
ಹಕ್ಕಿ ಕಥೆ : ಸಂಚಿಕೆ - 58
Tuesday, August 2, 2022
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ. ಜುಲೈ ತಿಂಗಳ ಆರಂಭದಲ್ಲಿ ಜೋರಾಗಿ ಸುರಿದ ಮಳೆ, ತಿಂಗಳ ಕೊನೆಯ ವಾರದಲ್ಲಿ ಬಹಳ ಕಡಿಮೆಯಾಗಿ ಹಗಲೆಲ್ಲ ಬಿಸಿಲು ಕಾಯುತ್ತಿತ್ತು. ಮಳೆ ಜೋರಾಗಿದ್ದರೆ ಯಾವುದಾದರೂ ಎಲೆಯ ಅಡಿಯಲ್ಲಿ ಒದ್ದೆಯಾಗದಂತೆ ಆಶ್ರಯ ಪಡೆಯುವ ಹಕ್ಕಿಗಳು ಮಳೆ ಬಿಟ್ಟಾಗ, ಖುಷಿಯಿಂದ ಓಡಾಡಿ ಆಹಾರ ಹುಡುಕುವ ಕೆಲಸದಲ್ಲಿ ಮಗ್ನವಾಗುತ್ತವೆ. ಒಂದು ದಿನ ಬೆಳಗ್ಗೆ ಹಾಲು ತರಲೆಂದು ಡೈರಿಯ ಕಡೆಗೆ ಹೊರಟಿದ್ದೆ. ಮನೆಯ ಮುಂದಿನ ತೋಟದಲ್ಲಿ ವಿಚ್.. ವಿಚ್.. ಎಂದು ಪುಟ್ಟದಾಗಿ ಕೂಗುತ್ತಾ ಹಾರಾಡುವ ಹಕ್ಕಿಯೊಂದು ಗಮನಕ್ಕೆ ಬಂತು. ಆದರೆ ಆ ಹಕ್ಕಿ ಯಾವುದು ಎಂದು ಗುರುತಿಸಲು ಸಾಧ್ಯವಾಗದಷ್ಟು ಚುರುಕಾಗಿತ್ತು ಅದರ ಹಾರಾಟ. ಒಂದೆರಡು ನಿಮಿಷ ನಿಂತು ನೋಡಿದಾಗ ಬಾಳೆಯ ಗಿಡದಿಂದ ಗಿಡಕ್ಕೆ ಹಾರುತ್ತಿರುವುದು ಕಾಣಿಸಿತು. ಬಾಳೆಯ ಹೂವಿಗೆ ಕೊಕ್ಕು ಹೊಕ್ಕಿಸಿ ಹೂವಿನ ರಸ ಹೀರಿ ಇನ್ನೊಂದು ಹೂವಿಗೆ ಹಾರುತ್ತಿತ್ತು. ಹೂವಿನ ರಸ ಹೀರಲು ಬರುವ ಸೂರಕ್ಕಿ ಇರಬೇಕು ಅಂದುಕೊಂಡೆ.
ನಾನು ಮನೆಬಾಗಿಲಲ್ಲೇ ನಿಂತದ್ದನ್ನು ನೋಡಿದ ಮಗಳು ಏನು ನೋಡುತ್ತಿದ್ದೀರಿ ಎಂದು ಕಣ್ಣಸನ್ನೆಯಲ್ಲಿ ಕೇಳಿದಳು. ಹಕ್ಕಿ ನೋಡ್ತಾ ಇದ್ದೇನೆ ಎಂದು ಮೆಲ್ಲಗೆ ಉತ್ತರಿಸಿದೆ. ಹಕ್ಕಿ ಎಲ್ಲಿದೆ ಎಂದು ಕೇಳಿದ ಮಗಳಿಗೆ ತೋಟದ ಆ ಕಡೆಯ ಗಿಡಗಳ ನಡುವೆ ಹಾರಾಡುತ್ತಿದ್ದ ಪುಟ್ಟ ಹಕ್ಕಿಯನ್ನು ತೋರಿಸಿದೆ. ತಡೀರಿ ಬೈನಾಕುಲರ್ ತರ್ತೇನೆ ಎಂದು ಒಳಹೋಗಿ ಬೈನಾಕುಲರ್ ತೆಗೆದುಕೊಂಡು ಬಂದಳು. ಬರಿಗಣ್ಣಿಗೆ ಸೂರಕ್ಕಿಯಂತೆ ಕಂಡರೂ ಹಕ್ಕಿಯನ್ನು ಬೈನಾಕುಲರ್ ನಲ್ಲಿ ನೋಡಿದಾಗ ತಿಳಿ ಹಳದಿ ಬಣ್ಣದ ದೇಹ, ತಿಳಿ ಹಸಿರು ಬಣ್ಣದ ರೆಕ್ಕೆಗಳು, ಬಾಳೆಯ ಹೂವಿನ ಆಳಕ್ಕೆ ಇಳಿದು ರಸ ಹೀರಲು ಅನುಕೂಲವಾಗುವಂತಹ ನೇರವಾದ ಉದ್ದನೆಯ ಕೊಕ್ಕು ಸ್ಪಷ್ಟವಾಗಿ ಕಾಣಿಸಿತು. ಆಗ ಖಚಿತವಾಯಿತು ಅದು ಸೂರಕ್ಕಿ ಅಲ್ಲ. ಅದು ಬಾಳೆಗುಬ್ಬಿ ಎಂದು. ಗುಬ್ಬಚ್ಚಿಯ ಗಾತ್ರದ ಈ ಹಕ್ಕಿಗೆ ತುಸು ಉದ್ದನೆಯ ನೇರವಾದ ಕೊಕ್ಕು ಬಾಳೆಗಿಡದ ಹೂವಿನಿಂದ ಮಕರಂದ ಹೀರಲು ಅನುಕೂಲವಾಗುಗುವಂತಿದೆ. ಅದಕ್ಕಾಗಿಯೇ ಈ ಹಕ್ಕಿಗೆ ಬಾಳೆಗುಬ್ಬಿ ಅಂತ ಹೆಸರು ಬಂದಿರಬೇಕು.
