ ಸ್ವೀಕರಿಸುವುದು. ಆಶಾವಾದವು  ಶ್ರೇಷ್ಠ ಗುರುವಿನಂತೆ ಸದಾ ಕಾಲ ನಮ್ಮ ಹಿತವನ್ನು ಕಾಪಾಡಿ ಬದುಕನ್ನು ಸರಳ ಹಾಗೂ ಸಂಪೂರ್ಣಗೊಳಿಸುತ್ತದೆ. ನಿರಾಶಾವಾದವು  ದೊಡ್ಡ ಪಿಶಾಚಿಯಂತೆ ಸದಾ ಕಾಲ ನಮ್ಮನ್ನು ಹಿಂಬಾಲಿಸಿ ಕಾಡಿಸಿ- ಪೀಡಿಸಿ - ಅಹಿತವನ್ನು ಬಯಸಿ ಬದುಕನ್ನು ಜಟಿಲ ಹಾಗೂ ಅಪೂರ್ಣಗೊಳಿಸುತ್ತದೆ. ಆಶಾವಾದವು ಒಳ್ಳೆಯ ಚಿತ್ರಕ್ಕೆ ಸುಂದರ ಬಣ್ಣವಿದ್ದಂತೆ. ನಿರಾಶಾವಾದವು  ಒಳ್ಳೆಯ ಚಿತ್ರಕ್ಕೆ ಮಸಿ ಬಳಿದಂತೆ. ಆಶಾವಾದವು ಬಿಸಿಲ ಝಳಕ್ಕೆ  ನೀರು ಉಣಿಸಿದಂತೆ ಉಪಯುಕ್ತವಾದದ್ದು. ನಿರಾಶಾವಾದವು ನೆಮ್ಮದಿಯ ಗಿಡಕ್ಕೆ ವಿಷ ಬೆರೆಸಿದಂತೆ ಅಪಾಯಕಾರಿಯಾದದ್ದು. ಆಶಾವಾದವು ಬದುಕಿನ ಕತ್ತಲನ್ನು ಹೋಗಲಾಡಿಸುವ ದೀಪದ ಬೆಳಕಿದ್ದಂತೆ. ನಿರಾಶಾವಾದವು ನೆಮ್ಮದಿಯ ಬದುಕಿಗೆ ಕೊಳ್ಳಿ ಇಟ್ಟಂತೆ .
         i , m , p , o , s , s , i , b , l , e  ಎಂಬ ಆಂಗ್ಲ ಅಕ್ಷರಗಳನ್ನು i m Possible ಎಂಬ ಪದವಾಗಿ ಆಶಾವಾದಿ ಗ್ರಹಿಸಿದರೆ impossible ಎಂಬ ಪದವಾಗಿ  ನಿರಾಶಾವಾದಿ ಗ್ರಹಿಸುತ್ತಾನೆ. ಗಿಡದಲ್ಲಿರುವ ಗುಲಾಬಿ ಹೂವನ್ನು ನೋಡಿ  "ಆಹಾ ! ಎಷ್ಟೊಂದು ಮುಳ್ಳುಗಳ ಮಧ್ಯೆಯೂ ಸುಂದರವಾದ ಗುಲಾಬಿ ಅರಳಿ ನಿಂತಿದೆ. ನಿಜಕ್ಕೂ ಗ್ರೇಟ್ " ಎಂದು ಆಶಾವಾದಿ ಅರ್ಥೈಸುತ್ತಾನೆ . ಅದೇ ಘಟನೆಯನ್ನು "ಛೆ !  ಎಷ್ಟು ಚಂದದ ಗುಲಾಬಿ ಹೂವಿದ್ದರೇನು. ಅದರ ಸುತ್ತಲೂ ಮುಳ್ಳುಗಳಿವೆ. ಹಾಗಾಗಿ ಗುಲಾಬಿಯ ಬದುಕೇ ವ್ಯರ್ಥ" ಎಂದು ನಿರಾಶಾವಾದಿ ಭಾವಿಸುತ್ತಾನೆ. ಲೋಟವೊಂದರಲ್ಲಿ ಅರ್ಧ ಭಾಗ ತುಂಬಿದ ನೀರನ್ನು ನೋಡಿ "ಒಂದು ಲೋಟದಲ್ಲಿ ಅರ್ಧ ಭಾಗವಾದರೂ  ನೀರು ತುಂಬಿದೆ" ಎಂದು ಆಶಾವಾದಿಯು ಖುಷಿ ಪಡುತ್ತಾನೆ. ಆದರೆ  ನಿರಾಶಾವಾದಿಯು "ಒಂದು ಲೋಟದಲ್ಲಿ ಅರ್ಧ ಭಾಗ ಇನ್ನೂ ಖಾಲಿ ಇದೆ. ಕೇವಲ ಅರ್ಧ ಭಾಗ ಮಾತ್ರ ತುಂಬಿದೆ" ಎಂದು ಅತೃಪ್ತಿ ವ್ಯಕ್ತಪಡಿಸುತ್ತಾನೆ. ಆಶಾವಾದಿ ಎಂದರೆ ಹಗಲ ಬಾನಿಗೆ ಸೂರ್ಯನಂತೆ - ಇರುಳ ಬಾನಿಗೆ ಚಂದ್ರನಂತೆ ಸದಾ ಕ್ರಿಯಾಶೀಲ. ನಿರಾಶಾವಾದಿ ಎಂದರೆ ಹಗಲ ಬಾನಿನಲ್ಲೂ ಅಮಾವಾಸ್ಯೆಯನ್ನು ಕಲ್ಪಿಸುವವ. ತಂಪಾದ ಇರುಳ ಬಾನಿನಲ್ಲೂ ಬಿಸಿಯನ್ನು ಅನುಭವಿಸುವವ.  ಆಶಾವಾದಿ ಎಂದರೆ ತನ್ನ ಧನಾತ್ಮಕ ಚಿಂತನೆಗಳ ಮೂಲಕ ಮನದೊಳಗೆ ನೀರು - ಸಾಬೂನುಗಳಿಲ್ಲದೆ ಸ್ನಾನ ಮಾಡಿ ಬದುಕನ್ನು ಸ್ವಚ್ಛವಾಗಿ ಇರಿಸುವಾತ. ನಿರಾಶಾವಾದಿ ಎಂದರೆ ತನ್ನ ನೇತ್ಯಾತ್ಮಕ ಚಿಂತನೆಗಳ ಮೂಲಕ ಕೊಳೆ ಸಹಿತನಾಗಿ ಬದುಕನ್ನು ಅಸ್ವಚ್ಛಗೊಳಿಸುವಾತ.  