-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093

                 ಪರಿಸರ ಎಂಬುದು ನಮಗೆ ತೀರಾ ಪರಿಚಿತ ಪದ. ಪರಿಸರದ ಬಗ್ಗೆ, ಅದರ ರಕ್ಷಣೆಯ ಬಗ್ಗೆ ಸುದೀರ್ಘವಾಗಿ ಪ್ರಬಂಧ, ಲೇಖನಗಳನ್ನು ಬರೆಯುತ್ತೇವೆ, ಬಾಷಣ ಮಾಡುತ್ತೇವೆ. ಪರಿಸರ ಮಾಲಿನ್ಯ ಎಂದೊಡನೆಯೇ ಕೆಲವರಿಗೆ ಕ್ರೋಧ ಉಕ್ಕಿ ಬರುತ್ತದೆ, ಹಲವರಿಗೆ ಬಹಳ ದುಃಖವಾಗುತ್ತದೆ. ನಾವು ನಾನಾ ಸಂದರ್ಭಗಳಲ್ಲಿ ಪರಿಸರ ಸ್ವಚ್ಛ ಮಾಡುತ್ತೇವೆ. ಪರಿಸರದೊಡನೆ ನಮಗೆ ಗೋಚರಿಸುವುದು ನೆಲ ಅಥವಾ ಭೂಪದರ, ಗಾಳಿ, ಬೆಳಕು, ನೀರು ಮತ್ತು ಗಿಡ ಮರಬಳ್ಳಿಗಳು. ಆದರೆ ಇಲ್ಲಿರುವ ಜೀವಿಗಳೂ ಪರಿಸರದ ವ್ಯಾಪ್ತಿಯೊಳಗಿವೆ ಎಂಬುದನ್ನು ಮರೆಯುತ್ತೇವೆ. ಜೀವಿಗಳು ಎಂದರೆ ಉರಗ, ಸಸ್ತನಿಗಳು, ಪಕ್ಷಿಗಳು, ಕ್ರಿಮಿ ಕೀಟಗಳು ಎಲ್ಲವೂ ಸೇರಿವೆ. ಇವೆಲ್ಲವೂ ಗಾತ್ರ ಮತ್ತು ಬಣ್ಣಗಳಲ್ಲಿ ವಿವಿಧತೆಗಳನ್ನು ಹೊಂದಿವೆ. ಕ್ರೂರ ಪ್ರಾಣಿಗಳೂ ಇವೆ, ಕ್ರೂರ ಜಂತುಗಳೂ ಇವೆ, ಕ್ರೂರ ಮನುಷ್ಯರೂ ಇದ್ದಾರೆ. ಮಾನವನ ಹೊರತಾದ ಪರಿಸರದಲ್ಲಿರುವ ಯಾವುದೇ ಜೀವಿಗಳು ಪರಿಸರ ನಾಶದಲ್ಲಿ ಸಹಭಾಗಿಯಲ್ಲ. ಕ್ರೂರ ಜೀವಿಗಳಾಗಲೀ ಸಾಧು ಜೀವಿಗಳಾಗಲೀ ಪರಿಸರವನ್ನು ಸಮತೋಲನದಲ್ಲಿಡಲು ಕಾರಣವಾಗುತ್ತವೆಯೇ ವಿನಹ ಪರಿಸರ ವಿನಾಶಕ ಕೆಲಸಗಳನ್ನು ಮಾಡುವುದೇ ಇಲ್ಲ. 
ಆದರೆ ಮಾನವನು ಪರಿಸರದ ವಿನಾಶಕನೇ ಸರಿ. ಬದುಕಲು ಪರಿಸರದ ಬಳಕೆ ಅನಿವಾರ್ಯ. ಇಂದಿನ ನಾಗರಿಕ ಸಮಾಜದಲ್ಲಿ ಎಲೆಗಳನ್ನು ಧರಿಸುತ್ತೇನೆ, ಗುಹೆಗಳಲ್ಲಿ ವಾಸ ಮಾಡುತ್ತೇನೆ, ಹಸಿಯಾದುವುಗಳನ್ನೇ ತಿನ್ನುತ್ತೇನೆ ಎಂದು ಆದರ್ಶ ಮೆರೆಯಲು