-->
ಸಂಚಾರಿಯ ಡೈರಿ : ಸಂಚಿಕೆ - 4

ಸಂಚಾರಿಯ ಡೈರಿ : ಸಂಚಿಕೆ - 4

ಸಂಚಾರಿಯ ಡೈರಿ : ಸಂಚಿಕೆ - 4

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
               
            ಕೆಲವೊಂದು ಕನಸುಗಳೇ ಹಾಗೇ....! ನಿಜವಾಗಿಬಿಡುತ್ತವೆ ಅವು ಕಾಕತಾಳೀಯವೋ ಅಥವಾ ಯೋಗ ಭಾಗ್ಯವೋ ಯಾರೂ ಬಲ್ಲವರಿಲ್ಲ.
       ಜೀವನದಲ್ಲಿ ಒಂದು ಬಾರಿಯಾದರೂ ನದಿಯ ಮೇಲಿರುವ ವಿಶ್ವದ ಅತೀ ದೊಡ್ಡ ಎನಿಸಿಕೊಂಡ ಮಾಜುಲಿ ದ್ವೀಪ ಸಂದರ್ಶಿಸುವ ಆಸೆ ನನ್ನಲ್ಲಿತ್ತು. ತೆರಳುವ ಆಲೋಚನೆಯಿದ್ದರೂ ಶುಭ ಮುಹೂರ್ತ ಕೂಡಿಬಂದಿರಲಿಲ್ಲ‌.. ಸದಾ ಸುತ್ತಾಡುವ ಹವ್ಯಾಸವುಳ್ಳವನಾಗಿ ಮಾಜುಲಿ ತೆರಳುವ ಕುರಿತಾದ ಐಡಿಯಾ ಇರಲಿಲ್ಲ ನೋಡಿ! ಹೀಗೆ ಒಂದು ಬಾರಿ ರೈಲಿನಲ್ಲಿ ಭುವನೇಶ್ವರದಿಂದ ಪ್ರಯಾಣ ಮಾಡುತ್ತಿದ್ದಾಗ ಜೋರ್ಹಾಟ್‌ನ ವ್ಯಕ್ತಿಯ ಪರಿಚಯವಾಗಿತ್ತು. ಅಸ್ಸಾಂನ‌ಲ್ಲಿ ಉಡಾಲ್ಗುರಿ, ಲಖಿಂಪುರ್‌ನಂತ ಜಿಲ್ಲೆಗಳಿಗೆ ಹೋಗಿದ್ದೆನಾದರೂ ಜೋರ್ಹಾಟ್ ನೋಡಿರಲಿಲ್ಲ. ಸರಿ! ಸಮಯ ಸಿಕ್ಕಾಗ ಸಿಗೋಣ ಎಂದು ಭಾವಿಸಿದ್ದೆನಷ್ಟೆ.
      ಒಂದು ಶುಭದಿನದ ಶುಭಘಳಿಗೆಯಂದು ಗುವಾಹಟಿ ಹೋಗಿದ್ದ ನನಗೆ ಈ ಗೆಳೆಯನ ನೆನಪಾಗಿ ‌ಜೋರ್ಹಾಟ್ ಬರಲೇ ಎಂದು ಕೇಳಿದ್ದೆ. ಆತನ ಒಪ್ಪಿಗೆ ಸಂದೇಶ ತಲುಪಿದಾಗ ಜೋರ್ಹಾಟ್ ರೈಲು ಹತ್ತಿ ಜೋರ್ಹಾಟ್ ತಲುಪಿದ್ದೆ.. ಆತನ ಮನೆಯಲ್ಲಿದ್ದಾಗ ನನಗೆ ಅರಿವಿಗೆ ಬಂದ ವಿಚಾರ ಮಾಜುಲಿ ದ್ವೀಪ. ಅಲ್ಲಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದೆ ಎಂದು. ಆದರೆ ಅಲ್ಲಿ ಹೋಗೋದಿಕ್ಕೆ ಬ್ರಹ್ಮಪುತ್ರ ನದಿ ದಾಟಿಯೇ ಹೋಗಬೇಕು, ಅದಕ್ಕಾಗಿ ಫೆರ್ರಿ ಏರಬೇಕು ಎಂಬುವುದಿತ್ತು. ಗೆಳೆಯನಿಗೆ ಸಮಯವಿಲ್ಲದ ಕಾರಣ ಒಬ್ಬನೇ ಮಾಜುಲಿಯ ದರ್ಶನ ಮಾಡಬೇಕಿತ್ತು. solo ಸಂಚಾರಿಯಾದರೂ , ಸೋಲೋ ಸಂಚಾರಿಯಾಗದ ಕಾರಣ ಧೈರ್ಯದಿಂದ ತೆರಳುವ ನಿರ್ಧಾರ ಮಾಡಿದೆ.
