ಅಕ್ಕನ ಪತ್ರ - 30 ಕ್ಕೆಮಕ್ಕಳ ಉತ್ತರ : ಸಂಚಿಕೆ - 1
Saturday, August 20, 2022
Edit
ಅಕ್ಕನ ಪತ್ರ - 30 ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1
ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ ........
ನಮಸ್ತೆ ಅಕ್ಕ..... ನಾನು ಶ್ರಾವ್ಯ.... ನಾವೆಲ್ಲರೂ 75 ನೇ ಸ್ವಾತಂತ್ರ್ಯ ದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದೇವೆ. ಬ್ರಿಟಿಷರ ದಾಸ್ಯದಿಂದ ಹೊರಬಂದು ಭಾರತ 75 ವರ್ಷ ಪೂರೈಸಿದೆ ಎನ್ನುವುದು ನಮಗೆಲ್ಲ ಖುಷಿಯ ವಿಚಾರ. ನಾವು ಸ್ವಾತಂತ್ರ್ಯ ಭಾರತದಲ್ಲಿ ನೆಮ್ಮದಿ ಜೀವನ ಸಾಗಿಸುತ್ತಿದ್ದೇವೆ. ಇದಕ್ಕೆ ಮೂಲಕಾರಣ ಸತ್ಯಾಗ್ರಹ, ತ್ಯಾಗ ,ಬಲಿದಾನಗೈದ ವೀರ ಸ್ವಾತಂತ್ರ್ಯ ಹೋರಾಟಗಾರರು. ಅವರ ದೇಶಾಭಿಮಾನ, ದೇಶಪ್ರೇಮದ ಫಲ ಇಂದಿನ ನಮ್ಮ ಸ್ವಾತಂತ್ರ್ಯ ಭಾರತ. ಕಾಲ ಉರುಳಿದಂತೆ ನಮ್ಮಲ್ಲಿ ದೇಶಪ್ರೇಮ, ದೇಶಾಭಿಮಾನ ಹೆಚ್ಚಾಗ ಬೇಕೆ ಹೊರತು ನಿರ್ಲ್ಯಕ್ಷ್ಯವಲ್ಲ. ದೇಶಾಭಿಮಾನ ಕೇವಲ ರಾಷ್ಟ್ರೀಯ ಹಬ್ಬಗಳ ಸಂದರ್ಭಕ್ಕೆ ಮಾತ್ರ ಸೀಮಿತವಾಗುತ್ತಿರುವುದು ಸರಿಯಲ್ಲ. ನಮ್ಮ ದೇಶ ನಮ್ಮ ಹೆಮ್ಮೆ. ನಮ್ಮ ದೇಶ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಮೂಲಭೂತ ಹಕ್ಕು ಕರ್ತವ್ಯ ನೀಡಿದೆ. ಎಲ್ಲ ಪ್ರಜೆಗಳಿಗೂ ಮುಕ್ತ ವಾಕ್ ಸ್ವಾತಂತ್ರ್ಯ ನೀಡಿದೆ.. ಭಾರತವು ಪ್ರಾಕೃತಿಕ ಸೌಂದರ್ಯ, ಕಲೆ, ಸಾಹಿತ್ಯ, ವಿಜ್ಞಾನ-ತಂತ್ರಜ್ಞಾನ ಹೀಗೆ ಎಲ್ಲಾ ರೀತಿಯಿಂದ ಶ್ರೀಮಂತ ದೇಶ ಎನಿಸಿಕೊಂಡಿದೆ. ಇಂತ ದೇಶದ ಪ್ರಜೆಗಳಾಗಿರುವುದು ನಮ್ಮ ಹೆಮ್ಮೆ. ದೇಶ ನಮಗೆ ಒಳ್ಳೆಯದನ್ನೇ ನೀಡಿದೆ ನಾವೂ ದೇಶಕ್ಕೆ ಒಳಿತು ಬಯಸೋಣ. ಜೈ ಹಿಂದ್ ಜೈ ಭಾರತ್ ಮಾತ ಧನ್ಯವಾದ
ದ್ವಿತೀಯ ಪಿಯುಸಿ