ಆಶಾವಾದಿಗಳನ್ನು ಎಲ್ಲರೂ ಬಯಸುತ್ತಾರೆ. ಅವರು ಎಲ್ಲರಿಗೂ ಸ್ಫೂರ್ತಿದಾಯಕರು. ಆಶಾವಾದಿಯು ಸದಾ ತನ್ನಲ್ಲಿ ತನಗೆ ನಂಬಿಕೆಯುಳ್ಳವನಾಗಿರುತ್ತಾನೆ. ನಿರಾಶಾವಾದಿಯೂ ಸದಾ ತನ್ನಲ್ಲಿ ತಾನೇ ಸಂಶಯಪಡುವವನಾಗಿರುತ್ತಾನೆ. ನಿರಾಶಾವಾದಿಗಳನ್ನು ಎಲ್ಲರೂ ದೂರವಿಡುತ್ತಾರೆ. ಅವರು ಎಲ್ಲರಿಗೂ ಅಪಥ್ಯರಾಗುತ್ತಾರೆ. ಆಶಾವಾದಿಯು ಸದಾ ಹಸನ್ಮುಖಿಯಾಗಿ ದೀರ್ಘಕಾಲ ಸುಖಿಯಾಗಿ ನೆಮ್ಮದಿಭರಿತ, ಸ್ನೇಹಪೂರಿತ, ಸತ್ವ ರುಚಿತ, ಆರೋಗ್ಯಯುಚಿತವಾದ ಸಫಲ ಜೀವನವನ್ನು ನಡೆಸುತ್ತಾನೆ. ಆದರೆ ನಿರಾಶಾವಾದಿಯು ಸದಾ ಗೊಂದಲಭರಿತ , ಸಂಶಯಪೀಡಿತ, ನೆಮ್ಮದಿ ರಹಿತ ವಿಫಲ ಜೀವನ ನಡೆಸುತ್ತಾನೆ
      ಭಗವಾನ್  ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆಯ ಸಾರವನ್ನು ಅರ್ಥೈಸಿದರೆ ಬದುಕನ್ನು ಸರಳವಾಗಿ ನೆಮ್ಮದಿಯಾಗಿ ನಿಶ್ಚಿಂತವಾಗಿ ಬಾಳಬಹುದು. ಸದಾ ಆಶಾವಾದಿಯಾಗಿರಲು ದೇವರ ಈ ಕೆಳಗಿನ ವೇದವಾಕ್ಯಗಳೇ ನಮಗೆ ಅಮರತ್ವವನ್ನು ನೀಡಬಹುದು. ದಾರಿದೀಪವಾಗಿ ಕೊನೆತನಕ ಕಾಪಾಡಬಹುದು. 
"ಆದದೆಲ್ಲಾ ಒಳ್ಳೆಯದಕ್ಕಾಗಿ ಆಗಿದೆ
ಆಗುವುದೆಲ್ಲವೂ ಒಳ್ಳೆಯದಕ್ಕಾಗಿ ಆಗುತಿದೆ
ಇನ್ನು ಮುಂದೆ ಆಗಲಿರುವುದೂ 
ಸಹ ಒಳ್ಳೆಯದಕ್ಕೆ ಆಗಲಿದೆ.
ರೋದಿಸಲು ನೀನೇನು ಕಳೆದುಕೊಂಡಿರುವೆ ?
ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು ? 
ನಾಶವಾಗಿರುವುದು ಯಾವುದಾದರೂ 
ನೀನು ಸೃಷ್ಟಿಸಿರುವುದೋ ?  
ನೀನು ಏನ್ನನ್ನು ಪಡೆದಿರುವೆಯೋ 
ಅದು ನಿನಗೆ ಇಲ್ಲಿಯೇ ದೊರೆತಿರುವುದು. 
ನೀನು ಏನನ್ನು ನೀಡಿರುವೆಯೋ 
ಅದು ಇಲ್ಲಿಂದಲೇ ನೀಡಿರುವೆ. 
ಇಂದು ನಿನಗಿರುವುದೆಲ್ಲಾ ನಿನ್ನೆ 
ಬೇರೆ ಯಾರದ್ದೂ ಆಗಿತ್ತು. 
ನಾಳೆ ಅದು ಮತ್ತೆ ಯಾರದ್ದೂ ಆಗಲಿದೆ. 
ಪರಿವರ್ತನೆ ಜಗದ ನಿಯಮ......"
      ಬನ್ನಿ... ಆಶಾವಾದದ ಬದುಕಿನೆಡೆಗೆ ಹೆಜ್ಜೆಯನ್ನಿಡುವ ಬದಲಾವಣೆಯತ್ತ ಪಥಿಕರಾಗೋಣ. ಈ ಬದಲಾವಣೆಗೆ  ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
...........................  ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************


Ads on article

Advertise in articles 1

advertising articles 2

Advertise under the article