-->
ಜೀವನ ಸಂಭ್ರಮ : ಸಂಚಿಕೆ - 45

ಜೀವನ ಸಂಭ್ರಮ : ಸಂಚಿಕೆ - 45

ಜೀವನ ಸಂಭ್ರಮ : ಸಂಚಿಕೆ - 45
                       
                                ಶಿಕ್ಷಣ
               ಮಕ್ಕಳೇ, ನಾವು ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದೇವೆ. ಶಿಕ್ಷಣ ಅಂದರೆ ಏನು...? ಶಿಕ್ಷಣದ ಉದ್ದೇಶವೇನು....? ಶಿಕ್ಷಣ ಏಕೆ ಬೇಕು...? ಅನ್ನೋದನ್ನ ನೋಡೋಣ.
    ಮೊದಲಿಗೆ ಶಿಕ್ಷಣದ ಉದ್ದೇಶ : ಜೀವನದ ಉದ್ದೇಶ ಸುಂದರವಾಗಿ, ಶಾಂತವಾಗಿ ಮತ್ತು ಸಂತೋಷದಿಂದ ಬದುಕಬೇಕು. ಹೀಗೆ ಸುಂದರವಾಗಿ, ಶಾಂತವಾಗಿ ಮತ್ತು ಸಂತೋಷದಿಂದ ಜೀವನ ನಡೆಸಬೇಕಾದರೆ ಶಿಕ್ಷಣ ಬೇಕಾಗುತ್ತದೆ.
        ಶಿಕ್ಷಣ ಎಂದರೇನು.....? ಶಿಕ್ಷಣ ಎಂದರೆ ವಿದ್ಯಾರ್ಥಿಯಲ್ಲಿ ಅಪೇಕ್ಷಿತ ವರ್ತನೆಯಲ್ಲಿ ಬದಲಾವಣೆಯಾಗಬೇಕು. ಸಮಾಜ ಬಯಸಿದ ರೀತಿಯಲ್ಲಿ ವರ್ತನೆಯಲ್ಲಿ ಬದಲಾವಣೆಯಾಗಬೇಕು. ವಿದ್ಯಾರ್ಥಿ ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಸಾಮಾಜಿಕವಾಗಿ , ಸಾಂಸ್ಕೃತಿಕವಾಗಿ, ವೈಜ್ಞಾನಿಕವಾಗಿ ಮತ್ತು ನೈತಿಕವಾಗಿ ಬೆಳವಣಿಗೆಯಾಗಬೇಕು. ಶಿಕ್ಷಣದ ಬಗ್ಗೆ ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ "Education is the manifestation of divine perfection which is already existing in the man" ನಿಸರ್ಗ ಮನುಷ್ಯನಲ್ಲಿ ಏನಾದರೂ ಒಂದು ಸಾಮರ್ಥ್ಯ ಇಟ್ಟಿರುತ್ತದೆ. ಈ ಅಡಗಿರುವ ಸಾಮರ್ಥ್ಯವನ್ನು ಹೊರತೆಗೆಯುವುದೆ ಶಿಕ್ಷಣ. ವಿದ್ಯಾರ್ಥಿಗಳು