    ಮಾಜುಲಿ ದ್ವೀಪ ಇಡೀ ಪ್ರಪಂಚದಲ್ಲೇ ನದಿಯ ಮೇಲಿರುವ ಅತೀ ದೊಡ್ಡ ದ್ವೀಪ. ಇದನ್ನು ಅಸ್ಸಾಂ ಸರ್ಕಾರ ಜಿಲ್ಲೆ ಎಂದು ಪರಿಗಣಿಸಿದೆ. ಬ್ರಹ್ಮಪುತ್ರ ನದಿಯ ಮೇಲಿರುವ ಈ ದ್ವೀಪದಲ್ಲಿ ಹಲವಾರು ಜಾತಿ, ಧರ್ಮ ,ಜನಾಂಗಗಳ ಜನರಿದ್ದಾರೆ.
   ಅಂದಹಾಗೆ ಫೆರ್ರಿ ಸೇವೆ ಇದ್ದಿದ್ದು ನಿಮಾಟಿ ಘಾಟ್ ಎಂಬಲ್ಲಿ , ಅಲ್ಲಿಂದ ಮಾಜುಲಿಗೆ ಈ ಫೆರ್ರಿಗಳು ಗಂಟೆಗನುಸಾರವಾಗಿ ಹೋಗುತ್ತಿದ್ದವಷ್ಟೆ. ನಾನೂ ಒಂದು ನಾವೆಯೇರಿ ಮಾಜುಲಿಯ ಮಣ್ಣನ್ನ ಸ್ಪರ್ಶಿಸಲು ಒಂದೂವರೆ ಗಂಟೆಯ ಪ್ರಯಾಣ ಸಾಗಿತ್ತು. ಮಾಜುಲಿ ತೀರ ತಲುಪಿದಾಗ ಎಲ್ಲಿ , ಯಾವಕಡೆ ,ಹೇಗೆ ಎಂಬ‌ ಯೋಚನೆಯೇ ಇದ್ದಿರಲಿಲ್ಲ. ಮೊಬೈಲ್ ಲೊಕೇಷನ್ ಅನುಸಾರ ಮೂರು ಕಿಲೋಮೀಟರ್ ದೂರದಲ್ಲಿ ದಕ್ಷಿಣಾಪಥ್ ಛತ್ರ (ಅಸ್ಸಾಮಿ;ದೊಖಿನಾಪಥ್ ಹೊತ್ರೊ) ಇತ್ತಾದರೂ , ಅಲ್ಲಿಯ ತನಕ ತೆರಳುವ ಬಗ್ಗೆ ಹೆಚ್ಚಿನ ಮಾಹಿತಿಯೇ ಇರಲಿಲ್ಲ.. ಕಾಲ್ನಡಿಗೆಯಲ್ಲಿ ನಡೆಯುತ್ತಿದ್ದಾಗ ಒಬ್ಬ ಬೈಕ್ ಸವಾರ ನಿಲ್ಲಿಸಿ ,' ತಮ್ಮಾ ! ಡ್ರಾಪ್ ಕೊಡ್ತೀನಿ , ಕುಳಿತುಕೋ' ಎಂದು ಕರೆದುಕೊಂಡು ಹೋದ ಅಪರಿಚಿತ ಅಣ್ಣಯ್ಯನಿಗೆ ದಕ್ಷಿಣಾಪಥ ಛತ್ರ ಎಲ್ಲಿದೆಯೆಂದೇ ಗೊತ್ತಿಲ್ಲವಂತೆ ! ಅದಾಗ್ಯೂ ತಿರಿಗಿ ಮುರಿಗಿ ಒಂದು‌ ಕಡೆ ಇಳಿಸಿದರು. ಅಲ್ಲಿಂದ ಎರಡು‌‌‌ ಕಿಲೋಮೀಟರ್ ಕಾಲ್ನಡಿಗೆ! ನಡೆದಷ್ಟೂ ದೂರ ಸಿಗದೇ ಇದ್ದಾಗ ಅವರಿವರಲ್ಲಿ ಕೇಳಿದಾಗ ದೂರದಲ್ಲೇ ಛತ್ರದ ದ್ವಾರ ಕಾಣಿಸತೊಡಗಿತು.