ಶ್ರೀ ರಾಮ ವಿದ್ಯಾ ಕೇಂದ್ರ , ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ನಮಸ್ತೆ ಅಕ್ಕ ನಾನು ಶುಬಿಕ್ಷಾ. ನಾನು ಚೆನ್ನಾಗಿದ್ದೇನೆ. ನೀವು ಹೇಗಿದ್ದೀರಾ....? ನಾವು ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಾ ಇದ್ದೇವೆ. ಇದರ ಹಿಂದೆ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವಿದೆ. ನಾನು ಚಿಕ್ಕವಳಿದ್ದಾಗ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸಂಗೊಳ್ಳಿ ರಾಯಣ್ಣ ಮುಂತಾದವರು ಎಂದುಕೊಂಡಿದ್ದೆ. ಆದರೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಅಪರಿಮಿತ ಸಂಖ್ಯೆಯಲ್ಲಿದ್ದಾರೆಂದು ನನಗೆ ಮತ್ತೆ ಅರ್ಥವಾಯ್ತು. ಅದರಲ್ಲಿ ಮೈಲಾರ ಮಹಾದೇವಪ್ಪನವರ ಬಗ್ಗೆ ನನಗೆ 7ನೇ ತರಗತಿಗೆ ಬಂದ ನಂತರವೇ ತಿಳಿಯಿತು. ಅವರು ಅಂದು ಕಷ್ಟ ಪಟ್ಟಿದ್ದರಿಂದ ನಾವು ಇಂದು ಸುಖಮಯವಾದ ಜೀವನ ನಡೆಸುತ್ತಾ ಇದ್ದೇವೆ. ಏನೇ ಆದರೂ ಕೊನೆಗೆ ಭಾರತ ಭಾರತೀಯರಿಗೆ ಸಿಕ್ಕಿತು ಎನ್ನುವುದು ಬಹಳ ಸಂತೋಷದ ವಿಷಯ. ನೀವು ಹೇಳಿದ ಪ್ರತಿಯೊಂದು ಮಾತು ಮನಸ್ಸಿಗೆ ಮುಟ್ಟುವಂತಿದೆ. ನಾನು ಇನ್ನು ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ.... ಧನ್ಯವಾದಗಳು.
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಕೊಡ್ಮಾಣ್
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ನಮಸ್ತೆ ಅಕ್ಕ.... ನಮ್ಮ ಹೆಸರು ದೀಕ್ಷಾ ಮತ್ತು ದೀಪ್ತಿ. ನೀವು ಬರೆದ ಪತ್ರದಲ್ಲಿ.... ಮೈಲಾರ ಮಹದೇವಪ್ಪ ಅವರ ತ್ಯಾಗ, ಹೋರಾಟ ಇಷ್ಟ ಆಯ್ತು... ಆಗಿನವರ.... ತ್ಯಾಗವನ್ನ ಇಂದಿನ ಮಕ್ಕಳು... ಸ್ಫೂರ್ತಿಯಾಗಿ ತೆಗೆದುಕೊಂಡು.... ಸನ್ಮಾರ್ಗದಲ್ಲಿ ನಡೆದರೆ ... ಅವರ ಬಲಿದಾನಕ್ಕೆ.... ಒಳ್ಳೆಯ ಪ್ರತಿಫಲ ನೀಡಿದಂತೆ ಅಕ್ಕ... ಜೈಹಿಂದ್...
3ನೇ ತರಗತಿ
ಕೇಂದ್ರೀಯ ವಿದ್ಯಾಲಯ ಮಾದಾಪುರ..
ಚಾಮರಾಜ ನಗರ ತಾಲ್ಲೂಕು.
ಚಾಮರಾಜ ನಗರ ಜಿಲ್ಲೆ.
******************************************
ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಮಾಡುವ ನಮಸ್ಕಾರಗಳು..... ನಾನು ಈ ಭಾರತ ಪುಣ್ಯ ಭೂಮಿಯಲ್ಲಿ ಜನಿಸಿರುವುದಕ್ಕೆ ತುಂಬಾ ಹೆಮ್ಮೆ ಪಡುತ್ತೇನೆ. ಆಗಸ್ಟ್ 15 ನಮಗೆಲ್ಲರಿಗೂ ಮಹತ್ವಪೂರ್ಣ ದಿನವಾಗಿದೆ. ಅಂದು ಭಾರತವು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡುಗಡೆ ಹೊಂದಿ ದೇಶಕ್ಕೆ ಸ್ವಾತಂತ್ರ್ಯ ದೊರಕಿದ ದಿನ. ನಮ್ಮ ದೇಶಕ್ಕಾಗಿ ಅನೇಕ ಮಹನೀಯರು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ಹೋರಾಡಿದ್ದಾರೆ. ಅದರ ಫಲವೇ ಇಂದು ನಾವು ಸ್ವಾತಂತ್ರ್ಯ ದಿನಾಚರಣೆ, ಆಚರಿಸುವಂತಾಗಿದೆ. ಬಾಲ್ಯದಲ್ಲಿಯೇ ಅನೇಕರು ತಮ್ಮ ಮಾತೃಭೂಮಿಗಾಗಿ ಹೋರಾಡಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದವರು ಇದ್ದಾರೆ. "ಇಂದಿನ ಮಕ್ಕಳೇ ಮುಂದಿನ ಜನಾಂಗ " ಇದೊಂದು ಸುಂದರವಾದ ಲೋಕೋಕ್ತಿ. ನಮ್ಮ ಹಿರಿಯರ ನುಡಿ ಮುತ್ತು. ಇಂದು ಮಕ್ಕಳಾದ ನಾವು ಭವಿಷ್ಯದಲ್ಲಿ ಬಲಿಷ್ಟವಾದ ದೇಶವನ್ನು ಕಟ್ಟುವವರು. ವಿದ್ಯೆಯು ವ್ಯಕ್ತಿಯನ್ನು ಒಳ್ಳೆಯ ಮನುಷ್ಯನನ್ನಾಗಿ ಮಾಡುತ್ತದೆ. ಹಾಗಾಗಿ ನಾವು ಒಳ್ಳೆಯ ವಿದ್ಯಾಭ್ಯಾಸ ಕಲಿತು ನಮ್ಮ ಮಾತೃಭೂಮಿಯ ಸೇವೆಯನ್ನು ಮಾಡೋಣ. ಧನ್ಯವಾದಗಳು ಅಕ್ಕಾ,
8 ನೇ ತರಗತಿ
ಸರಕಾರಿ ಪ್ರೌಢ ಶಾಲೆ ವೇಣೂರು
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ಪ್ರೀತಿಯ ಅಕ್ಕನಿಗೆ ವೈಷ್ಣವಿ ಕಾಮತ್ ಮಾಡುವ ನಮಸ್ಕಾರಗಳು..... ನಾವೆಲ್ಲರೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದೆವು. ನಮ್ಮ ದೇಶಕ್ಕಾಗಿ ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹಾನ್ ಸ್ವಾತಂತ್ರ್ಯ ಯೋಧರನ್ನು ಸ್ಮರಿಸಿದೆವು. ನಾವು ಈ ಮಹಾನ್ ವ್ಯಕ್ತಿಗಳಂತೆ ನಮ್ಮ ದೇಶದ ಬಗ್ಗೆ ಅಭಿಮಾನ, ಗೌರವವನ್ನು ಬೆಳೆಸಿಕೊಳ್ಳಬೇಕು. ದೇಶ ಪ್ರೇಮವೆಂಬುವುದು ಎಲ್ಲರ ಮನೆ-ಮನಗಳಲ್ಲಿಯೂ ಮೂಡಿಬರಬೇಕು. ನಮ್ಮ ದೇಶದಲ್ಲಿ ತಯಾರಿಸಿದ ವಸ್ತುಗಳನ್ನು ನಾವು ಬಳಸಿ, ರಾಷ್ಟ್ರಪ್ರೇಮವನ್ನು ಮೆರೆಯಬೇಕು. ನನ್ನ ದೇಶ, ನನ್ನ ಜನ, ನನ್ನ ನೆಲ ಎಂಬ ರಾಷ್ಟ್ರಾಭಿಮಾನವು ಯಾವತ್ತೂ ಬತ್ತದಿರಲಿ. ಅಮೃತ ಮಹೋತ್ಸವದ ಸಂಭ್ರಮವು ಯಾವಾಗಲೂ ಹೀಗೆ ಇರಲಿ. ಧನ್ಯವಾದಗಳೊಂದಿಗೆ
5ನೇ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ
ಹನುಮಾನ್ ನಗರ , ಕಲ್ಲಡ್ಕ.
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ.
******************************************
ಪ್ರೀತಿಯ ಅಕ್ಕನಿಗೆ ಹಿತಶ್ರೀ ಮಾಡುವ ನಮನಗಳು..... ಅಕ್ಕ ನಿಮ್ಮ ಪತ್ರವನ್ನು ಓದಿದ್ದೇನೆ. ನೀವು ಬರೆದಿರುವುದು ಸ್ವಾತಂತ್ರ್ಯ ಹೋರಾಟದ ಬಗ್ಗೆ. ನನಗೆ ಸ್ವಾತಂತ್ರ್ಯದ ಬಗ್ಗೆ ಚಿಕ್ಕ ವಯಸ್ಸಿನಲ್ಲಿರುವಾಗ ತಿಳಿದಿರಲಿಲ್ಲ. ಆದರೆ ಶಿಕ್ಷಕರು ತಂದೆ ತಾಯಿಯರು ದೊಡ್ಡ ತರಗತಿಯಲ್ಲಿರುವ ಅಕ್ಕ ಅಣ್ಣನವರು ಭಾಷಣ ಮಾಡಿ ನಮಗೆ ಹಿಂದೆ ಸ್ವಾತಂತ್ರ್ಯ ಹೇಗೆ ದೊರಕಿತು ಎಂದು ತಿಳಿಸಿಕೊಟ್ಟಿದ್ದಾರೆ. ನಾವು ಚಿಕ್ಕವಯಸ್ಸಿನಲ್ಲಿ ಅಂಗನವಾಡಿಗೆ ಹೋಗುತ್ತಿದ್ದೆವು. ನಮಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ಶಿಕ್ಷಕಿಯರು ಹೇಳಿಕೊಟ್ಟಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಕಾರಣದಿಂದ ನಾವಿಂದು ಸ್ವತಂತ್ರವಾಗಿ ಬದುಕಲು ಸಾಧ್ಯವಾಯಿತು. ಆಗಸ್ಟ್ 15 ಎಲ್ಲಾ ಭಾರತಾಂಬೆಯ ಮಕ್ಕಳಿಗೆ ಪುಣ್ಯ ದಿನವಾಗಿದೆ. ನಮ್ಮ ದೇಶದಿಂದ ಬ್ರಿಟಿಷರೆಂಬ ಪರಕೀಯರು ನಮ್ಮನ್ನು ಬಿಟ್ಟು ತೊಲಗಿದ ದಿನವಾಗಿದೆ. ಆಗಸ್ಟ್ 14 ಮಧ್ಯರಾತ್ರಿಯಲ್ಲಿ ನಮ್ಮ ರಾಷ್ಟ್ರದ ರಾಜಧಾನಿಯಾದ ದೆಹಲಿಯ ಕೆಂಪು ಕೋಟೆಯ ಮೇಲೆ ಕೇಸರಿ ಬಿಳಿ ಹಸಿರು ಈ ಮೂರು ಬಣ್ಣಗಳ ನಡುವೆ ಅಶೋಕ ಚಕ್ರ ಇರುವ ಬಾವುಟವನ್ನು ಹಾರಿಸಲಾಗಿದೆ. ಈ ವರ್ಷವೂ 75ನೇ ಸ್ವಾತಂತ್ರ್ಯೋತ್ಸವವಾಗಿದೆ. 75ನೇ ಸ್ವಾತಂತ್ರ್ಯವನ್ನು ಅಮೃತ ಮಹೋತ್ಸವ ಎಂದು ಕರೆದಿದ್ದಾರೆ. ಹರ್ ಗರ್ ತಿರಂಗಾ ಎಂಬ ಘೋಷ ವಾಕ್ಯದೊಂದಿಗೆ ಎಲ್ಲರ ಮನೆಯಲ್ಲೂ ಈ ವರ್ಷ ಧ್ವಜವನ್ನು ಹಾರಿಸಲಾಗಿದೆ. ನನ್ನ ಈ ಪುಟ್ಟ ಅಭಿಪ್ರಾಯವನ್ನು ಕೊನೆಗೊಳಿಸುತ್ತಿದ್ದೇನೆ.
