-->
ವರದಿ - ಆಜಾದಿಕಾ ಅಮೃತ ಮಹೋತ್ಸವ - 2022 : ಸಂಚಿಕೆ - 3

ವರದಿ - ಆಜಾದಿಕಾ ಅಮೃತ ಮಹೋತ್ಸವ - 2022 : ಸಂಚಿಕೆ - 3

ವರದಿ - ಆಜಾದಿಕಾ ಅಮೃತ ಮಹೋತ್ಸವ - 2022
ಸಂಚಿಕೆ - 3
ತಮ್ಮ ಶಾಲೆಯಲ್ಲಿ ಜರುಗಿದ 
75 ನೇ ಸ್ವಾತಂತ್ರ್ಯೋತ್ಸವ
ಕಾರ್ಯಕ್ರಮದ ಕುರಿತಾಗಿ 
ವಿದ್ಯಾರ್ಥಿಗಳು 
ಬರೆದಿರುವ ವರದಿ



    ನಾನು ಸಾತ್ವಿಕ್ ಗಣೇಶ್. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಮತ್ತು 75ನೆಯ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭಾಶಯಗಳು.
             ನಮ್ಮ ಶಾಲೆಯಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದೆವು.... ಶಾಲಾ ಮುಖ್ಯೋಪಾಧ್ಯಾಯರು ದ್ವಜಾರೋಹಣವನ್ನು ನೆರವೇರಿಸಿದರು. ದ್ವಜಾರೋಹಣದ ವೇಳೆ ನಾವೆಲ್ಲರೂ ಜೊತೆಯಾಗಿ ರಾಷ್ಟ್ರಗೀತೆ, ವಂದೇ ಮಾತರಮ್, ದ್ವಜಗೀತೆಯನ್ನು ಹಾಡಿ ಗೌರವವನ್ನು ಸಮರ್ಪಿಸಿದೆವು. ನಂತರ ಚಾಕಲೇಟ್ ನ್ನು ಮಕ್ಕಳಿಗೆ ಕೊಟ್ಟರು. ನಾವೆಲ್ಲರೂ ಜೊತೆಯಾಗಿ ಸುಮಾರು 2 ಕಿಲೋ ಮೀಟರ್ ದೂರ ರಾಷ್ಟ್ರ ದ್ವಜ, ಘೋಷವಾಕ್ಯ, ಸ್ವಾತಂತ್ರ್ಯ ಹೋರಾಟಗಾರರ ವೇಷ ಹಾಕಿ ಮೆರವಣಿಗೆ ಸಾಗಿದೆವು. ಆಮೇಲೆ ಸಾಂಸ್ಕೃತಿಕ ಕಾರ್ಯಕ್ರಮವು ಜರಗಿತು. ಸ್ವಾತಂತ್ರ್ಯದ ಬಗ್ಗೆ ಭಾಷಣವನ್ನು ವಿದ್ಯಾರ್ಥಿಗಳು ಮಾಡಿದರು. 75 ಜನ ವಿದ್ಯಾರ್ಥಿನಿಯರು ಸೇರಿ "ಮಿಲ್ಕ್ ಛಲೋ" ಹಿಂದಿ ಸಮೂಹಗಾನ ವನ್ನೂ ಹಾಡಿದೆವು. ಕೊನೆಯಲ್ಲಿ ಬಹುಮಾನ ವಿತರಣೆಯನ್ನು ಮಾಡಿದರು. ಮಕ್ಕಳಿಗೆ ಮದ್ಯಾಹ್ನ ಪಾಯಸದ ಊಟವನ್ನು ಉಣಬಡಿಸಿದರು .
........................................ ಸಾತ್ವಿಕ್ ಗಣೇಶ್ 
8ನೇ ತರಗತಿ 
ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
******************************************


ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಆಚರಣೆ:
    ನಾನು ಲಹರಿ ಜಿ.ಕೆ. ನಮ್ಮ ತುಂಬೆ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ನಾವು ಬಹಳ ಸಡಗರದಿಂದ ಆಚರಿಸಿದೆವು. ನಮ್ಮ ಶಾಲೆಯ ಅಧ್ಯಕ್ಷರಾದ ಶ್ರೀಯುತ ಸಲಾಮ್ ಅವರು ಹಾಗೂ ಜಗನ್ನಾಥ ಚೌಟ ರವರು ಧ್ವಜಾರೋಹಣ ನೆರವೇರಿಸಿದರು ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಬಗ್ಗೆ ಭಾಷಣ ಮಾಡಿದರು. ಪ್ರಾಚಾರ್ಯರಾದ ಶ್ರೀಯುತ ಗಂಗಾಧರ ಆಳ್ವರು ದೇಶಕ್ಕಾಗಿ ಹೋರಾಡಿದ ಮಹನೀಯರ ಬಗ್ಗೆ ಮಾಹಿತಿ ನೀಡಿದರು. ಉಪನ್ಯಾಸಕರಾದ ಶ್ರೀಯುತ ದಿನೇಶ್ ಶೆಟ್ಟಿ ಯವರು ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲಾ ವಿದ್ಯಾರ್ಥಿಗಳು ಸುಶ್ರಾವ್ಯ ವಾಗಿ ಧ್ವಜಗೀತೆ ಹಾಗೂ ನಾಡಗೀತೆ ಹಾಡಿದರು. ನಾವೆಲ್ಲ ವಿದ್ಯಾರ್ಥಿಗಳು ವೈವಿಧ್ಯಮಯ ದೇಶಭಕ್ತಿ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದೆವು. ನಮ್ಮ ಅಧ್ಯಾಪಕರೆಲ್ಲರೂ ನಮಗೆ ಗೈಡ್ ಮಾಡಿದರು. ಸಿಹಿ ತಿಂಡಿ ವಿತರಿಸಲಾಯಿತು. ಮಧ್ಯಾಹ್ನದ ಹೊತ್ತಿಗೆ ಎಲ್ಲಾ ಕಾರ್ಯಕ್ರಮಗಳು ಮುಗಿದು ನಾವೆಲ್ಲ ಮನೆ ಸೇರಿದೆವು.  
ನನಗೆ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಣೆಯ ಜವಾಬ್ದಾರಿ ಸಿಕ್ಕಿತ್ತು. ಈ ಅವಕಾಶಕ್ಕಾಗಿ ನಾನು ತುಂಬಾ ಸಂಭ್ರಮ ಪಟ್ಟೆ. ನನ್ನ ತಂಗಿ ಹಾಗೂ ಅವಳ ಸ್ನೇಹಿತರ "ವೈವಿಧ್ಯತೆಯಲ್ಲಿ ಏಕತೆ" ಯನ್ನು ಸಾರುವ ನೃತ್ಯವಂತೂ ಎಲ್ಲರ ಮನಸೂರೆಗೊಂಡಿತು. ಕೆಲವು ಕಾರ್ಯಕ್ರಮಗಳಂತೂ ಎಲ್ಲರ ಮನಸ್ಸಿನಲ್ಲಿ ದೇಶಪ್ರೇಮದ ಕಿಚ್ಚನ್ನು ಹಚ್ಚಿತು. ೭೫ ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶದ ಮೂಲೆ ಮೂಲೆಗಳಲ್ಲೂ ವಿಜ್ರಂಭಣೆಯಿಂದ ಆಚರಿಸಿರುವುದು ನಿಜಕ್ಕೂ ಸಂತೋಷದ ವಿಚಾರ. ಜೈ ಹಿಂದ್....
.............................................. ಲಹರಿ ಜಿ.ಕೆ.
೭ನೇ ತರಗತಿ.
ತುಂಬೆ ಸೆಂಟ್ರಲ್ ಸ್ಕೂಲ್ ತುಂಬೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************