     ಅಲ್ಲಿಂದ ಸಾಗಿದಾಗ ಭವ್ಯವಾದ ನಿರ್ಮಿತಿಯೊಂದು ಕಾಣಿಸಿತು. ಅಂದಹಾಗೆ ಈ ಛತ್ರಗಳ ಹಿನ್ನೆಲೆಯು ಅದ್ಭುತ ಇತಿಹಾಸವನ್ನೇ ಹೊಂದಿವೆ. ಅಸ್ಸಾಮಿನ ಆಧುನಿಕ ಧಾರ್ಮಿಕ ಹಾಗೂ ಸಂಸ್ಕೃತಿಯಲ್ಲಿ ಮಹತ್ತರವಾದ ಮಾರ್ಪಾಡುಗಳನ್ನು ತಂದಂತಹ ಗುರು ಶ್ರೀಮಂತ ಶಂಕರದೇವರ ಕಲ್ಪನೆಯೇ ಈ ಛತ್ರಗಳು. ಈ ಛತ್ರಗಳ ಮೂಲಕ ವೈಷ್ಣವ ಸಿದ್ಧಾಂತವನ್ನು ಅಸ್ಸಾಂನಾದ್ಯಂತ ಪ್ರಚಾರ ಮಾಡಿದ್ದರು ಎನ್ನುವ ಪ್ರತೀತಿ ಇದೆ. ಈ ಛತ್ರಗಳಲ್ಲಿ ತಮ್ಮ ಶಿಷ್ಯರ ಮೂಲಕ ಲಿಪಿ, ಹಾಡು, ನಾಟ್ಯದಂತಹ‌ ಸೃಜನಶೀಲ ವಿಧಾನಗಳನ್ನು ಈ ಛತ್ರಗಳಲ್ಲೇ ನಡೆಸಿದರು. ಇವರ ನಂತರ ಶಿಷ್ಯವೃಂದದವರು ರಾಜ್ಯಾದ್ಯಂತ ಛತ್ರಗಳನ್ನು ರಾಜರು, ಜಮೀನುದಾರರು, ಊರವರ ಸಹಾಯದಿಂದ ಸ್ಥಾಪಿಸಿದರು.
      ಇದರ ಜತೆಗೆ ಈ ಛತ್ರದಲ್ಲೇ 'ಏಕ ಶರಣ ಧರ್ಮ' ಅಂದರೆ ಮೋಕ್ಷ ಪ್ರಾಪ್ತಿಗೆ ಕೃಷ್ಣನೇ ಗತಿ ಎಂಬ‌ ಹೊಸ ಕಲ್ಪನೆಯನ್ನು ಗುರು ಶ್ರೀಮಂತ ಶಂಕರದೇವರು ಹುಟ್ಟುಹಾಕಿದರು. ಈಗಲೂ ಈ ಶರಣ ಸಂಸ್ಕೃತಿಯನ್ನು ಅಸ್ಸಾಮಿನ ಕೆಲವರು ಪಾಲಿಸುತ್ತಾರೆ.