7 ನೇ ತರಗತಿ
ಶ್ರೀ ವೇಣುಗೋಪಾಲ ಅ. ಹಿ.ಪ್ರಾ.ಶಾಲೆ
ಪಕಳಕುಂಜ ಮಾಣಿಲ
ಬಂಟ್ಟಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************
ನಮಸ್ತೆ ಅಕ್ಕಾ... ನಾನು ಧೀರಜ್... ಮೊದಲನೆಯದಾಗಿ ನಿಮಗೆ 75ನೇ ಸ್ವಾತಂತ್ರ ಅಮೃತ ಮಹೋತ್ಸವದ ಶುಭಾಶಯಗಳು. ಈ ಪುಣ್ಯಭೂಮಿ ಭಾರತಾಂಬೆಯ ಭವ್ಯ ನೆಲವನ್ನು ಬ್ರಿಟಿಷರಿಂದ ರಕ್ಷಿಸಿಕೊಳ್ಳಲು ಅನೇಕ ಮಹನೀಯರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಅಂದು ಸಾವಿರಾರು ಮಂದಿ ಹೋರಾಟಗಾರರು ಬಿಟಿಷರು ವಿರುದ್ಧ ರಣರಂಗಕ್ಕೆ ಧುಮುಕಿ ಹೋರಾಟ ನಡೆಸಿದ ಪರಿಣಾಮವಾಗಿ ನಮ್ಮ ದೇಶ ಭಾರತ ಒಂದು ಸ್ವತಂತ್ರ ರಾಷ್ಟ್ರವಾಗಿ ರೂಪಾಂತರಗೊಂಡಿತು ಹಾಗೂ ನಾವು ಸ್ವತಂತ್ರವಾಗಿ ಜೀವಿಸಲು ಸಾಧ್ಯವಾಗಿದೆ. ನಮ್ಮ ಸುತ್ತ ಮುತ್ತ ಯಾರೂ 80 ವರ್ಷ ಮೇಲ್ಪಟ್ಟವರು ಇಲ್ಲದೆ ಇರುವ ಕಾರಣ ನಾನು ಸ್ವಾತಂತ್ರ ಹೋರಾಟಗಾರರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ನೀವು ಹೇಳಿದ ಹಾಗೆ ಮೈಲಾರ ಮಹಾದೇವ ಅವರ ಪಾಠ ನಮಗೆ ಏಳನೇ ತರಗತಿಯಲ್ಲಿ ಇತ್ತು. ಪಾಠ ಬಹಳ ರೋಮಾಂಚಕವಾಗಿತ್ತು. ಹತ್ತುವರ್ಷದ ಎಳೆಯ ಬಾಲಕನಾಗಿರುವಾಗಲೇ ಮಾತಿನ ಪ್ರಚೋದನೆಯಿಂದಾಗಿ ವಿದೇಶಿ ಟೋಪಿಯನ್ನು ನೆಲಕ್ಕೆಸೆದವರು. ದೇಶಸೇವೆ ಮಾಡುವುದೊಂದೇ ಅವರ ಧ್ಯೇಯವಾಗಿತ್ತು. ಇಂದು ಎಲ್ಲಾ ಸಂತೋಷಗಳನ್ನು ಸಂಬಂಧಗಳನ್ನು ಬಿಟ್ಟು ಗಡಿಯಲ್ಲಿ ನಮ್ಮನ್ನು ರಕ್ಷಿಸುವ ಸಲುವಾಗಿ ನಿಂತು ದೇಶ ಸೇವೆ ಮಾಡುವುದರಲ್ಲಿ ಪರಮ ಸಂತೋಷವನ್ನು ಕಾಣುತ್ತಿರುವ ವೀರ ಯೋಧರಿಗೊಂದು ಸಲಾಂ ಎಂದು ಹೇಳುತ್ತೇನೆ.