ಸಾಧ್ಯವಿಲ್ಲ. ಉಡುಪುಗಳಿಗಾಗಿ, ವಸತಿಗಳಿಗಾಗಿ ಮತ್ತು ಆಹಾರಕ್ಕಾಗಿ ಪ್ರಕೃತಿಯನ್ನು ಮಿತವಾಗಿ ಬಳಸಲೇ ಬೇಕು. ಅಡುಗೆ ಮಾಡುವಾಗ ಹೊಗೆ ಸಹಜ. ಹೊಗೆಯಿಂದ ವಾಯು ಮಲಿನತೆಯೂ ಖಂಡಿತ. ಅತಿಯಾದ ಆಸೆಗೆ ತುತ್ತಾಗಿ, ಸ್ವಾರ್ಥಕ್ಕೆ ಬಲಿಯಾಗಿ ಬೇಕಾ ಬಿಟ್ಟಿಯಾಗಿ ಪರಿಸರ ನಾಶಮಾಡುವುದು ಘೋರ ಮತ್ತು ಕ್ಷಮಾತೀತವಾದ ಅಪರಾಧ.. ಪರಿಸರ ಮಾಲಿನ್ಯದಿಂದ ಪರಿಸರದ ಜೀವಿಗಳೂ ನಾಶವಾಗುತ್ತಿವೆ, ರೋಗಗ್ರಸ್ಥವಾಗುತ್ತಿವೆ. ಪರಿಸರ ನಾಶದಿಂದ ಮಾನವ ಸಂಕುಲವೂ ರೋಗಗಳಿಗೆ ಈಡಾಗುತ್ತಿವೆ. ಸದೃಢ ಚಿತ್ತ, ಉತ್ತಮ ಆರೋಗ್ಯ, ದಷ್ಟ ಪುಷ್ಟ ಮೈಕಟ್ಟುಗಳುಳ್ಳ ಮಾನವ ಸಂತತಿ ಕಡಿಮೆಯಾಗುತ್ತಿದೆ. ಕುಬ್ಜರು, ಬುದ್ಧಿಮಾಂದ್ಯರು, ವಿಕಲಾಂಗಿಗಳು ಹೆಚ್ಚುತ್ತಿದ್ದಾರೆ. ಈ ಎಲ್ಲ ರಾದ್ಧಾಂತಗಳಿಗೆ ಪರಿಸರದ ನಾಶವೇ ಕಾರಣ. ಮನುಷ್ಯನು ಪರಿಸರದ ಜೊತೆಗೆ ತನ್ನನ್ನೂ ನಾಶಗೊಳಿಸುತ್ತಿದ್ದಾನೆ. ಹಾಗಾಗಿ ಪರಿಸರದ ಸ್ವಚ್ಛತೆಯಲ್ಲಿ ಮಾನವನಲ್ಲಿರುವ ಮನದ ಮಾಲಿನ್ಯವನ್ನು ಪರಿಶುದ್ಧಗೊಳಿಸುವ ಕೆಲಸವಾಗಬೇಕು. 
      ಪರಿಸರದಿಂದ ಕಸ ಕಶ್ಮಲ ಹೆಕ್ಕಿ ತೆಗೆದು, ಗಲೀಜನ್ನು ತೊಳೆದು ತೆಗೆದು ಮಲಿನತೆಯನ್ನು ದೂರಕ್ಕೊಯ್ಯುತ್ತೇವೆ. ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಿದ ಕೊಳೆ ಆ ಪರಿಸರವನ್ನು ಮಲಿನಗೊಳಿಸುತ್ತದೆಯೇ ವಿನಹ ಸಂಪೂರ್ಣವಾಗಿ ಪರಿಸರದ ಸ್ವಚ್ಛತೆ ಆಗಿದೆ ಎನ್ನುವಂತಿಲ್ಲ ತಾನೇ...? ನಮ್ಮ ಮನೆಯ ಕಸವನ್ನು ಇನ್ನೊಂದು ಮನೆಯಂಗಳಕ್ಕೆಸೆಯುವುದೂ, ಒಂದು ಪರಿಸರದ ಕಸವನ್ನು ಇನ್ನೊಂದು ಪರಿಸರದಲ್ಲಿ ರಾಶಿ ಮಾಡುವುದು ಇವೆರಡರಲ್ಲಿ ಭಿನ್ನತೆಯಿಲ್ಲ. ಅದಕ್ಕಾಗಿಯೇ ಪರಿಸರದ ಸ್ವಚ್ಛತೆಯೆನ್ನುವಾಗ ಪರಿಸರದ ಮುಖ್ಯ ಭಾಗವಾದ ಮನುಕುಲದ ಮನಸ್ಸುಗಳ ಸ್ವಚ್ಛತೆಯಾಗಬೇಕೆಂಬುದನ್ನು ಮನದ ಮಾಲಿನ್ಯ ಕೀಳುವ ಕೆಲವಾಗಬೇಕೆಂದು ಉಲ್ಲೇಖಿಸಿದೆ.  