    ದಕ್ಷಿಣಾಪಥ ಛತ್ರವೂ ಸಹ ವೈಷ್ಣವ ಪ್ರಚಾರಕರ ನೆಲೆಗಳಾಗಿವೆ. ಈ ಛತ್ರ ಸ್ತಂಭಾಕೃತಿಯಲ್ಲಿದ್ದು ಸುತ್ತಲೂ ಕಂಬಗಳಿವೆ. ಒಳಗೆ ಪವಿತ್ರ ಘಮುಸಾ (ಅಸ್ಸಾಮಿ ಭಾಷಿಗರ ಪವಿತ್ರ ಬಿಳಿ-ಕೆಂಪು ಬಣ್ಣದ ಶಾಲು) ಹೊದ್ದ ಕೃಷ್ಣನ ಅಂಶವಿರುವ (ಅಸ್ಸಾಮಿ: ಮಣಿಕೂಟ) ರಚನೆಯೊಂದಿದೆ. ಸುತ್ತಲೂ ಗರುಡನ ಮೂರ್ತಿಗಳಿವೆ. ಛತ್ರದ ಹಿಂಭಾಗದಲ್ಲಿ ಸಣ್ಣ ಸಣ್ಣ ಕೋಣೆಗಳಿದ್ದು ಅಲ್ಲಿ ವೈಷ್ಣವ ಪ್ರಚಾರಕರು ನೆಲೆಸಿದ್ದಾರೆ.
       ಅಲ್ಲಿ ತಿರುಗಾಡಿ ಸಾಕಾಗಿದ್ದ ನನಗೆ , ಹಿಂದಿರುಗಿ ಬರೋ ಹೊತ್ತಿಗೆ ದಾರಿ ತಪ್ಪಿತ್ತು. ಅಲ್ಲಿ ಪಕ್ಕದಲ್ಲಿದ್ದವರಿಗೆ 'ಇಲ್ಲಿಂದ ಬೋಟ್ ಸಿಗೋ ನದಿ ತೀರಕ್ಕೆ ಹೇಗೆ ಹೋಗೋದು' ಎಂದು ಕೇಳಿದೆ. ಅದಕ್ಕವರು , 'ಓ ! ಅದಾ ನೀನು ಈ ರಸ್ತೆಯಿಂದ ಹೋದರೆ ಒಂದು ಸುತ್ತು ಹಾಕಿ ಹೋಗಬೇಕಾಗುತ್ತೆ , ಇಲ್ನೋಡು ಈ ಗದ್ದೆಯನ್ನ ದಾಟಿ ಮುಂದಕ್ಕೆ ಹೋಗು , ಅಲ್ಲೇ ಇದೆ ಎಂದರು. ಅವರು ತೋರಿಸಿದ ಗದ್ದೆಯ ಮೂಲಕ ಮುಂದೆ ಸಾಗುತ್ತಿದ್ದೆ‌. ಕಟಾವು ಮಾಡಿದ ಹುಲ್ಲುಗಳ ಅಂಚಿನಿಂದ ಹೊಲ ಒಣಗಿ ಹೋಗಿತ್ತು. ತಲೆ ಸುಡುವ ಬಿಸಿಲಿನಲ್ಲಿ ಬ್ಯಾಗ್ ಹೊತ್ತು ನೂರು ಮೀಟರ್ ಸಾಗಿದ್ದೆ , ನನ್ನ ಬೂಟಿಗೆ ಏನೋ ಸಿಕ್ಕಿಕೊಂಡಂತಾಯಿತು. ಮುಂದಿನ ಅಡಿಯಿಟ್ಟಾಗ ಬೂಟು ಕೆಸರಿನಲ್ಲಿ ಹೂತು ಹೋಗಿತ್ತು. ಮತ್ತೊಂದು ಹೆಜ್ಜೆಯೂ ಕೂಡಾ ಅದೇ ಥರಾ ಆಗಿತ್ತು. ಏನು ಮಾಡೋದೆಂದು ಚಿಂತಿತನಾಗಿ ಸಾಗುತ್ತಿದ್ದೆ. ಮುಂದೆ ಕಾಣಿಸುತ್ತಿದ್ದ ರಸ್ತೆಯಲ್ಲಿ ಸಾಗತ್ತಿದ್ದವರಿಂದ ಮುಸಿಮುಸಿ ನಗು. 'ಇದ್ಯಾವ್ ಕೋತಿ ಪರಿತಪಿಸುತ್ತಿದೆ ನೋಡು ಎನ್ನುತ್ತಿದ್ದರು'.