ಇಂದಿನ ಅರ್ಥಪೂರ್ಣ ಪತ್ರಕ್ಕಾಗಿ ವಂದನೆಗಳು ಅಕ್ಕಾ... ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ... ಧನ್ಯವಾದಗಳು...
10ನೇ ತರಗತಿ
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ
ಪ್ರೌಢ ಶಾಲೆ ರಾಮಕುಂಜ.
ಕಡಬ ತಾಲ್ಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ಮಕ್ಕಳ ಜಗಲಿ....: ಅಕ್ಕನ ಪತ್ರ ಸಂಚಿಕೆ ೩೦...
ಪ್ರೀತಿಯ ಅಕ್ಕ... ನಿಮಗೆ ಲಹರಿ ಮಾಡುವ ನಮಸ್ಕಾರಗಳು. ನಿಮ್ಮ ಪತ್ರ ಓದಿ ತುಂಬಾ ಸಂತೋಷವಾಯಿತು. ಸ್ವಾತಂತ್ರ ಹೋರಾಟಗಾರ ಮಹಾದೇವಪ್ಪ ನವರ ಕಥೆಯನ್ನು ಚೆನ್ನಾಗಿ ಹೇಳಿರುವಿರಿ. ಅವರ ಬಗ್ಗೆ ಇಷ್ಟೊಂದು ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ಅಕ್ಕ. ಹೌದು ಅಕ್ಕ ಈ ಸಲ ಆಜಾದಿ ಕಾ ಅಮೃತ ಮಹೋತ್ಸವವನ್ನು ತುಂಬಾ ಕಡೆ ತುಂಬಾ ವಿಜೃಂಭಣೆಯಿಂದ ಆಚರಿಸಲಾಗಿದೆ. ನಮ್ಮ ಕಡೆ ಕೂಡ ಹಲವು ಕಡೆಗಳಲ್ಲಿ ರಸ್ತೆ ಬದಿಗಳಲ್ಲಿ ರಾಷ್ಟ್ರಧ್ವಜಗಳನ್ನು ಹಾರಿಸಲಾಗಿತ್ತು... ನೋಡಲು ತುಂಬಾ ಸುಂದರವಾದ ದೃಶ್ಯ ಇದು... ನಾನು ನನ್ನ ಮುತ್ತಜ್ಜಿಯ ಬಾಯಿಂದ ಬ್ರಿಟಿಷರ ಬಗ್ಗೆ ಆಗಾಗ ಕೇಳುತ್ತಿರುತ್ತೇನೆ. ಅಲ್ಲಿಗೆ ಹೋದಾಗ ನನ್ನ ಮುತ್ತಜ್ಜಿ ನನಗೆ ಅವರ ಬಾಲ್ಯದ ದಿನಗಳ ಕಥೆಗಳನ್ನು ಹೇಳುತ್ತಾರೆ. ಆಗ ಅವರ ಕಷ್ಟದ ದಿನಗಳನ್ನು ಕಂಡಾಗ ಇಂದು ನಾವೆಲ್ಲರೂ ನಿಜವಾಗಿಯೂ ತುಂಬಾ ಅದೃಷ್ಟವಂತರು ಎಂದು ಎನಿಸುತ್ತದೆ. ಸ್ವಾತಂತ್ರ್ಯವೆಂಬುದು ಸ್ವೇಚ್ಛಾಚಾರವಾಗಿರದೆ ದೇಶದ ಉಳಿವು ಮತ್ತು ಬೆಳವಣಿಗೆಗಾಗಿ ಉಪಯೋಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ... ಅಲ್ವಾ ಅಕ್ಕ... ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುವೆನು...ಇಂತಿ ನಿಮ್ಮ ಪ್ರೀತಿಯ ಲಹರಿ.
