-->
ವಿಶೇಷ ಲೇಖನ : ಪುಸ್ತಕ ಪ್ರೀತಿ, ಬದಲಿಸುವುದು ಜೀವನ ರೀತಿ.. ಲೇಖಕಿ : ಹರಿಣಾಕ್ಷಿ ಕಕ್ಯಪದವು

ವಿಶೇಷ ಲೇಖನ : ಪುಸ್ತಕ ಪ್ರೀತಿ, ಬದಲಿಸುವುದು ಜೀವನ ರೀತಿ.. ಲೇಖಕಿ : ಹರಿಣಾಕ್ಷಿ ಕಕ್ಯಪದವು

ವಿಶೇಷ ಲೇಖನ : ಪುಸ್ತಕ ಪ್ರೀತಿ, ಬದಲಿಸುವುದು ಜೀವನ ರೀತಿ............ 
ಲೇಖಕಿ : ಹರಿಣಾಕ್ಷಿ ಕಕ್ಯಪದವು



ಪ್ರೀತಿಯ ಮಕ್ಕಳೇ..... ಭಾರತ ಮಾತೆಯು ದಾಸ್ಯದಿಂದ ಮುಕ್ತಗೊಂಡು, ಬಾನೆತ್ತರದಲಿ ತ್ರಿವರ್ಣ ಧ್ವಜ ಹಾರಾಡಿ 75 ವರುಷಗಳು ಉರುಳಿ ಹೋದ ಸಂಭ್ರಮ ನಮ್ಮೆಲ್ಲರ ಮನೆ ಮನಗಳಲ್ಲಿ ತುಂಬಿ ಹೋಗಿದೆ. ನಮ್ಮ ರಾಷ್ಟ್ರ ಪರಕೀಯರ ಆಡಳಿತದಿ ನಲುಗಿ ಹೋದ ಇತಿಹಾಸ, ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳು, ಮೈನವಿರೇಳಿಸುವ ರೋಮಾಂಚಕ ಕತೆಗಳನ್ನು ಓದಿದಾಗ, ಕೇಳಿದಾಗ ಅವು ನಮ್ಮನ್ನು ಭಾವುಕರಾಗಿಸುತ್ತವೆ, ಕೆಚ್ಚೆದೆಯ ಕಲಿಗಳನ್ನಾಗಿಸುತ್ತವೆ. ರಾಷ್ಟ್ರಾಭಿಮಾನವನ್ನು ಚಿಮ್ಮಿಸುತ್ತವೆ. ಹೀಗೆ ಇತಿಹಾಸದ ಅರಿವು ವರ್ತಮಾನದ ಬದುಕಿಗೆ ಪ್ರೇರಣೆಯಾಗುತ್ತವೆ. ಭವಿಷ್ಯಕ್ಕೆ ಬುನಾದಿಯಾಗುತ್ತದೆ.
      ಒಲವಿನ ವಿದ್ಯಾರ್ಥಿಗಳೇ.... ಯಾವುದೇ ವಿಚಾರದ ಕುರಿತಾದ 'ತಿಳಿವು' ಎಂಬುದು ವ್ಯಕ್ತಿಗೆ ನಾನಾ ಮೂಲಗಳಿಂದ ಲಭ್ಯವಾಗಬಹುದು. ಓದುವಿಕೆಯಿಂದ, ಕೇಳುವಿಕೆಯಿಂದ, ನೋಡುವಿಕೆಯಿಂದ, ಅನುಭವದಿಂದ ಹೀಗೆ ಯಾವುದಾದರೊಂದು ಕ್ರಿಯೆಯಿಂದ  ನಾವು ನಮ್ಮ ಜ್ಞಾನವನ್ನು
ಕಟ್ಟಿಕೊಳ್ಳುತ್ತೇವೆ. ಸಮೃದ್ಧಿಗೊಳಿಸಿಕೊಳ್ಳುತ್ತೇವೆ.
ವಿಸ್ತಾರಗೊಳಿಸಿಕೊಳ್ಳುತ್ತೇವೆ.
       ನಮ್ಮ ವರ್ತಮಾನದ ನಡೆ ಗೌರವವನ್ನು ಪಡೆದುಕೊಳ್ಳಬೇಕಾದರೆ, ನಮ್ಮ ವ್ಯಕ್ತಿತ್ವ ಸಾಮಾಜಿಕ ಮನ್ನಣೆ ಗಳಿಸಬೇಕಾದರೆ ನಮ್ಮ ಜ್ಞಾನದ ಗಳಿಕೆ ನಿತ್ಯ ನಿರಂತರವಾಗಿರಬೇಕು. ಆ ನಿಟ್ಟಿನಲ್ಲಿ ಬಹು ಹಿಂದಿನಿಂದಲೂ ನಮ್ಮೊಡನಾಡಿಯಾಗಿ , ಜ್ಞಾನದ ಗಣಿಯಾಗಿ ನಮ್ಮೊಂದಿಗಿರುವವೆಂದರೆ 'ಪುಸ್ತಕಗಳು' .