     ನಾನು ತನೇಹಾ. ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಸ್ವಾತಂತ್ರ್ಯ ದಿನದಂದು ನಮ್ಮ ಶಾಲೆಯಲ್ಲಿ ಧ್ವಜಾರೋಹಣ ನಡೆಯಿತು. ನಾವೆಲ್ಲರೂ ಸೇರಿ ಧ್ವಜ ಗೀತೆ, ರಾಷ್ಟ್ರಗೀತೆ ಹಾಡುವುದರ ಮೂಲಕ ಧ್ವಜ ವಂದನೆ ಸಲ್ಲಿಸಿದೆವು. ಮಕ್ಕಳು ವಿವಿಧ ರಾಷ್ಟ್ರ ನಾಯಕರ ವೇಷಗಳನ್ನು ಧರಿಸಿದ್ದರು. 
ನಾವು ಭಾಷಣವನ್ನು ಮಾಡಿದೆವು. ದೇಶಭಕ್ತಿ ಗೀತೆಗಳನ್ನು ಹಾಡಿದೆವು. ಹಾಡುತ್ತಾ ನೃತ್ಯವನ್ನು ಮಾಡಿ ಕುಣಿದೆವು. ಚೆನ್ನಾಗಿ ಭಾಷಣವನ್ನು ಮಾಡಿದವರಿಗೆ ಬಹುಮಾನಗಳನ್ನು ಕೊಟ್ಟರು. ನನಗೂ ಚಿತ್ರಕಲೆಯಲ್ಲಿ ತೃತೀಯ ಬಹುಮಾನ ದೊರಕಿತು. ನಂತರ ನಮ್ಮ ಶಾಲೆಯಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾದ ನಮ್ಮ ಅಣ್ಣ ಅಕ್ಕಂದಿರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ನಂತರ ಶಾಲೆಯ ಹಳೇ ವಿದ್ಯಾರ್ಥಿಗಳು ಮಾಡಿಸಿದ್ದ ಸಿಹಿಯನ್ನು ತಿನ್ನುವ ಮೂಲಕ ಕಾರ್ಯಕ್ರಮಕ್ಕೆ ವಿರಾಮ ಹಾಡಲಾಯಿತು..
............................................ ತನೇಹಾ ಎನ್. 
3 ನೇ ತರಗತಿ.. 
ಸ.ಕಿ.ಪ್ರಾ. ಶಾಲೆ. ತುಮಟಿ ತಾಂಡ.. 
ಸಂಡೂರು ತಾಲೂಕು
ಬಳ್ಳಾರಿ ಜಿಲ್ಲೆ
******************************************



       ಮಕ್ಕಳ ಜಗಲಿಗೆ ಆತ್ಮೀಯ ಶುಭ ನಮನಗಳು. ನಾನು ಜನನಿ. ಪಿ. ಎಲ್ಲಾ ಭಾರತೀಯರಿಗೂ 75ನೇಯ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ನಮ್ಮ ಶಾಲೆಯಲ್ಲಿ ಬೆಳಿಗ್ಗೆ 9.30ರ ವೇಳೆಗೆ ನಮ್ಮಶಾಲಾಭಿವ್ರದ್ದಿಯ ಸಮಿತಿಯ ಅಧ್ಯಕ್ಷರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.ಧ್ವಜಕ್ಕೆ ನಮಸ್ಕರಿಸಿ ರಾಷ್ಟ್ರಗೀತೆಯನ್ನು ಹಾಡಿದೆವು. ನಂತರ ಧ್ವಜಗೀತೆಯನ್ನು ಹಾಡಿದೆವು. ಮಕ್ಕಳೆಲ್ಲಾ ಸೇರಿ ಪ್ರತಿಯೊಂದು ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಹೇಳಿ ಘೋಷಣೆ ಕೂಗಿದೆವು. ನಂತರ ದೇಶಭಕ್ತಿಯೊಂದಿಗೆ ಸಭಾ ಕಾರ್ಯಕ್ರಮವನ್ನು ಆರಂಭಿಸಿದೆವು. ನಮ್ಮ ಶಾಲೆಯ ಮಕ್ಕಳು ದೇಶಭಕ್ತಿಗೀತೆ , ಭಾಷಣವನ್ನು ಮಾಡಿದರು. ನಿವೃತ್ತ ಶಿಕ್ಷಕರು ನಮ್ಮ ಶಾಲೆಯ ಮಕ್ಕಳಿಗೆ ಸ್ವಾತಂತ್ರ್ಯದ ಬಗ್ಗೆ ವಿವರಣೆಯನ್ನು ನೀಡಿದರು. ನಾನು ಇಂಗ್ಲಿಷಿನಲ್ಲಿ ಸ್ವಾತಂತ್ರ್ಯದ ಬಗ್ಗೆ ಭಾಷಣವನ್ನು ಮಾಡಿದೆನು. ನಮಗೆ ಒಂದು ವಾರದ ಮುಂಚಿತವಾಗಿ ದೇಶಭಕ್ತಿಗೀತೆ , ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಭಾಷಣ, ಸ್ವತಂತ್ರ ಭಾರತದ ಅಭಿವೃದ್ಧಿ ಬಗ್ಗೆ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿದರು. 
ಹಲವು ಪುಸ್ತಕಗಳ ರೂಪದಲ್ಲಿ ಬಹುಮಾನವನ್ನು ನಮಗೆ ನೀಡಿದರು. ನಂತರ ಸಿಹಿ ತಿಂಡಿಗಳನ್ನು ಹಂಚಲಾಯಿತು. ಕೊನೆಯದಾಗಿ 75 ನೇ ಅಮೃತ ಮಹೋತ್ಸವದ ಅಂಗವಾಗಿ ನಮ್ಮ ಶಾಲೆಯ ಪ್ರತಿಯೊಂದು ಮಕ್ಕಳಿಗೂ ಒಂದು ಹಣ್ಣಿನ ಗಿಡಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. 
ಧನ್ಯವಾದಗಳು
.............................................. ಜನನಿ. ಪಿ
6ನೇ ತರಗತಿ 
ದ. ಕ. ಜಿ. ಪಂ. ಉ. ಹಿ. ಪ್ರಾ. ಶಾಲೆ. 
ಕೊಯಿಲ ಕೆ. ಸಿ. ಫಾರ್ಮ 
ಕಡಬ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