ಮೇ ತಿಂಗಳಿನಿಂದ ಜುಲೈ ತಿಂಗಳ ನಡುವೆ ಬಾಳೆಯ ಗಿಡದ ದೊಡ್ಡ ಎಲೆಗಳ ಅಡಿಯಲ್ಲಿ ಜೇಡರ ಬಲೆ. ತರಗೆಲೆ, ಒಣಗಿದ ವಸ್ತುಗಳನ್ನು ಬಳಸಿ ನೇತಾಡುವ ಗೂಡು ಮಾಡಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆಯಂತೆ.. ಬಾಳೆ ಗಿಡದಲ್ಲಿ ಗೂಡುಕಟ್ಟುವುದರಿಂದ ಇದಕ್ಕೆ ಬಾಳೆಗುಬ್ಬಿ ಅಂತ ಹೆಸರು ಬಂದಿರಲಿಕ್ಕೂ ಸಾಕು. ಹಕ್ಕಿಯನ್ನು ನೋಡುತ್ತಾ ಇರು ಅಂತ ಹೇಳಿ ಹಾಲು ತರಲು ನಾನು ಡೈರಿಗೆ ಹೋಗಿ ಬಂದೆ. ಬಂದಾಗ ಮಗಳು ಆಶ್ಚರ್ಯದಿಂದ ಹೀಗೆ ಹೇಳಿದಳು. ಅಪ್ಪಾ ನೀವು ಆಕಡೆ ಹೋದ ಮೇಲೆ ಆ ಹಕ್ಕಿ ಇಲ್ಲಿ ಮನೆಯ ಹತ್ತಿರ ಬಂದಿತ್ತು. ಇಲ್ಲಿ ಮರಗಳ ಮಧ್ಯೆ ಬಲೆ ಕಟ್ಟಿದ್ದ ಜೇಡನನ್ನು ಹೆಲಿಕಾಪ್ಟರ್ ತರಹ ಒಂದೇ ಕಡೆ ನಿಂತಂತೆ ಹಾರುತ್ತಾ ಕೊಕ್ಕಿನಿಂದ ಹಿಡಿದುಕೊಂಡು ಹೋಯ್ತು ಎಂದು ಹೇಳಿದಳು. ಮಗಳು ಹೇಳಿದ ಘಟನೆಯನ್ನು ಒಂದು ಬಾರಿ ನಾನೂ ನೋಡಿದ್ದೆ. ಈ ಹಕ್ಕಿಯ ಇಂಗ್ಲೀಷ್ ಹೆಸರು SPIDER HUNTER. ಈ ಹೆಸರು ಬಂದದ್ದು ಹೇಗೆ ಅಂತ ನಿಮಗೂ ಗೊತ್ತಾಗಿರಬೇಕಲ್ಲ.
ಕನ್ನಡದ ಹೆಸರು: ಬಾಳೆಗುಬ್ಬಿ
ಇಂಗ್ಲೀಷ್ ಹೆಸರು: Little Spiderhunter
ವೈಜ್ಷಾನಿಕ ಹೆಸರು: Arachnothera longirostra
ಚಿತ್ರ ಕೃಪೆ: ಅವಿನಾಶ್ ಅಡಪ
ಮುಂದಿನ ವಾರ ಇನ್ನೊಂದು ಹಕ್ಕಿಯ ಪರಿಚಯದೊಂದಿಗೆ ಸಿಗೋಣ. ಬಾಯ್
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************