ಒಟ್ಟಾಗಿ ಕಲಿಯುವಾಗ ಇದೆಲ್ಲ ಬೆಳೆಯುತ್ತದೆ. ಅದಕ್ಕೆ ದೈಹಿಕ ಶಿಕ್ಷಣದಲ್ಲಿ ಆಟೋಟಗಳು , ಪ್ರತಿಭಾ ಕಾರಂಜಿಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ನೈತಿಕ ಬೆಳವಣಿಗೆಗೆ ಸಹಕಾರಿ. ಕ್ರೀಡೆ ಅಥವಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಲಿಂಗ ಭೇದ ಮರೆತು, ಜಾತಿಭೇದ ಮರೆತು ಬೆರೆಯುವುದರಿಂದ ಆಗುತ್ತದೆ. ವಿದ್ಯಾರ್ಥಿಗಳು ತಂಡಗಳಲ್ಲಿ ಕೆಲಸ ಮಾಡುವುದರಿಂದ , ಸಾಮಾಜಿಕವಾಗಿ , ಮಾನಸಿಕವಾಗಿ ಬೆರೆಯುತ್ತಾರೆ. ತಂಡಗಳಲ್ಲಿ ಕೆಲಸ ಮಾಡುವಾಗ ಯಾರಾದರೂ ಅಪಾಯಕ್ಕೆ ಸಿಲುಕಿದಾಗ ಅಥವಾ ಬಿದ್ದು ಗಾಯಗೊಂಡಾಗ ಯಾವುದನ್ನು ಯೋಚಿಸದೆ ಸಹಾಯ ಮಾಡುವುದರಿಂದ ಸಾಮಾಜಿಕ ಮತ್ತು ಮಾನಸಿಕ ಬೆಳವಣಿಗೆಯಾಗುತ್ತದೆ. ತಂಡಗಳಲ್ಲಿ ಕೆಲಸ ಮಾಡುವಾಗ ಸರಿ ತಪ್ಪುಗಳನ್ನು ಗುರುತಿಸುವುದರಿಂದ ನೈತಿಕ ಬೆಳವಣಿಗೆಯಾಗುತ್ತದೆ. ಕ್ರೀಡೆಯಿಂದ ದೈಹಿಕ, ಸಾಂಸ್ಕೃತಿಕ ಕಾರ್ಯಕ್ರಮದಿಂದ ಸಾಂಸ್ಕೃತಿಕ ಬೆಳವಣಿಗೆ ಉಂಟಾಗುತ್ತದೆ.
      ಬೌದ್ಧಿಕ ಬೆಳವಣಿಗೆ : ಇಂದು ನಾವೆಲ್ಲ ಒತ್ತು ಕೊಡುತ್ತಿರುವುದು ಇದಕ್ಕೆ. ಬೌದ್ಧಿಕ ಬೆಳವಣಿಗೆ ಎಂದರೆ ಜಗತ್ತನ್ನು ತಿಳಿದುಕೊಳ್ಳುವುದು. ಜಗತ್ತಿನ ಸತ್ಯವನ್ನು ತಿಳಿದುಕೊಳ್ಳುವುದು. ಇದರಿಂದ ಒಳ್ಳೆಯದು ಯಾವುದು....? ಕೆಟ್ಟದ್ದು ಯಾವುದು....? ಸರಿ ಯಾವುದು....? ತಪ್ಪು ಯಾವುದು....? ಎನ್ನುವುದನ್ನು ತೀರ್ಮಾನಿಸಿ ವಿಶ್ವ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಹೇಗೆ ಸಾಧ್ಯ ಎಂದು ಕೆಲವರಲ್ಲಿ ಕೇಳಿದಾಗ ಮತ್ತು ಮಕ್ಕಳಲ್ಲಿ ಪ್ರಶ್ನಿಸಿದಾಗ , ಕೆಲವರು ಹೇಳುವುದು ಗೊತ್ತಿಲ್ಲ ಎಂದು. ಈಗ ಕನ್ನಡ ,ಇಂಗ್ಲಿಷ್, ಹಿಂದಿ , ಗಣಿತ ವಿಜ್ಞಾನ ಮತ್ತು ಸಮಾಜ ಇದು ಹೇಗೆ ಜಗತ್ತಿನ ಬಗ್ಗೆ ತಿಳಿಸುತ್ತದೆ ಎಂದು ಪ್ರಶ್ನಿಸಿದಾಗ, ಬಹುತೇಕ ಜನ ಈ ಪಠ್ಯದಿಂದ ಜಗತ್ತನ್ನು ತಿಳಿಯುವುದರ ಬಗ್ಗೆ ಗೊತ್ತಿಲ್ಲ ಎಂದು ಹೇಳಿದರು. ಸರ್ಕಾರ ಪಠ್ಯಪುಸ್ತಕ ರಚಿಸುತ್ತದೆ. ನಾವು ಕಲಿಯುತ್ತೇವೆ. ನಾವು ಇದನ್ನು ಏಕೆ ಕಲಿಯಬೇಕು ಎಂದು ಪ್ರಶ್ನಿಸಿದಾಗ. ಸರ್ಕಾರ ಪರೀಕ್ಷಿಸುತ್ತದೆ. ಅದಕ್ಕಾಗಿ, ಅವರ ಪರೀಕ್ಷೆಗಾಗಿ ಕಲಿಸಲಾಗುತ್ತದೆ ಅಥವಾ ಕಲಿಯುತ್ತೇವೆ ಎನ್ನುವ ಅಭಿಪ್ರಾಯ ಬಹುತೇಕರಲ್ಲಿ ವ್ಯಕ್ತವಾಯಿತು. ಮಕ್ಕಳೇ ತಿಳಿದುಕೊಳ್ಳಿ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಐಎಎಸ್, ಕೆಎಎಸ್ ಆಗಿರಲಿ , ಸಾಮಾನ್ಯ ಜ್ಞಾನ ಪರೀಕ್ಷೆ ಪರೀಕ್ಷಿಸುತ್ತಾರೆ. ಅಂದರೆ ಒಂದನೇ ತರಗತಿಯಿಂದ 10ನೇ ತರಗತಿಯ ವರೆಗೆ ಇರುವ ಪಾಠ , ಜಗತ್ತಿನ ಅಂದರೆ ವಿಶ್ವದ ಬಗ್ಗೆ ಇರಬೇಕಾದ ಕನಿಷ್ಠ ಜ್ಞಾನ ಎನ್ನುವುದನ್ನು ಮರೆಯಬಾರದು. ಹೇಗೆ ಅನ್ನುವುದನ್ನು ನೋಡೋಣ.
     1. ಭಾಷೆಯಲ್ಲಿ ಮೂರು ವಿಷಯ ಇದೆ. ಪ್ರಥಮ, ದ್ವಿತೀಯ ಮತ್ತು ತೃತೀಯ. ನಾವು ಜಗತ್ತಿನ ಬಗ್ಗೆ ತಿಳಿದುಕೊಳ್ಳಬೇಕಾದರೆ ಭಾಷೆ ಬೇಕು. ಭಾಷೆ ಕಲಿಯಲು ಮತ್ತು ಕಲಿಸಲು ಇರುವ ಮಾಧ್ಯಮ. ಅದು ನಮಗೆ ಚೆನ್ನಾಗಿ ತಿಳಿದಿರಬೇಕು. ತಿಳಿದಿರುವ ಭಾಷೆಯಲ್ಲಿ ಬೋಧಿಸಿದರೆ ಅಥವಾ ಕಲಿತರೆ ಚೆನ್ನಾಗಿ ಅರ್ಥವಾಗುತ್ತದೆ. ಇದರಿಂದ ಜಗತ್ತನ್ನು ಚೆನ್ನಾಗಿ ತಿಳಿಯಬಹುದು. ಅದಕ್ಕೆ ಮಾಧ್ಯಮ ಆಯ್ಕೆ ಮಾಡಿಕೊಳ್ಳುವಾಗ , ಯಾವ ಭಾಷೆ ಆಯ್ಕೆ ಮಾಡಿಕೊಂಡರೆ ನಾನು ಈ ವಿಶ್ವವನ್ನು ಚೆನ್ನಾಗಿ ತಿಳಿಯಬಹುದು ಎನ್ನುವುದು ಖಾತ್ರಿಯಾಗುತ್ತದೆ. ಅದೇ ವಿಷಯವನ್ನು ಪ್ರತಿಯೊಬ್ಬರೂ ಪ್ರಥಮ ಭಾಷೆಯಾಗಿ ಹಾಗೂ ಮಾಧ್ಯಮವಾಗಿ ಆಯ್ಕೆ ಮಾಡಿಕೊಳ್ಳಬೇಕು. ದ್ವಿತೀಯ ಭಾಷೆ ಈಗಾಗಲೇ ತಿಳಿದಂತೆ, ಭಾಷೆ ಜನರ ನಡುವೆ ಸಂವಹನ ಮಾಡಲು ಹಾಗೂ ಜಗತ್ತನ್ನು ತಿಳಿಯಲು ಸಾಧ್ಯ. ಇದು ಬೇರೆ ಬೇರೆ ದೇಶಗಳ ಜನರ ಜೊತೆ ಸಂವಹನ ಮಾಡಲು ಅಥವಾ ಸ್ಥಳಕ್ಕೆ ಹೋದಾಗ ಆ ಸ್ಥಳದ ಬಗ್ಗೆ ತಿಳಿದುಕೊಳ್ಳಲು ಸಹಾಯಕ. ಇದರಿಂದ ಆ ದೇಶದ ಜ್ಞಾನ ಉಂಟಾಗುತ್ತದೆ. ಇನ್ನು ತೃತೀಯ ಭಾಷೆ ದೇಶದ ಒಳಗಿರುವ ವಿವಿಧ ರಾಜ್ಯಗಳಿಗೆ ಹೋದಾಗ , ಆ ಜನರ ಜೊತೆ ಸಂವಹನ ನಡೆಸಲು, ಆ ಸ್ಥಳದ ಬಗ್ಗೆ ಮಾಹಿತಿ ಪಡೆಯಲು, ಜ್ಞಾನ ಸಂಪಾದಿಸಲು ಮತ್ತು ಜಗತ್ತನ್ನು ತಿಳಿಯಲು ಸಹಾಯಕವಾಗುತ್ತದೆ.
       2. ಸಮಾಜ ವಿಜ್ಞಾನದಲ್ಲಿ ಇತಿಹಾಸ, ರಾಜ್ಯಶಾಸ್ತ್ರ, ಪೌರನೀತಿ, ಭೂಗೋಳ ಇಂತಹ ವಿಷಯಗಳನ್ನು ತಿಳಿಯುತ್ತೇವೆ. ಇತಿಹಾಸದಲ್ಲಿ ಜಗತ್ತಿನ ರಾಜ ಮಹಾರಾಜರ, ದೇಶಪ್ರೇಮಿಗಳ ಮತ್ತು ಸ್ವತಂತ್ರ ಹೋರಾಟಗಾರರ ಬಗ್ಗೆ ತಿಳಿಯುತ್ತೇವೆ. ಡಾ.ಬಿ.ಆರ್ ಅಂಬೇಡ್ಕರ್ ಹೇಳಿದಂತೆ "ಇತಿಹಾಸ ಓದದವನು ಇತಿಹಾಸ ನಿರ್ಮಿಸಲಾರ" ಅಂದರೆ ಇತಿಹಾಸವು ಮಹಾನ್ ವ್ಯಕ್ತಿಗಳು ಮಾಡಿದ ತಪ್ಪನ್ನು ನಾವು ಮಾಡಬಾರದು , ಇದರಿಂದ ನಮ್ಮ ಜೀವನ ಸುಂದರವಾಗುತ್ತದೆ. ಅದು ಅಲ್ಲದೆ ಇವರು ಮಾಡಿರುವ ಒಳ್ಳೆಯದನ್ನು , ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಸುಂದರ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಏಕೆಂದರೆ ನಮ್ಮ ಜೀವಮಾನದಲ್ಲಿ ಪ್ರತಿಯೊಂದು ತಪ್ಪನ್ನು ಮಾಡಿ ಅದರಿಂದ ಕಲಿತುಕೊಳ್ಳಲು ಸಾಧ್ಯವಿಲ್ಲ. ರಾಜ್ಯಶಾಸ್ತ್ರದಲ್ಲಿ , ಆಡಳಿತ ಹೇಗೆ ನಿರ್ವಹಣೆ ಮಾಡಬೇಕು...? ಎನ್ನುವುದನ್ನು ತಿಳಿದುಕೊಳ್ಳಬೇಕು. ರಾಷ್ಟ್ರದ ಹಾಗೂ ರಾಜ್ಯದ ಆಡಳಿತ ನಿರ್ವಹಣೆಗೆ ಸಂವಿಧಾನವಿದೆ. ಆ ಸಂವಿಧಾನದ ನಿಯಮ ಪಾಲನೆಯಿಂದ , ದೇಶ ಮತ್ತು ರಾಜ್ಯ ಸುಂದರವಾಗಿ ಸುಭಿಕ್ಷವಾಗಿರುತ್ತದೆ. ಅದೇ ರೀತಿ ನಮ್ಮ ಕುಟುಂಬ ಸುಂದರವಾಗಿರಲು ನಿಯಮ ಪಾಲಿಸಬೇಕು. ಇದರಿಂದ ಕುಟುಂಬ ಸುಂದರ ವಾಗುತ್ತದೆ. ಪೌರ ನೀತಿಯಲ್ಲಿ , ಪೌರನಾಗಿ ಹೇಗಿದ್ದರೆ ನಾವು ಮತ್ತು ನಮ್ಮ ದೇಶ ಸುಂದರ ಎನ್ನುವುದನ್ನು ತಿಳಿದುಕೊಳ್ಳುತ್ತೇವೆ. ಅದೇ ರೀತಿ ಕುಟುಂಬದ ಸದಸ್ಯನಾಗಿ ಹೇಗಿದ್ದರೆ ಕುಟುಂಬ ಸುಂದರವಾಗುತ್ತದೆ ಎಂಬುದನ್ನು ತಿಳಿದುಕೊಳ್ಳುತ್ತೇವೆ. ಭೂಗೋಳದಲ್ಲಿ ಜಗತ್ತಿನ ಭೂರಚನೆ, ಹವಾಮಾನ, ಮಳೆಯ ಪ್ರಮಾಣ, ವಾತಾವರಣ , ಸಸ್ಯ ಸಂಪತ್ತು , ಪ್ರಾಣಿ ಸಂಪತ್ತು ಮತ್ತು ಗ್ರಹಗಳು ಇವುಗಳ ಬಗ್ಗೆ ತಿಳಿದುಕೊಳ್ಳುತ್ತೇವೆ. ಗಣಿತದಲ್ಲಿ ಅಂಕಗಣಿತ , ಬೀಜಗಣಿತ ಮತ್ತು ರೇಖಾ ಗಣಿತ ಕಲಿಯುತ್ತೇವೆ. ನಾವು ಇಂದು ಜಗತ್ತಿನ ಪ್ರತಿಯೊಂದು ವಿಷಯವನ್ನು ತಿಳಿದುಕೊಳ್ಳಬೇಕಾದರೆ ಅದರ ಉದ್ದ, ಅಗಲ, ಗಾತ್ರ , ದೂರ , ಮತ್ತು ಎತ್ತರ ತಿಳಿದುಕೊಳ್ಳಬೇಕಾಗುತ್ತದೆ. ಪ್ರತಿಯೊಂದು ವ್ಯವಹಾರವನ್ನು ಲೆಕ್ಕಾಚಾರ ಮಾಡುತ್ತೇವೆ. ಹಾಗಾಗಿ ಇದು ನಮಗೆ ಅಗತ್ಯ. ತಾರ್ಕಿಕವಾಗಿ ಚಿಂತಿಸಲು , ಕಾರಣ ಹುಡುಕಲು, ಅಂದಾಜು ಮಾಡಲು ಮತ್ತು ಭವಿಷ್ಯ ಕುರಿತು ಚಿಂತಿಸಲು ಲೆಕ್ಕಾಚಾರ ಅಗತ್ಯ.