      ಪುಸ್ತಕಗಳನ್ನು ಪ್ರೀತಿಸುತ್ತಲೇ, ಹೊತ್ತಗೆಯ ಸಾಂಗತ್ಯದಿ ತನ್ಮಯನಾಗುತ್ತಲೇ ಬಾಲ್ಯದಿಂದಲೇ ಸಮಯದ ಸದುಪಯೋಗ ಮಾಡಿದ ಭೀಮರಾವ್…. ಡಾ.ಬಿ.ಆರ್ ಅಂಬೇಡ್ಕರ್ ಎನಿಸಿಕೊಂಡದ್ದು ಶ್ರೇಷ್ಠ ಸಾಧನೆ. ಶೋಷಿತ ವರ್ಗದಲ್ಲಿ ಜನಿಸಿ ಎಳವೆಯಲ್ಲಿ ಎಲ್ಲರ ತುಚ್ಛೀಕರಣಕ್ಕೊಳಗಾದರೂ, ಸ್ವತಂತ್ರ ಭಾರತದ ಕಾನೂನು ಮಂತ್ರಿಯಾಗಿ ಗೌರವ ಪಡೆದು ದೇಶಕ್ಕೆ ಭದ್ರವಾದ ಸಂವಿಧಾನವನ್ನು ರಚಿಸಿಕೊಟ್ಟ ಸಂವಿಧಾನ ಶಿಲ್ಪಿಯ ಮೇರು ವ್ಯಕ್ತಿತ್ವಕ್ಕೆ, ಅಗಣಿತ ಜ್ಞಾನಸಿರಿಗೆ ಕಾರಣವೇ ಅವರ ಪುಸ್ತಕ ಪ್ರೀತಿ.  ಅವರು ಹೊರದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ವೇಳೆ ಸದಾ ಅಧ್ಯಯನ ಶೀಲರಾಗಿದ್ದರು. ಅವರು ಒಂದು ಬಾರಿ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಮರಳಿ ಭಾರತಕ್ಕೆ ಹಿಂದಿರುಗಿ ಬರುವಾಗ 75,000 ಪುಸ್ತಕಗಳನ್ನು ಹಡಗಿನಲ್ಲಿ ಇರಿಸಿದ್ದರಂತೆ……!!! ಇದು ಅವರ ಪುಸ್ತಕ ಪ್ರೇಮಕ್ಕೆ ಸಾಕ್ಷಿಯಾಗಿದೆ. ತನ್ನ ಅಧ್ಯಯನದ ಅನುಭವದಿಂದ ಅವರು ಹೇಳುತ್ತಾರೆ.... "ಒಂದು ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ. ಅದೇ ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ." ಎಂದು. ಇದು ಅಕ್ಷರಶಃ ಸತ್ಯ. ಪುಸ್ತಕಗಳು ಮನುಷ್ಯನನ್ನು ಬದಲಾಯಿಸಬಹುದು. ಆತನ ಸ್ಥಿತಿಗತಿಯನ್ನು ಬದಲಾಯಿಸಬಹುದು. ಆತನನ್ನು ಪ್ರಬುದ್ಧನನ್ನಾಗಿಸಬಹುದು. ಹುಟ್ಟಿನಿಂದಲೇ ಜ್ಞಾನಿ ಎನಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಕನಸಿನೊಂದಿಗೆ ಛಲಗಾರನಾಗಿ ಜ್ಞಾನ ಸಂಪಾದನೆಯ ಗುರಿ ಹೊಂದಿ ಪ್ರಯತ್ನಶೀಲರಾಗಿ ಯಶ ಕಂಡಾಗ ಆತನ ಬುದ್ಧಿಮತ್ತೆಗೆ ಎಲ್ಲರೂ ತಲೆಬಾಗುತ್ತಾರೆ. ಉನ್ನತ ವ್ಯಕ್ತಿಗಳ ಸಾಲಿನಲ್ಲಿ ಆತ ವಿಜೃಂಭಿಸುತ್ತಾನೆ.