      ಅದೇ ಸಮಯಕ್ಕೆ ಒಂದು ಧ್ವನಿ ಕೇಳಿಸತೊಡಗಿತು. 'ಓಯ್ ! ಲೋರಾ ಇಫಾಲೇ ಕಿಯೋ ಆಹಿಸಾ ? ಆಗ್ಫಲೇ ರಾಸ್ತಾ ಅಸಿಲ್ ನೇ ?' (ಈ ಕಡೆಯಿಂದ ಯಾಕೆ ಬಂದೆ ಮಗಾ, ಮುಂದೆ ರಸ್ತೆ ಇತ್ತಲ್ಲ?) ಎಂದು ಅಸ್ಸಾಮಿ ಭಾಷೆಯಲ್ಲಿ ಕೇಳಿದರು. ನಾನು 'ಓ ! ಬೈದಿಯೋ , ಮೊಯಿ ಕರ್ಣಾಕರ್ ಲೋರಾ , ಮೊಯಿ ಗೊಮ್ ನಪಾಲು ಇಯತೆ ಬುಕ್ಕ ಅಸೆ ಬುಲಿ (ಓ ! ತಾಯೇ ,ನಾನು ಕರ್ನಾಟಕದ ಹುಡುಗ ಇಲ್ಲಿ ಕೆಸರಿದೆ ಎಂಬ ಅರಿವಿರಲಿಲ್ಲ' ಎಂದೆ. ಅದಕ್ಕವರು ನಗುತ್ತಾ , ಎಲ್ಲಿಂದಾದರೂ ಬಾ ಮಾರಾಯ , ಕೆಸರಿನ ಮೇಲೆ ಮಾತ್ರ ಬರಬೇಡ ಎಂದು ಗಟ್ಟಿ ಧ್ವನಿಯಿಂದ ಹೇಳಿದರು." ನೀನು ಆ ಬೂಟು ಮತ್ತು ಕಾಲ್ಚೀಲ ತೆಗೆದು ಕೈಯಲ್ಲಿ ಹಿಡಿದುಕೊಂಡು ಈಕಡೆ ಬಾ ಎಂದು ಕೈ ಸನ್ನೆ ಮಾಡಿದರು. ನಾನು ಅಯ್ಯೋ ಇದೆಂಥಾ ಗತಿ ಬಂತು ಕೃಷ್ಣಾ ! ಎನ್ನುತ್ತಾ ಆ ಹೆಂಗಸಿನ ಮನೆಯತ್ತ ನಡೆದೆ. ಬೂಟು , ಬೂಟಿನೊಳಗಿನ‌ ಕಾಲ್ಚೀಲ, ಕಾಲ್ಚೀದೊಳಗಿನ ಕಾಲು , ಕಾಲ ಮೇಲಣ ದಿರಿಸು ಎಲ್ಲವೂ ಕೆಸರಿನಿಂದ ತೊಯ್ದಿತ್ತು.