       ವಿಜ್ಞಾನದಲ್ಲಿ ಭೌತಶಾಸ್ತ್ರ , ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಕಲಿಯುತ್ತೇವೆ. ಇದರಿಂದ ಜಗತ್ತಿನ ಬಗ್ಗೆ ತಿಳಿದುಕೊಳ್ಳಲು ಸಾಧ್ಯ. ಬೆಳಕು ಇದರ ಪರಿಣಾಮ , ಉಪಯೋಗ , ಶಬ್ದ , ಸಾಮರ್ಥ್ಯ, ಬಲ , ತರಂಗ , ವಿದ್ಯುತ್ ಕಾಂತಿಯ ಪ್ರೇರಣೆ , ಅಯಸ್ಕಾಂತ , ಮೋಟಾರ್ ಡೈನಾಮೋ, ಅಣುಸ್ಥಾವರ ಇವುಗಳ ಬಗ್ಗೆ ತಿಳಿದುಕೊಳ್ಳುತ್ತೇವೆ. ಜಗತ್ತಿನಲ್ಲಿರುವ ಮೂಲ ವಸ್ತುಗಳು, ಅಣು, ಪರಮಾಣು , ಮೂಲ ವಸ್ತುಗಳು ಹಾಗೂ ಖನಿಜಗಳು, ಅವುಗಳ ಭೌತಿಕ ಮತ್ತು ರಾಸಾಯನಿಕ ಗುಣಲಕ್ಷಣ , ಲೋಹಗಳು ಮತ್ತು ಅಲೋಹಗಳು ಆಮ್ಲ , ಪ್ರತ್ಯಾಮ್ಲಗಳು, ಕಾರ್ಬನ್ ಸಂಯುಕ್ತಗಳು, ಇವುಗಳ ಉಪಯೋಗ ತಿಳಿದುಕೊಳ್ಳಬಹುದು. ಹಾಗೆ ಜೀವಶಾಸ್ತ್ರದಲ್ಲಿ ಸೂಕ್ಷ್ಮಾಣು ಜೀವಿಗಳಿಂದ ಮನುಷ್ಯನವರೆಗೆ ಹಾಗೂ ಸಸ್ಯ ಸಂಪತ್ತು , ಇವುಗಳ ರಚನೆ , ಉಪಯೋಗ , ಅವುಗಳಿಂದ ಆಗುವ ಅಪಾಯ ಮತ್ತು ಉಪಯೋಗವನ್ನು ತಿಳಿದುಕೊಳ್ಳಬಹುದು. ಜೀವವಿಕಾಸ, ಏಕಕೋಶ ಜೀವಿಗಳು, ಬಹುಕೋಶ ಜೀವಿಗಳಾದ ಸರೀಸೃಪಗಳು, ಉಭಯವಾಸಿಗಳು, ಪಕ್ಷಿಗಳು, ಅವುಗಳ ದೇಹ ರಚನೆ. ಆ ದೇಹದಲ್ಲಿ ಕಂಡು ಬರುವ ಅಂಗಗಳು, ಅಂಗಾಂಶಗಳು, ಅವುಗಳ ರಚನೆ ಮತ್ತು ಕಾರ್ಯ. ಶೀತ ರಕ್ತ ಪ್ರಾಣಿಗಳು, ಬಿಸಿ ರಕ್ತ ಪ್ರಾಣಿಗಳು. ಹೀಗೆ ಒಂದನೇ ತರಗತಿಯಿಂದ ಹತ್ತನೇ ತರಗತಿಯ ವರೆಗೆ ಜಗತ್ತಿನ ಸಾಮಾನ್ಯ ಜ್ಞಾನ ಪಡೆಯುತ್ತೇವೆ. ಈ ಜ್ಞಾನವನ್ನು ಪರೀಕ್ಷಾ ದೃಷ್ಟಿಯಿಂದ ಕಂಠಪಾಠ ಮಾಡಿ ಕಲಿಯದೆ ಜಗತ್ತನ್ನ ತಿಳಿದುಕೊಳ್ಳಬೇಕಾಗಿದೆ ಎನ್ನುವ ಮನೋಭಾವದಿಂದ ಅರ್ಥೈಸಿಕೊಂಡು ಕಲಿಯುವುದು ಉತ್ತಮ ಅಲ್ಲವೇ ಮಕ್ಕಳೆ.
.........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article