೭ ನೇ ತರಗತಿ,
ತುಂಬೆ ಸೆಂಟ್ರಲ್ ಸ್ಕೂಲ್.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ನಮಸ್ತೆ ಅಕ್ಕ ನಾನು ರಕ್ಷಿತಾ..... ನಿಮ್ಮ ಪತ್ರವನ್ನು ಓದಿದರೆ ಬಹಳ ಸಂತೋಷ ವಾಗುತ್ತದೆ. ನಾವು ಇಂದು ಸಂತೋಷದಿಂದ ಬದುಕುತ್ತಿದ್ದೇವೆ ಎಂದರೆ ಅದರ ಹಿಂದೆ ಹತ್ತು ಹಲವಾರು ಯೋಧರ ಪ್ರಾಣ ಬಲಿದಾನವಿದೆ. ನಮಗೆ ಸ್ವತಂತ್ರ ದೊರಕಿ 75 ವರ್ಷಗಳೇ ಕಳೆದರೂ ಇದನ್ನು ಅತ್ಯಂತ ಮಹತ್ವದ ದಿನವನ್ನಾಗಿ ಆಚರಿಸುತ್ತಿದ್ದೇವೆ. 7ನೇ ತರಗತಿಯಲ್ಲಿ ಓದಿದ ಮೈಲಾರ ಮಹಾದೇವ ಪಾಠ ಮನಸ್ಸಿಗೆ ಬರುತ್ತದೆ. ಅವರಲ್ಲಿನ ದೇಶಭಕ್ತಿ, ದೇಶಪ್ರೇಮ ಎದ್ದು ಕಾಣುತ್ತದೆ. ಅವರು ನಡೆದ ಹಾದಿ ಯಲ್ಲೇ ನಾವು ನಡಯಬೇಕೆಂಬುದು ನನ್ನ ಅಭಿಪ್ರಾಯ. ಮುಂದಿನ ನಿಮ್ಮಪತ್ರಕ್ಕಾಗಿ ಕಾಯುತ್ತಿರುತ್ತೇನೆ. ವಂದನೆಗಳು....
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಾಣಿಲ ಮುರುವ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ಪ್ರೀತಿಯ ಅಕ್ಕನಿಗೆ ಸಾನ್ವಿ ಮಾಡುವ ವಂದನೆಗಳು. ನಿಮ್ಮ ಪತ್ರ ನನಗೆ ತುಂಬಾ ಇಷ್ಟವಾಯಿತು. ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತೊಮ್ಮೆ ನಮನಗಳು. ಅಕ್ಕ ನಮ್ಮ ಅಜ್ಜನಿಗೆ 86 ವರ್ಷ. ನಾನು ಅವರಲ್ಲಿ ಸ್ವಾತಂತ್ರ್ಯ ಚಳುವಳಿಯ ವಿಷಯಗಳನ್ನು ಕೇಳಿದೆ. ಅವರು ನನಗೆ ಅದರ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ನೀವು ಬರೆದ ಮೈಲಾರ ಮಹದೇವಪ್ಪ ಅವರ ಕಥೆ ನನಗೆ ಮೊದಲು ಗೊತ್ತಿರಲಿಲ್ಲ. ಎಂಥ ಧೀಮಂತ ವ್ಯಕ್ತಿತ್ವ ಅವರದ್ದು!? ತುಂಬಾ ಸೊಗಸಾಗಿದೆ. ಹಾಗಾದರೆ ಅಕ್ಕ ಇನ್ನು ಮುಂದೆಯೂ ಇಂತಹ ಒಳ್ಳೆ ಒಳ್ಳೆ ವಿಷಯಗಳನ್ನು ತಿಳಿಸಿಕೊಡಿ. ಧನ್ಯವಾದಗಳು.
5ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************