
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 57
Wednesday, August 3, 2022
Edit
ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 57
ಅದೊಂದು ಸುಂದರ ಹಳ್ಳಿ. ಅಲ್ಲಿನ ಬನವೊಂದರಲ್ಲಿ ಊರವರೆಲ್ಲ ಸೇರಿ ನಾಗರ ಪೂಜೆ ಮಾಡುತ್ತಿದ್ದರು. ಸುಮಾರು ವರುಷಗಳಿಂದ ಭಕ್ತಿ ಪೂರ್ವಕವಾಗಿ ಈ ಕಾರ್ಯ ನಡೆಯುತಿತ್ತು. ಒಂದು ದಿನ ನಾಗರ ಪೂಜೆಯ ಸಂದರ್ಭದಲ್ಲಿ ಜರುಗಿದ 'ಸಭೆಯಲ್ಲಿ ಊರವರಲ್ಲೊಬ್ಬನಾದ ಮಹೇಶನು ತನ್ನ ದೊಡ್ಡ ಸ್ವರದಲ್ಲಿ" ಈ ಬನದಲ್ಲಿ ನಾವೆಲ್ಲ ಭಕ್ತಿಯಿಂದ ಪೂಜಿಸುತ್ತಿರುವ ನಾಗದೇವರಿಗೆ ಇಲ್ಲಿ ಸೂಕ್ತ ರಕ್ಷಣೆ ಇಲ್ಲ. ಇಲ್ಲಿ ಬೀಳುವ ಬಿಸಿಲು, ಮಳೆ, ಗಾಳಿಗೆ ಕಷ್ಟ ಪಡುತ್ತಿದ್ದಾರೆ. ಮಳೆ ಬಂದಾಗ ಒದ್ದೆಯಾಗುತ್ತಾರೆ. ಬಿಸಿಲು ಬಂದಾಗ ಒಣಗುತ್ತಾರೆ. ಅವರು ಸದಾ ಬೆಚ್ಚಗಿರಲು ಈ ಬನದ ಪರಿಸರ ಸೂಕ್ತವಲ್ಲ. ಇಲ್ಲಿನ ಬನದ ಸುತ್ತಲ್ಲಿನ ಮರಗಳನ್ನೆಲ್ಲ ಕಡಿದು ಸುಸಜ್ಜಿತವಾದ ಗುಡಿಯೊಂದನ್ನು ಕಟ್ಟೋಣವೇ....?" ಎಂದನು.
ಮಹೇಶನ ಮಾತು ಕೇಳಿ ಎಲ್ಲರೂ ತಲೆಯಾಡಿಸಿ "ನಿಮ್ಮ ಅಭಿಪ್ರಾಯ ಸರಿಯಾಗಿದೆ. ಹಾಗೆಯೇ ಆಗಲಿ" ಎಂದು ಧ್ವನಿಗೂಡಿಸಿದರು. ಆದರೆ ಅಲ್ಲೇ ಇದ್ದ ಮೋಹನನು ಎದ್ದು ನಿಂತು "ನಾಗದೇವರಿಗೆ ಬನವೇ ಸಂಪ್ರೀತಿ. ಅವರಿಗೆ ಬನದ ಹಸಿರೇ ಉಸಿರು. ಬನವ ಬಿಟ್ಟು ಅವರು ಇರಲಾರರು. ಈ ಹಸಿರ ಬನದೊಳಗೆ ಸುಖಿಯಾಗಿದ್ದ ಅವರನ್ನು ಕಾಂಕ್ರೀಟ್ ಗೂಡಿನೊಳಗೆ ಹಾಕಿದರೆ ಬದುಕಲಾರರು. ಅದರೊಳಗಿನ ಬಿಸಿಯು ಅವರಿಗೆ ಸಹ್ಯವಾಗದು. ದಯವಿಟ್ಟು ಈ ಯೋಜನೆ ಬಿಟ್ಟು ಹಿಂದಿನಂತೆಯೇ ಹಸಿರ ಬನದೊಳಗೆ ಪೂಜಿಸುವುದೇ ಉಚಿತವಲ್ಲವೇ.....?" ಎಂದನು.