       ಆ ಮಹಾತಾಯಿ ಹತ್ತಿರ ಬಂದೊಡನೆ ,' ಅಯ್ಯೋ ! ಕೊಡು ಈ ಕಡೆ ಎಂದು ನನ್ನ ಕೈಲಿದ್ದ ಕೆಸರಿನ ಬೂಟುಗಳನ್ನು ಎಳೆದುಕೊಂಡು ನೀರು ಹಾಕಿ‌ ಉಜ್ಜತೊಡಗಿದಳು. ನನಗೂ ಆಶ್ಚರ್ಯದ ಮೇಲಶ್ಚರ್ಯ ! ನನ್ನ ಪ್ಯಾಂಟಿಗಂಟಿದ್ದ ಕೆಸರನ್ನ ತೊಳೆಯಲು ಸ್ವತಃ ತಾಯಿಯೇ ಹ್ಯಾಂಡ್‌ಪಂಪ್‌ನಿಂದ ನೀರು ತೆಗೆದು ಎರೆಯತೊಡಗಿದಳು, 'ನೀನು ಬೇಜಾರು ಮಾಡ್ಕೋಬೇಡ , ನಿನ್ನನ್ನ ನನ್ನ ಸ್ವಂತ ಮಗನೆಂದೇ ಭಾವಿಸಿದ್ದೇನೆ ಕಣಪ್ಪಾ!' ಎಂದಾಗ ನನ್ನಲ್ಲಿ ಆಡಲು ಮಾತುಗಳಿರಲಿಲ್ಲ. ಅಲ್ಲಾ! ಯಾವ ಗುರುತು ಪರಿಚಯವೂ ಇಲ್ಲ, ಯಾರು ಏನು ಎತ್ತ ಎಂಬ ಅರಿವೂ ಇಲ್ಲ ಹಿನ್ನೆಲೆ ಮುನ್ನೆಲೆ ಗೊತ್ತಿಲ್ಲದವನನ್ನ ಆದರಿಸುವ ಮಾಜುಲಿಯ ಈ ಮಹತಾಯಿಯ ಪ್ರೀತಿಗೆ ಮನಸೋತಿದ್ದೆ.
       "ಮಗಾ! ನಿನಗೆ ಹಸಿವಾಗಿರಬಹುದು , ಇವತ್ತೇನು ವಿಶೇಷ ಅನ್ನುವಂತಹ ಅಡುಗೆ ನಾನೇನು ಮಾಡಿಲ್ಲ, ನೀನು ಊಟ ಮಾಡುತ್ತೀಯಾ' ಎಂದು ಕೇಳಿ ಅನ್ನ ಮತ್ತು ಸೊಪ್ಪು-ಬೇಳೆಸಾರು ಹುಯ್ದರು. ನಾನು ಊಟ ಮಾಡೋ ಮಧ್ಯದಲ್ಲಿ ಆಕೆಯ ಮಧ್ಯಮ ಪುತ್ರ ಬಂದು ಬಿಟ್ಟ. ಓ ಅಮ್ಮಾ! ಇವತ್ತು ನಾನು ಊಟ ಮಾಡಲ್ಲ , ಸ್ಕೂಲಲ್ಲಿ ಇವತ್ತು ಖಿಚಡಿ ಇತ್ತು. ಅಂದಹಾಗೆ ಆ ತಾಯಿಗೆ ನಾಲ್ವರು ಮಕ್ಕಳು. ದೊಡ್ಡ ಮಗಳನ್ನ ಮದುವೆ ಮಾಡಿದ್ದೆ, ಇನ್ನೊಬ್ಬ ಹುಡುಗ ಮೆಟ್ರಿಕ್ ಓದುತ್ತಿದ್ದ. ಶಾಲೆಯಿಂದ ಬಂದಾತ ಮಧ್ಯಮ‌, ಕೊನೆಯಾತ ಹೊರಗಡೆ ಆಟದಲ್ಲಿ ಮಗ್ನನಾಗಿದ್ದ. ಹಿಂದಿನ ದಿನವಷ್ಟೇ ಜ್ಯೇಷ್ಠ ಪುತ್ರನ 'ಭಾವನಾ' (ನಮ್ಮಲ್ಲಿ ಯಕ್ಷಗಾನ ಇದ್ದಂತೆ , ಅಸ್ಸಾಮ್‌ನಲ್ಲಿ ಭಾವನಾ ಎಂಬ ಗಾನ-ನಾಟ್ಯ ಕಲಾಪ್ರಕಾರವಿದೆ) ದಲ್ಲಿ ಪಾತ್ರವಿತ್ತು , ಅದಕ್ಕಾಗಿ ಈ ಮರದಿಂದ ತಯಾರಿಸಿದ , ಬಣ್ಣದ ಕಾಗದ ಅಂಟಿಸಿದ ಬಿಲ್ಲು ಬಾಣಗಳಿವೆ ಎಂದು ತೋರಿಸಿದರು. ಊಟವಾದ ನಂತರ ತಾಯಿ ' ಇವತ್ತು ನಮ್ಮ ಪಕ್ಕದ ಮಂದಿರದಲ್ಲಿ ಶಿವಪೂಜೆ ಇದೆ, ನಿನ್ನ ಬೋಟ್ ಬರೋದು ಇನ್ನಾ ತಡ ಇದೆ , ನೀನು ಮತ್ತು ಸನಾತನ್ (ಮೆಟ್ರಿಕ್ ಓದುತ್ತಿದ್ದ ಬಾಲಕನ ಹೆಸರು) ಇಬ್ಬರೂ ಹೋಗಿ ಬನ್ನಿ ಎಂದು ಅಸ್ಸಾಮಿ ಶೈಲಿಯ ಪಂಚೆ , ಪೈಜಾಮ ಮತ್ತು ಘಮೂಸಾ ತೊಡಿಸಿದರು. ನನಗೆ ಒಂದೇ ದಿನದಲ್ಲಿ‌ ನಡೆದ ಈ ಘಟನೆ ಕನಸಾ ನನಸಾ ಎಂಬ ಸಂದೇಹ! ಶಿವನ ಪೂಜೆ ಮುಗಿಸಿ ಬರೋವಾಗ ಓರಗೆಯ ಭಗಿನಿಯರೆಲ್ಲಾ ಮನೆಯಲ್ಲಿದ್ದರು. ಓರಗೆಯವರಿಗೂ ಒಸಗೆ ಒಯ್ಯುತ್ತಾ ಹೊತ್ತು ಕಳೆದಿದ್ದೆ ಗೊತ್ತಾಗಿರಲಿಲ್ಲ. ಅಷ್ಟರಲ್ಲಿ ಸನಾತನ್ ನ ತಾಯಿ "ಮಗಾ! ಇವತ್ತು ಇಲ್ಲೇ ಉಳಿದುಕೋ , ರಾತ್ರಿ ಕಮಲಬರಿ ಛತ್ರದಲ್ಲಿ ಮಗನ ಭಾವನಾ ಇದೆ, ನೋಡಿಕೊಂಡು ಹೋಗಲ್ಲ" ಎಂದರು. ನಾನಂತೂ ವಿಧೇಯ ಭಾವದಿಂದ ನಿರಾಕರಿಸಿ ತೆರಳುತ್ತೇನೆಂದೆ. ಆಕೆಯು ಹರಸಿ, ಮತ್ತೊಮ್ಮೆ ಬಾ , ನಮ್ಮನ್ನ ಮರೆಯಬೇಡ ಎಂದಾಗ ಕಣ್ಣಂಚಲ್ಲಿ ಆಶ್ರುಬಿಂದು ಈರ್ವರಲ್ಲೂ ಜಿನುಗಿತ್ತು.. ಅಲ್ಲಿಂದ ಸನಾತನ್ ದಾಸ್ ನನ್ನನ್ನು ಬೋಟ್ ಸಿಗುವ ನದಿ ತಟಾಕದ ಕಡೆ ಕರೆದುಕೊಂಡು ಹೋದ. 'ಅಣ್ಣಾ! ಹತ್ತತ್ರ ಒಂದು ಕಿಲೋಮೀಟರ್ ದೂರ ಇದೆ, ಸಿಕ್ಕಿದ ಗಾಡಿಲಿ ಹೋಗೋಣ ಎಂದು ಒಂದು ಟಾಂಟಾಂಗೆ ಕೈಹಿಡಿದು ನಿಲ್ಲಿಸಿದ. ಗಾಡಿಯನ್ನೇರಿ ನಾವು ಫೆರ್ರಿ ಪಕ್ಕದಲ್ಲಿ ಇಳಿದು , ನಾನು ಪರ್ಸ್ ತೆಗೆದು ದುಡ್ಡು ಕೊಡಲು ಹೋದಾಗ ಡ್ರೈವರ್ ಸೀದಾ ಹೋಗೋದೇ? ನನಗೂ ಆಶ್ಚರ್ಯ!