       ಮನುಷ್ಯನ ಮನದ ಮಾಲಿನ್ಯವನ್ನು ಸ್ವಚ್ಛಗೊಳಿಸುವುದಾದರೂ ಯಾರು ಮತ್ತು ಹೇಗೆ..? ಯಾರಿಂದಲೂ ಇತರರನ್ನು ಸರಿಪಡಿಸಲು ಸಾಧ್ಯವಾಗದು. ಮೊದಲು ನಾವು ಸರಿಯಾಗಬೇಕು. ಪ್ರತಿಯಬ್ಬರಲ್ಲೂ ತಾನು ಸರಿಯಾದರೆ ಎಲ್ಲರೂ ಸರಿಯಾಗುತ್ತಾರೆ ಎಂಬ ಸದ್ಭಾವವರಳಬೇಕು. ತಾನು ಸರಿಯಾಗಬೇಕೆಂಬ ಮನೋಗುಣ ಮಾನವನಲ್ಲಿ ಇದೆಯಾದರೂ ಅದು ಬಲಿತಿರುವುದಿಲ್ಲ. ಸರಿಯಾಗಿರಬೇಕೆಂಬ ಮನೋಗುಣದ ಮೇಲೆ ಸ್ವಾರ್ಥವು ನಿರಂತರವಾಗಿ ದಾಳಿ ಮಾಡಿ ಅದನ್ನು ಸುಸ್ಥಿತಿಯಲ್ಲಿರಲು ಬಿಡುವುದಿಲ್ಲ. ನಮ್ಮ ಮನಸ್ಸನ್ನು ನಿಯಂತ್ರಣ ಮೀರದಂತೆ ಕಾಪಿಡಲಾಗದಿದ್ದರೆ ಅದು ಪರಿಸರವನ್ನೇ ಕಾಡುತ್ತದೆಂಬುದು ಪ್ರತಿಯೊಬ್ಬರ ಸ್ವಯಂ ಜ್ಞಾನವಾಗಬೇಕು. ಗುಣ ಪಡಿಸುವುದಕ್ಕಿಂತ ತಡೆಗಟ್ಟುವುದು ಲೇಸಲ್ಲವೇ..? ಪರಿಸರವು ಮಲಿನವಾಗದಂತೆ ಜನರು ಜಾಗೃತರಾದರೆ ಪರಿಸರ ಸ್ವಚ್ಛತೆ ಮಾಡುವ ಅಗತ್ಯವಾದರೂ ಏನು...? ಪರಿಸರವನ್ನು ಶುಚಿಯಾಗಿಯೇ ಉಳಿಸಬೇಕೆಂಬ ಸುಜ್ಞಾನ ಎಲ್ಲರಿಗೂ ಬರಲಿ , ಪರಿಸರ ಉಳಿಯಲಿ, ಮನುಕುಲ ಬೆಳಗಲಿ. ಮನದೊಳಗೆ ಸುವಿಚಾರದ ದೀಪ ಪ್ರಜ್ವಲಿಸಲಿ.... ನಮಸ್ಕಾರ
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
********************************************

Ads on article

Advertise in articles 1

advertising articles 2

Advertise under the article