       ಮಕ್ಕಳೇ....... ಹಲವು ಆದರ್ಶ ನಾಯಕರಂತೆ ನೀವೂ ಆಗಬೇಕಾದರೆ ಮಾಡಬೇಕಾದಿಷ್ಟೇ... ಜ್ಞಾನ ಸಂಪಾದನೆ.  ನಿತ್ಯ ಹೊಸ ಹೊಸ ಉತ್ತಮ ಪುಸ್ತಕಗಳನ್ನು ಕೊಂಡು ಓದಿ. ಜಾತ್ರೆ, ಹಬ್ಬ ಹರಿದಿನದಂದು ಹೊರಗಡೆ ಸುತ್ತಾಡಲು ಹೋದಾಗ ಪುಸ್ತಕದ ಮಳಿಗೆಗೊಮ್ಮೆ ಭೇಟಿ ನೀಡಿ. ಸಲ್ಲದ, ಪ್ರಯೋಜನಕ್ಕೆ ಬಾರದ ವಸ್ತುಗಳನ್ನು ಖರೀದಿಸಿ ಹಣವನ್ನು ದುಂದುವೆಚ್ಚ ಮಾಡುವುದಕ್ಕಿಂತ ಪುಸ್ತಕಗಳನ್ನು ಕೊಂಡು ಓದಿ. ನಿಮ್ಮ ಗೆಳೆಯರಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿ. ಇದರಿಂದ ಅಮಿತ ಸಂತೋಷ ಪ್ರಾಪ್ತಿಯಾಗುವುದು.
       ಪುಸ್ತಕಗಳೆಂದರೆ ಬರಿಯ ಅಕ್ಷರ ಹೊತ್ತ ಹಾಳೆಗಳಲ್ಲ. ಕಾಲದ ಇತಿಹಾಸವನ್ನು ತನ್ನೊಳಗೆ ಬಚ್ಚಿಟ್ಟ ಅಮೂಲ್ಯ ಆಧಾರಗಳು. ಚಿಂತೆಯ ಸರಿಸಿ ಜಟಿಲ ಸಮಸ್ಯೆಯ ವಿರುದ್ಧ ಈಜಾಡಲು ದಾರಿ ತೋರೋ ಮಾರ್ಗದರ್ಶಕಗಳು ಅವು. ನಮ್ಮೊಳಗಿನ ಯೋಚನೆಗೆ ಕಾವ ನೀಡಿ ಹೊಸ ಆಲೋಚನೆಗಳ ಉಗಮಕ್ಕೆ ನೆರವಾಗಬಲ್ಲವುಗಳು ಪುಸ್ತಕಗಳು. ನೆಂಟರು, ಸ್ನೇಹಿತರು, ನೆರೆಹೊರೆಯವರೆಲ್ಲಾ ದೂರಸರಿದರೂ ನಮ್ಮೊಳಗಿನ ಏಕಾಂಗಿತನವನ್ನು ಹೋಗಲಾಡಿಸಬಲ್ಲ ಪ್ರೇರಣ ಶಕ್ತಿ "ಪುಸ್ತಕಗಳು". ಪುಸ್ತಕಗಳು ನಮ್ಮ ಬದುಕನ್ನು ರೂಪಿಸುತ್ತವೆ. ಬದುಕಲು ಕಲಿಸುತ್ತವೆ.ಹಾಗೂ ಬದುಕಿಸುವುದನ್ನು ತಿಳಿಸಿಕೊಡುತ್ತವೆ.
       ಕತೆಯ ರೂಪದಲ್ಲಿ, ಕವನದ ರೀತಿಯಲ್ಲಿ, ಲೇಖನಗಳ ಮೂಲಕ, ಕಾದಂಬರಿ, ವಿಶ್ವಕೋಶಗಳಾಗಿ, ಧಾರ್ಮಿಕ, ಶೈಕ್ಷಣಿಕ, ಬೌದ್ಧಿಕ, ಐತಿಹಾಸಿಕ, ವೈಜ್ಞಾನಿಕ , ಪೌರಾಣಿಕ , ಸಾಮಾಜಿಕ ವಿಚಾರಗಳನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ಪುಸ್ತಕಗಳನ್ನು