ಆದರೆ ಕಲ್ಪನಾ ಲೋಕದಲ್ಲಿ ತೇಲುತ್ತಿದ್ದ ಜನರಿಗೆ ಮೋಹನನ ವಾಸ್ತವ ವಿಚಾರ ಅಪಥ್ಯವಾಗಿತ್ತು. ಅವರೆಲ್ಲರೂ ಸೇರಿ ಕಾಂಕ್ರೀಟ್ ಗುಡಿ ಕಟ್ಟಲು ನಿರ್ಧರಿಸಿದರು. ಮೋಹನನು ತನ್ನ ಉಪಯುಕ್ತ ಯೋಚನೆಗೆ ಬೆಂಬಲ ಸಿಗದೆ ಏಕಾಂಗಿಯಾಗಿ ಬಿಟ್ಟ. ಕೆಲವೇ ದಿನಗಳಲ್ಲಿ ಬನದ ಹಸಿರು ಕಡಿದು ಕಾಂಕ್ರೀಟ್ ಗೂಡು ನಿರ್ಮಾಣವಾಯಿತು. ಬನದ ಹಸಿರಿನಲ್ಲಿ ಸುಖವಾಗಿ ಬದುಕುತ್ತಿದ್ದ ಹಾಗೂ ಜೀವನ ಸಂಪ್ರೀತಿಯಲ್ಲಿ ತೇಲಾಡುತ್ತಿದ್ದ ನಾಗ ಹಾಗೂ ಇತರೇ ಜೀವಿಗಳೆಲ್ಲ ಹಸಿರಿಲ್ಲದೆ ಉಸಿರುಗಟ್ಟಿ ಕಾಂಕ್ರಿಟ್ ಗೂಡಲ್ಲಿ ಬದುಕಲಾಗದೆ ಬೇರೆ ಕಡೆಗೆ ಹೊರಟು ಹೋದವು. ಆದರೂ ಇದರ ಸೂಕ್ಷ್ಮವನ್ನು ಗುರುತಿಸಲಾಗದೆ ಇಂದಿಗೂ ಕಾಂಕ್ರೀಟ್ ಬನದೊಳಗೆ ನಾಗದೇವರ ಪೂಜೆ ನಡೆಯುತ್ತಿದೆ. ನಮ್ಮ ಮೂಗಿನ ನೇರದ ಯೋಚನೆಗಳು ಒಮ್ಮೊಮ್ಮೆ ಹೇಗೆ ನಿಷ್ಟ್ರಯೋಜಕವಾದರೂ ವ್ಯರ್ಥವಾದರೂ ಹೇಗೆ ಅಂಧಾನುಕರಣೆಯಿಂದ ಮುಂದುವರೆಯುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.
ಕಲ್ಪಿತ ಯೋಚನೆಗಳ ಅನುಷ್ಠಾನವು ವಾಸ್ತವ ಬದುಕಿಗೆ ಪೂರಕವಾಗಿರಬೇಕೇ ಹೊರತು ಕಲ್ಪನೆಯಲ್ಲಿಯೇ ಇರಬಾರದು. ಯಾವಾಗಲೂ ವಾಸ್ತವವಾಗಿ ಆಲೋಚಿಸಿ ಅದರಿಂದ ಉಂಟಾಗುವ ಧನಾತ್ಮಕ ಪ್ರಭಾವವನ್ನು ಊಹಿಸಿ ನಿರ್ಧಾರ ತೆಗೆದುಕೊಳ್ಳುವ ಮನೋಸ್ಥಿತಿ ನಮ್ಮದಾಗಬೇಕು. ಬೇರನ್ನು ಕಡಿದ ಮೇಲೆ ಮರವನ್ನು ಸಾಕುವುದರಿಂದ ಫಲವನ್ನು ನಿರೀಕ್ಷಿಸಲಾದೀತೆ....? ಮೂಲ ಆಶಯವನ್ನು ಮರೆತು ಮಾಡಿದ ಕೆಲಸದಿಂದ ಫಲಿತಾಂಶ ನಿರೀಕ್ಷಿಸಲಾದೀತೆ....? ಅಭಿವೃದ್ಧಿಯು ಯಾವಾಗಲೂ ವಸ್ತುನಿಷ್ಠವಾಗಿರಬೇಕೆ ಹೊರತು ವ್ಯಕ್ತಿನಿಷ್ಠವಾಗಿರಬಾರದು. ವ್ಯಕ್ತಿನಿಷ್ಠವಾದರೆ ಪರಿಣಾಮವು ಲಾಭದಾಯಕವಾಗದು. ಈ ನಿಟ್ಟಿನಲ್ಲಿ ನಾವೆಲ್ಲರೂ ಬದಲಾಗಬೇಕಾಗಿದೆ. ವಾಸ್ತವವಾಗಿ ಬದುಕುವ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?.
ಶಿಕ್ಷಕರು ಮತ್ತು ತರಬೇತುದಾರರು
Mob: +91 99802 23736
********************************************