ಸನಾತನ್ ಮಾತ್ರ 'ಅಣ್ಣಾ! ಮುಂದೆ ನಾನು ಬರಲ್ಲ, ನಮ್ಮಪ್ಪ ಇಲ್ಲೇ ಫೆರ್ರಿನಲ್ಲಿ ಕೆಲಸ ಮಾಡ್ತಾರೆ , ನಾನು ಹೊರಡುವೆ , ನೀವು ಜಾಗ್ರತೆಯಿಂದ ಯಾತ್ರೆ ಕೈಗೊಳ್ಳಿ , ನಮ್ಮನ್ನ ಮರಿಬೇಡಿ' ಎನ್ನುತ್ತ ಬಿಳ್ಕೊಟ್ಟ. ನಾನು ಮುಂದಡಿ ಇಟ್ಟು , ಫೆರ್ರಿಯೊಳಗೆ ಹೊಕ್ಕಾಗ ಟಿಕೆಟ್ ಎಲ್ಲಿ ಎಂದು ಕೇಳಿದರು, ಆ ಕ್ಷಣಕ್ಕೆ ನನ್ನನ್ನ ನಾನೇ ಮರೆತಿದ್ದ ನನಗೆ ಟಿಕೆಟ್ ಕೊಳ್ಳಬೇಕೆಂಬುದು ಮರೆತೇ ಹೋಗಿತ್ತು. ಟಿಕೆಟ್ ಎಲ್ಲಿ ಸಿಗುತ್ತದೆ ಎಂದು ಅವರನ್ನು ಕೇಳಿದಾಗ, 'ಅದೋ ! ಅಲ್ಲಿದೆ ಕೌಂಟರ್ ಹೋಗು' ಎಂದರು , ಏನೋ ಐವತ್ತು ಮೀಟರ್ ಮುಂದೆ ಸಾಗಿದ್ದೆನಷ್ಟೆ, ಅಷ್ಟರಲ್ಲಿ ಹಿಂದಿನಿಂದ 'ಓ ! ಭೈಟಿ ಟಿಕೆಟ್ ನಲಾಗೆ ನಲಾಗೆ' (ಓ ತಮ್ಮಾ ಟಿಕೆಟ್ ಬೇಡ ಬೇಡ ) ಎಂದು , ಒಳಗೆ ಕೂರೆಂದರು. 
       ಮಾಜುಲಿಗೆ ಅಪರಿಚಿತನಾಗಿ ತೆರಳಿದ ನನಗೆ , ಆಕಸ್ಮಿಕವಾಗಿ ಸಿಕ್ಕ ಕುಟುಂಬದ ಪ್ರೀತಿ ,ಮಾಜುಲಿ ಜನರ ಸಹೃದಯತೆ ಎಲ್ಲವೂ ಜೀವನದ ಮಹತ್ತರ ನೆನಪುಗಳಲ್ಲಿ ಒಂದಾಗಿ ನೆಲೆಯಾದವು. ಮಾಜುಲಿಯ ಮಾತೃ ಪ್ರೇಮ ಬೆಕ್ಕಸ ಬೆರಗು ಮೂಡಿಸಿತು.
......................................... ಸುಭಾಸ್ ಮಂಚಿ 
ಕಾಡಂಗಾಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
******************************************


Ads on article

Advertise in articles 1

advertising articles 2

Advertise under the article