ಓದುವುದರಿಂದ ಸಾಮಾನ್ಯ ವ್ಯಕ್ತಿಯೂ ಗಣ್ಯನಾಗಬಲ್ಲ. ಮಾನ್ಯತೆಯನ್ನು ಗಳಿಸಬಲ್ಲ. ಜ್ಞಾನ ಎನ್ನುವುದು ವ್ಯಕ್ತಿಯ ಸ್ಥಾನಮಾನವನ್ನು ಔನತ್ಯಕ್ಕೇರಿಸುತ್ತದೆ , ಅಮರನನ್ನಾಗಿಸುತ್ತದೆ.
      ಗತಿಸಿದ ಕಾಲದ ಹಿನ್ನೋಟದೆಡೆಗೆ ದೃಷ್ಟಿ ಹಾಯಿಸಬೇಕೆಂದರೆ ಮರಳಿ ಆ ಕಾಲಕ್ಕೆ ಹೋಗಲು ಸಾಧ್ಯವಿಲ್ಲ. ಆದರೆ ಆ ಕಾಲದ ಸಾಹಿತ್ಯಕೃತಿಗಳು ಅಂದಿನ ಸಾಮಾಜಿಕ, ಆರ್ಥಿಕ , ರಾಜಕೀಯ , ಜನಜೀವನ ಶೈಲಿಯನ್ನು ಮನದಟ್ಟು ಮಾಡಿಕೊಡುತ್ತವೆ. ಒಬ್ಬ ಉತ್ತಮ ಓದುಗ ಮಾತ್ರ ಉತ್ತಮ ಬರಹಗಾರನಾಗಬಲ್ಲ. ಬರಹದಲ್ಲಿ ಪಕ್ವತೆ, ಹಿಡಿತ, ವಿಚಾರಗಳ ಸ್ಪಷ್ಟತೆಯನ್ನು ಅರುಹುವ ಮುನ್ನ ಬರಹಗಾರನು ತಾನು ಪರಿಪಕ್ವತೆಯನ್ನು ಗಳಿಸಬೇಕು. ಪುಸ್ತಕಗಳ ದಾಸನಾಗಬೇಕು.
    ಪ್ರೀತಿಯ ವಿದ್ಯಾರ್ಥಿಗಳೇ... ಎಲ್ಲರೆದುರು ಆತ್ಮವಿಶ್ವಾಸದಿಂದ , ಕೆಚ್ಚಿನಿಂದ ವಿಷಯ ಮಂಡನೆ ಮಾಡಬೇಕೇ…? ನೀವೂ ಸಾಧಕರ ಸಾಲಿನಲ್ಲಿ ಸ್ಥಾನ ಪಡೆಯಬೇಕೇ…? ಮೊದಲು ಉತ್ತಮ ಓದುಗರಾಗಿ. ವಿದ್ಯಾರ್ಥಿ ಜೀವನದಲ್ಲಿ ದೊರೆಯುವ ಸಮಯಾವಕಾಶದಲ್ಲಿ ಪುಸ್ತಕಗಳ ಕುರಿತು ಒಲವನ್ನು ಬೆಳೆಸಿಕೊಂಡು ನಿಮ್ಮ ಬುದ್ಧಿ ಬಲವ ಹೆಚ್ಚಿಸಿಕೊಳ್ಳಿ. ಆ ಮೂಲಕ ಭವ್ಯ ಭಾರತದ ಶ್ರೇಷ್ಠ ನಾಯಕರಾಗಿ ಹೊರಹೊಮ್ಮಿ. ಜ್ಞಾನದ ಗಣಿಗಳಾಗಿ. ಶುಭವಾಗಲಿ.
.............................................. ಹರಿಣಾಕ್ಷಿ. ಕೆ
ಸಹಶಿಕ್ಷಕಿ
ಸ.ಮಾ.ಉ.ಹಿ.ಪ್ರಾ.ಶಾಲೆ, ಉಪ್ಪಿನಂಗಡಿ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
********************************************


Ads on article

Advertise in articles 1

advertising articles 2

Advertise under the article