    ನಾನು ಫಾತಿಮತ್ ಅತೀಫ. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ನಮ್ಮಶಾಲೆಯಲ್ಲಿ ವಿಶೇಷವಾಗಿ ನಡೆದಿತ್ತು. 9.00ಗಂಟೆಗೆ ರಾಷ್ಟ್ರದ್ವಜವು ಬಾನಿನಲ್ಲಿ ಹಾರಾಡಿತು. ನಾವೆಲ್ಲರು ರಾಷ್ಟ್ರಗೀತೆ ಹಾಡಿ ದ್ವಜಕ್ಕೆ ಗೌರವಿಸಿದೆವು.
 ಅನಂತರ ಅತಿಥಿಗಳು ಬಾಷಣ ಮಾಡಿದರು, ಆಮೇಲೆ ಹೊರಿಝೋನ್ ಪಬ್ಲಿಕ್ ಶಾಲೆ ಇಲ್ಲಿಂದ ವಿಟ್ಲ ಪೇಟೆ ನಾಲ್ಕು ಮಾರ್ಗದ ವರೆಗೆ ರಾಷ್ಟ್ರದ್ವಜ, ಘೋಷ ವಾಕ್ಯ, ಬ್ಯಾಂಡ್ , ವಾದನದೊಂದಿಗೆ ಮೆರವಣಿಗೆ ಸಾಗಿದೆವು. ಮದ್ಯದಲ್ಲಿ ಸಿಹಿ ತಿಂಡಿ ವಿತರಿಸುತ್ತಿದ್ದರು. ಆಮೇಲೆ ಸಾಂಸ್ಕೃತಿಕ ಕಾರ್ಯ ಕ್ರಮ ನೆರವೇರಿತು. ಹೀಗೆ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವು ಮುಖ್ಯೋಪಾಧ್ಯಾಯರು , ಅಧ್ಯಾಪಕರು , ವಿದ್ಯಾರ್ಥಿಗಳ ಶ್ರಮದಿಂದ ಭಾರಿ ವಿಜೃಂಭಣೆಯಿಂದ ನಡೆಯಿತು.
...................................... ಫಾತಿಮತ್ ಆತಿಫಾ 
6ನೇ ತರಗತಿ 
ಹೊರಿಝೋನ್ ಪಬ್ಲಿಕ್ ಸ್ಕೂಲ್ 
ಮೇಗಿನಪೇಟೆ ವಿಟ್ಲ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************



       ನಾನು ಭರಮವ್ವ. ನಮ್ಮ ಶಾಲೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯೋತ್ಸವವನ್ನು ತುಂಬಾ ವಿಜೃಂಭಣೆಯಿಂದ ಆಚರಿಸಿದೆವು. ನಾನು ಭಾಷಣ ಮಾಡಿದೆ. ಎರಡು ವರ್ಷದಿಂದ ಕಳೆಗಟ್ಟಿದ್ದ ನಮ್ಮ ಶಾಲೆಯು ಸಿಂಗಾರಗೊಂಡು ನೋಡುವುದೇ ಖುಷಿಯಾಯಿತು.ನಾನು ಏರೋಬಿಕ್ಸ ನೃತ್ಯವನ್ನು ಮಾಡಿದೆ. ಮಕ್ಕಳು ಇಂದಿರಾ ಗಾಂಧಿ, ಸಂಗೋಳ್ಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ, ಗಾಂಧೀಜಿ ಹೀಗೆ ಅನೇಕ ಮಹನೀಯರ ವೇಷಭೂಷಣದಲ್ಲಿ ಕಂಗೊಳಿಸಿದರು. ನಮ್ಮ ಊರಿನ ಬಹಳಷ್ಟು ಜನ ಸೇರಿದ್ದರು. ಹೀಗೆಯೇ ಇನ್ನು ಮುಂದುವರಿಯಲಿ ನಮ್ಮ ಶಾಲೆಯ ಸಂಭ್ರಮ.
..................................... ಭರಮವ್ವ ಧಾರವಾಡ.
7ನೇ ತರಗತಿ
HPS ಪರಸಾಪೂರ.
ತಾ/ಹುಬ್ಬಳ್ಳಿ ಗ್ರಾಮೀಣ
ಜಿ/ಧಾರವಾಡ
******************************************



       ನಾನು ಮನೋಜ ಐಹೋಳೆ. ನಮ್ಮ ಶಾಲೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವವನ್ನು ತುಂಬಾ ಅದ್ದೂರಿಯಾಗಿ ಆಚರಿಸಿದೆವು. ಅದರಲ್ಲಿ ನಾನು ಕೋಲಾಟದಲ್ಲಿ ಬಾಗವಹಿಸಿದ್ದೆ. ಈ ಸಲ ನಮಗೆ ಎರೋಬಿಕ್ಸ ನೃತ್ಯ ಹಾಗೂ ಡಂಬಲ್ಸ ನೃತ್ಯವನ್ನು ಕಲಿಸಿದ್ದು ವಿಶೇಷವಾಗಿತ್ತು. ಏಕೋ ನಿನ್ನೆ ಮಳೆರಾಯನಿಗೆ ನಿದ್ದೆ ಬಂದಂತಿತ್ತು. ಮಳೆ ಬರದೆ ಇದ್ದಿದ್ದಕ್ಕೆ ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಬಹಳ ಅದ್ದೂರಿ ಆಯಿತು.
    ನಮ್ಮ ಊರ ಹಿರಿಯರು, ಕಿರಿಯರು ನಮಗೆ ಬಹಳ ಪ್ರೋತ್ಸಾಹ ನೀಡಿದರು. ನಮಗೆ ತಿನ್ನಲು ಚಾಕಲೇಟ್ ಕೊಟ್ಟರು.ನಮ್ಮ ಶಾಲೆಯ ಬಹು ಬೇಡಿಕೆ ಆಗಿದ್ದ ಹಾಗೂ ನಮಗೆ ತೀರ ಅವಶ್ಯಕವಾಗಿದ್ದ projector ಅನ್ನು ನಮ್ಮ ಶಾಲೆಯ ಇಬ್ಬರು ಸದಸ್ಯರು ಕಾಣಿಕೆಯಾಗಿ ಕೊಡಲು ಮುಂದೆ ಬಂದಿದ್ದು ನಮಗೆ ತುಂಬಾ ಸಂತೋಷವಾಯಿತು. ಪ್ರತಿ ಸಲಕ್ಕಿಂತ ಈ ಬಾರಿ ನಮ್ಮ ಶಾಲೆಯ ಸ್ವಾತಂತ್ರೋತ್ಸವ ಕಾರ್ಯಕ್ರಮಕ್ಕೆ ಊರ ಜನರೆಲ್ಲಾ ಸೇರಿದ್ದರು. ಒಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು.
....................................ಮನೋಜ ಐಹೋಳೆ
7ನೇ ವರ್ಗ
HPS ಪರಸಾಪುರ.
ಹುಬ್ಬಳ್ಳಿ ಗ್ರಾಮೀಣ. ತಾಲೂಕು
ಧಾರವಾಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article